Homeಮುಖಪುಟ'E20 turned into 420' : ಕರ್ನಾಟಕ ಸರ್ಕಾರದ ಪರಿಶೀಲನೆಯಲ್ಲಿ ಬಯಲಾದ 'ಪೆಟ್ರೋಲ್ ಚೋರಿ'; ಕೇಂದ್ರದ...

‘E20 turned into 420’ : ಕರ್ನಾಟಕ ಸರ್ಕಾರದ ಪರಿಶೀಲನೆಯಲ್ಲಿ ಬಯಲಾದ ‘ಪೆಟ್ರೋಲ್ ಚೋರಿ’; ಕೇಂದ್ರದ ವಿರುದ್ಧ ಜನಾಕ್ರೋಶ

- Advertisement -
- Advertisement -

E20 ಹೆಸರಿನಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ಶೇಕಡ 30ಕ್ಕಿಂತ (31.2) ಅಧಿಕ ಎಥೆನಾಲ್ ಇರುವುದು ಕರ್ನಾಟಕ ಸರ್ಕಾರದ ನಡೆಸಿದ ಪರಿಶೀಲನೆಯಲ್ಲಿ ಬಟಾಬಯಲಾಗಿದ್ದು, ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಶುಕ್ರವಾರ (ನ.6) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಪರಿಶೀಲನಾ ವರದಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಸಂಗ್ರಹಿಸಿದ 63 ಪೆಟ್ರೋಲ್ ಮಾದರಿಗಳನ್ನು ಪರೀಕ್ಷಿಸಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ವರದಿಯ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ನಯಾರಾ ಎನರ್ಜಿ, ಶೆಲ್ ಮತ್ತು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಗಳ ಪೆಟ್ರೋಲ್ ಮಾದರಿಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಎಥೆನಾಲ್ ಪ್ರಮಾಣವು ಶೇಕಡ 20ಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ.

ಐಒಸಿಎಲ್ ಪೆಟ್ರೋಲ್ ಮಾದರಿಯಲ್ಲಿ ಗರಿಷ್ಠ ಶೇಕಡ 31.2ರಷ್ಟು ಎಥೆನಾಲ್ ಅಂಶ ದಾಖಲಾಗಿದ್ದು, ಎಚ್‌ಪಿಸಿಎಲ್ ಪವರ್ ಮಾದರಿಯಲ್ಲಿ ಶೇಕಡ 30.5ರಷ್ಟು ಕಂಡುಬಂದಿದೆ. ಇತರ ಮಾದರಿಗಳಲ್ಲಿ ಶೇಕಡ 27, 26.5, 26.1, 25.5, 24.2, 22.6, 22.4, 20.8 ಮತ್ತು 20.6ರಷ್ಟು ಮಟ್ಟಗಳು ದಾಖಲಾಗಿವೆ. ಇನ್ನು ಅತ್ಯಂತ ಕನಿಷ್ಠ ಮಟ್ಟವು ಶೇಕಡ 13.5 ರಷ್ಟಿರುವುದು ಪತ್ತೆಯಾಗಿದೆ.

