Homeದಲಿತ್ ಫೈಲ್ಸ್'ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..'; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ತಮಿಳುನಾಡು ಸರ್ಕಾರದಿಂದ ನೆರವು ವಿಳಂಬ: ಮಲೇಷ್ಯಾದಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ ಪಿಎಚ್‌ಡಿ ವಿದ್ಯಾರ್ಥಿಯಿಂದ ಆರೋಪ

- Advertisement -
- Advertisement -

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು ‘ದಿ ನ್ಯೂಸ್‌ ಮಿನಿಟ್’ ವರದಿ ಮಾಡಿದೆ.

ಸೆಪ್ಟೆಂಬರ್ 17 ರಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ ಅವರು, “ಇಲಾಖೆಯು ನನ್ನ ವಿದ್ಯಾರ್ಥಿವೇತನದ ಹಣ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದರಿಂದ ಕಳೆದ ಆರು ತಿಂಗಳಿಂದ ನನ್ನ ಸಂಶೋಧನೆ ಸ್ಥಗಿತಗೊಂಡಿದೆ, ಫೀಸ್ ಬಾಕಿ ಇರುವ ಕಾರಣ ವಿಶ್ವವಿದ್ಯಾಲಯದಿಂದ ಹೊರಹಾಕುವ ಭೀತಿ ಎದುರಾಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತಿ ದಾಸನ್ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಹೇಳಿಕೆ ನೀಡಿದ ಸಾಮಾಜಿಕ ನ್ಯಾಯ ಇಲಾಖೆ, “ಅವರು ತಮ್ಮ ವೆಚ್ಚಗಳ ಸೂಕ್ತ ಲೆಕ್ಕಪತ್ರವನ್ನು ಸಲ್ಲಿಸಿಲ್ಲ” ಎಂದು ಸಮರ್ಥಿಸಿಕೊಂಡಿದೆ.

ರಾಜ್ಯ ಸರ್ಕಾರದ ‘ಅಣ್ಣಲ್ ಅಂಬೇಡ್ಕರ್ ವಿದೇಶಿ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ’ ಯೋಜನೆಯಡಿ ತಮ್ಮ ಎರಡನೇ ವರ್ಷದ ಸಂಶೋಧನೆಗಾಗಿ ರೂ. 19.5 ಲಕ್ಷ ಅನುದಾನಕ್ಕೆ ಮನವಿ ಮಾಡಿರುವ ಭಾರತಿ ದಾಸನ್, ಸರ್ಕಾರದ ವಾದವನ್ನು ತಳ್ಳಿಹಾಕಲು ಕೆಲ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ.

ಸೆಪ್ಟೆಂಬರ್ 17 ರಂದು ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಅನುದಾನ ವಿಳಂಬದಿಂದಾಗಿ ಮಲೇಷ್ಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ (ಯೂನಿವರ್ಸಿಟಿ ಕೆಬಾಂಗ್ಸಾನ್ ಮಲೇಷ್ಯಾ) ತಾನು ಮಾಡುತ್ತಿರುವ ‘ಟಿಶ್ಯೂ ಇಂಜಿನಿಯರಿಂಗ್ ಮತ್ತು ರಿಜನರೇಟಿವ್ ಮೆಡಿಸಿನ್’ ವಿಷಯದ ಪಿಎಚ್‌ಡಿ ಸಂಶೋಧನೆಗೆ ತೊಂದರೆಯಾಗಿದೆ ಎಂದು ಭಾರತಿ ದಾಸನ್ ತಿಳಿಸಿದ್ದಾರೆ.

