ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೊಂದಲಕ್ಕೀಡುಮಾಡುವ ಬದಲು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಇವಿಎಂ ಕುರಿತು ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರುವಂತೆ ಪ್ರಧಾನಿಯವರನ್ನು ಒಪ್ಪಿಸಬೇಕೆಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಸಂಸತ್ತಿನಲ್ಲಿ ಕಳೆದ ವರ್ಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಚರ್ಚಿಸಲು ಸಾಧ್ಯವಿಲ್ಲ ಎಂದಿದ್ದ ಅಮಿತ್ ಷಾ, ಇತ್ತೀಚೆಗೆ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಸಿದ್ಧವಿದೆ ಎಂದು ನೀಡಿರುವ ಹೇಳಿಕೆಯ ವೀಡಿಯೋ ತುಣುಕನ್ನು ಹಂಚಿಕೊಂಡು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘X’ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಅವರು, “ಅಮಿತ್ ಷಾ ಅವರೇ, ಮೋದಿ ಜಿಯವರನ್ನು ಗೊಂದಲಕ್ಕೀಡುಮಾಡಬೇಡಿ. ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರುವಂತೆ ಅವರನ್ನು ಒಪ್ಪಿಸಿ. ಯಾವುದೇ ವೇದಿಕೆ, ಯಾವುದೇ ಸಮಯದಲ್ಲಾದರೂ ಸರಿ… ‘ದರೋ ಮತ್’ (ಹೆದರಬೇಡಿ)” ಎಂದು ಚಾಟಿ ಬೀಸಿದ್ದಾರೆ. ಇದೇ ಪೋಸ್ಟ್ ಹಂಚಿಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಪ್ರಧಾನಿಯವರು ಚರ್ಚೆಯಲ್ಲಿ ಬೇಕಿದ್ದರೆ ಟೆಲಿಪ್ರಾಮ್ಟರ್ ಕೂಡ ಬಳಸಬಹುದು” ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಅವರ ಈ ಬಹಿರಂಗ ಸವಾಲಿನ ಬೆನ್ನಲ್ಲೇ ಕಾಂಗ್ರೆಸ್ನ ಇತರ ಪ್ರಮುಖ ನಾಯಕರು ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಮಿತ್ ಷಾ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, “ನಿಯಮಿತ ಸಂಸತ್ ಅಧಿವೇಶನಗಳಲ್ಲಿ ನೀವು ಸುಮ್ಮನೆ ಕುಳಿತುಕೊಳ್ಳುತ್ತೀರಿ, ಹೀಗಿರುವಾಗ ವಿಶೇಷ ಅಧಿವೇಶನ ಕರೆಯುವ ಧೈರ್ಯ ನಿಮಗಲ್ಲಿಂದ ಬರಬೇಕು? ದೊಡ್ಡ ಹೆಸರುಗಳು, ಸಣ್ಣ ಆಲೋಚನೆಗಳು!” ಎಂದು ವ್ಯಂಗ್ಯವಾಡಿದ್ದಾರೆ.. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್ ವಾಗ್ದಾಳಿ ನಡೆಸಿ, “ರಾಹುಲ್ ಜಿ, ನೀವು ಬಿಜೆಪಿಯನ್ನು ಸಂಪೂರ್ಣವಾಗಿ ಕಂಗಾಲು ಮಾಡಿದ್ದೀರಿ. ಅಮಿತ್ ಷಾ ಅವರಿಂದ ಹಿಡಿದು ಪ್ರತಿಯೊಬ್ಬರೂ ದಿಕ್ಕುತೋಚದೆ ಓಡಾಡುತ್ತ ಏನೇನೋ ಮಾತನಾಡುತ್ತಿದ್ದಾರೆ. ಹಾಗಿದ್ದರೆ ಪ್ರಧಾನಿ ಮೋದಿಯವರು ಎಲ್ಲಿದ್ದಾರೆ, ಎಲ್ಲಿ ಅಡಗಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ದೇಶವೇ ಕೇಳುತ್ತಿರುವ ಮತಗಳ ಕಳುವಿನ ಕುರಿತಾದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಮುಂದೆ ಬಂದು ಉತ್ತರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದಕ್ಕೂ ಮುನ್ನ ನವೆಂಬರ್ 4 ರಂದು ನರೇಂದ್ರ ಮೋದಿಯವರಿಗೆ ಸವಾಲೆಸೆದಿದ್ದ ರಾಹುಲ್ ಗಾಂಧಿ, “ಅದಾನಿ ಅವರ ಎನ್ಡಿಟಿವಿ ವೇದಿಕೆಯಾಗಲಿ ಅಥವಾ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ನಿರ್ಣಾಯಕರಾಗಲಿ, ಬಹಿರಂಗ ಚರ್ಚೆಗೆ ಪ್ರಧಾನಿ ಬರಲಿ. ಕೇವಲ 5 ನಿಮಿಷದಲ್ಲಿ ಸತ್ಯ ಏನೆಂದು ನಿರೂಪಿಸುತ್ತೇನೆ” ಎಂದು ಸವಾಲೆಸೆದಿದ್ದರು.