ವಾಹನ ಸವಾರರಿಂದ ಮೈಲೇಜ್ ಕೊರತೆ ಮತ್ತು ವಾಹನಗಳು ಪದೇ ಪದೇ ದುರಸ್ತಿಗೆ ಬರುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರವು ಈ ತಪಾಸಣೆಯನ್ನು ಪ್ರಾರಂಭಿಸಿದೆ ಎಂದು ಸಚಿವ ಅರ್ಷದ್ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಪರಿಶೀಲನಾ ವರದಿ ಬಿಡುಗಡೆ ಮಾಡುತ್ತಿದ್ದಂತೆ ದೇಶದಾದ್ಯಂತ ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಬಿಜೆಪಿ ಸರ್ಕಾರದಿಂದ ‘ವೋಟ್ ಚೋರಿ ಬಳಿಕ ಈಗ ಪೆಟ್ರೋಲ್ ಚೋರಿ’ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಸರ್ಕಾರದ ವರದಿ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, “ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸುವುದು ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವುದು ನಮ್ಮ ಪ್ರಮುಖ ಜವಾಬ್ದಾರಿಗಳಾಗಿವೆ. ಸಚಿವ ರಿಜ್ವಾನ್ ಅರ್ಷದ್ ಅವರ ನೇತೃತ್ವದ ಕಾನೂನು ಮಾಪನಶಾಸ್ತ್ರ ಇಲಾಖೆಯು ‘ಮಿಷನ್ ನಿಖರ’ ಅಡಿಯಲ್ಲಿ ಕರ್ನಾಟಕದಾದ್ಯಂತ ವ್ಯಾಪಕ ತಪಾಸಣೆಗಳನ್ನು ನಡೆಸಿದೆ. ಸ್ವತಂತ್ರ ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಪ್ರಮುಖ ತೈಲ ಕಂಪನಿಗಳ ಪೆಟ್ರೋಲ್ ಮಾದರಿಗಳಲ್ಲಿ ಆತಂಕಕಾರಿ ಪ್ರಮಾಣದ ಎಥೆನಾಲ್ ಮಿಶ್ರಣ ಕಂಡುಬಂದಿದ್ದು, ಕೆಲವು ಮಾದರಿಗಳಲ್ಲಿ ನಿಗದಿತ E20 ಮಿತಿಯನ್ನು ಮೀರಿ ಶೇ. 31.2 ರಷ್ಟು ಹೆಚ್ಚಿನ ಪ್ರಮಾಣ ದಾಖಲಾಗಿದೆ” ಎಂದು ತಿಳಿಸಿದ್ದಾರೆ.

“ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಣದ ಪ್ರಯೋಜನಗಳು ಮತ್ತು ಇಂಧನ ಭದ್ರತೆಯ ಬಗ್ಗೆ ಮಾತನಾಡುತ್ತಿದೆಯಾದರೂ, E20 ನಿಯಮಗಳ ಉಲ್ಲಂಘನೆಯ ಕುರಿತು ಕುರುಡಾಗಿರಲು ಮತ್ತು ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡುವ ಮೂಲಕ ಸಾಮಾನ್ಯ ನಾಗರಿಕರ ಮೇಲೆ ಆರ್ಥಿಕ ಹೊರೆ ಹೊರಿಸಲು ಸಾಧ್ಯವಿಲ್ಲ. ಮೈಲೇಜ್ ಕಡಿಮೆಯಾಗುವುದು, ವಾಹನಗಳಿಗೆ ಸಂಭವನೀಯ ಹಾನಿ ಮತ್ತು ಹೆಚ್ಚುತ್ತಿರುವ ನಿರ್ವಹಣಾ ವೆಚ್ಚಗಳು ಗಂಭೀರ ಗಮನ ಹರಿಸಬೇಕಾದ ವಿಷಯಗಳಾಗಿವೆ. ತೈಲ ಕಂಪನಿಗಳು ಗಣನೀಯ ಲಾಭವನ್ನು ಗಳಿಸುತ್ತಿರುವಾಗ ಗ್ರಾಹಕರು ಆ ವೆಚ್ಚವನ್ನು ಭರಿಸಬೇಕಾಗಿರುವುದು ಸ್ವೀಕಾರಾರ್ಹವಲ್ಲ” ಎಂದಿದ್ದಾರೆ.

ಸಿಎಂ ಈ ಕೆಳಗಿನ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ :

1. ದೇಶದಾದ್ಯಂತ ಪೂರೈಕೆಯಾಗುವ ಪೆಟ್ರೋಲ್‌ನಲ್ಲಿರುವ ನಿಜವಾದ ಎಥೆನಾಲ್ ಪ್ರಮಾಣವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು.

