ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು, ಮಿಜೋರಾಂ, ಒಡಿಶಾ ಮತ್ತು ಸಿಕ್ಕಿಂಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (Special Summary Revision – SSR) ಕೈಗೊಳ್ಳುವುದಾಗಿ ಕೇಂದ್ರ ಚುನಾವಣಾ ಆಯೋಗ ಗುರುವಾರ (ನ. 5) ಪ್ರಕಟಿಸಿದೆ.
ಈ ಪರಿಷ್ಕರಣಾ ಪ್ರಕ್ರಿಯೆಯ ಮೂಲಕ ಅರ್ಹ ಮತದಾರರನ್ನು, ವಿಶೇಷವಾಗಿ ಯುವ ಮತ್ತು ಮೊದಲ ಬಾರಿಗೆ ಮತದಾನ ಮಾಡಲಿರುವವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಆಯೋಗದ ಉದ್ದೇಶವಾಗಿದೆ. ಅಲ್ಲದೆ, 2027ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ರಂದು ಮತದಾನಕ್ಕೆ ಅರ್ಹತೆ ಪಡೆಯಲಿರುವವರು ಮುಂಚಿತವಾಗಿಯೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಪರಿಷ್ಕೃತ ಮತದಾರರ ಪಟ್ಟಿಯ ಕರಡು ಪ್ರತಿಯನ್ನು ನವೆಂಬರ್ 30ರಂದು ಪ್ರಕಟಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು 2027ರ ಜನವರಿ 21ರಂದು ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಈ ಪರಿಷ್ಕರಣಾ ಪ್ರಕ್ರಿಯೆಗೆ ಅಗತ್ಯವಿರುವಷ್ಟು ಸಿಬ್ಬಂದಿ ಮತ್ತು ಸಂಪನ್ಮೂಲಗಳನ್ನು ಒದಗಿಸುವಂತೆ ಸಂಬಂಧಪಟ್ಟ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.


