ಶಾಲಾ ಮಕ್ಕಳ ಮುಂದೆ ರಾಜಕೀಯ ದ್ವೇಷ ಭಾಷಣ ಮಾಡಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ (ನ.16) ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಹರೀಶ್ ಪೂಂಜಾ ಭಾಷಣಕ್ಕೆ ಸಂಬಂಧಪಟ್ಟಂತೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಈಗಾಗಲೇ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಯ ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹರೀಶ್ ಪೂಂಜಾ, ಕಾಂಗ್ರೆಸ್ ಪಕ್ಷದ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿರುವುದಲ್ಲದೆ, ದ್ವೇಷದ ಭಾಷಣ ಮಾಡಿರುವ ಬಗ್ಗೆ ವರದಿಯಾಗಿದೆ.
ಹರೀಶ್ ಪೂಂಜಾ ವಿರುದ್ದ ವಾಗ್ದಾಳಿ ನಡೆಸಿದ ಸಚಿವ ಮಧು ಬಂಗಾರಪ್ಪ, “ಒಬ್ಬ ಜನಪ್ರತಿನಿಧಿಯಾಗಿ ಜನರ ಮುಂದೆ ಯಾವ ರೀತಿ ಮಾತನಾಡಬೇಕು ಎಂಬ ಪರಿಜ್ಞಾನ ಇಲ್ಲದ್ದಿದ್ದರೆ ಇಂತಹ ದರಿದ್ರ ಮಾತುಗಳು ಬರುವುದು ಸಹಜ. ದರಿದ್ರ ಯಾರಿಗೆ ಹಿಡಿದಿದೆ ಎನ್ನುವುದನ್ನು ಸಾರ್ವಜನಿಕರು ನೋಡ್ತಿದ್ದಾರೆ. ನಾವು ಹೀಗೆ ಕೂರುವುದಕ್ಕೆ ಆಗುವುದಿಲ್ಲ. ಆ ಕಡೆ ಭಾಗದಲ್ಲಿ (ಕರಾವಳಿ ಭಾಗ) ಇವರು ಇದೇ ಕೆಲಸ ಮಾಡುವುದು. ಹೋಗೋದು, ಮಕ್ಕಳಿಗೆ ಕೆಟ್ಟ ಕೆಟ್ಟ ರೀತಿಯಲ್ಲಿ ಹೇಳಿಕೊಡುವುದನ್ನು ಮಾಡ್ತಿದ್ದಾರೆ” ಎಂದು ಹೇಳಿದ್ದಾರೆ.
ಮುಂದುವರಿದು, ಶಾಲೆಯಲ್ಲಿ ಮಕ್ಕಳಿಗೆ ಯಾವುದು ಅವಶ್ಯಕತೆ ಇದೆಯೋ ಅದನ್ನು ಮಾತ್ರ ಹೇಳಿಕೊಡಬೇಕು. ಶಾಲೆಗಳಲ್ಲಿ ಈ ರೀತಿ ಮಾತನಾಡುವುದಕ್ಕೆ ಬಿಡುವುದಿಲ್ಲ. ನನಗೆ ನಿನ್ನೆ ಸಾಯಂಕಾಲ ವಿಷಯ ಗೊತ್ತಾಯ್ತು. ಇದಕ್ಕೆ ಕಾನೂನು ಮುಖಾಂತರ ಏನೇನು ಮಾಡಬೇಕು ಎನ್ನುವುದರ ಬಗ್ಗೆ ನಾನು ಇವತ್ತು ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
ರಾಜಕಾರಣವನ್ನು ರಾಜಕೀಯ ವೇದಿಕೆಯಲ್ಲಿ ಇಟ್ಟುಕೊಳ್ಳಬೇಕು. ಕಂಡ ಕಂಡಲ್ಲಿ ಮಾಡಬಾರದು. ಹರೀಶ್ ಪೂಂಜಾ ಅವರು ಮಕ್ಕಳನ್ನು ನಾವು ಯಾವ ರೀತಿ ಬೇಕಾದ್ರು ಬಳಸಿಕೊಳ್ಳಬಹುದು ಅಂದುಕೊಂಡಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಹರೀಶ್ ಪೂಂಜಾ ಭಾಷಣದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಇವರು (ಬಿಜೆಪಿಗರು) ದೇವರನ್ನು ರಾಜಕಾರಣಕ್ಕೆ ಬಳಸಿಕೊಂಡಿದ್ದಾರೆ. ಈಗ ದೇವಸ್ಥಾನದಲ್ಲಿರುವ ಮಕ್ಕಳನ್ನೂ ಬಳಸಿಕೊಳ್ಳುತ್ತಿದ್ದಾರೆ. ನನ್ನ ಇಲಾಖೆಯಲ್ಲಿ ಇಂತದ್ದಕ್ಕೆ ಅವಕಾಶ ನೀಡುವುದಿಲ್ಲ. ನಾನು ಅವರ ಮಾತನನ್ನು ಖಂಡಿಸುತ್ತೇನೆ. ಅವರು ಕ್ಷಮೆ ಕೇಳಿದರೂ, ಕೇಳದಿದ್ದರೂ ಕಾನೂಬದ್ದವಾಗಿ ಏನು ಕ್ರಮ ಕೈಗೊಳ್ಳಬೇಕೋ, ಅದನ್ನು ಮಾಡುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.


