ಜೀವನ ನಿರ್ವಹಣಾ ವೆಚ್ಚದ ಏರಿಕೆಯ ವಿರುದ್ಧದ ಪ್ರತಿಭಟನೆಗಳು ಹಿಂಸಾತ್ಮಕ ಘರ್ಷಣೆಗಳಿಗೆ ತಿರುಗಿದ ಹಿನ್ನೆಲೆಯಲ್ಲಿ, ಪಶ್ಚಿಮ ಯುರೋಪಿಯನ್ ದೇಶದಲ್ಲಿರುವ ಮತ್ತು ಅಲ್ಲಿಗೆ ಪ್ರಯಾಣಿಸುತ್ತಿರುವ ತಮ್ಮ ನಾಗರಿಕರು ಎಚ್ಚರಿಕೆಯಿಂದಿರಬೇಕು ಎಂದು ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರಯಾಣ ಮತ್ತು ಸುರಕ್ಷತಾ ಸಲಹೆಯನ್ನು ನೀಡಿದೆ.
ಶಾಲೆಗಳಲ್ಲಿನ ಕಳಪೆ ಪರಿಸ್ಥಿತಿ ಮತ್ತು ಶಿಕ್ಷಕರ ಕೊರತೆಯಿಂದಾಗಿ ಸೆಪ್ಟೆಂಬರ್ ಕೊನೆಯಲ್ಲಿ ಭುಗಿಲೆದ್ದ ಈ ಘರ್ಷಣೆಗಳು, ಹೆಚ್ಚುತ್ತಿರುವ ಜೀವನ ವೆಚ್ಚ, ಅಧಿಕ ಇಂಧನ ಬೆಲೆಗಳು, ಸಾರ್ವಜನಿಕ ವಲಯದ ಬಜೆಟ್ ಕಡಿತ ಮತ್ತು ಅಧ್ಯಕ್ಷ ಇಮ್ಯುಮ್ಯುಯೆಲ್ ಮ್ಯಾಕ್ರನ್ ಅವರ ಆಡಳಿತದ ಮೇಲಿನ ಸಾರ್ವಜನಿಕ ಅಸಮಾಧಾನದಿಂದಾಗಿ ದೇಶವ್ಯಾಪಿ ಸರ್ಕಾರ ವಿರೋಧಿ ಪ್ರತಿಭಟನೆಗಳಾಗಿ ಕ್ಷಿಪ್ರವಾಗಿ ವಿಸ್ತರಿಸಿದೆ.
ಭಾರತ ಸರ್ಕಾರ ನೀಡಿರುವ ಎಚ್ಚರಿಕೆಯು, ಫ್ರಾನ್ಸ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು, ಸ್ಥಳೀಯ ಕರ್ಫ್ಯೂ ಮತ್ತು ಈ ಪ್ರದೇಶದಾದ್ಯಂತ ಸಂಭಾವ್ಯ ಸಾರಿಗೆ ವ್ಯತ್ಯಯಗಳ ಆಧಾರದಲ್ಲಿ ಬಂದಿದೆ.