2. ನಿಗದಿತ ಮಿಶ್ರಣ ಮಿತಿಯನ್ನು ಮೀರಿದ ತೈಲ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೆಟ್ರೋಲ್ ಬಂಕ್ ಮಟ್ಟದ ತಪಾಸಣಾ (ಆಡಿಟ್) ವರದಿಗಳನ್ನು ಸಾರ್ವಜನಿಕಗೊಳಿಸಬೇಕು.

3. ಬಾಧಿತ ವಾಹನ ಮಾಲೀಕರಿಗೆ ಪರಿಹಾರ ನೀಡಲು ಸರಳ ಮತ್ತು ಕಾಲಮಿತಿಯ ಕಾರ್ಯವಿಧಾನದೊಂದಿಗೆ ‘E20 ಹಾನಿ ಪರಿಹಾರ ನಿಧಿ’ಯನ್ನು (E20 Damage Compensation Fund) ಸ್ಥಾಪಿಸಬೇಕು.

4. ಪ್ರತಿ ಪೆಟ್ರೋಲ್ ಬಂಕ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಬೇಕು ಮತ್ತು ಗ್ರಾಹಕರಿಗೆ ತಮ್ಮ ವಾಹನಗಳಿಗೆ ಸೂಕ್ತವಾದ ಇಂಧನವನ್ನು ಆಯ್ಕೆ ಮಾಡುವ ಅವಕಾಶವಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಪ್ರತಿ ಪೆಟ್ರೋಲ್ ಬಂಕ್‌ನಲ್ಲಿಯೂ ಗುಣಮಟ್ಟದ ಇಂಧನ ಪಡೆಯುವ ಹಕ್ಕನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ತನ್ನ ತಪಾಸಣೆಗಳನ್ನು ಮುಂದುವರಿಸಲಿದೆ ಮತ್ತು ಗ್ರಾಹಕರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, “E20, 420 ಆಗಿ ಬದಲಾಗಿದೆ, ಸಾರ್ವಜನಿಕರ ಕಾರುಗಳಿಂದ ಪೆಟ್ರೋಲ್ ಕದಿಯಲಾಗುತ್ತಿದೆ” ಎಂದು ಹೇಳಿದ್ದಾರೆ.

“ಮೋದಿ ಸರ್ಕಾರವು ಪೆಟ್ರೋಲ್‌ನಲ್ಲಿ ಶೇಕಡ 20ರಷ್ಟು ಎಥೆನಾಲ್ ಇದೆ ಎಂದು ಹೇಳುತ್ತದೆ. ಕರ್ನಾಟಕ ಸರ್ಕಾರವು 7 ಜಿಲ್ಲೆಗಳಿಂದ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ಮಾನ್ಯತೆ ಪಡೆದ ಪ್ರಯೋಗಾಲಯವೊಂದರಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಪರೀಕ್ಷಿಸಿದ 14 ಮಾದರಿಗಳ ಪೈಕಿ 11 ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಹೊಂದಿದ್ದವು. ಐಒಸಿಎಲ್‌ನಲ್ಲಿ ಶೇ. 31.2 ಮತ್ತು ಎಚ್‌ಪಿಸಿಎಲ್‌ನಲ್ಲಿ ಶೇ. 30.5ರಷ್ಟು ಎಥೆನಾಲ್ ಪತ್ತೆಯಾಗಿದೆ. ಐಒಸಿಎಲ್‌, ಎಚ್‌ಪಿಸಿಎಲ್‌, ಬಿಪಿಸಿಎಲ್‌, ನಯರಾ, ಶೆಲ್, ಸರ್ಕಾರಿ ಸ್ವಾಮ್ಯದ್ದಾಗಿರಲಿ ಅಥವಾ ಖಾಸಗಿ ಸಂಸ್ಥೆಗಳಾಗಿರಲಿ ಎಲ್ಲವೂ ಮಿತಿಯನ್ನು ಮೀರಿವೆ. ಈ ಕಂಪನಿಗಳ ಸ್ವಂತ ಪ್ರಯೋಗಾಲಯಗಳು ಎಥೆನಾಲ್ ಪ್ರಮಾಣವನ್ನು ವರದಿಯೇ ಮಾಡಿರಲಿಲ್ಲ” ಎಂದು ರಾಹುಲ್ ಗಾಂಧಿ ವಿವರಿಸಿದ್ದಾರೆ.