ಅಲ್ಲದೆ, ಹಣದ ಅಭಾವದಿಂದಾಗಿ ಅಕ್ಟೋಬರ್ ಮೊದಲ ವಾರದಲ್ಲಿ ದೆಹಲಿಯ ಏಮ್ಸ್ (ಎಐಐಎಂಎಸ್‌) ಸಂಸ್ಥೆಯಲ್ಲಿ ‘Establishment of an In Vitro Aging Brain Model for the Study of MSC-EV Effects on Epigenetics and Bioenergetics’ ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಲು ಪ್ರಯಾಣಿಸುವುದು ಕೂಡ ಸಾಧ್ಯವಾಗದಿರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

“ಏಪ್ರಿಲ್ ತಿಂಗಳಿನಿಂದಲೂ ಈ ವಿಷಯದ ಕುರಿತು ನಾನು ಮಾತನಾಡುತ್ತಿದ್ದೇನೆ. ವಿಧಾನಸಭೆಯಲ್ಲೂ ಚರ್ಚೆಯಾಯಿತು. ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಈ ಆರೋಪಗಳನ್ನು ನಿರಾಕರಿಸಿದ್ದರು. ನಂತರ ನಾನು ನನ್ನ ವಾದಕ್ಕೆ ಬೆಂಬಲವಾಗಿ ದಾಖಲೆಗಳನ್ನು ಹಂಚಿಕೊಂಡಿದ್ದೆ” ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.

ಇಲಾಖೆ ಕೇಳಿದ ದಾಖಲೆಗಳನ್ನು ಸಲ್ಲಿಸಿದ್ದು, ಗೌಪ್ಯವೆಂದು ಪರಿಗಣಿಸಲಾದ ಕೆಲ ದಾಖಲೆಗಳನ್ನು ಮಾತ್ರ ತಡೆಹಿಡಿದಿರುವುದಾಗಿ ಅವರು ಹೇಳಿದ್ದಾರೆ.

ಹಣಕಾಸಿನ ಸಮಸ್ಯೆಯನ್ನು ಪರಿಹರಿಸುವ ಬದಲು, ಸಂಶೋಧನೆಗೆ ಖರೀದಿಸಲು ಉದ್ದೇಶಿಸಿರುವ ಸಾಮಗ್ರಿಗಳ ಬಗ್ಗೆ ಮತ್ತು ಅವುಗಳನ್ನು ನಿಜವಾಗಿಯೂ ಸಂಶೋಧನೆಗಾಗಿ ಖರೀದಿಸಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ನನ್ನ ಸಂಶೋಧನೆ, ಪ್ರಾಜೆಕ್ಟ್ ಶೀರ್ಷಿಕೆ ಮತ್ತು ಎಥಿಕ್ಸ್ ಕ್ಲಿಯರೆನ್ಸ್ ಕೋಡ್‌ಗಳನ್ನು ಹಿಂದಿನ ಇಮೇಲ್‌ನಲ್ಲೇ ಉಲ್ಲೇಖಿಸಿದ್ದೆ. ಈಗ ಮತ್ತೆ ಮೊದಲಿನಿಂದ ಪ್ರಕ್ರಿಯೆ ಪ್ರಾರಂಭಿಸಲು ಹೇಳುತ್ತಿದ್ದಾರೆ” ಎಂದಿದ್ದಾರೆ.

ಸಾಮಾಜಿಕ ನ್ಯಾಯ ಇಲಾಖೆಯ ಈ ಪ್ರಶ್ನೆಗಳಿಂದಾಗಿ ತಮ್ಮ ಪ್ರಾಧ್ಯಾಪಕರು ತಮ್ಮ ಮೇಲಿಟ್ಟಿದ್ದ ನಂಬಿಕೆಗೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸಚಿವ ವನ್ನಿ ಅರಸು ಅವರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದ ಭಾರತಿ ದಾಸನ್, “ನೀವು ನನ್ನನ್ನೇ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು, ನಿಮ್ಮ ಇಡೀ ಅಧಿಕಾರವನ್ನು ಬಳಸಿ ನನ್ನನ್ನು ತುಳಿಯಲು ಯತ್ನಿಸುತ್ತಿದ್ದೀರಿ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಧುರೈ ಜಿಲ್ಲೆಯ ಉಸಿಲಂಪಟ್ಟಿಯವರಾದ ಭಾರತಿ ದಾಸನ್, ತಮ್ಮ ಕುಟುಂಬ ಮತ್ತು ಗ್ರಾಮದಿಂದ ವೈದ್ಯಕೀಯ ಸಂಶೋಧನೆ ಕೈಗೊಂಡ ಮೊದಲ ವ್ಯಕ್ತಿಯಾಗಿದ್ದಾರೆ.

