ಬ್ರಿಟಿಷ್ ಮೂಲದ ಪ್ರಸಿದ್ಧ ಲೇಖಕ ಎಂ. ಜಾನ್ ಹ್ಯಾರಿಸನ್ ಅವರು ತಮ್ಮ ವೈಜ್ಞಾನಿಕ ಹಾಗೂ ಡಿಸ್ಟೋಪಿಯನ್ ವಿಡಂಬನಾತ್ಮಕ ಕಾದಂಬರಿ ‘ದಿ ಎಂಡ್ ಆಫ್ ಎವೆರಿಥಿಂಗ್’ ಕೃತಿಗೆ 2026ರ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಲಂಡನ್ನ ಓಲ್ಡ್ ಬಿಲಿಂಗ್ಸ್ಗೇಟ್ನಲ್ಲಿ ಸೋಮವಾರ (ನ.9) ರಾತ್ರಿ ನಡೆದ ಭವ್ಯ ಸಮಾರಂಭದಲ್ಲಿ ‘ದಿ ಎಂಡ್ ಆಫ್ ಎವೆರಿಥಿಂಗ್’ ಕೃತಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಪ್ರಶಸ್ತಿಯು 50,000 ಪೌಂಡ್ (ಸುಮಾರು ₹62 ಲಕ್ಷ) ನಗದು ಮತ್ತು ಸ್ಮರಣೀಯ ಟ್ರೋಫಿಯನ್ನು ಒಳಗೊಂಡಿದೆ. 81 ವರ್ಷದ ಹ್ಯಾರಿಸನ್ ಅವರು ಬೂಕರ್ ಇತಿಹಾಸದಲ್ಲೇ ಈ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಲೇಖಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬೂಕರ್ ಪ್ರಶಸ್ತಿಯ 57 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ವೈಜ್ಞಾನಿಕ ಕಾದಂಬರಿ (Sci-Fi) ಪ್ರಕಾರದ ಕೃತಿಯೊಂದಕ್ಕೆ ಈ ಗೌರವ ಸಂದಿದೆ. ಬೂಕರ್ ಪ್ರಶಸ್ತಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕಿ ಗ್ಯಾಬಿ ವುಡ್ ಮಾತನಾಡಿ, “ಎಂ. ಜಾನ್ ಹ್ಯಾರಿಸನ್ ಅವರು ಸಾಹಿತ್ಯಿಕ ವೈಜ್ಞಾನಿಕ ಕಾದಂಬರಿ ಲೋಕದ ದ್ರೋಣಾಚಾರ್ಯರಿದ್ದಂತೆ. ಅಧಿಕೃತ ಸೈನ್ಸ್-ಫಿಕ್ಷನ್ ಜಗತ್ತಿನಿಂದ ಮೂಡಿಬಂದು ಬೂಕರ್ ಗೆದ್ದ ಮೊದಲ ಲೇಖಕ ಇವರಾಗಿದ್ದಾರೆ” ಎಂದು ಶ್ಲಾಘಿಸಿದ್ದಾರೆ.
ಕೇವಲ 198 ಪುಟಗಳ ‘ದಿ ಎಂಡ್ ಆಫ್ ಎವೆರಿಥಿಂಗ್’ ಕಾದಂಬರಿಯು, ಈ ವರ್ಷದ ಅಂತಿಮ ಕಿರುಪಟ್ಟಿಯಲ್ಲಿದ್ದ ಅತ್ಯಂತ ಚಿಕ್ಕ ಕೃತಿಯೂ ಹೌದು.

ಕಾದಂಬರಿಯು ಭವಿಷ್ಯದ ಬ್ರಿಟನ್ ಕರಾವಳಿಯ ಹಿನ್ನೆಲೆಯಲ್ಲಿ ಸಾಗುತ್ತದೆ. ಜಗತ್ತಿಗೆ ಅಪ್ಪಳಿಸಿದ ನಿಗೂಢ ವಿಪತ್ತಿನ ನಂತರ, ಕಡಲತೀರದಲ್ಲಿ ಸಿಗುವ ವಿಚಿತ್ರ ತಂತ್ರಜ್ಞಾನದ ವಸ್ತುಗಳು ಮತ್ತು ಕೃತಕ ಬುದ್ಧಿಮತ್ತೆಯ (ಎಐ) ಆತಂಕಗಳ ಸುತ್ತ ಕಥೆ ಹೆಣೆಯಲಾಗಿದೆ.
