ಸೌದಿ ಅರೇಬಿಯಾದ ದಮ್ಮಾಮ್ನಲ್ಲಿರುವ ಕಿಂಗ್ ಫಹದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಒಬ್ಬರು ಭಾರತೀಯ ಪ್ರಜೆ, ಮತ್ತೊಬ್ಬರು ಸೌದಿ ಪ್ರಜೆ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಗುರುವಾರ (ಅ.22) ತಿಳಿಸಿದೆ.
ಅಧಿಕಾರಿಗಳ ಪ್ರಕಾರ, ಭಾರತ, ಯೆಮೆನ್ ಮತ್ತು ಬಾಂಗ್ಲಾದೇಶದವರು ಸೇರಿದಂತೆ ಇತರ ಎಂಟು ಮಂದಿ ಗಾಯಗೊಂಡಿದ್ದಾರೆ. ಅಧಿಕಾರಿಗಳು ಹಾನಿಯನ್ನು ಪರಿಶೀಲಿಸುತ್ತಿದ್ದರೂ, ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ ಮತ್ತು ವಿಮಾನ ಸಂಚಾರವು ಸಹಜ ಸ್ಥಿತಿಗೆ ಮರಳಿದೆ.
ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಈ ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿರುವುದಾಗಿಯೂ ಹಾಗೂ ಸಂತ್ರಸ್ತ ಕುಟುಂಬಗಳನ್ನು ಸಂಪರ್ಕಿಸುತ್ತಿರುವುದಾಗಿಯೂ ತಿಳಿಸಿದೆ. ಮೃತಪಟ್ಟ ಭಾರತೀಯ ವ್ಯಕ್ತಿಯ ಕುಟುಂಬಕ್ಕೆ ಸಂತಾಪ ಸೂಚಿಸಿರುವ ರಾಯಭಾರ ಕಚೇರಿಯು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದೆ.
ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು, ಇಂಧನ ಸ್ಥಾವರಗಳು ಮತ್ತು ಇತರ ಮೂಲಸೌಕರ್ಯಗಳ ಮೇಲೆ ಯೆಮನ್ನ ಇರಾನ್-ಬೆಂಬಲಿತ ಹೂತಿ ಸಂಘಟನೆಯು ನಡೆಸುತ್ತಿರುವ ದಾಳಿಗಳು ತೀವ್ರಗೊಂಡಿವೆ. ಅ. 8ರಂದು ರಿಯಾದ್ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆದಿತ್ತು.
ತೈಲ ಘಟಕವೊಂದನ್ನು ಗುರಿಯಾಗಿಸಿಕೊಂಡಿದ್ದ ಡ್ರೋನ್ ಅನ್ನು ತಡೆಹಿಡಿದಾಗ ಅವಶೇಷಗಳು ಬಿದ್ದಿದ್ದರಿಂದ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಸೌದಿ ಅರೇಬಿಯಾದ ಇಂಧನ ಸಚಿವಾಲಯ ಬುಧವಾರ ತಿಳಿಸಿತ್ತು.
ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವುದನ್ನು ಉಲ್ಲೇಖಿಸಿ, ಸೌದಿ ಅರೇಬಿಯಾದಲ್ಲಿರುವ ರಾಯಭಾರ ಕಚೇರಿಯ ಅತ್ಯಗತ್ಯವಲ್ಲದ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಅಲ್ಲಿಂದ ನಿರ್ಗಮಿಸಬೇಕೆಂದು ಅಮೆರಿಕವು ಬುಧವಾರ ನಿರ್ದೇಶನ ನೀಡಿತ್ತು.
ನಾಗರಿಕ ವಿಮಾನ ನಿಲ್ದಾಣಗಳು ಮತ್ತು ಪ್ರಮುಖ ಮೂಲಸೌಕರ್ಯಗಳ ಮೇಲೆ ಹೂತಿಗಳು ನಡೆಸುತ್ತಿರುವ ದಾಳಿಗಳು ಹೆಚ್ಚಾಗುತ್ತಿದ್ದು, ಇದರಿಂದ ನಾಗರಿಕ ಸಾವುನೋವುಗಳು ಸಂಭವಿಸಿವೆ ಮತ್ತು ಪ್ರಯಾಣ ವ್ಯವಸ್ಥೆಗೆ ಭಾರಿ ಅಡಚಣೆ ಉಂಟಾಗಿದೆ ಎಂದು ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಟಾಮಿ ಪಿಗೋಟ್ ತಿಳಿಸಿದ್ದರು.
