ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ 26 ವರ್ಷದ ರೋನಿ ಯೋರ್ಡ್ರಿಕ್ಸ್ ಗುವಾನಿಪಾ ಚ್ರಿನೋಸ್ ಎಂಬ ವೆನಿಜುಎಲ್ಲಾ ಮೂಲದ ವಲಸಿಗನನ್ನು ಯುಎಸ್ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ವೈಟ್ ಹೌಸ್ ಸಮೀಪ ಬಂಧಿಸಿದ್ದಾರೆ.
ಅಮೆರಿಕದ ಗೃಹ ಭದ್ರತಾ ಇಲಾಖೆ (DHS) ಮತ್ತು ಸೀಕ್ರೆಟ್ ಸರ್ವಿಸ್ ನೀಡಿರುವ ಅಧಿಕೃತ ಮಾಹಿತಿಯಂತೆ, 2026ರ ನವೆಂಬರ್ 5, ಗುರುವಾರ ರಾತ್ರಿ ವೈಟ್ ಹೌಸ್ ಬಳಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಅನುಮಾನಾಸ್ಪದವಾಗಿ ಕುಳಿತಿದ್ದ ಆತನನ್ನು ತಪಾಸಣೆ ನಡೆಸಿದಾಗ ಈ ತೀವ್ರ ಭದ್ರತಾ ಲೋಪ ಬಯಲಿಗೆ ಬಂದಿದೆ.
ಕಳುವಾದ ಕಾರು, AR-15 ರೈಫಲ್ ಹಾಗೂ ಪಿಸ್ತೂಲ್‌ಗಳು ಪತ್ತೆ:
ಅಧಿಕಾರಿಗಳ ವಿಚಾರಣೆ ವೇಳೆ ಶಂಕಿತ ವ್ಯಕ್ತಿ ಇದ್ದ ವಾಹನವು ಕಳುವಾಗಿದ್ದು ಎಂಬುದು ದೃಢಪಟ್ಟಿದೆ. ಕಾರನ್ನು ಪರಿಶೀಲಿಸಿದಾಗ ಆತನ ಬಳಿ AR-15 ಮಾದರಿಯ ರೈಫಲ್, Mac-10 ಪಿಸ್ತೂಲ್ ಮತ್ತು Glock 43X ಪಿಸ್ತೂಲ್ ಸೇರಿದಂತೆ ಹತ್ತಾರು ಸುತ್ತು ಜೀವಂತ ಮದ್ದುಗುಂಡುಗಳು ಪತ್ತೆಯಾಗಿವೆ.
ವಿಚಾರಣೆ ವೇಳೆ ಆರೋಪಿ ರೋನಿ ಯೋರ್ಡ್ರಿಕ್ಸ್, “ತನ್ನ ತಲೆಯಲ್ಲಿ ಕೇಳಿಸುತ್ತಿದ್ದ ರಹಸ್ಯ ಶಬ್ದಗಳು ಹಾಗೂ ಧ್ವನಿಗಳು ತನಗೆ ವಾಷಿಂಗ್ಟನ್‌ಗೆ ತೆರಳಿ ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಆಜ್ಞೆ ನೀಡುತ್ತಿದ್ದವು” ಎಂದು ಹೇಳಿಕೆ ನೀಡಿದ್ದಾನೆ. ಈತ ಮಾರ್ಚ್ 2025ರಲ್ಲಿ ಟೆಕ್ಸಾಸ್ ಗಡಿ ಮೂಲಕ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ್ದ ವೆನಿಜುಎಲ್ಲಾ ಪ್ರಜೆ ಎಂದು ತಿಳಿದುಬಂದಿದೆ.
ದಾಖಲಾದ ಸಾಲು ಸಾಲು ಗಂಭೀರ ಆರೋಪಗಳು:
ಬಂಧಿತ ಶಂಕಿತನ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಸಾಗಣೆ , ನೋಂದಣಿಯಾಗದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಚಾಲನೆ , ಅನಧಿಕೃತ ವಾಹನ ಬಳಕೆ ಹಾಗೂ ಕಳವು (Theft and receiving stolen property) ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಆತನನ್ನು ಯುಎಸ್ ಮಾರ್ಷಲ್ಸ್ ಸರ್ವಿಸ್ʼನ ವಶಕ್ಕೆ ನೀಡಲಾಗಿದೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸೀಕ್ರೆಟ್ ಸರ್ವಿಸ್ ಡೈರೆಕ್ಟರ್ ಶಾನ್ ಕರನ್ (Sean Curran), “ಈ ಘಟನೆಯು ಪ್ರಸ್ತುತ ದೇಶದಲ್ಲಿ ಹೆಚ್ಚಾಗುತ್ತಿರುವ ತೀವ್ರ ಭದ್ರತಾ ಬೆದರಿಕೆ ವಾತಾವರಣಕ್ಕೆ ಸಾಕ್ಷಿಯಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


