ಬರೋಬ್ಬರಿ 191 ಜನರ ಸಾವಿಗೆ ಕಾರಣನಾದ ಕೀನ್ಯಾದ ಧಾರ್ಮಿಕ ಮುಖಂಡ ಪೌಲ್ ಮೆಕೆಂಜಿ ಮತ್ತು ಆತನ ಸಹಚರರನ್ನು ಸೋಮವಾರ (ಅಕ್ಟೋಬರ್ 19) ನ್ಯಾಯಾಲಯ ತಪ್ಪಿತಸ್ಥರು ಎಂದು ಘೋಷಿಸಿದ್ದು, ನವೆಂಬರ್ 6ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ಪೌಲ್ ಮೆಕೆಂಜಿ ಮೂಲತಃ ಒಬ್ಬ ಟ್ಯಾಕ್ಸಿ ಡ್ರೈವರ್ ಆಗಿದ್ದ. ನಂತರ ತಾನೊಬ್ಬ ಧಾರ್ಮಿಕ ಪ್ರಚಾರಕ ಎಂದು ಘೋಷಿಸಿಕೊಂಡು, 2003ರಲ್ಲಿ ಕೀನ್ಯಾದಲ್ಲಿ ‘ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್’ ಎಂಬ ಪಂಥವನ್ನು ಆರಂಭಿಸಿದ್ದ. ಇದರ ಮೂಲಕ ತನ್ನ ಅನುಯಾಯಿಗಳ ಮೇಲೆ ತೀವ್ರವಾದ ಮಾನಸಿಕ ಹಿಡಿತ ಸಾಧಿಸಿದ್ದ.
ಜಗತ್ತು ಶೀಘ್ರದಲ್ಲೇ ಕೊನೆಗೊಳ್ಳಲಿದೆ, ಆದ್ದರಿಂದ ನೀವೆಲ್ಲರೂ ಉಪವಾಸವಿದ್ದು ಪ್ರಾಣ ಬಿಟ್ಟರೆ ‘ಯೇಸುವನ್ನು ಭೇಟಿಯಾಗಬಹುದು’ ಮತ್ತು ಸ್ವರ್ಗ ಸೇರಬಹುದು ಎಂದು ಮೆಕೆಂಜಿ ತನ್ನ ಭಕ್ತರನ್ನು ನಂಬಿಸಿದ್ದ.
ಆಧುನಿಕ ಶಿಕ್ಷಣ, ಆಸ್ಪತ್ರೆಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳೆಲ್ಲವೂ ‘ಸೈತಾನನ ಸೃಷ್ಟಿ’ ಎಂದು ಹೇಳಿ ಭಕ್ತರನ್ನು ನಾಗರಿಕ ಸಮಾಜದಿಂದ ದೂರ ಕರೆದೊಯ್ದಿದ್ದ. ಕೀನ್ಯಾದ ಆಗ್ನೇಯ ಕರಾವಳಿಯ ಸಮೀಪವಿರುವ ಸುಮಾರು 800 ಎಕರೆ ವಿಸ್ತೀರ್ಣದ ‘ಶಾಕಹೋಲಾ ಅರಣ್ಯ’ ಪ್ರದೇಶದಲ್ಲಿ ಇವರೆಲ್ಲರೂ ಗುಡಿಸಲುಗಳನ್ನು ಹಾಕಿಕೊಂಡು ವಾಸಿಸುತ್ತಿದ್ದರು.
ಈ ಪಂಥದಲ್ಲಿ ಸಾವುಗಳಿಗಾಗಿ ಒಂದು ಭೀಕರ ಕ್ರಮವನ್ನು ರೂಪಿಸಲಾಗಿತ್ತು. ಮೊದಲು ಸಣ್ಣ ಮಕ್ಕಳು, ನಂತರ ಅವಿವಾಹಿತರು, ಆಮೇಲೆ ಮಹಿಳೆಯರು ಹಾಗೂ ಪುರುಷರು ಉಪವಾಸ ಬಿದ್ದು ಸಾಯಬೇಕೆಂದು ನಿಯಮ ಮಾಡಲಾಗಿತ್ತು.
