ಗೋವಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದ ಒಂದೇ ಕುಟುಂಬದ ಆರು ಸದಸ್ಯರ ಹೆಸರುಗಳನ್ನು ಮರುಸೇರ್ಪಡೆಗೊಳಿಸುವಂತೆ ಬಾಂಬೆ ಹೈಕೋರ್ಟ್ ಗುರುವಾರ (ನ.5) ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಆದೇಶಿಸಿದೆ.
ನ್ಯಾಯಮೂರ್ತಿ ವಾಲ್ಮೀಕಿ ಮೆನೆಜೆಸ್ ಮತ್ತು ನ್ಯಾಯಮೂರ್ತಿ ಅಮಿತ್ ಜಮ್ಸಾಂದೇಕರ್ ಅವರ ವಿಭಾಗೀಯ ಪೀಠವು ಹೀಗೆ ಹೇಳಿದೆ:
"ನಾವು ಅರ್ಜಿಯನ್ನು ಪುರಸ್ಕರಿಸುತ್ತೇವೆ… 'ಎಸ್ಐಆರ್' ವಿಷಯವು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವುದರಿಂದ, ಪ್ರಸ್ತುತ ಅರ್ಜಿಯ ವಿಚಾರಣೆಯನ್ನು ಮುಂದೂಡಬೇಕೆಂಬ ಭಾರತೀಯ ಚುನಾವಣಾ ಆಯೋಗದ ವಾದವನ್ನು ನಾವು ತಿರಸ್ಕರಿಸಿದ್ದೇವೆ… ಇದು 'ಎಸ್ಐಆರ್'ಗೆ ಸಂಬಂಧಿಸಿದ್ದಲ್ಲ… ಆದ್ದರಿಂದ, ಗೋವಾದ ಸಾಂತಾಕ್ರೂಝ್ ಕ್ಷೇತ್ರಕ್ಕೆ ಸಂಬಂಧಿಸಿದ ಬಿಎಲ್ಒ ಅವರು, ಇಂದಿನಿಂದ 10 ದಿನಗಳ ಒಳಗಾಗಿ ಅರ್ಜಿದಾರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬೇಕೆಂದು ನಾವು ಆದೇಶಿಸುತ್ತೇವೆ."
ಚುನಾವಣಾ ಆಯೋಗ ಕೋರಿದಂತೆ, ಈ ಆದೇಶದ ಜಾರಿಗೆ ಎರಡು ವಾರಗಳ ಕಾಲ ತಡೆ ನೀಡಲು ಪೀಠವು ನಿರಾಕರಿಸಿದೆ.
ವಿಳಾಸ ಬದಲಾವಣೆಗಾಗಿ ಫಾರಂ-8 ಸಲ್ಲಿಸಿದ್ದರೂ.. ಕರಡು ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಸಾಲಗಾಂವ್ಕರ್ ಕುಟುಂಬದ ಸದಸ್ಯರೊಬ್ಬರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ಹೊರಬಿದ್ದಿದೆ. ಎಸ್ಐಆರ್ ಮಾರ್ಗಸೂಚಿಗಳ ಅಡಿಯಲ್ಲಿ, ಮತದಾರರು ಫಾರಂ-8ರ ಜೊತೆಗೆ ಮೊದಲೇ ಭರ್ತಿ ಮಾಡಿದ ಎನ್ಯುಮರೇಶನ್ ಫಾರಂ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿತ್ತು.
ಅರ್ಜಿದಾರರು ಎನ್ಯುಮರೇಶನ್ ಸಲ್ಲಿಸಲು ನಿರಾಕರಿಸಿದಾಗ, ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲು ಉದ್ದೇಶಿಸಲಾದ ಫಾರಂ-6 ಭರ್ತಿ ಮಾಡುವಂತೆ ಅವರನ್ನು ಕೇಳಲಾಗಿತ್ತು.
ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಉಲ್ಲೇಖಿಸಲಾದ ಪ್ರದೇಶದಲ್ಲೇ ಸದರಿ ಮತದಾರರು (ಸಹಿ ಮಾಡುವವರು) ಮುಂದುವರಿದು ವಾಸಿಸುತ್ತಿದ್ದಾರೆ ಎಂಬ ‘ಘೋಷಣಾ ಪತ್ರ’ವನ್ನು ಎನ್ಯುಮರೇಶನ್ ಫಾರಂ ಒಳಗೊಂಡಿರುವುದನ್ನು ಗಮನಿಸಿದ ನ್ಯಾಯಾಧೀಶರು, ಚುನಾವಣಾ ಆಯೋಗದ ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ನಾಗರಿಕರು ಸುಳ್ಳು ಘೋಷಣೆಗಳನ್ನು ಮಾಡುವಂತೆ ಚುನಾವಣಾ ಆಯೋಗವು ಒತ್ತಾಯಿಸುವಂತಿಲ್ಲ ಎಂದು ತಿಳಿಸಿದ ನ್ಯಾಯಪೀಠವು, ಮತದಾರರು ತಮ್ಮ ವಾಸಸ್ಥಳವನ್ನು ಬದಲಾಯಿಸಿದ್ದರೆ, ಅವರು ಕಡ್ಡಾಯವಾಗಿ ಎನ್ಯುಮರೇಶನ್ ಫಾರಂಗಳನ್ನು ಸಲ್ಲಿಸಬೇಕೆಂದು ಕೇಳಲು ಸಾಧ್ಯವಿಲ್ಲ ಎಂದು ಹೇಳಿದೆ.
"ಮತದಾರರೊಬ್ಬರು ತಮ್ಮ ವಿಳಾಸ ಬದಲಾಗಿದೆ ಎಂದು ಹೇಳುತ್ತಾ ಫಾರಂ-8ರೊಂದಿಗೆ ನಿಮ್ಮ ಬಳಿ ಬಂದರೆ, 'ನೋಡಿ, ಕರಡು ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ, ಆದ್ದರಿಂದ ನೀವು ಈಗ ಫಾರಂ 6 (ಹೊಸ ಮತದಾರರ ಸೇರ್ಪಡೆಗಾಗಿ) ಅನ್ನು ಭರ್ತಿ ಮಾಡಬೇಕು' ಎಂದು ನೀವು ಆ ವ್ಯಕ್ತಿಗೆ ಹೇಳಲು ಸಾಧ್ಯವಿಲ್ಲ. ನಿಮ್ಮ ಎನ್ಯುಮರೇಶನ್ ಫಾರಂ ಮೂಲಭೂತವಾಗಿ, ಒಬ್ಬ ವ್ಯಕ್ತಿಯು ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಉಲ್ಲೇಖಿಸಲಾದ ವಿಳಾಸದಲ್ಲೇ ಮುಂದುವರಿದು ವಾಸಿಸುತ್ತಿದ್ದಾನೆ ಎಂಬ ಘೋಷಣೆಯನ್ನು ಹೊಂದಿರುತ್ತದೆ. ಆದರೆ ಯೋಚಿಸಿ, ಯಾರಾದರೂ ತಮ್ಮ ವಾಸಸ್ಥಳವನ್ನು ಬದಲಾಯಿಸಿದ್ದರೆ, ಆ ಮೊದಲೇ ಭರ್ತಿ ಮಾಡಿದ ಎನ್ಯುಮರೇಶನ್ ಫಾರಂ ಅನ್ನು ಸಲ್ಲಿಸುವಂತೆ ಹೇಳುವ ಮೂಲಕ ಅವರು ಸುಳ್ಳು ಘೋಷಣೆ ಮಾಡುವಂತೆ ನೀವು ಅವರನ್ನು ಒತ್ತಾಯಿಸಲು ಹೇಗೆ ಸಾಧ್ಯ? ಆ ವ್ಯಕ್ತಿ ಕೇವಲ ಫಾರಂ 8 ಅನ್ನು ಏಕೆ ನೀಡಬಾರದು? ಏಕೆಂದರೆ ಹೇಗೆ ನೋಡಿದರೂ ಅವರ ಹೆಸರು ಅಸ್ತಿತ್ವದಲ್ಲಿರುವ ಪಟ್ಟಿಯಲ್ಲಿದೆ, ಅವರು ಕೇವಲ ತಮ್ಮ ವಿಳಾಸವನ್ನು ಬದಲಾಯಿಸಿಕೊಳ್ಳಲು ಬಯಸುತ್ತಿದ್ದಾರೆ ಅಷ್ಟೆ.. ಹಾಗಿದ್ದಾಗ ಎನ್ಯುಮರೇಶನ್ ಫಾರಂ ಅನ್ನು ಕಡ್ಡಾಯಗೊಳಿಸುವುದು ಏಕೆ?" ಎಂದು ನ್ಯಾಯಮೂರ್ತಿ ಮೆನೆಜಸ್ ಅವರು ಪ್ರಶ್ನಿಸಿದ್ದಾರೆ.
ಒಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಪೀಠವು, ನಿಯಮ 12 ಆಕ್ಷೇಪಣೆಗಳು ಮುಂತಾದವುಗಳಿಗೆ ಅವಕಾಶ ಕಲ್ಪಿಸುತ್ತದೆ ಮತ್ತು ಆ ನಿಬಂಧನೆಯ ಮೊರೆ ಹೋಗುವಾಗ, ನಾಗರಿಕರು ಕಡ್ಡಾಯವಾಗಿ ಮೊದಲೇ ಭರ್ತಿ ಮಾಡಿದ ಎನ್ಯುಮರೇಶನ್ ಫಾರಂ ಅನ್ನು ಸಲ್ಲಿಸುವ ಬದಲಿಗೆ ನೇರವಾಗಿ ಫಾರಂ 8 ಅನ್ನು ಏಕೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಸುದೀರ್ಘವಾಗಿ ಪ್ರಶ್ನಿಸಿದೆ.
"ಯಾರಾದರೂ ಒಂದು ನಿರ್ದಿಷ್ಟ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂದಾದಾಗ, ಆ ಮೊದಲೇ ಭರ್ತಿ ಮಾಡಿದ ಎನ್ಯುಮರೇಶನ್ ಫಾರಂ ಅನ್ನು ಸಲ್ಲಿಸುವ ಮೂಲಕ ಆ ವ್ಯಕ್ತಿ ಏಕೆ ಸುಳ್ಳು ಘೋಷಣೆ ಮಾಡಬೇಕು? ಅದು ಸುಳ್ಳು ಘೋಷಣೆಯಾಗುತ್ತದೆ ಏಕೆಂದರೆ ಸದರಿ ಎನ್ಯುಮರೇಶನ್ ಫಾರಂ ಅಡಿಯಲ್ಲಿ, 'ಎಕ್ಸ್ ವ್ಯಕ್ತಿಯು ಇಲ್ಲೇ ಮುಂದುವರಿದು ವಾಸಿಸುತ್ತಿದ್ದಾನೆ' ಎಂಬ ಘೋಷಣೆ ಇರುತ್ತದೆ... ಮುಖ್ಯ ವಿಷಯವೆಂದರೆ ಅಂತಹ ಸುಳ್ಳು ಘೋಷಣೆಯನ್ನು ಮಾಡಲು ನೀವು ಯಾರನ್ನೂ ಒತ್ತಾಯಿಸುವಂತಿಲ್ಲ. ಅಲ್ಲದೆ, ಯಾವುದೇ ನಾಗರಿಕರು ನಿಮ್ಮ ಈ ಎನ್ಯುಮರೇಶನ್ ಫಾರಂಗೆ ಸಹಿ ಮಾಡಬಾರದು... ಅವರು ಸಹಿ ಮಾಡಲೇಬಾರದು... ಯಾರಾದರೂ ಆ ನಿರ್ದಿಷ್ಟ ಕ್ಷೇತ್ರ ಅಥವಾ ವಾರ್ಡ್ನಲ್ಲಿ ವಾಸಿಸುತ್ತಿಲ್ಲ ಎಂದಾದಾಗ, ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಅವರು ಹೇಗೆ ತಾನೇ ಅರ್ಜಿ ಸಲ್ಲಿಸಲು ಸಾಧ್ಯ?" ಎಂದು ನ್ಯಾಯಪೀಠವು ಹೇಳಿದೆ.