“ನಾನು ಸಂಶೋಧನೆ ಮಾಡುವುದು ನಿಮಗೆ ಇಷ್ಟವಿಲ್ಲದಿದ್ದರೆ ಅದನ್ನು ನೇರವಾಗಿ ಹೇಳಿ. ದಯವಿಟ್ಟು ನನಗೆ ಮಾನಸಿಕ ಕಿರುಕುಳ ನೀಡಬೇಡಿ. ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ ಎಂದಾದರೆ ಸ್ಪಷ್ಟವಾಗಿ ತಿಳಿಸಿ, ನಾನು ಬೇರೆ ಆಧಾರಗಳನ್ನು ಅಥವಾ ಭಾರತದಲ್ಲೋ ಅಥವಾ ಹೊರಗಿನ ಇತರ ಸಂಸ್ಥೆಗಳನ್ನೋ ಹುಡುಕಿಕೊಂಡು ವಿದ್ಯಾಭ್ಯಾಸ ಮುಂದುವರಿಸುತ್ತೇನೆ” ಎಂದು ಹೇಳಿದ್ದಾರೆ.

ತಮ್ಮ ಪರಿಸ್ಥಿತಿಯನ್ನು 2016 ರಲ್ಲಿ ಉನ್ನತ ಶಿಕ್ಷಣದಲ್ಲಿ ಜಾತೀಯ ತಾರತಮ್ಯದ ವಿರುದ್ಧ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧಕ ರೋಹಿತ್ ವೇಮುಲಾ ಅವರ ಘಟನೆಯೊಂದಿಗೆ ಅವರು ಹೋಲಿಸಿಕೊಂಡಿದ್ದಾರೆ.

ಟಿವಿಕೆ ಸರ್ಕಾರವನ್ನು ಟೀಕಿಸಿದ ಡಿಎಂಕೆ

ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತನಾಡಿ, ಭಾರತಿ ದಾಸನ್ ಅವರು ರೋಹಿತ್ ವೇಮುಲಾ ಅವರಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಸರ್ಕಾರಕ್ಕೆ ಕೆಟ್ಟ ಹೆಸರು ತರಬಾರದು ಎಂದು ಹೇಳಿದ್ದಾರೆ. “ಮುಖ್ಯಮಂತ್ರಿಯವರಿಗೆ ಅಗತ್ಯ ಅನುದಾನ ನೀಡಲು ಸಾಧ್ಯವಾಗದಿದ್ದರೆ ಅದನ್ನು ಬಹಿರಂಗವಾಗಿ ಘೋಷಿಸಲಿ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ತಮಿಳುನಾಡಿನ ಜನತೆಯೇ ವಿದ್ಯಾರ್ಥಿಯ ಶಿಕ್ಷಣ ಶುಲ್ಕವನ್ನು ಪಾವತಿಸಿ ಆತನ ಅಧ್ಯಯನಕ್ಕೆ ನೆರವಾಗಲಿದ್ದಾರೆ” ಎಂದಿದ್ದಾರೆ.

ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ತಮಿಳುನಾಡು ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ವಿದ್ಯಾರ್ಥಿವೇತನ ವಿಳಂಬದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸರ್ಕಾರ ಆತನನ್ನೇ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. “ತಮ್ಮ ತಪ್ಪುಗಳನ್ನು ಮರೆಮಾಚಲು ಇತರರ ಮೇಲೆ ಗೂಬೆಕೂರಿಸುವ ಈ ಆಡಳಿತಗಾರರು, ಅಣ್ಣಲ್ ಅಂಬೇಡ್ಕರ್ ವಿದೇಶಿ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆಯಡಿ ಹಣ ಸಿಕ್ಕಿಲ್ಲ ಎಂದು ಹೇಳಿದ ವಿದ್ಯಾರ್ಥಿಯನ್ನೇ ಗುರಿಯಾಗಿಸಿ, ಆತನ ಮೇಲೆ ಒತ್ತಡ ಹೇರಿ ಶಿಕ್ಷಣದಿಂದ ಹೊರಹಾಕಲು ಯತ್ನಿಸುತ್ತಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ” ಎಂದು ಕಿಡಿಕಾರಿದ್ದಾರೆ.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಶಣ್ಮುಗಂ ಅವರು ಭಾರತಿ ದಾಸನ್ ಅವರ ಶೈಕ್ಷಣಿಕ ನೆರವು ಬಿಡುಗಡೆ ಮಾಡುವಂತೆ ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಅವರೊಂದಿಗೆ ನಾಲ್ಕು ಬಾರಿ ಮಾತನಾಡಿರುವುದಾಗಿ ತಿಳಿಸಿದ್ದಾರೆ. “ಕಾರಣ ಏನೇ ಇರಲಿ, ವಿದ್ಯಾರ್ಥಿಯ ಶಿಕ್ಷಣಕ್ಕೆ ತೊಂದರೆಯಾಗುವಂತೆ ಸರ್ಕಾರ ನಡೆದುಕೊಳ್ಳಬಾರದು” ಎಂದು ಹೇಳಿರುವ ಅವರು, “ಮುಖ್ಯಮಂತ್ರಿ ವಿಜಯ್ ಅವರು ನೇರವಾಗಿ ಮಧ್ಯಪ್ರವೇಶಿಸಿ ಬಾಕಿ ವಿದ್ಯಾರ್ಥಿವೇತನ ವಿದ್ಯಾರ್ಥಿಗೆ ತಲುಪುವಂತೆ ನೋಡಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಭಾರತಿ ದಾಸನ್ ಆರೋಪಕ್ಕೆ ಸರ್ಕಾರದ ಸ್ಪಷ್ಟನೆ

ಸಾಮಾಜಿಕ ನ್ಯಾಯ ಇಲಾಖೆಯು ಭಾರತಿ ದಾಸನ್ ಅವರ ಆರೋಪಗಳನ್ನು ತಳ್ಳಿಹಾಕಿದ್ದು, ಈ ಯೋಜನೆಯಡಿ ಅವರಿಗೆ ಈಗಾಗಲೇ ಹೆಚ್ಚಿನ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದೆ.

ಅಣ್ಣಲ್ ಅಂಬೇಡ್ಕರ್ ವಿದೇಶಿ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಕ್ರಿಶ್ಚಿಯನ್ ಆದಿ ದ್ರಾವಿಡ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಅಥವಾ ಸಂಶೋಧನೆಗಾಗಿ ಶಿಕ್ಷಣ ಶುಲ್ಕ, ಜೀವನ ವೆಚ್ಚ ಮತ್ತು ಇತರ ವೆಚ್ಚಗಳಿಗಾಗಿ ವರ್ಷಕ್ಕೆ ರೂ. 36 ಲಕ್ಷದವರೆಗೆ ನೆರವು ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಇಲಾಖೆಯ ಪ್ರಕಾರ, ಮಲೇಷ್ಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಟಿಶ್ಯೂ ಇಂಜಿನಿಯರಿಂಗ್ ಮತ್ತು ರಿಜನರೇಟಿವ್ ಮೆಡಿಸಿನ್ ವಿಷಯದಲ್ಲಿ ಪಿಎಚ್‌ಡಿ ಮಾಡಲು 2025-26ರ ಶೈಕ್ಷಣಿಕ ವರ್ಷದಿಂದ ಮೂರು ವರ್ಷಗಳ ಕಾಲ ಭಾರತಿ ದಾಸನ್ ಅವರಿಗೆ ಪ್ರಾಯೋಜಕತ್ವ ನೀಡಲಾಗಿತ್ತು.

ಮೊದಲ ವರ್ಷಕ್ಕೆ ಅವರಿಗೆ ರೂ. 36 ಲಕ್ಷ ನೀಡಲಾಗಿತ್ತು. ಇದರಲ್ಲಿ ರೂ. 5,01,638 ಅನ್ನು ವಿಶ್ವವಿದ್ಯಾಲಯದ ಬೋಧನಾ ಶುಲ್ಕವಾಗಿ ನೇರವಾಗಿ ಪಾವತಿಸಲಾಗಿದ್ದರೆ, ಉಳಿದ ರೂ. 30,98,362 ಅನ್ನು ವೀಸಾ, ಜೀವನ ವೆಚ್ಚ ಮತ್ತು ಸಂಶೋಧನಾ ವೆಚ್ಚಗಳಿಗಾಗಿ ಭಾರತಿ ದಾಸನ್ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು ಎಂದು ಇಲಾಖೆ ಹೇಳಿದೆ.