ಮುಂದುವರಿದು, “ಬೇರೆ ರೀತಿಯಲ್ಲಿ ಹೇಳುವುದಾದರೆ ನೀವು ದುಬಾರಿ ಬೆಲೆಯ ಪೆಟ್ರೋಲ್‌ಗಾಗಿ ಹಣ ಪಾವತಿಸುತ್ತಿದ್ದೀರಿ. ಆದರೆ ನಿಮ್ಮ ಟ್ಯಾಂಕ್‌ಗೆ ಎಥೆನಾಲ್ ತುಂಬಲಾಗುತ್ತಿದೆ. ಇದರಿಂದ ನಷ್ಟ ಯಾರಿಗೆ? ನಿಮಗೆ. ನಿಮ್ಮ ಕಾರನ್ನು ಅಷ್ಟು ಹೆಚ್ಚಿನ ಪ್ರಮಾಣದ ಎಥೆನಾಲ್ ಅನ್ನು ನಿಭಾಯಿಸಲು ವಿನ್ಯಾಸಗೊಳಿಸಲಾಗಿಲ್ಲ; ಇದರರ್ಥ, ವಾಹನದ ಮೈಲೇಜ್ ಕಡಿಮೆಯಾಗುತ್ತದೆ ಮತ್ತು ಪದೇ ಪದೇ ಮೆಕ್ಯಾನಿಕ್ ಬಳಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ನೀವು ಬಹಳ ಉತ್ಸಾಹದಿಂದ ಖರೀದಿಸಿದ ಕಾರು ಈಗ ಹಾಳಾಗುತ್ತಿದೆ.” ಎಂದಿದ್ದಾರೆ.

“ಅಷ್ಟೇ ಅಲ್ಲ, ನಿಮ್ಮ ಟ್ಯಾಂಕ್‌ಗೆ ಏನು ತುಂಬಿಸಲಾಗುತ್ತಿದೆ ಎಂದು ತಿಳಿಸುವ ಯಾವುದೇ ಸೂಚನೆಯೂ ಪಂಪ್ ಬಳಿ ಇರಲ್ಲ. ಇಲ್ಲಿ ಆಯ್ಕೆಗೆ ಅವಕಾಶವೇ ಇಲ್ಲ. ಮಿಸ್ಟರ್ ಮೋದಿಯವರೇ, ದೇಶದ ವಾಹನಗಳ ಇಂಧನ ಟ್ಯಾಂಕ್‌ಗಳಲ್ಲಿ ಏನನ್ನು ತುಂಬಲಾಗುತ್ತಿದೆ? ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥೆನಾಲ್ ಇದೆ? ಶೇ. 20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡುತ್ತಿರುವ ಕಂಪನಿಗಳ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಲಾಗುತ್ತದೆ? ದಯವಿಟ್ಟು ನಮಗೆ ತಿಳಿಸಿ” ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

ಕರ್ನಾಟಕ ಸರ್ಕಾರದ ವರದಿ ಕುರಿತು ಪ್ರತಿಕ್ರಿಯಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ “ಬಿಜೆಪಿ = ಭಾರತೀಯ ಜೆಬ್-ಕತ್ರಾ ಪಕ್ಷ’ ಎಂದು ಟೀಕಿಸಿದ್ದಾರೆ.

