ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅಕ್ರಮಗಳ ವಿರುದ್ಧ ಮತ್ತು ಎಸ್‌ಐಆರ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಅಕ್ಟೋಬರ್ 8ರಂದು ‘ಜನತಾ ನ್ಯಾಯಾಲಯ’ ಎಂಬ ವಿನೂತನ ಪ್ರತಿಭಟನೆ ನಡೆಯಲಿದೆ ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ಮತ್ತು ನಾಗರಿಕ ಮತ ಕಾವಲು ಸಮಿತಿ ನಾಯಕರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮತ ಕಾವಲು ಸಮಿತಿ ಮುಖಂಡ ನೂರ್ ಶ್ರೀಧರ್, ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಲಕ್ಷಾಂತರ ಶೋಷಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತದಾರರ ಹಕ್ಕನ್ನು ಕಸಿಯುವ ಹುನ್ನಾರ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಈ ವಿನೂತನ ಹೋರಾಟ ರೂಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಅಕ್ಟೋಬರ್ 8 ರಂದು ನಡೆಯಲಿರುವ ಈ ಜನತಾ ನ್ಯಾಯಾಲಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಹಿನ್ನೆಲೆ ಮತ್ತು ಅದರಿಂದಾಗಿರುವ ಅನ್ಯಾಯಗಳನ್ನು ತೆರೆದಿಡುವ ಮಹತ್ವದ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಹಾಜರುಪಡಿಸಲಾಗುತ್ತದೆ. ದೇಶದ ಹಿರಿಯ ಮತ್ತು ಗಣ್ಯ ನ್ಯಾಯಮೂರ್ತಿಗಳು ಈ ಆರೋಪಗಳನ್ನು ಆಲಿಸಿ ತೀರ್ಪು ನೀಡಲಿದ್ದಾರೆ. ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಈ ವಿಶೇಷ ನಡಾವಳಿಯಲ್ಲಿ ರಾಜ್ಯದ ಪ್ರಜ್ಞಾವಂತ ನಾಗರಿಕರು ಪಾಲ್ಗೊಳ್ಳಬೇಕು ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ಕರೆ ನೀಡಿದೆ.
ಈ ಮಹತ್ವದ ಹೋರಾಟಕ್ಕೆ ನಟರಾದ ಪ್ರಕಾಶ್ ರಾಜ್ ಮತ್ತು ಕಿಶೋರ್ ಸೇರಿದಂತೆ ರಾಜ್ಯದ ಪ್ರಮುಖ ಸಾಹಿತಿಗಳು, ಚಿಂತಕರು, ಸಿಜೆಪಿ ಹಾಗೂ ವಿವಿಧ ವಿದ್ಯಾರ್ಥಿ-ಯುವಜನ ಸಂಘಟನೆಗಳು, ರೈತ, ಕಾರ್ಮಿಕ, ದಲಿತ ಮತ್ತು ಮಹಿಳಾ ಸಂಘಟನೆಗಳ ನಾಯಕರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಎಸ್‌ಐಆರ್ ಹಾವಳಿಗೆ ಒಳಗಾಗಿ ಅನ್ಯಾಯಕ್ಕೊಳಗಾದ ರಾಜ್ಯದ ಹಲವಾರು ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಈ ಜನತಾ ನ್ಯಾಯಾಲಯದ ಮುಂದೆ ನೇರವಾಗಿ ತರಲಿದ್ದಾರೆ. ಎಸ್‌ಐಆರ್‌ನಿಂದಾಗಿ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಅನ್ಯಾಯಕ್ಕೊಳಗಾದ ಸಂತ್ರಸ್ತರು ಅಥವಾ ಸಾಮಾಜಿಕ ಕಾರ್ಯಕರ್ತರು ತಕ್ಷಣವೇ 9606087560 ಸಂಖ್ಯೆಗೆ ಕರೆ ಮಾಡಿ ಅಥವಾ ಸಂದೇಶ ಕಳುಹಿಸುವ ಮೂಲಕ ಮಾಹಿತಿ ಹಂಚಿಕೊಳ್ಳಬಹುದು ಎಂದು ಸಮಿತಿ ಕೋರಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷ ಸೀತರಾಂ ಗುಂಡಪ್ಪ, ಆಶೀರ್ವಾದ ಕೇಂದ್ರದ ಮುಖ್ಯಸ್ಥ ಫಾದರ್ ಅರಣ್ ಲೂಯಿಸ್, ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ವಕ್ತಾರ ಅಮ್ಜದ್ ಪಾಷಾ, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಅಧ್ಯಕ್ಷ ಹಬೀಬುಲ್ಲಾ, ಕರ್ನಾಟಕ ರಾಜ್ಯ ರೈತ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ, ದಲಿತ ಕ್ರೈಸ್ತ ಒಕ್ಕೂಟದ ರಾಜ್ಯ ಮುಖಂಡ ಡಾ. ಮನೋಹರ ಚಂದ್ರ ಪ್ರಸಾದ್, ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ್ ಸಮತಳ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಯೂಸುಫ್ ಕನ್ನಿ, ಎಸ್‌ಡಿಪಿಐ ರಾಜ್ಯ ಕೋಶಾಧಿಕಾರಿ ಅಮ್ಜದ್ ಖಾನ್, ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ರಾಜ್ಯ ಸಂಚಾಲಕ ಸೋಹೆಲ್ ಅಹ್ಮದ್, ಮಹಿಳಾ ಮುಖಂಡರಾದ ಅಡ್ವೊಕೇಟ್ ನೈನಾ, ‘ಎದ್ದೇಳು ಕರ್ನಾಟಕ’ದ ಮುಖಂಡ ನಾಗೇಶ್ ಅರಳಿಕೊಪ್ಪ ಹಾಗೂ ಸಿಜೆಪಿ ಸೌತ್ ಜೋನ್ ಸಂಚಾಲಕ ರಾಜೇಶ್ ಗೌಡ ಉಪಸ್ಥಿತರಿದ್ದರು.


