ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ (US Midterm Elections 2026) ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ ‘ಬ್ಲೂ ವೇವ್’ (ನೀಲಿ ಅಲೆ) ಸೃಷ್ಟಿಸಿದ್ದು, ಸಂಸತ್ತಿನ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಮತ್ತು ಸೆನೆಟ್ (ಮೇಲ್ಮನೆ) ಎರಡರಲ್ಲೂ ಭರ್ಜರಿ ಬಹುಮತದೊಂದಿಗೆ ನಿಯಂತ್ರಣ ಸಾಧಿಸಿದೆ.
ಈ ಫಲಿತಾಂಶದಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಟ್ರಂಪ್ ಅವರು ಅಬ್ದುಲ್ ಸಯೀದ್, ಇಲ್ಹಾನ್ ಉಮರ್ ಸೇರಿದಂತೆ ಕೆಲ ನಿರ್ದಿಷ್ಟ ಅಭ್ಯರ್ಥಿಗಳ ವಿರುದ್ಧ ಬೀದಿಗಿಳಿದು ಪ್ರಚಾರ ಮಾಡಿದರೂ, ಫಲಿತಾಂಶ ಪ್ರಕಟಗೊಳ್ಳುವುದರೊಂದಿಗೆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಅಲ್-ಜಝೀರಾ ವರದಿಯ ಪ್ರಕಾರ, ಸಂಸತ್ತಿನ ಕೆಳ ಮನೆಯಾದ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ಅಥವಾ ಪ್ರತಿನಿಧಿ ಸಭೆಯ 435 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಸುಮಾರು 230ರಷ್ಟು ಸ್ಥಾನಗಳನ್ನು ಈಗಾಗಲೇ ಗೆದ್ದಿದೆ. ಈ ಮೂಲಕ ಬಹುಮತದ ಮ್ಯಾಜಿಕ್ ನಂಬರ್ 218 ದಾಟಿದೆ. ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಕೇವಲ 140 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ.
ಮೇಲ್ಮನೆಯಾದ ಸೆನೆಟ್ನಲ್ಲೂ ಡೆಮಾಕ್ರಟಿಕ್ ಪಕ್ಷ ಬಹುಮತದ ಮ್ಯಾಜಿಕ್ ನಂಬರ್ 51 ಅನ್ನು ದಾಟಿ ಮುನ್ನುಗ್ಗಿದೆ. ಸೆನೆಟ್ನ 35 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಈಗಾಗಲೇ ಸುಮಾರು 54 ಸ್ಥಾನಗಳನ್ನು (ಕ್ಯಾರಿ ಓವರ್ ಸ್ಥಾನಗಳು ಸೇರಿದಂತೆ) ಗೆದ್ದುಕೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ರಿಪಬ್ಲಿಕನ್ನರ ಕೈಯಲ್ಲಿದ್ದ ಪ್ರಮುಖ 7 ಸ್ಥಾನಗಳು ಡೆಮಾಕ್ರಟ್ಗಳ ಪಾಲಾಗಿವೆ. ರಿಪಬ್ಲಿಕನ್ ಪಕ್ಷ 44 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ರಿಪಬ್ಲಿಕನ್ ಭದ್ರಕೋಟೆ ಧೂಳೀಪಟ: ಶತಮಾನದ ದಾಖಲೆ
ಈ ಚುನಾವಣೆಯಲ್ಲಿ ಅತ್ಯಂತ ಆಶ್ಚರ್ಯಕರ ಫಲಿತಾಂಶ ಬಂದಿರುವುದು ಸಾಂಪ್ರದಾಯಿಕ ರಿಪಬ್ಲಿಕನ್ ಭದ್ರಕೋಟೆಗಳಿಂದ. ಕಳೆದ ಒಂದು ಶತಮಾನದಿಂದ ರಿಪಬ್ಲಿಕನ್ ಪಕ್ಷದ ಕೈಯಲ್ಲೇ ಇದ್ದ ಕಾನ್ಸಾಸ್ ರಾಜ್ಯದಲ್ಲಿ ಡೆಮಾಕ್ರಟಿಕ್ ಪಕ್ಷದ ಆಡಮ್ ಹ್ಯಾಮಿಲ್ಟನ್ ಸೆನೆಟ್ ಸ್ಥಾನವನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಇದರೊಂದಿಗೆ ಟೆಕ್ಸಾಸ್, ಸೌತ್ ಕ್ಯಾರೋಲಿನಾ ಮತ್ತು ಓಹಿಯೋ ರಾಜ್ಯಗಳಲ್ಲೂ ಡೆಮಾಕ್ರಟಿಕ್ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಕೇವಲ ಸಂಸತ್ತು ಮಾತ್ರವಲ್ಲದೆ, ಟೆಕ್ಸಾಸ್ ಮತ್ತು ಓಹಿಯೋದ ಗವರ್ನರ್ ಹುದ್ದೆಗಳೂ ಸಹ ಈಗ ಡೆಮಾಕ್ರಟ್ಗಳ ಪಾಲಾಗಿವೆ.
