ಕರ್ನಾಟಕ ಸರ್ಕಾರದ ಇ20 ಪೆಟ್ರೋಲ್ ಕುರಿತ ಗಂಭೀರ ಆರೋಪಗಳಿಗೆ ತಿರುಗೇಟು ನೀಡಲು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ‘MythVsFact’ (ಮಿಥ್ಯೆ ಮತ್ತು ವಾಸ್ತವ) ಅಭಿಯಾನ ನಡೆಸುತ್ತಿದೆ. ಆದರೆ, ಈ ಅಭಿಯಾನದ ಭಾಗವಾಗಿ ಪ್ರಕಟಿಸಿ ಬಳಿಕ ಕಂಪನಿ ಅಳಿಸಿದ ಟ್ವೀಟ್ ಒಂದು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಭಾನುವಾರ ಹಂಚಿಕೊಳ್ಳಲಾಗಿದ್ದ ಆ ಟ್ವೀಟ್‌ನಲ್ಲಿ ಮೈಸೂರಿನ ಪೆಟ್ರೋಲ್ ಬಂಕ್‌ನಲ್ಲಿ ಸಂಗ್ರಹಿಸಲಾದ ಎಥೆನಾಲ್ ಮಿಶ್ರಿತ ಪೆಟ್ರೋಲ್‌ನ ಮಾದರಿಯನ್ನು ಪರೀಕ್ಷಿಸಿದಾಗ, ಅದು ನಿಗದಿತ ಶೇ.20ರ ಮಿತಿಯೊಳಗೇ ಇರುವುದು ದೃಢಪಟ್ಟಿದೆ ಎಂದು ಹೇಳಲಾಗಿತ್ತು. ಆದರೆ, ಟ್ವೀಟ್‌ನಲ್ಲಿದ್ದ ಪರೀಕ್ಷಾ ವರದಿಯಲ್ಲಿನ ಎಥೆನಾಲ್ ಪ್ರಮಾಣವು ಶೇ.20ರ ಮಿತಿಯನ್ನು ಮೀರಿದ್ದು, ಶೇ.33ರಷ್ಟಿದೆ ಎಂದು ಹಲವರು ತಕ್ಷಣವೇ ಗಮನ ಸೆಳೆದಿದ್ದಾರೆ.
ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಭಾರತ್ ಪೆಟ್ರೋಲಿಯಂ ಆ ಟ್ವೀಟ್ ಅನ್ನು ತ್ವರಿತವಾಗಿ ಅಳಿಸಿದೆ. ಆದರೆ, ಅಷ್ಟರಲ್ಲಾಗಲೇ ಅದರ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಂಪನಿಯ ದ್ವಂದ್ವ ನಿಲುವನ್ನು ಪ್ರಶ್ನಿಸಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ವೈರಲ್ ಆಗಿರುವ ಚಿತ್ರದಲ್ಲಿ ತೋರಿಸಿರುವುದು ಶೇ.30ರಷ್ಟು ಎಥೆನಾಲ್ ಮಿಶ್ರಣವೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಇಂಡಿಯಾ ಟುಡೇ ತಿಳಿಸಿದೆ.
ಅಳಿಸಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದು, ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.
ಶೇ.20ಕ್ಕಿಂತಲೂ ಅಧಿಕ ಎಥೆನಾಲ್ ಮಿಶ್ರಣ: ಕರ್ನಾಟಕ ಸರ್ಕಾರದ ಗಂಭೀರ ಆರೋಪ
ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಕಳೆದ ವಾರ ಗಂಭೀರ ಆರೋಪವೊಂದನ್ನು ಮಾಡಿತ್ತು. ದೇಶದ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿಪಡಿಸಿರುವ ಶೇ.20ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಸರ್ಕಾರ ಆರೋಪಿಸಿತ್ತು.
ರಾಜ್ಯದಾದ್ಯಂತ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್), ಶೆಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿಸಿಎಲ್) ಸೇರಿದಂತೆ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳ ಪೆಟ್ರೋಲ್ ಬಂಕ್‌ಗಳಿಂದ ಒಟ್ಟು 63 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಈ ಮಾದರಿಗಳಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಇರುವುದು ಪತ್ತೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು.
ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುವುದರಿಂದ ವಾಹನ ಸವಾರರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂಬ ಆತಂಕವನ್ನೂ ಸರ್ಕಾರ ವ್ಯಕ್ತಪಡಿಸಿತ್ತು. ಈ ಆರೋಪವು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಕೇರಳದಲ್ಲೂ ಪೆಟ್ರೋಲ್ ಮಾದರಿಗಳ ಪರಿಶೀಲನೆ ಆರಂಭ
ಕರ್ನಾಟಕದ ಆರೋಪದ ಬೆನ್ನಲ್ಲೇ ಕಾಂಗ್ರೆಸ್ ಆಡಳಿತವಿರುವ ಕೇರಳದಲ್ಲಿಯೂ ಪೆಟ್ರೋಲ್ ಬಂಕ್‌ಗಳಲ್ಲಿ ದಿಢೀರ್ ತಪಾಸಣೆ ಆರಂಭಿಸಲಾಗಿದೆ.
ಸದ್ಯ ತಿರುವನಂತಪುರಂ, ಎರ್ನಾಕುಲಂ, ಕೋಝಿಕ್ಕೋಡ್ ಮತ್ತು ಕಣ್ಣೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ಮೊದಲ ಹಂತದ ತಪಾಸಣೆಯಲ್ಲಿ ಅಕ್ರಮಗಳು ಪತ್ತೆಯಾದರೆ ಇತರ ಪ್ರದೇಶಗಳಿಗೂ ಪರಿಶೀಲನೆಯನ್ನು ವಿಸ್ತರಿಸಲಾಗುವುದು ಎಂದು ಸಚಿವ ಅನೂಪ್ ಜೇಕಬ್ ತಿಳಿಸಿದ್ದಾರೆ.
ಪೆಟ್ರೋಲ್ ಮಾದರಿಗಳನ್ನು ಯಾದೃಚ್ಛಿಕವಾಗಿ ಸಂಗ್ರಹಿಸಿ ಸರ್ಕಾರಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗುವುದು. ಪರೀಕ್ಷೆಯ ಫಲಿತಾಂಶಗಳು 10 ದಿನಗಳೊಳಗೆ ಲಭ್ಯವಾಗಲಿವೆ ಎಂದು ಅವರು ಹೇಳಿದ್ದಾರೆ.
ಎಥೆನಾಲ್ ಮಿಶ್ರಣದ ಪ್ರಮಾಣದಲ್ಲಿ ನಿಯಮ ಉಲ್ಲಂಘನೆ ನಡೆದಿರುವುದು ಪತ್ತೆಯಾದರೆ ಸಂಬಂಧಪಟ್ಟ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಿಸುವುದರ ಜೊತೆಗೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಎಚ್ಚರಿಕೆ ನೀಡಿದೆ.