“ಕರ್ನಾಟಕದ ಕಾನೂನು ಮಾಪನಶಾಸ್ತ್ರ ಇಲಾಖೆಯು, ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಪರಿಶೀಲಿಸಲು ರಾಜ್ಯಾದ್ಯಂತ ತಪಾಸಣೆಗಳನ್ನು ನಡೆಸಿತ್ತು. ಈ ವೇಳೆ ಐಒಸಿಎಲ್‌ ಮತ್ತು ಎಚ್‌ಪಿಸಿಎಲ್‌ ಎರಡೂ ಕಂಪನಿಗಳು ಪೂರೈಸಿದ ಇಂಧನದಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವು 30% ಕ್ಕಿಂತ ಹೆಚ್ಚಿರುವುದು ತಪಾಸಣೆಯಲ್ಲಿ ಕಂಡುಬಂದಿದೆ; ಇದು ಸರ್ಕಾರ ನಿಗದಿಪಡಿಸಿದ 20% ಮಿತಿಗಿಂತ ಗಮನಾರ್ಹವಾಗಿ ಹೆಚ್ಚಳವಾಗಿದೆ. ಇದು ಕರ್ನಾಟಕದಾದ್ಯಂತ, ಮತ್ತು ಬಹುಶಃ ಇಡೀ ಭಾರತದಾದ್ಯಂತ ಇರುವ ಕೋಟ್ಯಂತರ ವಾಹನ ಮಾಲೀಕರ ವಾಹನಗಳ ಕಾರ್ಯಕ್ಷಮತೆ, ಇಂಧನ ದಕ್ಷತೆ ಹಾಗೂ ದೈನಂದಿನ ಬಜೆಟ್ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ ಎಂದಿದ್ದಾರೆ.

“ಇದು ಬಿಜೆಪಿ ಪ್ರತಿನಿತ್ಯ ನಡೆಸುತ್ತಿರುವ ಕಳ್ಳತನವಾಗಿದೆ. ಪ್ರತಿದಿನ ಬೆಳಿಗ್ಗೆ, ನೀವು ಪೆಟ್ರೋಲ್ ಪಂಪ್‌ಗೆ ಹೋದಾಗ, ಬಿಜೆಪಿ ನಿಮಗೆ ತಾನು ಭರವಸೆ ನೀಡಿದ ಗುಣಮಟ್ಟವನ್ನು ಹೊಂದಿರದ ಇಂಧನವನ್ನು ಮಾರಾಟ ಮಾಡುತ್ತಿರುತ್ತದೆ. ಹೀಗೆ ಮಾಡುವುದರಿಂದ ಅದು ನಿಮ್ಮ ವಾಹನವನ್ನು ಹಾಳುಮಾಡುತ್ತದೆ ಮತ್ತು ಅದೇ ದೂರವನ್ನು ಕ್ರಮಿಸಲು ನೀವು ಹೆಚ್ಚು ಹಣ ಖರ್ಚು ಮಾಡುವಂತೆ ಒತ್ತಾಯಿಸುತ್ತದೆ. ಈ ರೀತಿ ಬಿಜೆಪಿ ಗೌಪ್ಯವಾಗಿ ಪ್ರತಿ ಲೀಟರ್‌ಗೆ ಒಂದರಂತೆ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತದೆ” ಎಂದು ಪವನ್ ಖೇರಾ ಹೇಳಿದ್ದಾರೆ.

ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಕೂಡ ಕರ್ನಾಟಕದ ಸರ್ಕಾರದ ವರದಿ ಅನುಸರಿಸಿ ಕೇಂದ್ರ ಸರ್ಕಾರ ಮತ್ತು ಪೆಟ್ರೋಲಿಯಂ ಮಾರುಕಟ್ಟೆ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ಪ್ರಶ್ನೆಗಳನ್ನು ಮುಂದಿಡುವ ಮೂಲಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೆಟ್ರೋಲಿಯಂ ಕಂಪನಿಗಳು ತಮ್ಮ ಮೇಲಿನ ಆರೋಪಕ್ಕೆ ಸಮಜಾಯಿಸಿಗಳನ್ನು ನೀಡಿದೆ. ಆದರೆ, ಸಾರ್ವಜನಿಕರು ಇದನ್ನು ತಿರಸ್ಕರಿಸಿದ್ದಾರೆ.

