ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ ಆಹಾರ ಪದ್ಧತಿಯನ್ನು ಹೇರಿದಂತೆ ಎಂದು ಪಕ್ಷವು ಆರೋಪಿಸಿದೆ.
ಪಕ್ಷದ ಮುಖವಾಣಿಯಾದ ‘ಸಾಮ್ನಾ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ, ಆಹಾರ ಆಯ್ಕೆಗಳು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದು, ಸರ್ಕಾರಗಳು ಅಥವಾ ರಾಜಕೀಯ ಸಂಘಟನೆಗಳು ಅವುಗಳನ್ನು ನಿರ್ದೇಶಿಸಬಾರದು ಎಂದು ಹೇಳಲಾಗಿದೆ. ಸೆಪ್ಟೆಂಬರ್ 12 ರಂದು ಭಾರತ್ ಮಂಟಪದಲ್ಲಿ ನಡೆದ ಗಾಲಾ ಔತಣಕೂಟದಲ್ಲಿ, ವಿಸ್ತೃತ 11 ಸದಸ್ಯ ರಾಷ್ಟ್ರಗಳ ಬ್ರಿಕ್ಸ್ ಒಕ್ಕೂಟದ ನಾಯಕರಿಗೆ ಕೇವಲ ಸಸ್ಯಹಾರಿ ಮೆನುವನ್ನು ಮಾತ್ರ ಬಡಿಸಿರುವುದನ್ನು ಸಂಪಾದಕೀಯದಲ್ಲಿ ತೀವ್ರವಾಗಿ ವಿರೋಧಿಸಲಾಗಿದೆ.
ವಿಶ್ವ ನಾಯಕರ ಮೇಲೆ ಆಹಾರ ಪದ್ಧತಿಯನ್ನು ಹೇರಲಾಗಿದೆ ಎಂದು ಟೀಕಿಸಿರುವ ಠಾಕ್ರೆ ಬಣದ ಮುಖವಾಣಿ ‘ಸಾಮ್ನಾ’, ಸಸ್ಯಹಾರಿ ಅಥವಾ ಮಾಂಸಾಹಾರಿ ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದು, ಸರ್ಕಾರವಾಗಲಿ ಅಥವಾ ರಾಜಕೀಯ ಪಕ್ಷಗಳಾಗಲಿ ಅವುಗಳನ್ನು ನಿರ್ದೇಶಿಸಬಾರದು ಎಂದು ವಾದಿಸಿದೆ. ಮೆನುವಿನಲ್ಲಿ ಖಾಂಡ್ವಿ, ಮಶ್ರೂಮ್ ಕಬಾಬ್, ಪನೀರ್ ಲಬಾಬ್‌ದಾರ್, ಮಿಲೆಟ್ ಪುಲಾವ್, ಗುಜರಾತಿ ಶೈಲಿಯ ಟೊಮೆಟೊ-ಬೇಳೆ ಸಾರು, ಜಿಲೇಬಿ ಮತ್ತು ಫಿರ್ನಿ ಮುಂತಾದ ಪದಾರ್ಥಗಳಿದ್ದವು.
ಈ ಔತಣಕೂಟದ ಮೆನುವನ್ನು ಟೀಕಿಸಿರುವ ಸಂಪಾದಕೀಯವು, ಅತಿಥಿಗಳಿಗೆ ಹುಲ್ಲು ಮತ್ತು ಕಾಡು ಸೊಪ್ಪನ್ನು ತಿನ್ನಲು ಬಲವಂತಪಡಿಸಿದಂತಿದೆ ಎಂದು ಬಣ್ಣಿಸಿದೆ. “ಭೇಟಿ ನೀಡಿದ ಪ್ರತಿನಿಧಿಗಳು ಸೇರಿದಂತೆ ವಿಶ್ವದ ಶೇಕಡಾ 80 ರಷ್ಟು ಜನಸಂಖ್ಯೆಯು ಮಾಂಸಾಹಾರವನ್ನು ಸೇವಿಸುತ್ತದೆ. ಅವರ ಮೇಲೆ ಸಸ್ಯಹಾರವನ್ನು ಹೇರುವ ಮೂಲಕ ಮೋದಿ ಸರ್ಕಾರ ಏನು ಸಾಧಿಸಿತು? ಇದು ಜಾಗತಿಕ ಮಟ್ಟದಲ್ಲಿ ಭಾರತವನ್ನು ನಗೆಪಾಟಲಿಗೀಡು ಮಾಡಿದೆ” ಎಂದು ಸಂಪಾದಕೀಯದಲ್ಲಿ ಟೀಕಿಸಲಾಗಿದೆ.
