Homeಮುಖಪುಟ‘ಮಾಲಿನ್ಯ ಹೆಚ್ಚಾದರೆ ಕಡಿಮೆಯಾಗುತ್ತದೆ, ಚಿಂತೆ ಏಕೆ?’: ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡ ಯೋಗಿ ಆದಿತ್ಯನಾಥ್

‘ಮಾಲಿನ್ಯ ಹೆಚ್ಚಾದರೆ ಕಡಿಮೆಯಾಗುತ್ತದೆ, ಚಿಂತೆ ಏಕೆ?’: ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡ ಯೋಗಿ ಆದಿತ್ಯನಾಥ್

- Advertisement -
- Advertisement -

ಉತ್ತರ ಪ್ರದೇಶ: ದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಜನರ ಜೀವಕ್ಕೆ ಕಂಟಕವಾಗುತ್ತಿರುವ ಬೆನ್ನಲ್ಲೇ, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೀಪಾವಳಿಯಂದು ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಹೆಚ್ಚಾಗುತ್ತದೆ ಎಂಬ ಕಳವಳಗಳನ್ನು ತಳ್ಳಿಹಾಕಿರುವ ಅವರು, ಮಾಲಿನ್ಯ ಹೆಚ್ಚಾದರೆ ಕಡಿಮೆಯಾಗುತ್ತದೆ, ಅದಕ್ಕೆ ಏಕೆ ಚಿಂತಿಸಬೇಕು ಎಂದು ಪ್ರಶ್ನಿಸಿದ್ದಾರೆ. ಹಬ್ಬದ ಆಚರಣೆಗೆ ಪಟಾಕಿ ಸಿಡಿಸುವುದು ತಪ್ಪಲ್ಲ ಎಂಬ ನಿಲುವು ವ್ಯಕ್ತಪಡಿಸಿರುವ ಅವರು, ಮಾಲಿನ್ಯದ ಬಗ್ಗೆ ಮಾತನಾಡುವವರು ಭ್ರಷ್ಟಾಚಾರದ ಮೂಲಕ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸಿದವರ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಪರಿಸರ ಮಾಲಿನ್ಯದ ಚರ್ಚೆಯನ್ನು ರಾಜಕೀಯ ಆರೋಪ-ಪ್ರತ್ಯಾರೋಪಗಳತ್ತ ತಿರುಗಿಸಿದ್ದಾರೆ.

ನವೆಂಬರ್ 11ರಂದು ಲಕ್ನೋದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಜನರು ಈ ಬಾರಿಯ ದೀಪಾವಳಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಪಟಾಕಿ ಸಿಡಿಸುವುದಕ್ಕೆ ತಮ್ಮ ಸರ್ಕಾರ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಮೊದಲೇ ಹೇಳಿತ್ತು. ಅದರಂತೆ ಜನರು ಪಟಾಕಿ ಸಿಡಿಸಿ ಹಬ್ಬ ಆಚರಿಸಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂಬರ್ಥದಲ್ಲಿ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಹೆಚ್ಚಾಗುತ್ತದೆ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಮಾಲಿನ್ಯ ಹೆಚ್ಚಾದರೆ ಮತ್ತೆ ಕಡಿಮೆಯಾಗುತ್ತದೆ. ಅದಕ್ಕಾಗಿ ಇಷ್ಟೊಂದು ಆತಂಕಪಡುವ ಅಗತ್ಯವೇನು ಎಂದು ಹೇಳಿದ್ದಾರೆ.

“ಕೆಲವರು ದೀಪಾವಳಿಯಿಂದಾಗಿ ಮಾಲಿನ್ಯ ಹೆಚ್ಚಾಗಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಹೆಚ್ಚಾದರೆ ಏನು? ಅದು ಕೂಡ ಕಡಿಮೆಯಾಗುತ್ತದೆ. ನೀವು ಯಾಕೆ ಚಿಂತಿಸುತ್ತಿದ್ದೀರಿ?” ಎಂದು ಅವರು ಪ್ರಶ್ನಿಸಿರುವುದಾಗಿ ವರದಿಯಾಗಿದೆ.