ಗವರ್ನರ್ ಚುನಾವಣೆಯಲ್ಲೂ ಡೆಮಾಕ್ರಟಿಕ್ ಪಕ್ಷಕ್ಕೆ ಗೆಲುವು
ಮಧ್ಯಂತರ ಚುನಾವಣೆಯಲ್ಲಿ ಗವರ್ನರ್ (ರಾಜ್ಯಗಳ ಮುಖ್ಯಸ್ಥರು) ಹುದ್ದೆಗಳಲ್ಲೂ ಡೆಮಾಕ್ರಟಿಕ್ ಪಕ್ಷವು ಅಭೂತಪೂರ್ವ ಮತ್ತು ಐತಿಹಾಸಿಕ ವಿಜಯವನ್ನು ದಾಖಲಿಸಿದೆ. ವರದಿಗಳ ಪ್ರಕಾರ, ಒಟ್ಟು ಸ್ಪರ್ಧೆ ನಡೆದ 36 ಸ್ಥಾನಗಳ ಪೈಕಿ 34 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಡೆಮಾಕ್ರಟಿಕ್ ಪಕ್ಷವು 22 ಸ್ಥಾನಗಳಲ್ಲಿ ಭರ್ಜರಿ ಜಯ ದಾಖಲಿಸಿದೆ, ರಿಪಬ್ಲಿಕನ್ ಪಕ್ಷವು ಕೇವಲ 12 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನ ಮೂಲಕ ಕಳೆದ 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡೆಮಾಕ್ರಟ್ಗಳು ಅಮೆರಿಕದ ಬಹುಪಾಲು ರಾಜ್ಯಗಳ ಗವರ್ನರ್ ಹುದ್ದೆಗಳ ಮೇಲೆ ನಿಯಂತ್ರಣ ಸಾಧಿಸಿದ್ದಾರೆ.
ಟ್ರಂಪ್ ಸರ್ಕಾರದ ವಿರುದ್ದ ಜನಾಕ್ರೋಶಕ್ಕೆ ಕಾರಣಗಳೇನು?
ಅಮೆರಿಕದಲ್ಲಿ ಇತ್ತೀಚಿನ ದಿನಗಳಲ್ಲಿ ಗಗನಕ್ಕೇರಿರುವ ಜೀವನ ವೆಚ್ಚ (Cost of Living), ತೈಲ ಬೆಲೆ ಏರಿಕೆ, ಹಣದುಬ್ಬರ ಮತ್ತು ಟ್ರಂಪ್ ಸರ್ಕಾರದ ಇರಾನ್ ಯುದ್ಧದ ನೀತಿಗಳ ವಿರುದ್ಧ ಅಮೆರಿಕದ ಜನಸಾಮಾನ್ಯರು ಮತದಾನದ ಮೂಲಕ ಆಕ್ರೋಶ ಹೊರಹಾಕಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸೋಲಿಗೆ ಟ್ರಂಪ್ ಉಡಾಫೆ ಪ್ರತಿಕ್ರಿಯೆ, ವಿಟೋ ಎಚ್ಚರಿಕೆ
ಚುನಾವಣೆಯ ಸೋಲಿಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಾನು ಈ ಚುನಾವಣೆಯ ಕಣದಲ್ಲಿ ಇರಲಿಲ್ಲ. ಒಂದು ವೇಳೆ ನಾನೇ ನೇರವಾಗಿ ಸ್ಪರ್ಧಿಸಿದ್ದರೆ ರಿಪಬ್ಲಿಕನ್ನರು ದಾಖಲೆಯ ಜಯ ಸಾಧಿಸುತ್ತಿದ್ದರು” ಎಂದು ಉಡಾಫೆಯಾಗಿ ಹೇಳಿದ್ದಾರೆ. ಅಲ್ಲದೆ, ಮುಂಬರುವ ದಿನಗಳಲ್ಲಿ ತಮ್ಮ ನಿರ್ಧಾರಗಳಿಗೆ ತಡೆ ನೀಡಲು ಬರುವ ಡೆಮಾಕ್ರಟ್ಗಳ ಯಾವುದೇ ಮಸೂದೆಗಳ ವಿರುದ್ಧ ತಾವು ‘ವಿಟೋ’ (Veto) ಅಧಿಕಾರ ಬಳಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಂಸತ್ತಿನ ಎರಡೂ ಸದನಗಳು ವಿರೋಧ ಪಕ್ಷವಾದ ಡೆಮಾಕ್ರಟಿಕ್ ನಿಯಂತ್ರಣಕ್ಕೆ ಸಿಕ್ಕಿರುವುದರಿಂದ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉಳಿದ ಎರಡು ವರ್ಷಗಳ ಅಧಿಕಾರಾವಧಿ ಅತ್ಯಂತ ಸವಾಲಿನಿಂದ ಕೂಡಿರಲಿದೆ. ಸರ್ಕಾರದ ಬಜೆಟ್, ಹೊಸ ಕಾಯ್ದೆಗಳು ಮತ್ತು ಪ್ರಮುಖ ಆಡಳಿತಾತ್ಮಕ ನಿರ್ಧಾರಗಳಿಗೆ ಈಗ ಡೆಮಾಕ್ರಟ್ಗಳ ಒಪ್ಪಿಗೆ ಅನಿವಾರ್ಯವಾಗಿದ್ದು, ಟ್ರಂಪ್ ಅವರ ಏಕಪಕ್ಷೀಯ ನೀತಿಗಳಿಗೆ ದೊಡ್ಡ ಬ್ರೇಕ್ ಬೀಳಲಿದೆ.
ಏನಿದು ಮಧ್ಯಂತರ ಚುನಾವಣೆ :
ಅಮೆರಿಕದ ರಾಜಕೀಯದಲ್ಲಿ ಅಧ್ಯಕ್ಷೀಯ ಚುನಾವಣೆ ಮತ್ತು ಮಧ್ಯಂತರ ಚುನಾವಣೆ ಎಂಬ ಎರಡು ಮಹತ್ವದ ಚುನಾವಣೆಗಳು ನಡೆಯುತ್ತವೆ. ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶದ ಜನರು ನೇರವಾಗಿ ಮತಚಲಾಯಿಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.
ಇದೇ ಸಂದರ್ಭದಲ್ಲಿ ಸಂಸತ್ತಿನ ಕೆಳಮನೆಯಾದ (ಭಾರತದ ಲೋಕಸಭೆಯಂತೆ) ಪ್ರತಿನಿಧಿ ಸಭೆಯ ಅಥವಾ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ನ ಎಲ್ಲಾ 435 ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರವಧಿ 4 ವರ್ಷಗಳಾದರೆ, 435 ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ಸದಸ್ಯರ ಅಧಿಕಾರವಧಿ ಕೇವಲ 2 ವರ್ಷಗಳಾಗಿದೆ.
ಹಾಗಾಗಿ, ಅಧ್ಯಕ್ಷರ ಎರಡು ವರ್ಷದ ಆಡಳಿತದ ನಡುವೆ ಮಧ್ಯಂತರ ಚುನಾವಣೆ ನಡೆಯುತ್ತದೆ. ಈ ವೇಳೆ ಮತ್ತೊಮ್ಮೆ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ನ ಎಲ್ಲಾ 435 ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ.
ಅಮೆರಿಕದ ಸಂಸತ್ತಿನ ಮೇಲ್ಮನೆಯಾದ ಸೆನೆಟ್ನಲ್ಲಿ 50 ರಾಜ್ಯಗಳಿಗೆ ತಲಾ ಎರಡು ಸ್ಥಾನಗಳಂತೆ 100 ಸ್ಥಾನಗಳಿವೆ. ಸೆನೆಟ್ ಸದಸ್ಯರ ಅಧಿಕಾರವಧಿ 6 ವರ್ಷಗಳು. ಹಾಗಾಗಿ, ಮಧ್ಯಂತರ ಚುನಾವಣೆಯಲ್ಲಿ ಸೆನೆಟ್ನ ಎಲ್ಲಾ ಸ್ಥಾನಗಳಿಗೆ ಚುನಾವಣೆ ನಡೆಯುವುದಿಲ್ಲ. ಸುಮಾರು 35 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತದೆ.
ಸೆನೆಟ್ನಲ್ಲಿ ಬಹುಮತ ಪಡೆಯಲು 100 ಸ್ಥಾನಗಳ ಪೈಕಿ 50 ಸ್ಥಾನಗಳನ್ನು ಗೆಲ್ಲಬೇಕು. ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ನಲ್ಲಿ ಬಹುಮತ ಪಡೆಯಲು 218 ಸ್ಥಾನಗಳ ಅಗತ್ಯವಿದೆ.