ತಮ್ಮ ಕೃತಿಯ ಬಗ್ಗೆ ಮಾತನಾಡಿದ ಹ್ಯಾರಿಸನ್ ಅವರು, “ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ನನ್ನ ಕಾದಂಬರಿಯ ವಿಡಂಬನೆಗೆ ಮುಖ್ಯ ಪ್ರೇರಣೆ. ನಮ್ಮೆಲ್ಲಾ ನಿರೀಕ್ಷೆಗಳು ತಲೆಕೆಳಗಾಗಿ ಬದುಕು ನಿರಂತರ ವಿಪತ್ತಿನಂತೆ ಭಾಸವಾಗುತ್ತಿರುವಾಗಲೂ ನಾವು ಜೀವನವನ್ನು ಹೇಗೆ ಮುನ್ನಡೆಸುತ್ತೇವೆ ಎಂಬುದೇ ಇದರ ವಸ್ತು” ಎಂದು ವಿವರಿಸಿದ್ದಾರೆ.
ಬೂಕರ್ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾದ ಮೇರಿ ಬೇರ್ಡ್ ಅವರು ಕೃತಿಯನ್ನು ಶ್ಲಾಘಿಸುತ್ತಾ, “ಇದು ಓದುಗರನ್ನು ಆಳವಾಗಿ ಚಿಂತನೆಗೆ ಹಚ್ಚುವ, ಮುಖದಲ್ಲಿ ಸಣ್ಣದೊಂದು ವ್ಯಂಗ್ಯದ ನಗು ಮೂಡಿಸುವ ಕಾದಂಬರಿ. ಕರಾಳ ಹಿನ್ನೆಲೆಯ ಕಥೆಯಾಗಿದ್ದರೂ, ಜಗತ್ತಿನ ಬಗ್ಗೆ ಒಂದು ಆಶಾವಾದದ ಸಣ್ಣ ಕಿಡಿಯನ್ನು ಇದು ಓದುಗರಲ್ಲಿ ಉಳಿಸುತ್ತದೆ” ಎಂದಿದ್ದಾರೆ.
ಈ ಪ್ರಶಸ್ತಿಗಾಗಿ ಅಂತಿಮ ಸುತ್ತಿನಲ್ಲಿ ಮಾರ್ಲನ್ ಜೇಮ್ಸ್, ಎಲಿಜಬೆತ್ ಸ್ಟ್ರೌಟ್ ಮತ್ತು ಡೌಗ್ಲಾಸ್ ಸ್ಟುವರ್ಟ್ ಅವರಂತಹ ಖ್ಯಾತ ಲೇಖಕರ ಕೃತಿಗಳೊಂದಿಗೆ ತೀವ್ರ ಪೈಪೋಟಿ ಇತ್ತು. ಅಂತಿಮವಾಗಿ ಹ್ಯಾರಿಸನ್ ಅವರ ಅಸಾಧಾರಣ ಬರವಣಿಗೆಯ ಶೈಲಿ ಮತ್ತು ಕಥಾವಸ್ತು ಈ ಬಾರಿಯ ಸಾಹಿತ್ಯದ ಅತ್ಯುನ್ನತ ಮುಕುಟವನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಹ್ಯಾರಿಸನ್ ಅವರು ‘ನ್ಯೂ ವರ್ಲ್ಡ್ಸ್’ (New Worlds) ಪತ್ರಿಕೆಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದರು. ಅವರ ‘ನೋವಾ ಸ್ವಿಂಗ್’ (Nova Swing) ಕಾದಂಬರಿಗೆ ಈ ಹಿಂದೆ ಆರ್ಥರ್ ಸಿ. ಕ್ಲಾರ್ಕ್ ವಿಜ್ಞಾನ ಕಾದಂಬರಿ ಪ್ರಶಸ್ತಿ ದೊರೆತಿತ್ತು.


