ಉತ್ತರ ಪ್ರದೇಶದ ಪಿಲಿಭಿತ್ ವಿಧಾನಸಭಾ ಕ್ಷೇತ್ರದ ಇಬ್ಬರು ಚುನಾವಣಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬುಧವಾರ (ಅಕ್ಟೋಬರ್ 21) ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಸೂಚಿಸಿದ್ದಾರೆ. ಆಂತರಿಕ ತನಿಖೆಯಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗಳನ್ನು ಆನ್ಲೈನ್ನಲ್ಲಿ ಹುಡುಕಿದಾಗ, ಕೆಲವು ಮತದಾರರ ಬದಲಿಗೆ ಇತರ ವ್ಯಕ್ತಿಗಳ ವಿವರಗಳು ಪ್ರದರ್ಶನಗೊಳ್ಳುತ್ತಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಸಂಬಂಧಿತ ಇಬ್ಬರು ಅಧಿಕಾರಿಗಳನ್ನು ಮತದಾರರ ಪಟ್ಟಿ ಸಿದ್ಧಪಡಿಸುವ ಕರ್ತವ್ಯಗಳಿಂದ ತೆಗೆದುಹಾಕಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಲಾಗಿದೆ.
ಉತ್ತರ ಪ್ರದೇಶದ 100 ವಿಧಾನಸಭಾ ಕ್ಷೇತ್ರಗಳ ಪೈಕಿ ಪಿಲಿಭಿತ್ ಕ್ಷೇತ್ರವೂ ಒಂದಾಗಿದ್ದು, ಇಲ್ಲಿನ ಮತದಾರರ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ನಕಲಿ ಮತದಾರರು ಇರುವುದನ್ನು ಪತ್ತೆಹಚ್ಚಿರುವುದಾಗಿ ಸಮಾಜವಾದಿ ಪಕ್ಷ (ಎಸ್ಪಿ) ಇತ್ತೀಚೆಗೆ ಹೇಳಿಕೊಂಡಿದೆ. ಈ ಕುರಿತು ಪಕ್ಷವು ಅ.12ರಂದು ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿತ್ತು.
ಸಿಇಒ ನವದೀಪ್ ರಿನ್ವಾ ಅವರು, ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ (ಡಿಇಒ) ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ಎರಡು ದಿನಗಳ ಒಳಗೆ ವರದಿಯನ್ನು ಸಲ್ಲಿಸಲು ನಿರ್ದೇಶನ ನೀಡಿದ್ದಾರೆ. ಪಿಲಿಭಿತ್ ಜಿಲ್ಲೆಯ ಡಿಇಒ ತಮ್ಮ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಗಳನ್ನು ಸಮಗ್ರವಾಗಿ ಪರಿಶೀಲಿಸಿ, ವಿವರವಾದ ವರದಿಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ.
ಪಿಲಿಭಿತ್ ಸದರ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 16,000ಕ್ಕೂ ಹೆಚ್ಚು ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಗಂಭೀರ ಅಕ್ರಮಗಳು ನಡೆದಿವೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದ ಕೆಲವೇ ಗಂಟೆಗಳಲ್ಲಿ, ಚುನಾವಣಾ ಅಧಿಕಾರಿ ಕ್ರಮ ಕೈಗೊಂಡಿದ್ದಾರೆ. ಎಸ್ಐಆರ್ ಬಳಿಕ ಉತ್ತರ ಪ್ರದೇಶದ ಅಂತಿಮ ಮತದಾರರ ಪಟ್ಟಿ 2026ರ ಏಪ್ರಿಲ್ 10ರಂದು ಬಿಡುಗಡೆಯಾಗಿತ್ತು. ಆ ಬಳಿಕ ಜುಲೈ ಮತ್ತು ಸೆಪ್ಟೆಂಬರ್ ನಡುವೆ 13,510 ಮತದಾರರ ಹೆಸರುಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಮತದಾರರ ಗುರುತಿನ ಎಪಿಕ್ ನಂಬರ್ ಮತ್ತು ಕ್ರಮ ಸಂಖ್ಯೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಹೆಸರು ಮಾತ್ರ ಬದಲಾಗಿದೆ ಎಂದು ಹೇಳಿದೆ.