ಅಯೋಧ್ಯೆಯಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿಯೂ ತಾವು ಭಾಗವಹಿಸಿದ್ದಾಗಿ ಹೇಳಿರುವ ಯೋಗಿ, ಜನರು ಪಟಾಕಿ ಸಿಡಿಸಿ ಸಂಭ್ರಮದಿಂದ ಹಬ್ಬ ಆಚರಿಸುವ ಮೂಲಕ ಸರಿಯಾದ ಕೆಲಸವನ್ನೇ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಗೋವರ್ಧನ ಪೂಜೆ, ಭಾಯಿ ದೂಜ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಹಬ್ಬದ ಆಚರಣೆಗಳನ್ನು ಉಲ್ಲೇಖಿಸಿದ ಅವರು, ಉತ್ತರ ಪ್ರದೇಶದಲ್ಲಿ ಈಗ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಮಾಲಿನ್ಯದ ವಿಚಾರದಲ್ಲಿ ಟೀಕೆ ಮಾಡುವವರು ಭ್ರಷ್ಟಾಚಾರದ ವಿರುದ್ಧ ಮಾತನಾಡುವುದಿಲ್ಲ ಎಂಬುದು ಯೋಗಿ ಆದಿತ್ಯನಾಥ್ ಅವರ ಮತ್ತೊಂದು ಪ್ರಮುಖ ಆರೋಪವಾಗಿದೆ. “ಏನಾದರೂ ತಪ್ಪು ನಡೆದಾಗ ಈ ಜನರು ಮಾತನಾಡುವುದಿಲ್ಲ. ಆದರೆ ಜನರು ಹಬ್ಬ ಆಚರಿಸಿದಾಗ ಮಾತ್ರ ಅವರಿಗೆ ಇದ್ದಕ್ಕಿದ್ದಂತೆ ಮಾಲಿನ್ಯದ ನೆನಪಾಗುತ್ತದೆ” ಎಂದು ಅವರು ಟೀಕಿಸಿದ್ದಾರೆ. ಈ ಮೂಲಕ ಪಟಾಕಿ ಸಿಡಿಸುವುದರಿಂದ ಉಂಟಾಗುವ ಮಾಲಿನ್ಯದ ಬಗ್ಗೆ ಪರಿಸರ ಕಾಳಜಿಯಿಂದ ಪ್ರಶ್ನೆ ಎತ್ತುವವರನ್ನೇ ರಾಜಕೀಯವಾಗಿ ಗುರಿಯಾಗಿಸಿಕೊಂಡಿದ್ದಾರೆ.

