ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸಲಿರುವ ಬೃಹತ್ ರ್ಯಾಲಿಗೆ ಪೀಪಲ್ ಅಗೆನೆಸ್ಟ್ ಎಸ್ಐಆರ್ ಬೆಂಬಲ ಘೋಷಿಸಿದೆ.
ಪ್ರಜಾಪ್ರಭುತ್ವವನ್ನು ಉಳಿಸಲು, ಎಸ್ಐಆರ್ ರದ್ದುಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗೂ ಮತಗಳ ದುರುಪಯೋಗ ತಡೆಗಟ್ಟಲು, ಬ್ಯಾಲೆಟ್ ಪೇಪರ್ ಮರುಸ್ಥಾಪನೆ, ಚುನಾವಣಾ ಧನಸಹಾಯದ ಮರುಪರಿಶೀಲನೆ, ಮಾದರಿ ನೀತಿ ಸಂಹಿತೆ ಜಾರಿ ಮತ್ತು ಪ್ರಮಾಣಾನುಗುಣ ಪ್ರಾತಿನಿಧ್ಯ ಸೇರಿದಂತೆ ನಾಗರಿಕರ ಪ್ರಜಾಸತ್ತಾತ್ಮಕ ಹಾಗೂ ಚುನಾವಣಾ ಹಕ್ಕುಗಳನ್ನು ರಕ್ಷಿಸಲು ಆಗ್ರಹಿಸಿ ಇಂಡಿಯಾ ಒಕ್ಕೂಟ ರ್ಯಾಲಿ ನಡೆಸಲಿದೆ.
ಸರ್ವಾಧಿಕಾರಿ ಮೋದಿ-ಶಾ ಆಡಳಿತದಿಂದ ಭಾರತದ ಸಂವಿಧಾನ ಮತ್ತು ನಮ್ಮ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಗಂಭೀರ ಅಪಾಯವನ್ನು ಎದುರಿಸಲು, ಸದ್ಯದ ಪರಿಸ್ಥಿತಿಯಲ್ಲಿ ವಿಷಯಾಧಾರಿತ ಒಗ್ಗಟ್ಟು ಅತ್ಯಂತ ನಿರ್ಣಾಯಕವಾಗಿದೆ ಎಂದು ಪೀಪಲ್ ಅಗೆನೆಸ್ಟ್ ಎಸ್ಐಆರ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಯಾವುದೇ ರಾಜಕೀಯ ಪಕ್ಷಗಳ ಭೇದಭಾವವಿಲ್ಲದೆ ಎಲ್ಲಾ ಹೋರಾಟಗಳೊಂದಿಗೆ ಕೈಜೋಡಿಸಿ ಒಗ್ಗಟ್ಟನ್ನು ಪ್ರದರ್ಶಿಸುವಂತೆ ದೇಶದ ಎಲ್ಲಾ ನಾಗರಿಕರಲ್ಲಿ ವಿನಂತಿಸಿದೆ.