ಕೇವಲ ಉಪವಾಸ ಮಾತ್ರವಲ್ಲದೆ, ಒಂದು ವೇಳೆ ಯಾರಾದರೂ ಮಕ್ಕಳು ಹಸಿವು ತಡೆಯಲಾರದೆ ಆಹಾರಕ್ಕಾಗಿ ಅಥವಾ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಅವರನ್ನು ಅತಿಯಾಗಿ ದಂಡಿಸಲಾಗುತ್ತಿತ್ತು. ಉಪವಾಸದಿಂದ ಸಾಯದ ಮಕ್ಕಳನ್ನು ಕತ್ತು ಹಿಸುಕಿ ಅಥವಾ ಬಡಿಗೆಗಳಿಂದ ಹೊಡೆದು ಕ್ರೂರವಾಗಿ ಕೊಲ್ಲಲಾಗಿತ್ತು ಎಂಬುವುದು ನ್ಯಾಯಾಲಯದ ವಿಚಾರಣೆಯ ವೇಳೆ ಬಯಲಾಗಿದೆ.
2023ರ ಮಾರ್ಚ್ ತಿಂಗಳಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ತನ್ನ ಸೋದರ ಮತ್ತು ಆತನ ಪತ್ನಿ ಮಕ್ಕಳನ್ನು ಕಾಡಿನಲ್ಲಿ ಉಪವಾಸ ಕೆಡವಿ ಸಾಯಿಸುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದಾಗ ಈ ಘೋರ ರಹಸ್ಯ ಬಯಲಾಗಿತ್ತು. ಪೊಲೀಸರು 2023ರ ಏಪ್ರಿಲ್ನಲ್ಲಿ ಕಾರ್ಯಾಚರಣೆ ನಡೆಸಿ ಮೆಕೆಂಜಿಯನ್ನು ಬಂಧಿಸಿದ್ದರು. ಆ ಕಾಡಿನಲ್ಲಿ ಶೋಧ ನಡೆಸಿದಾಗ ಆಳವಿಲ್ಲದ ನೂರಾರು ಸಾಮೂಹಿಕ ಸಮಾಧಿಗಳು ಪತ್ತೆಯಾಗಿತ್ತು. ಅಲ್ಲಿಂದ ಒಟ್ಟು 400ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆಯಲಾಗಿದೆ.
ತನಿಖೆ ಪೂರ್ಣಗೊಂಡ ಮೊದಲ ಹಂತದ 191 ಜನರ (190 ಮಕ್ಕಳು ಮತ್ತು ಒಬ್ಬ ವಯಸ್ಕ) ಭೀಕರ ಕೊಲೆಯ ಪ್ರಕರಣದಲ್ಲಿ ಮೊಂಬಾಸಾ ಹೈಕೋರ್ಟ್ ಪೌಲ್ ಮೆಕೆಂಜಿ ಮತ್ತು ಆತನ 28 ಸಹಚರರನ್ನು ಅಪರಾಧಿಗಳು ಎಂದು ತೀರ್ಪು ನೀಡಿದೆ. ಉಳಿದ ಸಾವುಗಳ ಕುರಿತು ಇವರ ಮೇಲೆ ಭಯೋತ್ಪಾದನೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯದ ಅಡಿಯಲ್ಲಿ ಪ್ರತ್ಯೇಕ ಕಾನೂನು ವಿಚಾರಣೆಗಳು ನಡೆಯುತ್ತಿವೆ.
ವಿಚಾರಣೆ ವೇಳೆ ಆರೋಪಿಗಳು ತಾವು ತಪ್ಪಿತಸ್ಥರಲ್ಲ ಎಂದು ವಾದಿಸಿದ್ದು, ಭಯೋತ್ಪಾದನೆ, ತೀವ್ರಗಾಮಿತ್ವ ಹಾಗೂ ಮಕ್ಕಳು ಶಿಕ್ಷಣ ಪಡೆಯುವುದನ್ನು ತಡೆಯುವುದು ಸೇರಿದಂತೆ ಇತರ ಪ್ರಕರಣಗಳಲ್ಲಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು ವರದಿಗಳು ಹೇಳಿವೆ.
ಕೀನ್ಯಾದ ಅಧಿಕಾರಿಗಳ ಪ್ರಕಾರ, ಶಕಾಹೋಲಾ ದುರಂತದಲ್ಲಿ 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ; ಇದು ಆ ದೇಶದಲ್ಲಿ ಪಂಥವೊಂದಕ್ಕೆ ಸಂಬಂಧಿಸಿದ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ.