 













ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೆಡಿಎಸ್ ಸಮರ್ಥನೆ ಬಿಜೆಪಿಯ ರಾಜಕೀಯ ದಿವಾಳಿತನ ತೋರಿಸುತ್ತದೆ : ಆರ್. ಅಶೋಕ್ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು!

ಕರ್ನಾಟಕ ರಾಜಕೀಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾಕ್ಸಮರ ತೀವ್ರಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಆರ್. ಅಶೋಕ್ ಮಾಡಿದ ಕಟು...

ಪೆಟ್ರೋಲ್‌ನಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆ : ಕೇಂದ್ರದಿಂದ ಸ್ಪಷ್ಟನೆ ಕೋರಿದ ಕರ್ನಾಟಕ ಸರ್ಕಾರ

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿಪಡಿಸಿದ ಶೇಕಡ 20ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದರ ಮಟ್ಟವು...

ಸಿಜೆಐ ಸೂರ್ಯ ಕಾಂತ್ ವಿರುದ್ಧದ ಪೋಸ್ಟ್ ಪ್ರಕರಣ: ಕೇರಳ ಕಾಂಗ್ರೆಸ್ ನಾಯಕರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದ ಆಕ್ಷೇಪಾರ್ಹ ಪೋಸ್ಟ್‌ಗೆ ಸಂಬಂಧಿಸಿದಂತೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್...

ಗೃಹಲಕ್ಷ್ಮಿ ಯೋಜನೆಯಡಿ ₹2 ಸಾವಿರ ಪಡೆಯುವುದು ಫಲಾನುಭವಿಗಳ ಹಕ್ಕಲ್ಲ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ

'ಗೃಹಲಕ್ಷ್ಮಿ' ಒಂದು ಕಲ್ಯಾಣ (ಪರೋಪಕಾರಿ) ಯೋಜನೆಯಾಗಿದ್ದು, ಇದರ ಅನುಷ್ಠಾನವು ಹೆಚ್ಚಾಗಿ ಆಡಳಿತಾತ್ಮಕ ಅಗತ್ಯತೆಗಳನ್ನು ಅವಲಂಬಿಸಿರುತ್ತದೆ. ಹಾಗಾಗಿ, ಈ ಯೋಜನೆಯ ಫಲಾನುಭವಿಗಳು ಇದನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಮತ್ತು ನ್ಯಾಯಾಂಗದ ಹಸ್ತಕ್ಷೇಪದ...

ಇನ್ಮುಂದೆ ಸರ್ಕಾರಿ ಯೋಜನೆಗಳ ಅರ್ಹತೆಗೆ ‘ಆಧಾರ್’ ಬದಲು ‘ವೋಟರ್ ಐಡಿ’?: ಕೇಂದ್ರ ಸಚಿವರ ಹೇಳಿಕೆಗೆ ರಾಹುಲ್ ಗಾಂಧಿ ತೀವ್ರ ಆಕ್ರೋಶ!

ಕೇಂದ್ರ ಸರ್ಕಾರಿ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಹಾಗೂ ಪಾವತಿ ಪ್ರಕ್ರಿಯೆಗಳನ್ನು ನಡೆಸಲು ಇನ್ಮುಂದೆ ಆಧಾರ್ ಕಾರ್ಡ್ ಬದಲು 'ವೋಟರ್ ಐಡಿ' (ಮತದಾರರ ಗುರುತಿನ ಚೀಟಿ) ಹಾಗೂ ಬಯೋಮೆಟ್ರಿಕ್ ಪರಿಶೀಲನೆಯನ್ನು ಆಧಾರವಾಗಿ ಬಳಸಲಾಗುವುದು...

