ರೈಲಿನ ಶೌಚಾಲಯಗಳಲ್ಲಿ ನೀರಿನ ಸೌಲಭ್ಯವಿಲ್ಲದೆ ಪ್ರಯಾಣಿಕರು ಅರ್ಧದಲ್ಲೇ ಪ್ರಯಾಣ ಮೊಟಕುಗೊಳಿಸಿದ ಘಟನೆಯನ್ನು ‘ಸೇವೆಯಲ್ಲಾದ ನ್ಯೂನತೆ’ ಎಂದು ಪರಿಗಣಿಸಿರುವ ಶಿವಮೊಗ್ಗ ಜಿಲ್ಲಾ ಗ್ರಾಹಕರ ಆಯೋಗವು ರೈಲ್ವೆ ಇಲಾಖೆಗೆ ದಂಡ ವಿಧಿಸಿದೆ. ಯಶವಂತಪುರ ಮತ್ತು ತುಮಕೂರು ರೈಲು ನಿಲ್ದಾಣಗಳ ಸ್ಟೇಷನ್ ಮಾಸ್ಟರ್ಗಳು ಜಂಟಿಯಾಗಿ ದೂರುದಾರರಿಗೆ ದಂಡ ಹಾಗೂ ಟಿಕೆಟ್ ಮೊತ್ತವನ್ನು ಪಾವತಿಸುವಂತೆ ಅಕ್ಟೋಬರ್ 23, 2026 ರಂದು ಆದೇಶ ಹೊರಡಿಸಿರುವುದಾಗಿ ಕಾನೂನು ಸುದ್ದಿ ಸಂಸ್ಥೆ ಲೈವ್ ಲಾ ವರದಿ ಮಾಡಿದೆ.
ಆಯೋಗದ ಅಧ್ಯಕ್ಷ ಟಿ. ಶಿವಣ್ಣ (ನಿವೃತ್ತ ಜಿಲ್ಲಾ ನ್ಯಾಯಾಧೀಶರು) ಹಾಗೂ ಸದಸ್ಯ ಬಿ. ಡಿ. ಯೋಗಾನಂದ ಅವರನ್ನೊಳಗೊಂಡ ಪೀಠವು ಈ ಪ್ರಮುಖ ಆದೇಶವನ್ನು ಹೊರಡಿಸಿರುವುದಾಗಿ ವರದಿಯಾಗಿದೆ. ಪ್ರಯಾಣಿಕರು ನೀಡುವ ದೂರು ಸಣ್ಣದಿರಲಿ ಅಥವಾ ದೊಡ್ಡದಿರಲಿ, ಅದನ್ನು ಸೂಕ್ತ ರೀತಿಯಲ್ಲಿ ಪರಿಹರಿಸುವುದು ಮತ್ತು ಕೈಗೊಂಡ ಕ್ರಮದ ವಿವರಗಳನ್ನು ಅವರಿಗೆ ತಲುಪಿಸುವುದು ರೈಲ್ವೆ ಅಧಿಕಾರಿಗಳ ಮೂಲಭೂತ ಕರ್ತವ್ಯವಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ ಹಾಗೂ ಪ್ರಯಾಣಿಕರ ಪರದಾಟ:
ದೂರುದಾರ ಟಿ. ನಾಗೇಂದ್ರ ಎಂಬುವವರು ತಮ್ಮ ಕುಟುಂಬದ 20 ಹಿರಿಯರು ಹಾಗೂ 4 ಮಕ್ಕಳು ಸೇರಿದಂತೆ ಒಟ್ಟು 24 ಸದಸ್ಯರೊಂದಿಗೆ ಏಪ್ರಿಲ್ 15, 2025 ರಂದು ಯಶವಂತಪುರದಿಂದ ಬೀರೂರು/ಶಿವಮೊಗ್ಗಕ್ಕೆ (ಟ್ರೇನ್ ನಂ. 66575) ಪ್ರಯಾಣಿಸಲು ಟಿಕೆಟ್ ಖರೀದಿಸಿದ್ದರು. ರೈಲು ಯಶವಂತಪುರದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಶೌಚಾಲಯಗಳಲ್ಲಿ ನೀರಿಲ್ಲದಿರುವುದು ಕಂಡುಬಂದಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ತೀವ್ರ ತೊಂದರೆ ಅನುಭವಿಸಿದ್ದಾರೆ. ನಂತರ ಅವರು ರೈಲಿನಲ್ಲಿದ್ದ ರೈಲ್ವೆ ಪೊಲೀಸರಿಗೆ ದೂರು ನೀಡಿದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ, ಅವರ ಸೂಚನೆಯಂತೆ ತುಮಕೂರು ನಿಲ್ದಾಣದಲ್ಲಿ ಇಳಿದು ಅಲ್ಲಿನ ಸ್ಟೇಷನ್ ಮಾಸ್ಟರ್ಗೆ ದೂರು ನೀಡಿದ್ದಾರೆ. ಆದರೆ ಅಲ್ಲಿಯೂ ನೀರು ಪೂರೈಸಲು ಅಧಿಕಾರಿಗಳು ವಿಫಲರಾದ ಕಾರಣ, ಕುಟುಂಬವು ಅದೇ ರೈಲಿನಲ್ಲಿದ್ದ ತಮ್ಮ ಪ್ರಯಾಣವನ್ನು ರದ್ದುಗೊಳಿಸಿ ಬಳಿಕ ₹1,760 ಹೆಚ್ಚುವರಿ ಹಣ ತೆತ್ತು ಮತ್ತೊಂದು ರೈಲಿನಲ್ಲಿ ಶಿವಮೊಗ್ಗಕ್ಕೆ ಪ್ರಯಾಣಿಸಿದ್ದಾರೆ. ಮೂಲ ಟಿಕೆಟ್ ಹಣ ಮರುಪಾವತಿ ಹಾಗೂ ನಷ್ಟಪರಿಹಾರ ಕೋರಿ ನೋಟಿಸ್ ನೀಡಿದರೂ ರೈಲ್ವೆ ಇಲಾಖೆ ಸ್ಪಂದಿಸದಿದ್ದಾಗ ದೂರುದಾರರು ಗ್ರಾಹಕರ ಆಯೋಗದ ಮೆಟ್ಟಿಲೇರಿದ್ದಾರೆ.