ಎಪಿಕ್ ಸಂಖ್ಯೆಗಳು ಬದಲಾಗದೆ ಉಳಿದಿವೆ, ಆದರೆ ಹೆಸರುಗಳು ಬದಲಾಗಿವೆ
ಎಸ್ಪಿ ರಾಜ್ಯಾಧ್ಯಕ್ಷ ಶ್ಯಾಮ್ ಲಾಲ್ ಪಾಲ್ ಅವರು, ಸೋಮವಾರ (ಅ. 19) ಸಿಇಒಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಪಿಲಿಭಿತ್ ಸದರ್ ವಿಧಾನಸಭಾ ಕ್ಷೇತ್ರದಲ್ಲಿ, ನೋಂದಾಯಿತ ಮತದಾರರ ಎಪಿಕ್ ಸಂಖ್ಯೆಗಳನ್ನು ಆನ್ಲೈನ್ನಲ್ಲಿ ಹುಡುಕಿದಾಗ, ಸಂಪೂರ್ಣವಾಗಿ ಬೇರೆ ವ್ಯಕ್ತಿಗಳ ವಿವರಗಳು ಕಂಡುಬಂದಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಉದಾಹರಣೆಗೆ : ಬೂತ್ ಸಂಖ್ಯೆ 409ರಲ್ಲಿ ಮತದಾರರ ಕ್ರಮ ಸಂಖ್ಯೆ 220ರ ಅಡಿಯಲ್ಲಿ ಆಶಿಕ್ ಅಲಿ (ತಂದೆ ಮಹಮೂದ್ ಅಲಿ, ವಯಸ್ಸು 39, ಪುರುಷ) ಎಂದು ನೋಂದಾಯಿಸಲಾಗಿದೆ. ಆದರೆ, ಆನ್ಲೈನ್ನಲ್ಲಿ ಅವರ ಎಪಿಕ್ ಸಂಖ್ಯೆಯನ್ನು ಹುಡುಕಿದಾಗ, ಬೇರೊಬ್ಬ ವ್ಯಕ್ತಿ ಖಲೀಲ್ ಖಾನ್, ವಯಸ್ಸು 39, ಪುರುಷ) ವಿವರಗಳು ಕಂಡುಬಂದಿವೆ ಎಂದು ಪಾಲ್ ಹೇಳಿದ್ದಾರೆ.
ಈ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ವಿಷಯದಲ್ಲಿ ಇದೇ ರೀತಿಯ ವ್ಯತ್ಯಾಸಗಳು ಕಂಡುಬಂದಿವೆ. ಅವರ ಎಪಿಕ್ ಸಂಖ್ಯೆಗಳನ್ನು ಆನ್ಲೈನ್ನಲ್ಲಿ ಹುಡುಕಿದಾಗ ಬೇರೆ ವ್ಯಕ್ತಿಗಳ ವಿವರಗಳು ಲಭ್ಯವಾಗಿವೆ ಎಂದು ಪಾಲ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
“ನೋಂದಾಯಿತ ಮತದಾರರೊಬ್ಬರ ಎಪಿಕ್ ಸಂಖ್ಯೆಯನ್ನು ಆನ್ಲೈನ್ನಲ್ಲಿ ಹುಡುಕಿದಾಗ, ಬೇರೊಬ್ಬ ವ್ಯಕ್ತಿಯ ವಿವರಗಳು ಕಾಣಿಸಿಕೊಳ್ಳುವ ಈ ಸಮಸ್ಯೆಯು ತೀವ್ರ ಕಳವಳಕಾರಿ ವಿಷಯವಾಗಿದೆ. ಭಾರತೀಯ ಚುನಾವಣಾ ಆಯೋಗವು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ, 2027ರ ವಿಧಾನಸಭಾ ಚುನಾವಣೆಯ ದಿನದಂದು ಸಾವಿರಾರು ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಬಹುದು” ಎಂದು ಅವರು ಹೇಳಿದ್ದಾರೆ.
