ಗನ್ ಪಾಯಿಂಟ್ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17) ಎಫ್ಐಆರ್ ದಾಖಲಿಸಲಾಗಿದೆ.
ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸದಾನಂದ ದಾಟೆ ಅವರ ನಿರ್ದೇಶನದ ಮೇರೆಗೆ, ಕಲ್ಯಾಣ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನರೇಂದ್ರ ಪವಾರ್ ಮತ್ತು ಸೇವೆಯಿಂದ ವಜಾಗೊಂಡಿರುವ ಪೊಲೀಸ್ ಸಿಬ್ಬಂದಿ ಶೈಲೇಶ್ ಪಾಟೀಲ್ ವಿರುದ್ಧ ಪಡ್ಘಾ ಪೊಲೀಸರು ಗುರುವಾರ ನಸುಕಿನ ಜಾವ ಎಫ್ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ದೂರಿನ ಪ್ರಕಾರ, ಕಲ್ಯಾಣ್ ನಿವಾಸಿಯಾದ ಸಂತ್ರಸ್ತೆ ತನ್ನ ಪತಿಯೊಂದಿಗಿನ ಕೌಟುಂಬಿಕ ಕಲಹವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾಜಿ ಶಾಸಕ ಪವಾರ್ ಅವರನ್ನು ಸಂಪರ್ಕಿಸಿದ್ದರು. ಸೆಪ್ಟೆಂಬರ್ 13ರಂದು ಪವಾರ್ ಅವರು ಸಹಾಯ ಮಾಡುವ ನೆಪದಲ್ಲಿ ಸಂತ್ರಸ್ತೆಯನ್ನು ಕಲ್ಯಾಣ್ನಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು. ನಂತರ ಆಕೆಯನ್ನು ಭಿವಂಡಿ ತಾಲೂಕಿನ ಬಾಪ್ಗಾಂವ್ ಗ್ರಾಮದಲ್ಲಿರುವ ಫಾರ್ಮ್ ಹೌಸ್ಗೆ ಕರೆದೊಯ್ಯಲಾಗಿತ್ತು.
ಅಲ್ಲಿ, ಪೊಲೀಸ್ ಸಿಬ್ಬಂದಿ ಶೈಲೇಶ್ ಪಾಟೀಲ್ ಸಂತ್ರಸ್ತೆಗೆ ಆಯುಧವೊಂದನ್ನು ತೋರಿಸಿ ಬೆದರಿಸಿ, ಬಲವಂತವಾಗಿ ಮದ್ಯಪಾನ ಮಾಡಿಸಿದರೆಂದು ಹಾಗೂ ಮೊದಲು ಪವಾರ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರೆಂದು ಆ ಮಹಿಳೆ ಆರೋಪಿಸಿದ್ದಾರೆ. ನಂತರ ಪವಾರ್ ಅಲ್ಲಿಂದ ಹೊರಟುಹೋದರು, ಆ ಬಳಿಕ ಪಾಟೀಲ್ ಆಕೆಯ ಮೇಲೆ ಮತ್ತೆ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ.
ಬೆಳಗಿನ ಜಾವ ಸುಮಾರು 4.00 ಗಂಟೆಗೆ, ಪಾಟೀಲ್ ಅವರ ಮನೆಯ ಕೆಲಸದಾಳು ಸಂತ್ರಸ್ತೆಯನ್ನು ಆಕೆಯ ಮನೆಗೆ ಕರೆತಂದು ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಮಹಿಳೆ, ಸೆಪ್ಟೆಂಬರ್ 16ರಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಸಂಪರ್ಕ ವಿವರಗಳ ಮೂಲಕ ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್ ಕಾಂಚನ್ ಕುಲಕರ್ಣಿ ಅವರನ್ನು ಸಂಪರ್ಕಿಸಿದ್ದರು.
ಸಂತ್ರಸ್ತೆ ಹಂಚಿಕೊಂಡ ವಿಡಿಯೋ ಮತ್ತು ಲಿಖಿತ ಪುರಾವೆಗಳನ್ನು ಪರಿಶೀಲಿಸಿದ ನಂತರ, ಕುಲಕರ್ಣಿ ಅವರು ಬುಧವಾರ ತಡರಾತ್ರಿ ಆಕೆಯೊಂದಿಗೆ ಪದ್ಘಾ ಪೊಲೀಸ್ ಠಾಣೆಗೆ ಹೋಗಿದ್ದರು.
ದೂರನ್ನು ಪರಿಶೀಲಿಸಿದ ನಂತರ, ಸಾಮೂಹಿಕ ಅತ್ಯಾಚಾರ ಮತ್ತು ಶಸ್ತ್ರಾಸ್ತ್ರಗಳ ಮೂಲಕ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪವಾರ್ ಮತ್ತು ಪಾಟೀಲ್ ಇಬ್ಬರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ ಎಂದು ಪಡ್ಘಾ ಪೊಲೀಸ್ ಠಾಣೆ ತಿಳಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕುಲಕರ್ಣಿ, ಪಾಟೀಲ್ ವಿರುದ್ಧ ಈಗಾಗಲೇ ಹಿಂದಿನ ಕ್ರಿಮಿನಲ್ ಪ್ರಕರಣಗಳು ಇರುವುದನ್ನು ಉಲ್ಲೇಖಿಸಿ, ಆರೋಪಿಯನ್ನು 48 ಗಂಟೆಗಳ ಒಳಗೆ ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