ನವದೆಹಲಿ ರಾಮಲೀಲಾ ಮೈದಾನದಲ್ಲಿ ನವೆಂಬರ್ 1ರಂದು ನಡೆಯಲಿರುವ ಬೃಹತ್ ರ್ಯಾಲಿಯು, ಶಾಂತಿಯುತ ಪ್ರತಿಭಟನೆ ನಡೆಸುವ ನಾಗರಿಕರ ಮೂಲಭೂತ ಹಕ್ಕನ್ನು ಮೋದಿ-ಶಾ ಆಡಳಿತವು ಕ್ರೂರವಾಗಿ ಹತ್ತಿಕ್ಕುತ್ತಿರುವುದು ಮತ್ತು ಶಾಂತಿಯುತ ಧರಣಿಗಳಿಗೆ ಹೆಸರಾಗಿದ್ದ ಜಂತರ್ ಮಂತರ್ ಸ್ಥಳವನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟಿರುವ ಹಿನ್ನೆಲೆ ಆಯೋಜಿತವಾಗಿದೆ. ಒಂದು ಪ್ರಜಾಪ್ರಭುತ್ವ ದೇಶವಾಗಿ ನಾವೆಲ್ಲರೂ ಒಟ್ಟಾಗಿ ನಮ್ಮ ಈ ಹಕ್ಕನ್ನು ಮತ್ತು ಜಾಗವನ್ನು ಮರಳಿ ಪಡೆದೇ ತೀರುತ್ತೇವೆ ಎಂದು ಪೀಪಲ್ ಅಗೆನೆಸ್ಟ್ ಎಸ್ಐಆರ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಫಾರಂ 6, 7 ಮತ್ತು 8ರಂತಹ ಶಾಸನಬದ್ಧ ನಮೂನೆಗಳನ್ನು ಬದಲಾಯಿಸಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಅಧಿಕಾರವಿಲ್ಲ ಎಂಬ ಸುಪ್ರೀಂ ಕೋರ್ಟ್ನ ನಿಲುವು ಹಾಗೂ ಈಗಾಗಲೇ ನೋಂದಾಯಿತ ಮತದಾರರನ್ನು ಹೊಸ ನಿಯಮಾವಳಿಗಳ ತಪಾಸಣೆಗೆ ಏಕೆ ಒಳಪಡಿಸಲಾಗುತ್ತಿದೆ ಎಂಬ ಅದರ ಪ್ರಶ್ನೆಯು, ಚುನಾವಣಾ ಆಯೋಗವನ್ನು ಉತ್ತರದಾಯಿಯಾಗಿಸುವ ನಿಟ್ಟಿನಲ್ಲಿ ಅತ್ಯಂತ ಅಗತ್ಯವಾದ ಹೆಜ್ಜೆಯಾಗಿದೆ. ನಿಗದಿತ ಸಮಯದೊಳಗೆ ಗಣತಿ ನಮೂನೆಯನ್ನು ಸಲ್ಲಿಸಲು ವಿಫಲವಾದರೆ, ನಾಗರಿಕರ ಅತ್ಯಂತ ಪ್ರಮುಖ ಹಕ್ಕಾದ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಸುಪ್ರೀಂ ಕೋರ್ಟ್ ಈಗ ಈ ಮಹತ್ವದ ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸಿ, ‘ಸಂವಿಧಾನದ ರಕ್ಷಕ’ ಎಂಬ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತದೆ ಮತ್ತು ಎಸ್ಐಆರ್ ಪ್ರಕ್ರಿಯೆಗೆ ಈ ಹಿಂದೆ ನೀಡಿದ್ದ ಬೇಷರತ್ ಬೆಂಬಲದಿಂದ ಉಂಟಾಗಿರುವ ಹಾನಿಯನ್ನು ನಿಯಂತ್ರಿಸುತ್ತದೆ ಎಂದು ನಾವು ಆಶಿಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ ಎಂದಿದೆ.
ದೇಶಾದ್ಯಂತ ನಡೆಸಲಾದ ಎಸ್ಐಆರ್ ಪ್ರಕ್ರಿಯೆಯು 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 13 ಕೋಟಿಗೂ ಹೆಚ್ಚು ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಕಾರಣವಾಗಿದೆ. ಸಂಶಯಾಸ್ಪದ ಪೌರತ್ವ ವಿಚಾರಣೆಗಳ ಆಧಾರದ ಮೇಲೆ ಅರ್ಹ ಮತದಾರರನ್ನು ಸಾಮೂಹಿಕವಾಗಿ ಕೈಬಿಟ್ಟು, ಏಕಪಕ್ಷೀಯವಾಗಿ ಸಿದ್ಧಪಡಿಸಲಾಗಿರುವ ಈ ಆತಂಕಕಾರಿ ಮತದಾರರ ಪಟ್ಟಿಯು ಸಂವಿಧಾನದ ವಿಧಿ 326 ರ ಅಡಿಯಲ್ಲಿ ನಾಗರಿಕರಿಗೆ ನೀಡಲಾಗಿರುವ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಿನ ಖಾತರಿಗೆ ಗಂಭೀರ ಬೆದರಿಕೆಯೊಡ್ಡಿದೆ. ಇದು ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಅಸಂವಿಧಾನಿಕವಾಗಿದೆ ಎಂದು ಹೇಳಿದೆ.