AMU ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾದ ನಶ್ರಾ ನಯೀಮ್ : ಮೊದಲ ಬಾರಿಗೆ ಉನ್ನತ ಹುದ್ದೆಗೆ ಮಹಿಳೆ ಆಯ್ಕೆ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (AMUSU) 105 ವರ್ಷಗಳ ಇತಿಹಾಸದಲ್ಲೇ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕಾನೂನು ವಿದ್ಯಾರ್ಥಿನಿ ನಶ್ರಾ ನಯೀಮ್ ಪಾತ್ರರಾಗಿದ್ದಾರೆ. ಶುಕ್ರವಾರ (ನ.6) ಪ್ರಕಟಗೊಂಡ ಚುನಾವಣೆಯ...

ಸ್ಥಳಾಂತರಗೊಂಡ ಮತದಾರರು ಫಾರಂ-6 ಅಥವಾ ಎಸ್‌ಐಆರ್ ಎನ್ಯುಮರೇಷನ್ ಫಾರಂ ಸಲ್ಲಿಸಿದರೆ ಸುಳ್ಳು ಘೋಷಣೆ ಮಾಡಿದಂತಾಗುತ್ತದೆ, ಕಾನೂನು ಕ್ರಮ ಎದುರಿಸಬೇಕಾದೀತು : ಬಾಂಬೆ ಹೈಕೋರ್ಟ್

ವಾಸಸ್ಥಳ ಬದಲಾಯಿಸಿದ ಅಥವಾ ಸ್ಥಳಾಂತರಗೊಂಡ ಮತದಾರರು ಕೇವಲ 'ಫಾರಂ-8' ಅನ್ನು ಮಾತ್ರ ಭರ್ತಿ ಮಾಡಬಹುದು; ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ ಮೊದಲೇ ಭರ್ತಿ ಮಾಡಲಾದ ಗಣತಿ ನಮೂನೆ (enumeration form)...

ವಿಳಾಸ ಬದಲಿಸಿದ್ದಕ್ಕೆ ಫಾರಂ-8 ಸಲ್ಲಿಸಿದ್ದರೂ ಒಂದೇ ಕುಟುಂಬದ 6 ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ : ಮರುಸೇರ್ಪಡೆಗೆ ಬಾಂಬೆ ಹೈಕೋರ್ಟ್ ಆದೇಶ

ಗೋವಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದ ಒಂದೇ ಕುಟುಂಬದ ಆರು ಸದಸ್ಯರ ಹೆಸರುಗಳನ್ನು ಮರುಸೇರ್ಪಡೆಗೊಳಿಸುವಂತೆ ಬಾಂಬೆ ಹೈಕೋರ್ಟ್ ಗುರುವಾರ (ನ.5) ಭಾರತೀಯ ಚುನಾವಣಾ...

ಪ್ರಧಾನಿಗೆ ಪತ್ರ ಬರೆಯಿರಿ, ಸಂಸತ್ತಿನಲ್ಲಿ ಎಸ್‌ಐಆರ್ ಕುರಿತು ಚರ್ಚಿಸಿ: ರಾಹುಲ್‌ಗೆ ಅಮಿತ್ ಶಾ ಸವಾಲು

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚರ್ಚೆಯ ಸವಾಲನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವೀಕರಿಸಿದ್ದಾರೆ. ಸಂಸತ್ತಿನಲ್ಲಿ ಚರ್ಚಿಸಲು ಗಂಭೀರವಾದ ವಿಷಯಗಳನ್ನು ಎತ್ತಿಕೊಳ್ಳುವಂತೆ ವಿಪಕ್ಷ ನಾಯಕರಿಗೆ ಅವರು ಸಲಹೆ...

ಫಾರಂ-7 ದುರುಪಯೋಗದ ವಿರುದ್ಧ ಪೊಲೀಸ್ ತನಿಖೆ : ಸಿಎಂ ಡಿ.ಕೆ ಶಿವಕುಮಾರ್

ಮತಗಳ್ಳತನಕ್ಕೆ ಕುಮ್ಮಕ್ಕು ನೀಡಿದ ಹಾಗೂ ಫಾರಂ-7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆ ನಡೆಸಲು ನಮ್ಮ ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂಡಿಯಾ ಒಕ್ಕೂಟ...