ಕೇಂದ್ರ ಸರ್ಕಾರಿ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಹಾಗೂ ಪಾವತಿ ಪ್ರಕ್ರಿಯೆಗಳನ್ನು ನಡೆಸಲು ಇನ್ಮುಂದೆ ಆಧಾರ್ ಕಾರ್ಡ್ ಬದಲು ‘ವೋಟರ್ ಐಡಿ’ (ಮತದಾರರ ಗುರುತಿನ ಚೀಟಿ) ಹಾಗೂ ಬಯೋಮೆಟ್ರಿಕ್ ಪರಿಶೀಲನೆಯನ್ನು ಆಧಾರವಾಗಿ ಬಳಸಲಾಗುವುದು ಎಂಬ ಕೇಂದ್ರ ಸಚಿವರ ಹೇಳಿಕೆ ಈಗ ದೇಶಾದ್ಯಂತ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಸರ್ಕಾರದ ಈ ಯೋಜನೆಯು ಪ್ರಜಾಪ್ರಭುತ್ವದ ಮೂಲಭೂತ ಆಶಯಕ್ಕೆ ಹಾಗೂ ಬಡಜನರ ಜೀವನಾಧಾರಿತ ಹಕ್ಕುಗಳಿಗೆ ನೇರ ಬೆದರಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಇಡೀ ವಿವಾದದ ಕಿಡಿ ಹೊತ್ತಿಕೊಂಡಿದ್ದು ನವದೆಹಲಿಯಲ್ಲಿ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಆಯೋಜಿಸಿದ್ದ ‘ಪೀಪಲ್ಸ್ ಪ್ಲಾನ್ ಕ್ಯಾಂಪೇನ್’ ರಾಷ್ಟ್ರೀಯ ಕಾರ್ಯಾಗಾರದಲ್ಲಿ. ಕಾರ್ಯಾಗಾರದಲ್ಲಿ ಮಾತನಾಡಿದ್ದ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್), ಪ್ರಸ್ತುತ ಸಾರ್ವಜನಿಕ ವ್ಯವಸ್ಥೆಯಲ್ಲಿ ಆಧಾರ್ ಕಾರ್ಡ್ಗಳನ್ನು ಸುಲಭವಾಗಿ ಸೃಷ್ಟಿಸಲು ಹಾಗೂ ನಕಲಿ ಮಾಡಲು ಸಾಧ್ಯವಾಗುತ್ತಿರುವುದರಿಂದ ದುರುಪಯೋಗ ತಡೆಯಲು ಈ ಹೊಸ ಮಾರ್ಗವನ್ನು ಕಂಡುಕೊಳ್ಳಲಾಗುತ್ತಿದೆ ಎಂದು ಪ್ರತಿಪಾದಿಸಿದ್ದರು. ಪಂಚಾಯತ್ ರಾಜ್ ಹಾಗೂ ಇತರ ಸರ್ಕಾರಿ ಕಲ್ಯಾಣ ಯೋಜನೆಗಳ ಪಾವತಿಯಲ್ಲಿ ಪಾರದರ್ಶಕತೆ ತರಲು ಆಧಾರ್ ಬದಲು ಫಲಾನುಭವಿಗಳ ಬಯೋಮೆಟ್ರಿಕ್ ವಿವರಗಳು ಹಾಗೂ ಮತದಾರರ ಗುರುತಿನ ಚೀಟಿಯ (EPIC) ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸುವ ಯೋಜನೆಯನ್ನು ಸರ್ಕಾರ ಹೊಂದಲಿದೆ ಎಂದು ಅವರು ಹೇಳಿಕೆ ನೀಡಿದ್ದರು.
ಸಚಿವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ತೀವ್ರವಾಗಿ ಖಂಡಿಸಿದ ರಾಹುಲ್ ಗಾಂಧಿ, “ಇದು ಅತ್ಯಂತ ದುಷ್ಟ ಹಾಗೂ ಅಪಾಯಕಾರಿ ಸಂಚು. ಇದನ್ನು ಅರ್ಥಮಾಡಿಕೊಳ್ಳಲು ಒಂದು ಕ್ಷಣ ಸಮಯ ಕೊಡಿ” ಎಂದು ಜನರಲ್ಲಿ ಮನವಿ ಮಾಡುತ್ತಾ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ದೇಶದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಈಗಾಗಲೇ ಲಕ್ಷಾಂತರ ನಿಜವಾದ ಹಾಗೂ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ರಹಸ್ಯವಾಗಿ ತೆಗೆದುಹಾಕಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಕಲ್ಯಾಣ ಯೋಜನೆಗಳ ಅರ್ಹತೆಯನ್ನು ಅದೇ ಮತದಾರರ ಪಟ್ಟಿಗೆ ಲಿಂಕ್ ಮಾಡಿದರೆ, ಪಟ್ಟಿಯಿಂದ ಹೊರಬಿದ್ದ ಲಕ್ಷಾಂತರ ಬಡವರು ಸ್ವಯಂಚಾಲಿತವಾಗಿ ರೇಷನ್, ಪಿಂಚಣಿ, ಉದ್ಯೋಗ ಖಾತರಿ (MGNREGA) ಹಾಗೂ ವಸತಿಯಂತಹ ಮೂಲಭೂತ ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ಮತದಾನ ಮಾಡುವುದು ಪ್ರಜೆಗಳ ಪವಿತ್ರ ಹಕ್ಕೇ ಹೊರತು ಸರ್ಕಾರಿ ಸೌಲಭ್ಯ ಪಡೆಯಲು ಇರುವ ಷರತ್ತಲ್ಲ ಎಂದಿರುವ ರಾಹುಲ್ ಗಾಂಧಿ, “ಹೆಸರು ಕಟ್ ಆದರೆ – ಮತ ಹೋಯಿತು. ಮತ ಹೋಯಿತು ಎಂದರೆ – ಹಕ್ಕುಗಳೇ ಹೋದವು. ಬಡವನೊಬ್ಬನ ಪಿಂಚಣಿಯನ್ನು ಆತನ ವೋಟರ್ ಕಾರ್ಡ್ಗೆ ಒತ್ತೆಯಾಳಾಗಿ ಇಡಲು ಸಾಧ್ಯವಿಲ್ಲ” ಜನಪ್ರತಿನಿಧಿಗಳನ್ನು ಪ್ರಜೆಗಳು ಆಯ್ಕೆ ಮಾಡುವ ವ್ಯವಸ್ಥೆಯನ್ನು ಬದಲಾಯಿಸಿ, ತನಗೆ ಬೇಕಾದ ಪ್ರಜೆಗಳನ್ನಷ್ಟೇ ಸರ್ಕಾರ ಆಯ್ಕೆ ಮಾಡಿಕೊಳ್ಳುವಂತಹ ಅಪಾಯಕಾರಿ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, “ಇದು ಕೇವಲ ಮತಗಳ ಕಳವಲ್ಲ – ಇದು ನಿಮ್ಮ ಹಕ್ಕುಗಳ ಕಳವು. ನಾವು ಇದನ್ನು ಎಂದಿಗೂ ನಡೆಯಲು ಬಿಡುವುದಿಲ್ಲ” ಎಂದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ ಹಿರಿಯ ನಾಯಕ ಜೈರಾಮ್ ರಮೇಶ್ ಹಾಗೂ ಸಿಪಿಐ(ಎಂ) ಸೇರಿದಂತೆ ಇತರ ವಿಪಕ್ಷ ನಾಯಕರೂ ಸಹ ಧ್ವನಿ ಎತ್ತಿದ್ದು, “ಆಧಾರ್ ಬದಲಿಗೆ ಎಸ್ಐಆರ್ (SIR) ಆಧಾರಿತ ಮತದಾರರ ಪಟ್ಟಿಯನ್ನು ಕಲ್ಯಾಣ ಯೋಜನೆಗಳಿಗೆ ಜೋಡಿಸುವುದು ಬಡವರನ್ನು ಯೋಜನೆಗಳಿಂದ ಹೊರಗಿಡುವ ಗಂಭೀರ ಯತ್ನ. ‘ವೋಟ್ ಕಳ್ಳತನ’ ಎನ್ನುವುದು ಕೇವಲ ಟ್ರೇಲರ್, ನಿಜವಾದ ಚಿತ್ರವೇ ಹಕ್ಕುಗಳ ಕಳ್ಳತನ” ಎಂದು ಖಂಡಿಸಿದ್ದಾರೆ. ಕಲ್ಯಾಣ ಯೋಜನೆಗಳು ಮತ್ತು ಮತದಾರರ ಪಟ್ಟಿಯನ್ನು ಒಂದಕ್ಕೊಂದು ಬೆಸೆಯುವ ಈ ಪ್ರಸ್ತಾವನೆಯು ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರ ರಾಜಕೀಯ ಕಾಳಗಕ್ಕೆ ನಾಂದಿ ಹಾಡುವ ಲಕ್ಷಣಗಳು ಎದ್ದು ಕಾಣುತ್ತಿವೆ.


