ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ ‘ರಿಪೋರ್ಟರ್ ಟಿವಿ’ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ.
ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು 5 ಗಂಟೆಗೆ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು, ಬಳಿಕ ಅವರ ಸ್ವಂತ ಊರಾದ ವಯನಾಡಿಗೆ ಕರೆದೊಯ್ದಿದ್ದಾರೆ ಎಂದು thenewsminute.com ವರದಿ ಮಾಡಿದೆ.
ವರದಿಗಳ ಪ್ರಕಾರ, ಮಿತಿಗಿಂತ ಹೆಚ್ಚಿನ ಪ್ರಮಾಣದ ಮದ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಆಂಟೋ ಆಗಸ್ಟಿನ್ ಅವರ ಬಂಧನವನ್ನು ಅಬಕಾರಿ ಕಾಯ್ದೆಯ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ. ವಯನಾಡಿನ ಮುಟ್ಟಿನ ಸಮೀಪವಿರುವ ವಳವಟ್ಟದಲ್ಲಿರುವ ಅವರ ಕುಟುಂಬದ ಮನೆಯ ಮೇಲೆ ನಡೆಸಿದ ದಾಳಿಯ ಸಂದರ್ಭದಲ್ಲಿ, ಪೊಲೀಸರು ಸುಮಾರು 67 ಲೀಟರ್ ವಿದೇಶಿ ಮದ್ಯ ಮತ್ತು ವೈನ್ ಅನ್ನು ಪತ್ತೆಹಚ್ಚಿದ್ದಾರೆ, ಇದು ವೈಯಕ್ತಿಕ ಬಳಕೆಗೆ ಕಾನೂನುಬದ್ಧವಾಗಿ ಅನುಮತಿಸಲಾದ ಮಿತಿಗಿಂತ ಹೆಚ್ಚಾಗಿದೆ.
ಬಂಧನದ ನಂತರ, ಆಂಟೋ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಆಲುವಾ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಸುಲ್ತಾನ್ ಬತ್ತೇರಿಯ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಅವರನ್ನು ವಯನಾಡಿಗೆ ಕರೆದೊಯ್ಯಲಾಗುವುದು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆಂಟೋ ಆಗಸ್ಟಿನ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿರುವ ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಪುರಾವೆಗಳಿಗಾಗಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ಎರ್ನಾಕುಲಂನಲ್ಲಿರುವ ರಿಪೋರ್ಟರ್ ಬ್ರಾಡ್‌ಕಾಸ್ಟಿಂಗ್ ಕಂಪನಿಯ ಪ್ರಧಾನ ಕಚೇರಿಯಲ್ಲಿ ಶೋಧ ನಡೆಸಿದ ಮರುದಿನವೇ ಈ ಬಂಧನ ನಡೆದಿದೆ.
ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಮತ್ತು ಅರ್ಜೆಂಟೀನಾ ರಾಷ್ಟ್ರೀಯ ಫುಟ್‌ಬಾಲ್ ತಂಡವನ್ನು ಕೇರಳಕ್ಕೆ ಕರೆತರುವ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಂಚನೆ ಮತ್ತು ಆರ್ಥಿಕ ಅಕ್ರಮಗಳ ಆರೋಪದ ಮೇಲೆ ದಾಖಲಾದ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ.
ಆಂಟೋ ಅವರ ಮನೆಯಲ್ಲಿ ಎಸ್‌ಐಟಿ ನಡೆಸಿದ ಶೋಧವು ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿತ್ತು; ಆದರೆ, ಈ ವೇಳೆ ತನಿಖಾ ತಂಡಕ್ಕೆ ಅತಿಯಾದ ಪ್ರಮಾಣದ ಮದ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಅವರು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರು. ಈ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿಕೊಂಡು, ಆಂಟೋ ಅವರನ್ನು ಬಂಧಿಸಿದೆ.
ಬಂಧನದ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆಂಟೋ, ತಾನು ಎಂದಿಗೂ ಮದ್ಯಪಾನ ಮಾಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ತಾವು ಈಗಾಗಲೇ ಪೊಲೀಸರಿಗೆ ಒದಗಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು 2012ರಲ್ಲಿ ಕರ್ನಾಟಕದಲ್ಲಿ ಅಕ್ರಮವಾಗಿ ಎರಡನೇ ವಿವಾಹವನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಆರೋಪಿಸುವ ದಾಖಲೆಗಳೊಂದಿಗೆ ಕೆಲವರು ತಮ್ಮನ್ನು ಸಂಪರ್ಕಿಸಿದ್ದರು ಎಂದು ಆಂಟೋ ಹೇಳಿದ ನಂತರ, ಸೆಪ್ಟೆಂಬರ್ 16 ರಂದು ತಿರುವನಂತಪುರಂ ಸೈಬರ್ ಅಪರಾಧ ಪೊಲೀಸರು, ಆಂಟೋ ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದಕ್ಕೂ ಮುನ್ನ ಆಗಸ್ಟ್ ತಿಂಗಳಲ್ಲಿ, ವಯನಾಡಿನ 2020ರ ಮುಟ್ಟಿಲ್ ಮರ ಕಡಿಯುವ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಆಗಸ್ಟಿನ್ ಸಹೋದರರಲ್ಲಿ ಇಬ್ಬರು, ಕಾನೂನುಬಾಹಿರವಾಗಿ ಕಡಿದ ಮರದ ದಿಮ್ಮಿಗಳ ಮಾರಾಟಕ್ಕೆ ಸಂಬಂಧಿಸಿದ ಪ್ರತ್ಯೇಕ ವಂಚನೆ ಪ್ರಕರಣದಲ್ಲಿ ಎರ್ನಾಕುಲಂನ ಚೊಟ್ಟಾನಿಕ್ಕರ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಶರಣಾಗಿದ್ದರು.
ಪ್ರಕರಣದ ಎರಡನೇ ಮತ್ತು ಮೂರನೇ ಆರೋಪಿಗಳಾದ ಜೋಸ್ ಕುಟ್ಟಿ ಆಗಸ್ಟಿನ್ ಹಾಗೂ ಆಂಟೋ ಆಗಸ್ಟಿನ್ ಅವರು ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಿದ ನಂತರ ಶರಣಾಗಿದ್ದರು. ತದನಂತರ, ಜೋಸ್ ಕುಟ್ಟಿ ಮತ್ತು ಆಂಟೋ ನ್ಯಾಯಾಲಯದ ಮುಂದೆ ಹಾಜರಾದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಾರಂಟ್‌ಗಳನ್ನು ಹಿಂಪಡೆದು ಅವರಿಗೆ ಜಾಮೀನು ಮಂಜೂರು ಮಾಡಿತ್ತು.