ಆದರೆ, ದೇಶದ ನಗರಗಳಲ್ಲಿ ವಾಯುಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳನ್ನು ಗಮನಿಸಿದರೆ, ‘ಮಾಲಿನ್ಯ ಹೆಚ್ಚಾದರೆ ಕಡಿಮೆಯಾಗುತ್ತದೆ’ ಎಂಬ ಸರಳೀಕೃತ ಸಮರ್ಥನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ವಾಯುಮಾಲಿನ್ಯವೆಂಬುದು ಕೆಲವು ದಿನಗಳವರೆಗೆ ಕಾಣಿಸಿಕೊಂಡು ನಂತರ ತಾನಾಗಿಯೇ ಮಾಯವಾಗುವ ಸಮಸ್ಯೆಯಲ್ಲ. ವಾಹನಗಳ ಹೊಗೆ, ಕೈಗಾರಿಕೆಗಳ ಹೊರಸೂಸುವಿಕೆ, ಕಲ್ಲಿದ್ದಲು ಮತ್ತು ಇತರ ಇಂಧನಗಳ ದಹನ, ನಿರ್ಮಾಣ ಕಾಮಗಾರಿಗಳ ಧೂಳು, ತ್ಯಾಜ್ಯ ಸುಡುವಿಕೆ ಹಾಗೂ ಪಟಾಕಿಗಳಿಂದ ಹೊರಬರುವ ಹೊಗೆ ಸೇರಿದಂತೆ ಹಲವು ಮೂಲಗಳು ವಾಯುಮಾಲಿನ್ಯಕ್ಕೆ ಕಾರಣವಾಗುತ್ತವೆ. ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳಿಂದ ಹೊರಬರುವ ಹೊಗೆ ಮತ್ತು ಸೂಕ್ಷ್ಮ ಕಣಗಳು ಈಗಾಗಲೇ ಕಲುಷಿತವಾಗಿರುವ ಗಾಳಿಯ ಗುಣಮಟ್ಟವನ್ನು ಮತ್ತಷ್ಟು ಹದಗೆಡಿಸಬಹುದು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಾಯುಮಾಲಿನ್ಯ ಜಾಗತಿಕ ಮಟ್ಟದಲ್ಲಿ ಅತ್ಯಂತ ಗಂಭೀರ ಸಾರ್ವಜನಿಕ ಆರೋಗ್ಯ ಬೆದರಿಕೆಗಳಲ್ಲಿ ಒಂದಾಗಿದೆ. ಕಲುಷಿತ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ಶ್ವಾಸಕೋಶದ ಆಳದವರೆಗೆ ಪ್ರವೇಶಿಸಿ, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್, ದೀರ್ಘಕಾಲದ ಉಸಿರಾಟದ ಕಾಯಿಲೆಗಳು ಮತ್ತು ಶ್ವಾಸಕೋಶದ ಸೋಂಕುಗಳಿಗೆ ಕಾರಣವಾಗಬಹುದು. ಮಕ್ಕಳು, ಗರ್ಭಿಣಿಯರು, ವೃದ್ಧರು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಇದರ ಪರಿಣಾಮಗಳಿಗೆ ಹೆಚ್ಚು ತುತ್ತಾಗುವ ಅಪಾಯವಿದೆ.

‘ಸ್ಟೇಟ್ ಆಫ್ ಗ್ಲೋಬಲ್ ಏರ್ 2025’ ವರದಿಯ ಪ್ರಕಾರ, 2023ರಲ್ಲಿ ಭಾರತದಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಕಾರಣಗಳಿಂದ 20 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ. ಇದೇ ವರದಿಯ ಪ್ರಕಾರ ಜಾಗತಿಕವಾಗಿ ವಾಯುಮಾಲಿನ್ಯದಿಂದ ಸುಮಾರು 79 ಲಕ್ಷ ಸಾವುಗಳು ಸಂಭವಿಸಿವೆ. ಅಂದರೆ, ವಾಯುಮಾಲಿನ್ಯವು ಕೇವಲ ಪರಿಸರದ ಸಮಸ್ಯೆಯಲ್ಲ, ಲಕ್ಷಾಂತರ ಜನರ ಜೀವವನ್ನು ಬಲಿಪಡೆಯುತ್ತಿರುವ ಗಂಭೀರ ಆರೋಗ್ಯ ಬಿಕ್ಕಟ್ಟಾಗಿದೆ.

ವಿಶೇಷವಾಗಿ ಪಿಎಂ2.5 ಎಂದು ಕರೆಯಲಾಗುವ ಅತ್ಯಂತ ಸೂಕ್ಷ್ಮ ಧೂಳಿನ ಕಣಗಳು ಆತಂಕಕಾರಿ. ಇವುಗಳ ಗಾತ್ರ ಅತಿ ಚಿಕ್ಕದಾಗಿರುವುದರಿಂದ ಉಸಿರಾಟದ ಮೂಲಕ ಶ್ವಾಸಕೋಶದ ಆಳಕ್ಕೆ ತಲುಪಬಹುದು. ದೀರ್ಘಕಾಲ ಇಂತಹ ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಹೃದಯ ಕಾಯಿಲೆ, ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್, ಮಧುಮೇಹ ಸೇರಿದಂತೆ ಹಲವು ಗಂಭೀರ ಕಾಯಿಲೆಗಳ ಅಪಾಯ ಹೆಚ್ಚುತ್ತದೆ ಎಂದು ಆರೋಗ್ಯ ಸಂಶೋಧನೆಗಳು ಎಚ್ಚರಿಸಿವೆ.

ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸಲಹೆಯಲ್ಲಿಯೂ ಪಟಾಕಿಗಳ ದಹನವನ್ನು ಹೊರಾಂಗಣ ವಾಯುಮಾಲಿನ್ಯದ ಮೂಲಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಪಟಾಕಿಗಳಿಂದ ಹೊರಬರುವ ಹೊಗೆ, ಧೂಳು ಮತ್ತು ಇತರ ಮಾಲಿನ್ಯಕಾರಕಗಳು ಈಗಾಗಲೇ ಕಲುಷಿತವಾಗಿರುವ ವಾತಾವರಣದ ಮೇಲೆ ಮತ್ತಷ್ಟು ಒತ್ತಡ ಉಂಟುಮಾಡುತ್ತವೆ. ಹೀಗಿರುವಾಗ ಹಬ್ಬದ ಆಚರಣೆಯ ಹೆಸರಿನಲ್ಲಿ ಮಾಲಿನ್ಯದ ಪರಿಣಾಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ.

2017ಕ್ಕೂ ಹಿಂದಿನ ಪರಿಸ್ಥಿತಿಯೊಂದಿಗೆ ಹೋಲಿಕೆ

ಇದೇ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು 2017ಕ್ಕೂ ಹಿಂದಿನ ಅವಧಿಯೊಂದಿಗೆ ಹೋಲಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಹೋಳಿ, ದೀಪಾವಳಿ, ವಿಜಯದಶಮಿ, ಜನ್ಮಾಷ್ಟಮಿ, ಶಿವರಾತ್ರಿ, ಕ್ರಿಸ್‌ಮಸ್, ಈದ್, ಗುರುಪರ್ವ ಮತ್ತು ಮಕರ ಸಂಕ್ರಾಂತಿಯಂತಹ ಹಬ್ಬಗಳ ಸಂದರ್ಭದಲ್ಲಿ ಕೋಮು ಉದ್ವಿಗ್ನತೆ ಹಾಗೂ ಗಲಭೆಗಳು ನಡೆಯುತ್ತಿದ್ದವು ಎಂದು ಆರೋಪಿಸಿದ್ದಾರೆ.

ಆ ಅವಧಿಯಲ್ಲಿ ಕರ್ಫ್ಯೂ ವಿಧಿಸಲಾಗುತ್ತಿತ್ತು. ಇದರಿಂದ ವ್ಯಾಪಾರಿಗಳು, ಅಂಗಡಿಕಾರರು ಮತ್ತು ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದರು. ಮಾರುಕಟ್ಟೆಗಳು ಮುಚ್ಚಲ್ಪಡುತ್ತಿದ್ದವು, ವ್ಯಾಪಾರಕ್ಕಾಗಿ ತರಿಸಲಾಗಿದ್ದ ಸರಕುಗಳು ಮಾರಾಟವಾಗದೆ ಹಾಳಾಗುತ್ತಿದ್ದವು ಎಂದು ಅವರು ಹೇಳಿದ್ದಾರೆ. ಆದರೆ ಕಳೆದ ಒಂಬತ್ತೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಕರ್ಫ್ಯೂ ಮತ್ತು ಗಲಭೆಗಳಿಲ್ಲದೆ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದೆ ಎಂದು ತಮ್ಮ ಸರ್ಕಾರದ ಆಡಳಿತವನ್ನು ಸಮರ್ಥಿಸಿಕೊಂಡಿದ್ದಾರೆ.

“ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಕರ್ಫ್ಯೂ ಇಲ್ಲ, ಗಲಭೆಯೂ ಇಲ್ಲ. ಕರ್ಫ್ಯೂ ಇಲ್ಲ, ಗಲಭೆ ಇಲ್ಲ ಮತ್ತು ರಾಜ್ಯದಲ್ಲಿ ಎಲ್ಲವೂ ಅಭಿವೃದ್ಧಿ ಹೊಂದುತ್ತಿದೆ” ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಭಾಯಿ ದೂಜ್ ಹಬ್ಬದಂದು ತಮ್ಮ ಸಹೋದರರನ್ನು ಭೇಟಿ ಮಾಡಲು ಪ್ರಯಾಣಿಸುವ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನೂ ಪ್ರಸ್ತಾಪಿಸಿದ್ದಾರೆ.

ಈ ಸರ್ಕಾರಿ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಹೊಸದಾಗಿ ಆಯ್ಕೆಯಾದ 1,146 ಕಿರಿಯ ಸಹಾಯಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಮುಖ್ಯಮಂತ್ರಿ ಕೃಷಕ್ ದುರ್ಘಟನಾ ಕಲ್ಯಾಣ ಯೋಜನೆಯಡಿ 4,300 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನಡೆಯಿತು.

ಆದರೆ, ಯೋಗಿ ಆದಿತ್ಯನಾಥ್ ಅವರ ಭಾಷಣದ ಪ್ರಮುಖ ಚರ್ಚೆಯ ವಿಷಯವಾಗಿರುವುದು ಪಟಾಕಿ ಸಿಡಿಸುವುದನ್ನು ಅವರು ಬಹಿರಂಗವಾಗಿ ಸಮರ್ಥಿಸಿಕೊಂಡಿರುವುದು ಮತ್ತು ಮಾಲಿನ್ಯದ ಬಗ್ಗೆ ವ್ಯಕ್ತವಾಗುತ್ತಿರುವ ಆತಂಕಗಳನ್ನು ಲಘುವಾಗಿ ಪರಿಗಣಿಸಿರುವುದು. ಹಬ್ಬಗಳ ಆಚರಣೆ ಮತ್ತು ಸಾಂಸ್ಕೃತಿಕ ಸಂಭ್ರಮಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವ ಅಗತ್ಯವಿಲ್ಲ. ಆದರೆ ಅದೇ ಸಂದರ್ಭದಲ್ಲಿ ಜನರ ಆರೋಗ್ಯ ಮತ್ತು ಜೀವಕ್ಕೆ ಅಪಾಯ ತಂದೊಡ್ಡುವ ಮಾಲಿನ್ಯದ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸುವ ಜವಾಬ್ದಾರಿ ಸರ್ಕಾರಗಳ ಮೇಲಿದೆ. ಮಾಲಿನ್ಯ ಹೆಚ್ಚಾದರೆ ಕಡಿಮೆಯಾಗುತ್ತದೆ ಎಂಬ ಹೇಳಿಕೆಗಿಂತ, ಮಾಲಿನ್ಯ ಹೆಚ್ಚಾಗದಂತೆ ತಡೆಯಲು ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರ ನೀಡಬೇಕಾದ ಹೊಣೆಗಾರಿಕೆ ಆಡಳಿತದಲ್ಲಿರುವವರ ಮೇಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಗ್ಯಾನೇಶ್ ಕುಮಾರ್ 2 ಕೋಟಿ ರೂ. ಲಂಚ ಕೇಳಿದ್ದರು’: ಹೇಳಿಕೆ ದಾಖಲಿಸಿಕೊಂಡ ಕೇರಳ ವಿಜಿಲೆನ್ಸ್-ವರದಿ

ಕೇರಳದ ಭ್ರಷ್ಟಾಚಾರ ನಿಗ್ರಹ ಮತ್ತು ವಿಜಿಲೆನ್ಸ್ ಬ್ಯೂರೋ (ವಿಎಸಿಬಿ) ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಕೇಳಿಬಂದಿರುವ ಲಂಚದ ಆರೋಪಗಳ ಕುರಿತು ಪ್ರಾಥಮಿಕ ತನಿಖೆಯನ್ನು ಆರಂಭಿಸಿದೆ. 2006ರಲ್ಲಿ ಗ್ಯಾನೇಶ್ ಕುಮಾರ್...