ದೆಶದ ಹೈಪ್ರೊಫೈಲ್ ಕೈಗಾರಿಕೋದ್ಯಮಿಗಳ ವಿವಾಹ ಸಮಾರಂಭಗಳಲ್ಲಿ ಅತ್ಯುತ್ತಮವಾದ ಮತ್ತು ಬಾಯಲ್ಲಿ ನೀರೂರಿಸುವ ಆಹಾರವಿತ್ತು ಎಂಬುದನ್ನು ಉಲ್ಲೇಖಿಸುತ್ತ, ಬ್ರಿಕ್ಸ್ ಗಾಲಾ ಔತಣಕೂಟವನ್ನು ಅಂತಹ ವಿವಾಹಗಳ ಭವ್ಯತೆಯೊಂದಿಗೆ ಸಂಪಾದಕೀಯವು ಹೋಲಿಸಿದೆ.
ದೆಹಲಿಯ ಪ್ರಸಿದ್ಧ ಪಾಕಪದ್ಧತಿಯ ತಿನಿಸುಗಳಾದ ಕರೀಮ್ ಅವರ ಮಾಂಸಾಹಾರಿ ಭಕ್ಷ್ಯಗಳು, ತಂದೂರಿ ಚಿಕನ್, ಬಿರಿಯಾನಿ, ಬಟರ್ ಚಿಕನ್, ಗೋವಾ ಮೀನು ಸಾರು, ಕೊಲ್ಹಾಪುರದ ಪಾಂಡ್ರಾ-ತಾಂಬ್ರಾ ರಸ್ಸಾ ಮತ್ತು ಮಾಲ್ವನ್ ಮೀನುಗಳು ಅಂತರರಾಷ್ಟ್ರೀಯ ಅತಿಥಿಗಳನ್ನು ನಿಜಕ್ಕೂ ತೃಪ್ತಿಪಡಿಸುತ್ತಿದ್ದವು ಎಂದು ಅದು ಹೇಳಿದೆ.
ಈ ಮೆನು ಮಹಾತ್ಮ ಗಾಂಧಿಯವರ ಜನ್ಮಸ್ಥಳದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ ಎಂಬ ವಾದವನ್ನು ತಳ್ಳಿಹಾಕಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಗಾಂಧೀಜಿಯವರು ತಮ್ಮ ವೈಯಕ್ತಿಕ ಸಸ್ಯಹಾರಿ ಆಯ್ಕೆಗಳನ್ನು ಎಂದಿಗೂ ಇತರರ ಮೇಲೆ ಹೇರಲಿಲ್ಲ ಎಂದು ಎತ್ತಿ ಹೇಳಿದೆ.
ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಸಂಪಾದಕೀಯವು ಐತಿಹಾಸಿಕ ಉದಾಹರಣೆಗಳನ್ನು ಉಲ್ಲೇಖಿಸಿದೆ. “ಖಾನ್ ಅಬ್ದುಲ್ ಗಫಾರ್ ಖಾನ್ ಮತ್ತು ಅವರ ಕುಟುಂಬವು ವರ್ಧಾದ ಸೇವಾಗ್ರಾಮ ಆಶ್ರಮಕ್ಕೆ ಭೇಟಿ ನೀಡಿದಾಗ, ಅವರಿಗಾಗಿ ಮಾಂಸಾಹಾರಿ ಭಕ್ಷ್ಯಗಳನ್ನು ತಯಾರಿಸಲು ಮುಖ್ಯ ಆವರಣದ ಹೊರಗೆ ಪ್ರತ್ಯೇಕ ಅಡುಗೆಮನೆಯನ್ನು ವ್ಯವಸ್ಥೆ ಮಾಡಲಾಗಿತ್ತು. ರಷ್ಯಾಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ, ಕಟ್ಟುನಿಟ್ಟಿನ ಮಧ್ಯ ವಿರೋಧಿಯಾಗಿದ್ದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಟೋಸ್ಟ್‌ಗಳಿಗಾಗಿ ತಮ್ಮ ಲೋಟದಲ್ಲಿ ವೋಡ್ಕಾ ಸುರಿಯಲು ಅನುಮತಿ ನೀಡುವ ಮೂಲಕ ಸ್ಥಳೀಯ ರಾಜತಾಂತ್ರಿಕ ಸಂಪ್ರದಾಯಗಳನ್ನು ಗೌರವಿಸಿದ್ದರು, ಆದರೆ ಅದನ್ನು ಕುಡಿಯದೆ ಎತ್ತಿ ಹಿಡಿದರು” ಎಂದು ಅದು ತಿಳಿಸಿದೆ.