ಭಾರತೀಯ ರಾಯಭಾರ ಕಚೇರಿಯು ಭಾನುವಾರದಂದು ಪ್ರತ್ಯೇಕವಾಗಿ ಸುರಕ್ಷತಾ ಸಲಹೆಯೊಂದನ್ನು ನೀಡಿದ್ದು, ತುರ್ತು ಎಚ್ಚರಿಕೆಗಳು ಬಂದಾಗ ಸೌದಿ ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ತನ್ನ ಪ್ರಜೆಗಳನ್ನು ಕೋರಿದೆ.
ಜನರು ಶಾಂತವಾಗಿರುವಂತೆ, ತಕ್ಷಣವೇ ಕಟ್ಟಡದೊಳಗೆ ಹತ್ತಿರದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮತ್ತು ಹೊರಹೋಗುವುದು ಸುರಕ್ಷಿತವೆಂದು ಅಧಿಕಾರಿಗಳು ಸೂಚಿಸುವವರೆಗೂ ಕಟ್ಟಡದ ಒಳಗೇ ಇರುವಂತೆ ಸಲಹೆ ನೀಡಲಾಗಿದೆ.
ಅಧಿಕೃತ ಅಂಕಿಅಂಶಗಳ ಆಧಾರದ ಮೇಲೆ ಎಎಫ್ಪಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಈ ತಿಂಗಳು ಸೌದಿ ವಿಮಾನ ನಿಲ್ದಾಣಗಳ ಮೇಲೆ ನಡೆದ ದಾಳಿಗಳಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ.
ಯೆಮನ್ನ ಅಂತರ್ಯುದ್ಧದಲ್ಲಿ ಹಲವು ವರ್ಷಗಳಿಂದ ಜಾರಿಯಲ್ಲಿದ್ದ ಕದನ ವಿರಾಮವು ಜುಲೈ ತಿಂಗಳಲ್ಲಿ ಮುರಿದುಬಿದ್ದ ನಂತರ, ಈಗ ಸಂಘರ್ಷ ತೀವ್ರಗೊಂಡಿದೆ. ಸೌದಿ ನೇತೃತ್ವದ ಮೈತ್ರಿಕೂಟದ ಬೆಂಬಲ ಹೊಂದಿರುವ ಯೆಮನ್ ಸರ್ಕಾರದ ವಿರುದ್ಧ ಹೂತಿಗಳು ಹೋರಾಡುತ್ತಿದ್ದಾರೆ.
ಈ ಹಿಂದೆ ಹೂತಿ ಗುಂಪು ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ಕಡಲ ದಿಗ್ಬಂಧನವನ್ನು ಘೋಷಿಸಿತ್ತು ಮತ್ತು ಸೌದಿಯ ಹಡಗುಗಳು, ಭೂಪ್ರದೇಶ ಹಾಗೂ ತೈಲ ಮೂಲಸೌಕರ್ಯಗಳ ಮೇಲೆ ದಾಳಿಗಳನ್ನು ನಡೆಸಿತ್ತು. ಸೆಪ್ಟೆಂಬರ್ನಲ್ಲಿ, ಹೂತಿಗಳು ಯೆಮನ್ನ ಕೆಂಪು ಸಮುದ್ರದ ಕರಾವಳಿಯುದ್ದಕ್ಕೂ, ಈ ಹಿಂದೆ ಸರ್ಕಾರಿ ಪಡೆಗಳ ನಿಯಂತ್ರಣದಲ್ಲಿದ್ದ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ.
ಸೌದಿ ಅರೇಬಿಯಾವು ಹೂತಿಗಳ ನಿಯಂತ್ರಣದಲ್ಲಿರುವ ಪ್ರದೇಶದ ಮೇಲೆ ಪದೇಪದೇ ವೈಮಾನಿಕ ದಾಳಿಗಳನ್ನು ನಡೆಸುವ ಮೂಲಕ ಪ್ರತಿಕ್ರಿಯಿಸಿದೆ. ಹೂತಿ ಗುಂಪು ಯೆಮನ್ನ ಬಹುಭಾಗವನ್ನು ತನ್ನ ನಿಯಂತ್ರಣದಲ್ಲಿಯೇ ಇರಿಸಿಕೊಂಡಿದೆ ಎಂದು ವರದಿಯಾಗಿದೆ.