ತಮಿಳುನಾಡು ಮತದಾರರ ಪಟ್ಟಿಯಿಂದ 74 ಲಕ್ಷಕ್ಕೂ ಹೆಚ್ಚು ಮತದಾರರು ನಾಪತ್ತೆ : ನ.26ರಂದು ಬೃಹತ್ ಪ್ರತಿಭಟನೆ

ತಮಿಳುನಾಡಿನ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಒಟ್ಟು 74.07 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಯಂಗ್ ಸಿಟಿಝನ್ಸ್ ಕಲೆಕ್ಟಿವ್ (ಐವೈಸಿಸಿ) ಗಂಭೀರ ಆರೋಪ ಮಾಡಿದ್ದು, ಈ ಹೆಸರುಗಳ...

ವಾಯುಮಾಲಿನ್ಯದಿಂದ ಜನರ ಜೀವಕ್ಕೆ ಕುತ್ತು: ‘ಭಾರತೀಯರು ಅನಾಥರಾಗಿ ಗ್ಯಾಸ್ ಚೇಂಬರ್‌ನಲ್ಲಿ ಸಿಲುಕಿದ್ದಾರೆ’; ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಎನ್‌ಜಿಟಿಗೆ ಮನವಿ

ನವದೆಹಲಿ: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದ್ದು, ಜನರು ಉಸಿರಾಡುವುದೇ ಜೀವಕ್ಕೆ ಅಪಾಯಕಾರಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಕಾರಿ ಗಾಳಿಯ ನಡುವೆ ಬದುಕುತ್ತಿರುವ ಜನರ ಆರೋಗ್ಯ ಮತ್ತು...

2024ರ ಚುನಾವಣೆಗಳು : 51 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳೊಂದಿಗೆ ಹೊಂದಾಣಿಕೆಯಾಗದ ಎಣಿಕೆ ಮತಗಳ ಸಂಖ್ಯೆ- ವರದಿ

2024ರ ಚುನಾವಣೆಗಳ ಸಂದರ್ಭದಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ 51 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳ ಸಂಖ್ಯೆ ಹಾಗೂ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (ಇವಿಎಂ) ಎಣಿಕೆಯಾದ ಮತಗಳ ಸಂಖ್ಯೆಯ ನಡುವೆ ವ್ಯತ್ಯಾಸಗಳಿರುವುದನ್ನು ಚುನಾವಣಾ...

“ರೈತರು 3 ತಿಂಗಳು ದುಡಿದು, 9 ತಿಂಗಳು ಮದ್ಯ ಕುಡಿದು-ಜೂಜಾಟದಲ್ಲಿ ಮುಳುಗಿರುತ್ತಾರೆ”: ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ ವಿವಾದಿತ ಹೇಳಿಕೆ!

ತಮ್ಮ ಅಸಂಸದೀಯ ಹಾಗೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಪದೇಪದೇ ಸುದ್ದಿಯಾಗುವ ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ, ದೇಶದ ಅನ್ನದಾತರ ವಿರುದ್ಧ ನಾಲಿಗೆ ಹರಿಬಿಟ್ಟು ಮತ್ತೆ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ....

ತಪ್ಪದ ದೋಷಾರೋಪ ಭೀತಿ : ಎರಡು ಯುದ್ಧಗಳ ದಾಳ ಉರುಳಿಸಿದರೂ ಹೆಗ್ಸೆತ್‌ ರಕ್ಷಿಸಲು ಟ್ರಂಪ್‌ ವಿಫಲ

'ಎರಡು ಯುದ್ಧಗಳನ್ನು ಗೆದ್ದಿದ್ದಾರೆ' ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾದವು, ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ವಿರುದ್ಧ ತೀವ್ರಗೊಳ್ಳುತ್ತಿರುವ ದೋಷಾರೋಪ ಪ್ರಕ್ರಿಯೆಯ ಒತ್ತಡವನ್ನು ಕಡಿಮೆ ಮಾಡುವಲ್ಲಿ ವಿಫಲವಾಗಿದೆ ಎಂದು ವರದಿಯಾಗಿದೆ....