ಪಿಲಿಭಿತ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ತಾಂತ್ರಿಕ ವ್ಯತ್ಯಾಸವೊಂದಕ್ಕೆ ಸಂಬಂಧಿಸಿದ ದೂರಿನ ಬಗ್ಗೆ ತಾವು ಗಮನ ಹರಿಸಿರುವುದಾಗಿ ಸಿಇಒ ರಿನ್ವಾ ಬುಧವಾರ ತಿಳಿಸಿದ್ದಾರೆ. ಈ ವಿಷಯದ ಕುರಿತು ತನಿಖೆ ನಡೆಸಲಾಗಿದ್ದು, ಡಿಇಒ ಅವರಿಂದ ಸ್ವೀಕರಿಸಿದ ವರದಿಯ ಪ್ರಕಾರ, ಪಿಲಿಭಿತ್ ಮತದಾರರ ಪಟ್ಟಿಯಲ್ಲಿ ಪರಿಶೀಲನೆ ನಡೆಸಿದಾಗ, ಆನ್ಲೈನ್ನಲ್ಲಿ ಕೆಲವು ಮತದಾರರ ಎಪಿಕ್ ಸಂಖ್ಯೆಗಳನ್ನು ಹುಡುಕಿದಾಗ ಬೇರೆ ಮತದಾರರ ವಿವರಗಳು ಕಾಣಿಸಿಕೊಳ್ಳುತ್ತಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
ವರದಿಯ ಆಧಾರದ ಮೇಲೆ, ಇಂತಹ ದೋಷಗಳನ್ನು ತಕ್ಷಣವೇ ಸರಿಪಡಿಸುವಂತೆ ಹಾಗೂ ಸಂಬಂಧಪಟ್ಟ ಕ್ಷೇತ್ರಕ್ಕೆ ನಿಯೋಜಿತರಾಗಿದ್ದ ಮತದಾರರ ನೋಂದಣಿ ಅಧಿಕಾರಿ (ಇಆರ್ಒ) ಮತ್ತು ಮತದಾರರ ನೋಂದಣಿ ಕೇಂದ್ರದ (ವಿಆರ್ಒ) ನಿರ್ವಾಹಕರನ್ನು ಮತದಾರರ ಪಟ್ಟಿಗೆ ಸಂಬಂಧಿಸಿದ ಕರ್ತವ್ಯಗಳಿಂದ ಕೂಡಲೇ ಬಿಡುಗಡೆಗೊಳಿಸುವಂತೆ ರಿನ್ವಾ ಅವರು ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇಆರ್ಒ ಮತ್ತು ವಿಆರ್ಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿಇಒ ನಿರ್ದೇಶನ
‘ಜನತಾ ಪ್ರಾತಿನಿಧ್ಯ ಕಾಯಿದೆ, 1950’ರ ಸೆಕ್ಷನ್ 32 ಮತ್ತು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ, ಇಆರ್ಒ ಮತ್ತು ವಿಆರ್ಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಿಇಒ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಪಿಲಿಭಿತ್ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳ (ಎಇಆರ್) ಜವಾಬ್ದಾರಿಗಳಿಗೆ ಸಂಬಂಧಿಸಿದ ಸ್ಪಷ್ಟ ವರದಿಯೊಂದನ್ನು ಸಲ್ಲಿಸುವಂತೆಯೂ ಸಿಇಒ ಸೂಚಿಸಿದ್ದಾರೆ.