ಫ್ರಾನ್ಸ್ನಲ್ಲಿ ವಾಸಿಸುತ್ತಿರುವ ಅಥವಾ ಅಲ್ಲಿಗೆ ಭೇಟಿ ನೀಡುತ್ತಿರುವ ಭಾರತೀಯ ನಾಗರಿಕರು, ವಿಶೇಷವಾಗಿ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಅಥವಾ ಪ್ರತಿಭಟನೆಗಳು ನಡೆಯುವ ಸ್ಥಳಗಳಲ್ಲಿ ಎಚ್ಚರಿಕೆ ವಹಿಸುವಂತೆ ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮವಾದ ‘ಎಕ್ಸ್’ನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಫ್ರಾನ್ಸ್ನಲ್ಲಿನ ಪ್ರತಿಭಟನೆ ಮತ್ತು ನಾಗರಿಕ ಅಶಾಂತಿಯು ಸ್ಥಳೀಯ ಕರ್ಫ್ಯೂಗಳಿಗೆ ಹಾಗೂ ರಸ್ತೆ ಪ್ರಯಾಣ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಸಂಭಾವ್ಯ ವಿಳಂಬ ಅಥವಾ ಕಡಿತಕ್ಕೆ ಕಾರಣವಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಪ್ರಯಾಣಿಕರು ಮತ್ತು ನಿವಾಸಿಗಳು ಸ್ಥಳೀಯ ಫ್ರೆಂಚ್ ಅಧಿಕಾರಿಗಳು, ಫ್ರೆಂಚ್ ಪ್ರಿಫೆಕ್ಚರ್ ಆಫ್ ಪೊಲೀಸ್ನಿಂದ ಬರುವ ಅಪ್ಡೇಟ್ಗಳನ್ನು ಮತ್ತು ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕೃತ ‘ಎಕ್ಸ್’ ಖಾತೆಯ ಹೇಳಿಕೆಗಳನ್ನು ನಿಕಟವಾಗಿ ಅನುಸರಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಫ್ರಾನ್ಸ್ಗೆ ಅಥವಾ ಫ್ರಾನ್ಸ್ ಒಳಗೆ ಪ್ರಯಾಣಿಸಲು ಯೋಜಿಸುತ್ತಿರುವವರು ನೈಜ-ಸಮಯದ ವೇಳಾಪಟ್ಟಿ ಬದಲಾವಣೆಗಳಿಗಾಗಿ ತಮ್ಮ ವಿಮಾನಯಾನ ಸಂಸ್ಥೆಗಳು ಅಥವಾ ಪ್ರಯಾಣ ಸಂಸ್ಥೆಗಳೊಂದಿಗೆ ನೇರ ಸಂಪರ್ಕದಲ್ಲಿರಲು ಶಿಫಾರಸು ಮಾಡಲಾಗಿದೆ” ಎಂದು ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ಸೇರಿಸಿದೆ.
ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಹೀಗೆ ಹೇಳಿದೆ: “ಫ್ರಾನ್ಸ್ನಲ್ಲಿ ಇತ್ತೀಚಿನ ಬೆಳವಣಿಗೆಗಳು ಮತ್ತು ವಿಧಿಸಲಾದ ಸ್ಥಳೀಯ ಕರ್ಫ್ಯೂಗಳ ದೃಷ್ಟಿಯಿಂದ, ದಯವಿಟ್ಟು ಜಾಗರೂಕರಾಗಿರಿ ಮತ್ತು ಎಚ್ಚರಿಕೆ ವಹಿಸಿ. ದಯವಿಟ್ಟು ದೊಡ್ಡ ಜನಸಂದಣಿ ಮತ್ತು ಪ್ರತಿಭಟನೆಗಳು ನಡೆಯುತ್ತಿರುವ ಜನದಟ್ಟಣೆಯ ಸ್ಥಳಗಳನ್ನು ತಪ್ಪಿಸಿ, ಸ್ಥಳೀಯ ಫ್ರೆಂಚ್ ಅಧಿಕಾರಿಗಳು ನೀಡುವ ಸೂಚನೆಗಳು ಹಾಗೂ ಸಲಹೆಗಳನ್ನು ಪಾಲಿಸಿ. ದಯವಿಟ್ಟು ಸ್ಥಳೀಯ ಸುದ್ದಿಗಳ ಮೂಲಕ ಮಾಹಿತಿ ಪಡೆದುಕೊಳ್ಳಿ, ಅಧಿಕೃತ ನವೀಕರಣಗಳನ್ನು ಅನುಸರಿಸಿ (https://gouvernement.fr) ಮತ್ತು ಸಾರ್ವಜನಿಕ ಸಾರಿಗೆ ವ್ಯತ್ಯಯಗಳಿಗಾಗಿ ಪರಿಶೀಲಿಸಿ (https://ratp.fr).
