ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಕರಾರುವಾಕ್ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ‘ಜಾಗೃತ ಕರ್ನಾಟಕ’ ಸಂಘಟನೆಯು ರಾಜ್ಯ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಅಂಕಿಅಂಶಗಳನ್ನು ಉಲ್ಲೇಖಿಸಿ ಮಾಧ್ಯಮ ಹೇಳಿಕೆ ನೀಡಿರುವ ಸಂಘಟನೆಯು, ಎಸ್‌ಐಆರ್‌ನ ಎಲ್ಲ ಹಂತದ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯಿದೆ ಎಂದು ಆರೋಪಿಸಿದೆ.
ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ ರಾಜ್ಯಾದ್ಯಂತ ಒಟ್ಟು 43.81 ಲಕ್ಷಕ್ಕೂ ಅಧಿಕ ನೋಟಿಸ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಈ ಪೈಕಿ ಈಗಾಗಲೇ 34.96 ಲಕ್ಷ ನೋಟಿಸ್‌ಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ ಮತ್ತು 8.85 ಲಕ್ಷ ನೋಟಿಸ್‌ಗಳ ವಿತರಣೆ ಇನ್ನೂ ಬಾಕಿ ಉಳಿದಿದೆ. ವಿತರಿಸಲಾದ ನೋಟಿಸ್‌ಗಳಲ್ಲಿ 17.63 ಲಕ್ಷಕ್ಕೂ ಹೆಚ್ಚು (ಶೇಕಡಾ 50.43) ಪ್ರಕರಣಗಳ ವಿಚಾರಣೆ ಮುಕ್ತಾಯಗೊಂಡಿದ್ದರೆ, ಉಳಿದ 17.33 ಲಕ್ಷಕ್ಕೂ ಅಧಿಕ ಪ್ರಕರಣಗಳ ವಿಚಾರಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಈ ಅಂಕಿಅಂಶಗಳನ್ನು ಮುಂದಿಟ್ಟುಕೊಂಡಿರುವ ಜಾಗೃತ ಕರ್ನಾಟಕ, ಕೇವಲ ನೋಟಿಸ್ ಜಾರಿ ಮತ್ತು ವಿಚಾರಣೆಯ ಸಂಖ್ಯೆಯನ್ನು ಪ್ರಕಟಿಸುವುದರಿಂದ ಸಾರ್ವಜನಿಕರಿಗೆ ನೈಜ ಚಿತ್ರಣ ಸಿಗುವುದಿಲ್ಲ, ಬದಲಿಗೆ ವಿಚಾರಣೆ ಪೂರ್ಣಗೊಂಡಿರುವ ಪ್ರಕರಣಗಳಲ್ಲಿ ಅಂತಿಮವಾಗಿ ಎಷ್ಟು ಮತದಾರರನ್ನು ಹೊರಹಾಕಲಾಗಿದೆ, ಎಷ್ಟು ಜನರ ಹಕ್ಕನ್ನು ಉಳಿಸಲಾಗಿದೆ ಹಾಗೂ ಎಷ್ಟು ಪ್ರಕರಣಗಳು ದಾಖಲೆ ಸಲ್ಲಿಸಿ ಮುಂದುವರಿದಿವೆ ಎಂಬ ಅಂತಿಮ ಫಲಿತಾಂಶವನ್ನು ಆಯೋಗ ತಕ್ಷಣವೇ ಬಹಿರಂಗಪಡಿಸಬೇಕು ಎಂದು ಪಟ್ಟುಹಿಡಿದಿದೆ.
ಆಯೋಗವು ಕೇವಲ ಒಟ್ಟಾರೆ ರಾಜ್ಯಮಟ್ಟದ ಅಂಕಿಅಂಶಗಳನ್ನು ನೀಡಿ ಕೈತೊಳೆದುಕೊಳ್ಳದೆ, ಜಿಲ್ಲಾವಾರು ಮತ್ತು ವಿಧಾನಸಭಾ ಕ್ಷೇತ್ರವಾರು ವಿವರವಾದ ಪಟ್ಟಿಯನ್ನು ಪ್ರಕಟಿಸಬೇಕು. ವಿಚಾರಣೆ ಪೂರ್ಣಗೊಂಡು ಹೆಸರು ಕೈಬಿಡುವ ನಿರ್ಧಾರ ಕೈಗೊಂಡಿದ್ದರೆ ಅದಕ್ಕೆ ನೀಡಲಾದ ಕಾರಣಗಳ ವರ್ಗೀಕರಣದ ವಿವರಗಳನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಆಯೋಗದ ವೇಳಾಪಟ್ಟಿಯಂತೆ ಅಕ್ಟೋಬರ್ 12 ರಂದು ಕೊನೆಯ ವಿಚಾರಣೆ ನಡೆಯಲಿದ್ದು, ಆಕ್ಷೇಪಣೆಗಳ ವಿಲೇವಾರಿಗೆ ಅಕ್ಟೋಬರ್ 22 ಅಂತಿಮ ದಿನಾಂಕವಾಗಿದೆ. ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ಮೂಲಭೂತವಾದುದರಿಂದ, ಇಡೀ ಪ್ರಕ್ರಿಯೆ ಮುಗಿಯುವವರೆಗೂ ಕಾಯದೆ ಪ್ರತಿ ಹಂತದಲ್ಲೂ ಪಾರದರ್ಶಕ ವಿವರಗಳನ್ನು ನಿಯಮಿತವಾಗಿ ನೀಡಬೇಕೆಂದು ‘ಜಾಗೃತ ಕರ್ನಾಟಕ’ ಎಚ್ಚರಿಸಿದೆ.