ಬುಧವಾರ ಲಕ್ನೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕರು, ಪಿಲಿಭಿತ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕಂಡುಬಂದಿದೆ ಎನ್ನಲಾದ ಲೋಪದೋಷಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಬಿಜೆಪಿಯ ಸಂಜಯ್ ಸಿಂಗ್ ಗಂಗ್ವಾರ್ ಅವರು 2017 ಮತ್ತು 2022ರಲ್ಲಿ ಈ ಸ್ಥಾನವನ್ನು ಗೆದ್ದುಕೊಂಡಿದ್ದರು. 2022ರಲ್ಲಿ, ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಶೈಲೇಂದ್ರ ಗಂಗ್ವಾರ್ ಅವರನ್ನು 6,970 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಂಜಯ್ ಸಿಂಗ್ ಗಂಗ್ವಾರ್ ಅವರು ಪ್ರಸ್ತುತ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉತ್ತರ ಪ್ರದೇಶ ಕಾಂಗ್ರೆಸ್ನ ಎಐಸಿಸಿ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಅವರು ಮಾತನಾಡಿ, ಏಪ್ರಿಲ್ನಲ್ಲಿ ರಾಜ್ಯದ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾದ ನಂತರ, ಮತದಾರರು ತಮ್ಮ ವಿವರಗಳನ್ನು ಅಂದರೆ ಕ್ರಮ ಸಂಖ್ಯೆ, ಹೆಸರು, ವಿಳಾಸ, ಎಪಿಕ್ ಸಂಖ್ಯೆ ಮತ್ತು ಹೆಸರಿನ ಕಾಗುಣಿತ ಮುಂತಾದವುಗಳನ್ನು ಪರಿಶೀಲಿಸಿಕೊಂಡು, ತಮ್ಮ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಭಾವಿಸಿರಬಹುದು ಎಂದು ಹೇಳಿದ್ದಾರೆ.
ಆದರೆ, ಜುಲೈ ಮತ್ತು ಸೆಪ್ಟೆಂಬರ್ ನಡುವೆ ಹೊರಬಂದ ದತ್ತಾಂಶವು, ಪಿಲಿಭಿತ್ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರವೇ 13,150 ನೋಂದಣಿಗೆ ಸಂಬಂಧಿಸಿದ ಹೆಸರುಗಳನ್ನು ಬದಲಾಯಿಸಲಾಗಿದೆ ಎಂದು ಬಹಿರಂಗಪಡಿಸಿದೆ. ಈ ವೇಳೆ ಎಪಿಕ್ ಸಂಖ್ಯೆಗಳು ಮತ್ತು ಕ್ರಮ ಸಂಖ್ಯೆಗಳು ಮಾತ್ರ ಬದಲಾಗದೆ ಹಾಗೆಯೇ ಉಳಿದಿದ್ದವು ಎಂದು ಗೌತಮ್ ತಿಳಿಸಿದ್ದಾರೆ.
ಅಂತಿಮ ಪಟ್ಟಿಯಲ್ಲಿ ತಮ್ಮ ವಿವರಗಳು ಕಾಣಿಸಿಕೊಂಡಿದ್ದರಿಂದ, ಹೆಸರುಗಳನ್ನು ಬದಲಾಯಿಸಲಾಗಿದ್ದರೂ ತಾವು ಇನ್ನೂ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿದ್ದೇವೆ ಎಂದೇ ಮತದಾರರು ನಂಬಿದ್ದಾರೆ. ಈ ಮತದಾರರು ಮತ ಚಲಾಯಿಸಲು ಬಂದಾಗ, ತಮ್ಮ ಬಳಿ ಎಪಿಕ್ ಕಾರ್ಡ್ಗಳು ಮತ್ತು ಗುರುತಿನ ದಾಖಲೆಗಳಿದ್ದರೂ ಸಹ, ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳಿಲ್ಲ ಎಂದು ಅವರಿಗೆ ಗೊತ್ತಾಗಬಹುದು ಎಂದು ಗೌತಮ್ ಹೇಳಿದ್ದಾರೆ.