ಗ್ಯಾನೇಶ್ ಕುಮಾರ್ ವಿರುದ್ಧದ ದೋಷಾರೋಪಣೆಯೇ ಆರಂಭಿಕ ಹಂತ
ಸಂಸತ್ತಿನ ಶಾಸನಬದ್ಧ ಅಧಿಕಾರಗಳನ್ನು ಉಲ್ಲಂಘಿಸಿ ಮತ್ತು ತನ್ನ ಮಿತಿ ಮೀರಿ ಭಾರತೀಯ ಚುನಾವಣಾ ಆಯೋಗವು (ಇಸಿಐ) ವರ್ತಿಸುತ್ತಿರುವುದರಿಂದ ದೇಶವು ಇಂದು ಸಾಂವಿಧಾನಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟಿನಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ, ಸಂಸತ್ತು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ (impeachment) ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವುದು. ಆದರೆ, ಗ್ಯಾನೇಶ್ ಕುಮಾರ್ ಅವರ ಈ ಕಾನೂನುಬಾಹಿರ ಕೃತ್ಯಗಳಿಂದ ಅಪಾರ ರಾಜಕೀಯ ಲಾಭ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆ ತಪ್ಪುಗಳನ್ನು ಸಮರ್ಥಿಸಿಕೊಳ್ಳಲು ಹಠಕ್ಕೆ ಬಿದ್ದಿದ್ದಾರೆ. ಎಸ್ಐಆರ್ ಪ್ರಕ್ರಿಯೆ ಮತ್ತು 13 ಕೋಟಿಗೂ ಹೆಚ್ಚು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿರುವುದು ರಾಜ್ಯ ಚುನಾವಣೆಗಳಲ್ಲಿ ಪ್ರಧಾನಿಯವರ ಪಕ್ಷವಾದ ಬಿಜೆಪಿಗೆ ಸ್ಪಷ್ಟವಾಗಿ ಲಾಭ ಮಾಡಿಕೊಟ್ಟಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಬದಲು, ದೇಶದ್ರೋಹಕ್ಕೆ ಸಮನಾದ ಇಂತಹ ಕಾನೂನುಬಾಹಿರ ಕ್ರಮಗಳ ಪರವಾಗಿ ನಿಲ್ಲುವ ಮೂಲಕ ಮೋದಿ-ಶಾ ಆಡಳಿತವು ಇಂದು ಜನರ ಮುಂದೆ ಬೆತ್ತಲಾಗಿದೆ ಎಂದು ಪೀಪಲ್ ಅಗೆನೆಸ್ಟ್ ಎಸ್ಐಆರ್ ಹೇಳಿದೆ.
ಈ ಹಿನ್ನೆಲೆಯಲ್ಲಿ, ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು, ಒಗ್ಗಟ್ಟನ್ನು ಬಲಪಡಿಸಲು ಮತ್ತು ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಯುವ ಹೋರಾಟದ ಹಾದಿಯಲ್ಲಿ ಜೊತೆಯಾಗಿ ನಿಲ್ಲಲು ದೇಶದ ಎಲ್ಲಾ ನಾಗರಿಕರು ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಕೈಜೋಡಿಸಬೇಕು. ದೇಶದ ಮುಂದಿರುವ ಈ ಭೀಕರ ಸಾಂವಿಧಾನಿಕ ಬಿಕ್ಕಟ್ಟನ್ನು ನಾವೆಲ್ಲರೂ ನಮ್ಮ ಸಾಮೂಹಿಕ ಒಗ್ಗಟ್ಟಿನ ಮೂಲಕವೇ ಮೆಟ್ಟಿನಿಲ್ಲಬೇಕಾಗಿದೆ ಎಂದಿದೆ.