ಆದರೆ, ಭಾರತಿ ದಾಸನ್ ಸಲ್ಲಿಸಿದ ಕೆಲವು ದಾಖಲೆಗಳ ಬಗ್ಗೆ ಇಲಾಖೆ ಆಕ್ಷೇಪ ಎತ್ತಿದೆ. ನಿರ್ದಿಷ್ಟವಾಗಿ ರೂ. 8,17,962 ವೆಚ್ಚಕ್ಕೆ ಸಂಬಂಧಿಸಿದ ದಾಖಲೆಗಳು ಸ್ವೀಕಾರಾರ್ಹವಲ್ಲ ಎಂದು ಕಂಡುಬಂದಿದ್ದು, ಅವರು ಖರೀದಿಸಿದ ಸಂಶೋಧನಾ ಸಾಮಗ್ರಿಗಳು ಮತ್ತು ಅವುಗಳ ಪಾವತಿಯ ಪುರಾವೆಗಳ ಬಗ್ಗೆ ವಿವರಣೆ ನೀಡುವಂತೆ ಆಗಸ್ಟ್ 20 ರಂದು ಕೋರಲಾಗಿತ್ತು ಎಂದು ತಿಳಿಸಿದೆ. ಈಬಗ್ಗೆ ಅವರಿಂದ ತೃಪ್ತಿಕರ ವಿವರಣೆ ಬಂದಿಲ್ಲ ಎಂದು ಇಲಾಖೆ ಹೇಳಿದೆ.

ಹೀಗಿದ್ದರೂ, ವಿದ್ಯಾರ್ಥಿಯ ಶೈಕ್ಷಣಿಕ ಹಿತದೃಷ್ಟಿಯನ್ನು ಪರಿಗಣಿಸಿ ಎರಡನೇ ಶೈಕ್ಷಣಿಕ ವರ್ಷಕ್ಕೆ ಮತ್ತೆ ರೂ. 12 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಇದರಲ್ಲಿ ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕಾದ ರೂ. 5.57 ಲಕ್ಷ ಪೂರ್ಣ ಶುಲ್ಕ ಮತ್ತು ಅವರ ಜೀವನ ವೆಚ್ಚಕ್ಕಾಗಿ ರೂ. 6.65 ಲಕ್ಷ ಸೇರಿದೆ ಎಂದು ಹೇಳಿದೆ.

ಇದರ ನಂತರ ಭಾರತಿ ದಾಸನ್ ತಮ್ಮ ಎರಡನೇ ವರ್ಷದ ಸಂಶೋಧನಾ ವೆಚ್ಚಗಳಿಗಾಗಿ ಹೆಚ್ಚುವರಿಯಾಗಿ ರೂ. 19.50 ಲಕ್ಷ ಕೋರಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಸರ್ಕಾರದ ಹೇಳಿಕೆಯನ್ನು ತಳ್ಳಿಹಾಕಿದ ಭಾರತಿ ದಾಸನ್

ಇಲಾಖೆಯ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಭಾರತಿ ದಾಸನ್ ಶುಕ್ರವಾರ, ಸೆಪ್ಟೆಂಬರ್ 18 ರಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಸರ್ಕಾರವು ತಮ್ಮ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇಲಾಖೆ ಉಲ್ಲೇಖಿಸುತ್ತಿರುವ ರೂ. 36 ಲಕ್ಷ ಹಣವು ತಮ್ಮ ಮೊದಲ ವರ್ಷದ ನೆರವಾಗಿದೆಯೇ ಹೊರತು, ಪ್ರಸ್ತುತ ಎರಡನೇ ವರ್ಷದ ಸಂಶೋಧನೆಗಾಗಿ ಕೋರುತ್ತಿರುವ ಅನುದಾನವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ನೀವು ಹೇಳುತ್ತಿರುವುದೆಲ್ಲವೂ ಮೊದಲ ವರ್ಷಕ್ಕೆ ನೀಡಿದ ಹಣದ ಬಗ್ಗೆ” ಎಂದಿದ್ದಾರೆ.

ಜೂನ್ 8 ರಂದೇ ತಾವು ರೂ.37 ಲಕ್ಷ ವೆಚ್ಚದ ಬಿಲ್‌ಗಳನ್ನು ಸಲ್ಲಿಸಿದ್ದು, ಇಲಾಖೆಯು ಇನ್ನು ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಹೇಳುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. “ನಾನು ಜೂನ್ 8 ರಂದೇ ರೂ. 37 ಲಕ್ಷದ ಬಿಲ್‌ಗಳನ್ನು ಕಳುಹಿಸಿದ್ದೇನೆ. ನೀವು ನೀಡಿದ್ದ ಆರು ತಿಂಗಳ ಜೀವನ ನಿರ್ವಹಣಾ ವೆಚ್ಚವೂ ಮುಗಿದಿದೆ” ಎಂದು ಹೇಳಿದ್ದಾರೆ.

“ಪ್ರಸ್ತುತ ಹಣದ ಅಗತ್ಯವು ಜೀವಕೋಶಗಳು, ರಿಯಾಜೆಂಟ್‌ಗಳು ಮತ್ತು ಸಂಶೋಧನಾ ಸಾಮಗ್ರಿಗಳ ವೆಚ್ಚಕ್ಕೆ ಸಂಬಂಧಿಸಿದ್ದಾಗಿದೆ. ಆದರೂ ಆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ನಾನು ಬಿಲ್ ಸಲ್ಲಿಸಿಲ್ಲ ಎಂದೇ ನೀವು ಮತ್ತೆ ಮತ್ತೆ ಹೇಳುತ್ತಿದ್ದೀರಿ” ಎಂದು ವಿಡಿಯೋದಲ್ಲಿ ದಾಖಲೆಗಳನ್ನು ಪ್ರದರ್ಶಿಸುತ್ತಾ ಸರ್ಕಾರದ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ.

“ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡಬೇಡಿ. ಸರ್ಕಾರದ ಇಡೀ ಅಧಿಕಾರವನ್ನು ನನ್ನ ವಿರುದ್ಧ ಬಳಸಿ ನನ್ನನ್ನು ತುಳಿಯಲು ಯತ್ನಿಸಬೇಡಿ” ಎಂದು ಅವರು ವಿನಂತಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ರೂ. ದಂಡ

ಕಲ್ಲು ಗಣಿಗಾರಿಕೆ ನಡೆಸುವ ವೇಳೆ ಸಾಲು ಸಾಲು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಗಣಿ ಮತ್ತು...

ಪಶ್ಚಿಮ ಬಂಗಾಳ SIR: 38 ಲಕ್ಷ ಮೇಲ್ಮನವಿಗಳಲ್ಲಿ ವಿಲೇವಾರಿಯಾಗಿದ್ದು ಕೇವಲ 1 ಲಕ್ಷ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಬೃಹತ್ ಪ್ರಮಾಣದ ಮೇಲ್ಮನವಿಗಳ ಪೈಕಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆ ತೀರಾ ಕನಿಷ್ಠ ಮಟ್ಟದಲ್ಲಿದೆ ಎಂಬ ಆಘಾತಕಾರಿ ಮಾಹಿತಿ...

ಕರ್ನಾಟಕ ಎಸ್‌ಐಆರ್: ತಡವಾಗಿ ತಲುಪಿದ ನೋಟಿಸ್‌ಗಳಿಂದ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ; ಮತದಾರರಲ್ಲಿ ಗೊಂದಲ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗಳನ್ನು ಮತದಾರರಿಗೆ ತಲುಪಿಸುವಲ್ಲಿ ಉಂಟಾಗುತ್ತಿರುವ ವಿಳಂಬವು ಹಲವು ಕಡೆ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ ಮತ್ತು ಗೊಂದಲಕ್ಕೆ ಕಾರಣವಾಗುತ್ತಿದೆ. ‘ನೋ-ಮ್ಯಾಪಿಂಗ್’...

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...