ಮತ್ತೊಂದೆದೆ, ಇನ್ನೂ ತಮ್ಮ ಪ್ರದೇಶದಲ್ಲಿಯೇ ವಾಸಿಸುತ್ತಿರುವ ಮತ್ತು ತಾವು ಅಲ್ಲಿಯೇ ನೆಲೆಸಿರುವುದನ್ನು ಅಧಿಕೃತವಾಗಿ ದೃಢಪಡಿಸಿರುವ 884 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ವಿರುದ್ಧವಾಗಿ, ವಾಸ್ತವವಾಗಿ ಆ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸದ 2,600 ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. “ಕೇವಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 16,554 ಮತಗಳ ವಿಷಯದಲ್ಲಿ ಅಕ್ರಮ ಎಸಗಲಾಗಿದೆ” ಎಂದು ಗೌತಮ್ ವಿವರಿಸಿದ್ದಾರೆ.
“ಎಸ್ಐಆರ್ ನಂತರ ಮತದಾರರ ಪಟ್ಟಿಯ ಸ್ಥಿತಿಯು ಇನ್ನಷ್ಟು ಹದಗೆಟ್ಟಿದೆ”
ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು, ಬದಲಾಯಿಸಲಾದ ಹೆಸರುಗಳಲ್ಲಿ ಹೆಚ್ಚಿನವು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವುಗಳಾಗಿದ್ದು, ಅವುಗಳಲ್ಲಿ ಬಹುಪಾಲು ಪುರುಷರ ಹೆಸರುಗಳೇ ಆಗಿವೆ ಎಂದು ಹೇಳಿದ್ದಾರೆ. ಮತದಾರರ ಪಟ್ಟಿಯಿಂದ ಶ್ರೀನೇತ್ ನೀಡಿದ ಉದಾಹರಣೆಗಳನ್ನು ಗಮನಿಸಿದರೆ, ಅವರು ಮುಸ್ಲಿಮರನ್ನು ಉದ್ದೇಶಿಸಿ ಹೀಗೆ ಹೇಳಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಕರಡು ಮತದಾರರ ಪಟ್ಟಿಯಲ್ಲಿ, 4746 ಸಂಖ್ಯೆಯಲ್ಲಿ ಕೊನೆಗೊಳ್ಳುವ ಎಪಿಕ್ ಸಂಖ್ಯೆಯೊಂದನ್ನು ಮೊಹಮ್ಮದ್ ಯೂಸುಫ್ (33 ವರ್ಷ, ರಸಿತಾಲ್ ಅವರ ಪುತ್ರ) ಎಂಬ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಆದರೆ, ಈಗ ಅದೇ ಎಪಿಕ್ ಸಂಖ್ಯೆಯು ಹಸ್ರತ್ (33 ವರ್ಷ, ರಂಜಾನ್ ಅಲಿ ಅವರ ಪುತ್ರ) ಎಂಬ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಶ್ರೀನೇತ್ ವಿವರಿಸಿದ್ದಾರೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಎಪಿಕ್ ಸಂಖ್ಯೆ, ವಯಸ್ಸು ಮತ್ತು ಲಿಂಗ ಒಂದೇ ಆಗಿದ್ದರೂ, ಮತದಾರ ಮತ್ತು ಅವರ ತಂದೆಯ ಹೆಸರುಗಳನ್ನು ಬದಲಾಯಿಸಲಾಗಿದೆ. ಮತ್ತೊಂದು ಉದಾಹರಣೆಯೆಂದರೆ, ಮೊಹಮ್ಮದ್ ವಸೀಮ್ ಎಂಬ ಮತದಾರನ ಎಪಿಕ್ ಸಂಖ್ಯೆಯು, ಈಗ ‘ಶೇರ್ ಮೊಹಮ್ಮದ್’ ಎಂಬ ಹೆಸರಿನಲ್ಲಿ ನೋಂದಾಯಿತವಾಗಿರುವುದು ಕಂಡುಬಂದಿದೆ ಎಂದು ಶ್ರೀನೇತ್ ಹೇಳಿದ್ದಾರೆ.