ಶಿವಮೊಗ್ಗ: ರೈಲು ಶೌಚಾಲಯದಲ್ಲಿ ನೀರಿಲ್ಲದೆ ಪರದಾಡಿದ್ದ ಕುಟುಂಬ, ಇಬ್ಬರು ಸ್ಟೇಷನ್ ಮಾಸ್ಟರ್‌ಗಳಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ!

ರೈಲಿನ ಶೌಚಾಲಯಗಳಲ್ಲಿ ನೀರಿನ ಸೌಲಭ್ಯವಿಲ್ಲದೆ ಪ್ರಯಾಣಿಕರು ಅರ್ಧದಲ್ಲೇ ಪ್ರಯಾಣ ಮೊಟಕುಗೊಳಿಸಿದ ಘಟನೆಯನ್ನು 'ಸೇವೆಯಲ್ಲಾದ ನ್ಯೂನತೆ' ಎಂದು ಪರಿಗಣಿಸಿರುವ ಶಿವಮೊಗ್ಗ ಜಿಲ್ಲಾ ಗ್ರಾಹಕರ ಆಯೋಗವು ರೈಲ್ವೆ ಇಲಾಖೆಗೆ ದಂಡ ವಿಧಿಸಿದೆ. ಯಶವಂತಪುರ ಮತ್ತು ತುಮಕೂರು...

ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶಕ್ಕೆ ಮರಳಿದರೆ ಗಲ್ಲಿಗೇರಿಸುವುದು ಖಚಿತ: ಪ್ರಾಸಿಕ್ಯೂಟರ್ ಎಚ್ಚರಿಕೆ; ಮೇಲ್ಮನವಿಗೂ ಅವಕಾಶ ಮುಕ್ತಾಯ

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ದೇಶಕ್ಕೆ ಮರಳಿದರೆ ಮರಣದಂಡನೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಸ್ವಯಂ ದೇಶಭ್ರಷ್ಟರಾಗಿ ನೆಲೆಸಿರುವ ಹಸೀನಾ ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವ...

ವಯನಾಡ್‌: ಹಿಂದೂ ವೃದ್ದೆಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಸಹೋದರರು

ಧಾರ್ಮಿಕ ಗಡಿಗಳನ್ನು ಮೀರಿ, ಕೇರಳದ ಬೆಟ್ಟ ಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಸಹೋದರರು, ತಾವು ಸುಮಾರು ಐದು ದಶಕಗಳ ಕಾಲ ತಾಯಿಯಂತೆ ಪ್ರೀತಿಸಿ ಆರೈಕೆ ಮಾಡಿದ್ದ 85 ವರ್ಷದ ಹಿಂದೂ ಮಹಿಳೆಯೊಬ್ಬರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಮುಪ್ಪೈನಾದ್...

ಆರು ವರ್ಷಗಳ ಜೈಲು ವಾಸದ ಬಳಿಕ ಇಬ್ಬರು ಮುಸ್ಲಿಂ ಯುವಕರು ಖುಲಾಸೆ: ಯುಎಪಿಎ ಪ್ರಕರಣದಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದ ಕೋರ್ಟ್

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಬಂಧಿತರಾಗಿ ಆರು ವರ್ಷಗಳಿಂದ ಜೈಲಿನಲ್ಲಿ ನರಳುತ್ತಿದ್ದ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಇಬ್ಬರು ಯುವಕರನ್ನು ವಿಶೇಷ ನ್ಯಾಯಾಲಯ 2026ರ ನವೆಂಬರ್ 5ರಂದು ದೋಷಮುಕ್ತಗೊಳಿಸಿದೆ ಎಂದು...