ಯಾವುದೇ ತುರ್ತು ಸಂದರ್ಭದಲ್ಲಿ, ಭಾರತೀಯ ನಾಗರಿಕರು ಇವರನ್ನು ಸಂಪರ್ಕಿಸಬಹುದು:
- ಭಾರತೀಯ ರಾಯಭಾರ ಕಚೇರಿ, ಪ್ಯಾರಿಸ್: +33 6 48 34 00 63 | [email protected]
- ಭಾರತದ ದೂತವಾಸ ಕಚೇರಿ, ಮಾರ್ಸೇಲ್: +33 7 43 16 25 59 | [email protected]”
ಅಕ್ಟೋಬರ್ 17 ರಂದು ದೇಶಾದ್ಯಂತ ನಡೆದ ಗಲಭೆಗಳು ವ್ಯಾಪಕ ವಿನಾಶ ಮತ್ತು ಸಾವಿರಾರು ಬಂಧನಗಳಿಗೆ ಕಾರಣವಾದ ನಂತರ, ಶನಿವಾರ ಘೋಷಿಸಲಾದ ಹೊಸ ಸಾಮಾಜಿಕ ಹೋರಾಟಗಳಲ್ಲಿ ಹಿಂಸಾಚಾರವನ್ನು ತಡೆಯಲು ತನ್ನ ಕೈಲಾದ ಎಲ್ಲವನ್ನೂ ಮಾಡುವುದಾಗಿ ಫ್ರೆಂಚ್ ಸರ್ಕಾರ ಪ್ರತಿಜ್ಞೆ ಮಾಡಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಂತಹ ಹಿಂಸಾತ್ಮಕ ಘಟನೆಗಳು ಮರುಕಳಿಸುವುದನ್ನು ತಡೆಯಲು ಸರ್ಕಾರವು ಲಭ್ಯವಿರುವ ಎಲ್ಲಾ ಕಾನೂನು ಸಾಧನಗಳನ್ನು ಬಳಸುತ್ತದೆ ಎಂದು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕತಾರ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಅಕ್ಟೋಬರ್ 24 ರಂದು ನಿಗದಿಯಾಗಿರುವ ಹೊಸ ಸುತ್ತಿನ ಪ್ರತಿಭಟನೆಗಳ ಮುನ್ನ ಫ್ರೆಂಚ್ ಸರ್ಕಾರದ ದೃಢಸಂಕಲ್ಪವನ್ನು ಮ್ಯಾಕ್ರನ್ ಒತ್ತಿಹೇಳಿದ್ದಾರೆ ಎಂದು ಫ್ರೆಂಚ್ ದೂರದರ್ಶನ ಚಾನೆಲ್ ಬಿಎಫ್ಎಂ ಟಿವಿ ತಿಳಿಸಿದೆ.
ತುರ್ತು ಪರಿಸ್ಥಿತಿಯನ್ನು ಘೋಷಿಸುವಂತೆ ಕೆಲವು ರಾಜಕಾರಣಿಗಳು ಮಾಡಿದ ಬೇಡಿಕೆಗಳಿಗೆ ಸಂಬಂಧಿಸಿದಂತೆ, ಅಂತಹ ಕ್ರಮವು ಈ ಹಂತದಲ್ಲಿ ಅಗತ್ಯವಿಲ್ಲ ಎಂದು ಫ್ರೆಂಚ್ ಅಧ್ಯಕ್ಷರು ಹೇಳಿದರು. ಅಗತ್ಯವಿದ್ದರೆ ಅದನ್ನೂ ನಂತರ ಬಳಸಿಕೊಳ್ಳಬಹುದು ಎಂದರು.
ಅಕ್ಟೋಬರ್ 17 ರ ಗಲಭೆಯ ನಂತರ ಫ್ರಾನ್ಸ್ ಹಲವಾರು ನಗರಗಳಲ್ಲಿ ಜಾರಿಗೊಳಿಸಿರುವ ಕರ್ಫ್ಯೂಗಳನ್ನು ವಿಧಿಸಿತು. ಸೋಮವಾರ ರಾತ್ರಿ ಶಾಂತಿಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡಿದೆ ಎಂದು ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಮಂಗಳವಾರ ಹೇಳಿದ್ದಾರೆ.