ರೈಲ್ವೆಯ ವಾದ ತಳ್ಳಿಹಾಕಿದ ಆಯೋಗ:
ವಿಚಾರಣೆ ವೇಳೆ ರೈಲ್ವೆ ಇಲಾಖೆಯು ನೀರಿಲ್ಲ ಎಂಬ ವಾದವನ್ನು ನಿರಾಕರಿಸಿ, ಮೂಲ ನಿಲ್ದಾಣದಲ್ಲೇ ಕೋಚ್ಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ಸಮರ್ಥಿಸಿಕೊಂಡಿತ್ತು. ಅಲ್ಲದೆ ದೂರಿನ ನೋಟಿಸ್ನಲ್ಲಿ ದಿನಾಂಕವನ್ನು ತಪ್ಪಾಗಿ ನಮೂದಿಸಲಾಗಿದೆ ಎಂದು ತಾಂತ್ರಿಕ ಕಾರಣ ನೀಡಲು ಯತ್ನಿಸಿತು. ಆದರೆ, ದಿನಾಂಕದ ಸಣ್ಣ ಮುದ್ರಣ ದೋಷವನ್ನು (Typographical Error) ನೆಪ ಮಾಡಿಕೊಂಡು ದೂರನ್ನು ವಜಾಗೊಳಿಸಲು ಸಾಧ್ಯವಿಲ್ಲ ಎಂದು ಆಯೋಗ ಖಂಡಿಸಿದೆ. ರೈಲ್ವೆ ಇಲಾಖೆಯು ‘ನೀರು ತುಂಬಿಸಲಾಗಿತ್ತು’ ಎಂದು ವಾದಿಸಿದರೂ, ಅದನ್ನು ಸಾಬೀತುಪಡಿಸಲು ಯಾವುದೇ ದಾಖಲೆ ಅಥವಾ ಸಾಕ್ಷಿ ಸಲ್ಲಿಸಲಿಲ್ಲ ಹಾಗೂ ತುಮಕೂರು ನಿಲ್ದಾಣದಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ವಿಚಾರವನ್ನು ಆಯೋಗ ಗಮನಿಸಿದೆ.
ಗ್ರಾಹಕರ ಆಯೋಗದ ತೀರ್ಪು ಮತ್ತು ದಂಡ:
ಯಶವಂತಪುರ ಹಾಗೂ ತುಮಕೂರು ನಿಲ್ದಾಣಗಳ ಸ್ಟೇಷನ್ ಮಾಸ್ಟರ್ಗಳು ಜಂಟಿಯಾಗಿ ಕೆಳಗಿನ ಮೊತ್ತವನ್ನು ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ:
- ಟಿಕೆಟ್ ಮರುಪಾವತಿ: ಮೂಲ ಟಿಕೆಟ್ ವೆಚ್ಚ ₹1,000 ಕ್ಕೆ ಏಪ್ರಿಲ್ 15, 2025 ರಿಂದ ಶೇಕಡಾ 6 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿಸಬೇಕು.
- ನಷ್ಟಪರಿಹಾರ (Compensation): ಪ್ರಯಾಣಿಕರು ಎದುರಿಸಿದ ಅಸೌಕರ್ಯ, ಮಾನಸಿಕ ಕಿರುಕುಳ ಹಾಗೂ ತೊಂದರೆಗಾಗಿ ₹10,000 ಪರಿಹಾರ.
- ಕಾನೂನು ವೆಚ್ಚ: ಪ್ರಕರಣದ ವೆಚ್ಚವಾಗಿ ₹5,000.
ಆದೇಶ ಹೊರಬಿದ್ದ 45 ದಿನಗಳ ಒಳಗೆ ಈ ಮೊತ್ತವನ್ನು ಪಾವತಿಸಬೇಕಿದ್ದು, ತಪ್ಪಿದ್ದಲ್ಲಿ ಮೂಲ ಟಿಕೆಟ್ ಮೊತ್ತಕ್ಕೆ ಶೇಕಡಾ 10 ರಷ್ಟು ಬಡ್ಡಿ ಹಾಗೂ ಪರಿಹಾರದ ಮೊತ್ತಕ್ಕೆ ಶೇಕಡಾ 10 ರಷ್ಟು ಹೆಚ್ಚುವರಿ ಬಡ್ಡಿ ತೆರಬೇಕಾಗುತ್ತದೆ ಎಂದು ನ್ಯಾಯಾಲಯವು ಸ್ಪಷ್ಟ ಆದೇಶ ನೀಡಿದೆ.