ಚೀನಾ ಅಧ್ಯಕ್ಷ ಜಿಂಗ್‌ಪಿಂಗ್ ಮಹಾಬಲಿಪುರಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೆನುವಿನಲ್ಲಿ ವಿವಿಧ ಮಾಂಸಾಹಾರಿ ಭಕ್ಷ್ಯಗಳು ಸೇರಿದ್ದವು, ದೇಶದಾದ್ಯಂತದಿಂದ ವಿಶೇಷ ಅಡುಗೆಯವರನ್ನು ಕರೆತರಲಾಗಿತ್ತು ಎಂಬುದರ ಕುರಿತು ಸಂಪಾದಕೀಯವು ಮತ್ತಷ್ಟು ಗಮನ ಸೆಳೆದಿದೆ.
ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಬದಲಾಯಿಸಲು ಆಡಳಿತ ಸರ್ಕಾರ ಮತ್ತು ಅದರ ಬೆಂಬಲಿತ ಸಂಘಟನೆಗಳು ವ್ಯಾಪಕ ಅಭಿಯಾನ ನಡೆಸುತ್ತಿವೆ ಎಂದು ಸಂಪಾದಕೀಯವು ಆರೋಪಿಸಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಗುತ್ತಿಗೆಗಳನ್ನು ಇಸ್ಕಾನ್‌ನಂತಹ ಸಂಸ್ಥೆಗಳಿಗೆ ಹಸ್ತಾಂತರಿಸುವುದನ್ನು ಪ್ರಸ್ತಾಪಿಸಿರುವ ಅದು, ಮಕ್ಕಳ ಆಹಾರದಿಂದ ಮೊಟ್ಟೆಗಳನ್ನು ತೆಗೆದುಹಾಕಲಾಗಿದೆ ಎಂದು ದೂರಿದೆ.
ಮುಂಬೈನಂತಹ ನಗರಗಳಲ್ಲಿ ಮಾಂಸಾಹಾರಿಗಳು ವಸತಿ ಕ್ಷೇತ್ರದಲ್ಲಿ ತಾರತಮ್ಯವನ್ನು ಎದುರಿಸುತ್ತಿರುವ ದೇಶೀಯ ಸಮಸ್ಯೆಗಳ ಕುರಿತು ಸಂಪಾದಕೀಯದಲ್ಲಿ ಚರ್ಚಿಸಲಾಗಿದೆ. ಇಂತಹ ಆಚರಣೆಗಳನ್ನು ಅಪರಾಧ ಎಂದು ಕರೆದಿದೆ.
ಕೊನೆಯಲ್ಲಿ ತೀವ್ರ ರಾಜಕೀಯ ವಾಗ್ದಾಳಿ ನಡೆಸಿದ ಸಂಪಾದಕೀಯವು, “ಆಹಾರ ಪದ್ಧತಿಯು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯಾಗಿದೆ. ಸರ್ಕಾರವು ‘ಭ್ರಷ್ಟಾಚಾರದ ಮಾಂಸಾಹಾರ’ದಲ್ಲಿ ಮುಳುಗಿರುವಾಗ, ಜನರಿಗೆ ಅವರ ಮೀನು ಮತ್ತು ಚಿಕನ್ ಅನ್ನು ನಿರಾಕರಿಸುತ್ತದೆ. ಪ್ರಧಾನಿ ಮೋದಿ ಮತ್ತು ಅವರ ಅನುಯಾಯಿಗಳು ಖಿಚಡಿ ಇಷ್ಟಪಡಬಹುದು, ಆದರೆ ಇತರರು ಬಿರಿಯಾನಿಯನ್ನು ಬಯಸುತ್ತಾರೆ. ನಮ್ಮ ಶ್ರೀಮಂತ ಆಹಾರ ಸಂಸ್ಕೃತಿಯನ್ನು ನಾಶಮಾಡುವ ಹಕ್ಕು ಯಾವುದೇ ಪಕ್ಷ ಅಥವಾ ಪಂಗಡಕ್ಕಿಲ್ಲ” ಎಂದು ಹೇಳಿದೆ.