ಗಮನಾರ್ಹವಾಗಿ, ಈ ಬದಲಾವಣೆಗಳು ಬೇರೆ ಬೇರೆ ಸಮಯಗಳಲ್ಲಿ ಹಂತ ಹಂತವಾಗಿ ನಡೆದಿವೆ ಮತ್ತು ಇದರಲ್ಲಿ ಒಂದು ನಿರ್ದಿಷ್ಟ ಮಾದರಿ ಎದ್ದು ಕಾಣುತ್ತಿದೆ ಎಂದು ಶ್ರೀನೇತ್ ತಿಳಿಸಿದ್ದಾರೆ. ಈ ಮಾರ್ಪಾಡುಗಳನ್ನು ಸಾಫ್ಟ್ವೇರ್ ಮೂಲಕ ಮಾಡಲಾಗಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. “ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಬದಲಾವಣೆಗಳನ್ನು ಹೇಗೆ ಮಾಡಲಾಯಿತು? ಯಾರ ಆದೇಶದ ಮೇರೆಗೆ ಇವುಗಳನ್ನು ನಡೆಸಲಾಯಿತು? ಮತ್ತು ಇದಕ್ಕೆ ಯಾರು ಹೊಣೆ?” ಎಂದು ಶ್ರೀನೇತ್ ಪ್ರಶ್ನಿಸಿದ್ದಾರೆ.
ಎಸ್ಪಿ ರಾಜ್ಯಾಧ್ಯಕ್ಷ ಪಾಲ್ ಅವರು, ಎಸ್ಐಆರ್ ಪ್ರಕ್ರಿಯೆಯ ನಂತರದ ಅಂತಿಮ ಮತದಾರರ ಪಟ್ಟಿಯು ಇನ್ನಷ್ಟು ದೋಷಪೂರಿತವಾಗಿದೆ ಎಂದು ಹೇಳಿದ್ದಾರೆ.
ಎಸ್ಐಆರ್ ಅನ್ನು ಘೋಷಿಸುವ ಸಂದರ್ಭದಲ್ಲಿ, ಭಾರತೀಯ ಚುನಾವಣಾ ಆಯೋಗವು ನಿಖರವಾದ ಮತ್ತು ದೋಷರಹಿತ ಮತದಾರರ ಪಟ್ಟಿಯನ್ನು ಖಚಿತಪಡಿಸುವ ಪ್ರಕ್ರಿಯೆಯೊಂದನ್ನು ಕೈಗೊಳ್ಳುವುದಾಗಿ ಭರವಸೆ ನೀಡಿತ್ತು; ಆದರೆ, ಎಸ್ಐಆರ್ ನಂತರ ಮತದಾರರ ಪಟ್ಟಿಯ ಸ್ಥಿತಿಯು ಇನ್ನಷ್ಟು ಹದಗೆಟ್ಟಿದೆ” ಎಂದು ಪಾಲ್ ಹೇಳಿದ್ದಾರೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಿಲಿಭಿತ್ನ ಬಿಜೆಪಿ ಶಾಸಕರು ಮತದಾರರ ಪಟ್ಟಿಯನ್ನು ತಿರುಚು ಕೆಲಸ ಮಾಡಿದ್ದಾರೆ- ಎಸ್ಪಿ ನಾಯಕ ಆರೋಪ
ಮಾಜಿ ಸಚಿವರು ಮತ್ತು ಪಿಲಿಭಿತ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಹೇಮರಾಜ್ ವರ್ಮಾ ಅವರು, ತಮ್ಮ ಕ್ಷೇತ್ರದಲ್ಲಿ 13,000ಕ್ಕೂ ಹೆಚ್ಚು ಮತದಾರರ ದಾಖಲೆಗಳಲ್ಲಿ ನಡೆದಿರಬಹುದಾದ ಅಕ್ರಮಗಳನ್ನು (ಹೆಸರು ಬದಲಾವಣೆಗಳು) ಪರಿಶೀಲಿಸಲು, ಸ್ವತಂತ್ರ ಸೈಬರ್ ಫೋರೆನ್ಸಿಕ್ ಸಂಸ್ಥೆಯೊಂದರ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಬುಧವಾರ ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ, ನಿರ್ದಿಷ್ಟ ಪ್ರದೇಶ ಅಥವಾ ಮತದಾರರ ಗುಂಪಿನ ಮೇಲೆ ಅಸಮಾನ ಪರಿಣಾಮ ಬೀರಲಾಗಿದೆಯೇ ಎಂಬುದನ್ನು ನಿರ್ಧರಿಸಲು, ಈ ತನಿಖೆಯು ಬೂತ್ವಾರು ಮತ್ತು ಗುಂಪು-ವಾರು ವಿಶ್ಲೇಷಣೆಯನ್ನು ಒಳಗೊಂಡಿರಬೇಕು ಎಂದು ವರ್ಮಾ ಹೇಳಿದ್ದಾರೆ. ಪಿಲಿಭಿತ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಸ್ಐಆರ್ ಪ್ರಕ್ರಿಯೆಯ ನಂತರ ಸುಮಾರು 25,000 ಮುಸ್ಲಿಂ ಮತದಾರರ ಹೆಸರುಗಳಲ್ಲಿ ದೋಷಗಳನ್ನು ಉಂಟುಮಾಡಲಾಗಿದ್ದು, ಇದರಿಂದಾಗಿ ಅವರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ವರ್ಮಾ ಆರೋಪಿಸಿದ್ದಾರೆ.
ಪಿಲಿಭಿತ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವರ್ಮಾ, 2022ರ ಚುನಾವಣೆಯಲ್ಲಿ 7,000ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದ ಹಾಲಿ ಬಿಜೆಪಿ ಶಾಸಕ ಹಾಗೂ ಸಚಿವ ಸಂಜಯ್ ಗಂಗ್ವಾರ್ ಅವರ ಸೂಚನೆಯ ಮೇರೆಗೆ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
“ತಾನು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಭಾವಿಸಿದ ಗಂಗ್ವಾರ್, ತಮಗೆ ಆಪ್ತರಾದ ಅಧಿಕಾರಿಗಳೊಂದಿಗೆ ಸೇರಿ ಸಂಚು ಹೂಡಿದ್ದಾರೆ. ನಾಲ್ವರು ಕಂಪ್ಯೂಟರ್ ತಜ್ಞರ ತಂಡವೊಂದನ್ನು ನಿಯೋಜಿಸಿ, ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ತಿರುಚುವ ಮೂಲಕ ಅವರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸಿದ್ದಾರೆ” ಎಂದು ವರ್ಮಾ ಹೇಳಿದ್ದಾರೆ.
ಅಂತಿಮ ಕರಡು ಹಾಗೂ ತದನಂತರದ ಪಟ್ಟಿಗಳಲ್ಲಿರುವ ಹಳೆಯ ಮತ್ತು ಹೊಸ ಹೆಸರುಗಳು, ವಿಳಾಸಗಳು, ಭಾವಚಿತ್ರಗಳು ಹಾಗೂ ಇತರ ವಿವರಗಳನ್ನು ತುಲನಾತ್ಮಕವಾಗಿ ಪರಿಶೀಲಿಸಬೇಕು; ಜೊತೆಗೆ, ದತ್ತಾಂಶ ಸಂಗ್ರಹದ (ಡೇಟಾಬೇಸ್) ಹಾದಿಯನ್ನು ಆಡಿಟ್ಗೆ ಒಳಪಡಿಸಬೇಕು ಮತ್ತು ಅನಧಿಕೃತ ಬದಲಾವಣೆಗಳ ಕುರಿತು ತನಿಖೆ ನಡೆಸಬೇಕು ಎಂದು ವರ್ಮಾ ಆಗ್ರಹಿಸಿದ್ದಾರೆ.
ಬಿಜೆಪಿ ಸಚಿವ ಸಂಜಯ್ ಗಂಗ್ವಾರ್ ಅವರು ವರ್ಮಾ ಅವರ ಆರೋಪಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
Courtesy :livelaw.in


