ಕಿಶ್ತ್ವಾರ್ನಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (ಎಸ್ಪಿಒ) ಹತ್ಯೆಯ ಕುರಿತು ಹಲವು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ, ಈ ಘಟನೆಯನ್ನು ಮಸೀದಿ ಘೋಷಣೆಗಳೊಂದಿಗೆ ತಳುಕು ಹಾಕುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಯತ್ನಕ್ಕೆ ಸ್ಥಳೀಯ ಮುಸ್ಲಿಂ ಪ್ರತಿನಿಧಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮತ್ತೊಂದೆಡೆ, ಈ ಘಟನೆಯಲ್ಲಿ ಸೇನೆಯಿಂದ ಗುರುತು ತಪ್ಪುವಿಕೆಯ (ಮಿಸ್ಟೇಕನ್ ಐಡೆಂಟಿಟಿ) ಸಾಧ್ಯತೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ನವೆಂಬರ್ 11ರಂದು ನಾಪತ್ತೆಯಾಗಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ ಗುಂಡೇಟಿನಿಂದ ಛಿದ್ರಗೊಂಡ ಮೃತದೇಹಗಳು ಮರುದಿನ, ಅಂದರೆ ನವೆಂಬರ್ 12ರಂದು ಪತ್ತೆಯಾಗಿದ್ದವು. ಇದೀಗ, ಈ ಹತ್ಯೆಗಳಿಗೂ ಸ್ಥಳೀಯ ಮಸೀದಿಗೂ ಸಂಬಂಧವಿದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ನಾಯಕಿ ಹಾಗೂ ಕಿಶ್ತ್ವಾರ್ ಶಾಸಕಿ ಶಗುನ್ ಪರಿಹಾರ್ ಅವರು ಸ್ಥಳೀಯ ಸಮುದಾಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಕಿಶ್ತ್ವಾರ್ ನಿವಾಸಿ ಎಸ್ಪಿಒಗಳಾದ ಬಾಬಿ ಚಂದ್ (57) ಮತ್ತು ರಶ್ಪಾಲ್ ಕುಮಾರ್ (45) ಅವರ ಮೃತದೇಹಗಳು ದಚ್ಚನ್ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇಂದರ್ವಾಲ್ನ ಬಸ್ನಾನ್ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ರಾಷ್ಟ್ರೀಯ ರೈಫಲ್ಸ್ನ 17ನೇ ಬೆಟಾಲಿಯನ್ನ ತಾತ್ಕಾಲಿಕ ಕಾರ್ಯಾಚರಣೆ ನೆಲೆಯಲ್ಲಿದ್ದ ಸಿಬ್ಬಂದಿಗೆ ಬದಲಿಯಾಗಿ, ಧರ್ನಾ-ಮರ್ವಾಹ್ನಲ್ಲಿರುವ ಸೇನಾ ನೆಲೆಗೆ ತೆರಳಲು ಅವರಿಬ್ಬರು ಕಿಯಾರ್ ಶಿಬಿರದಿಂದ ಹೊರಟಿದ್ದರು. ಈ ಹತ್ಯೆಗಳು ಭದ್ರತಾ ಪರಿಸ್ಥಿತಿಯ ಬಗ್ಗೆ ಹಲವು ಪ್ರಶ್ನೆಗಳು ಮತ್ತು ತೀವ್ರ ಕಳವಳಕ್ಕೆ ಕಾರಣವಾಗಿವೆ.
ಮೃತ ಯೋಧರಿಗೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶ್ತ್ವಾರ್ ಶಾಸಕಿ ಪರಿಹಾರ್, ಹತ್ಯೆಗೂ ಮುನ್ನ ಮಸೀದಿಯಿಂದ ಘೋಷಣೆಗಳನ್ನು ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದವರನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ. “ಈ ಕೃತ್ಯದಲ್ಲಿ ಭಾಗಿಯಾದವರನ್ನು ಇನ್ನೂ ಏಕೆ ಬಂಧಿಸಿಲ್ಲ? ಮಸೀದಿಯಿಂದ ಘೋಷಣೆಗಳನ್ನು ಮಾಡಲಾಗಿತ್ತು. ಇಲ್ಲಿಂದಲೇ ಯಾರೋ ಮಾಹಿತಿ ರವಾನಿಸುತ್ತಿರಬೇಕು ಮತ್ತು ಗುಪ್ತಚರ ಮಾಹಿತಿಯನ್ನು ಸೋರಿಕೆ ಮಾಡುತ್ತಿರಬೇಕು. ನಮ್ಮ ಜನರನ್ನು ಆಯ್ದು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಯಾವ ಮಸೀದಿಯಿಂದ ಈ ಘೋಷಣೆ ಮಾಡಲಾಯಿತು ಅಥವಾ ಆ ಘೋಷಣೆ ಏನಾಗಿತ್ತು ಎಂಬುದನ್ನು ಪರಿಹಾರ್ ಅವರು ಸ್ಪಷ್ಟಪಡಿಸಿಲ್ಲ. ಅಲ್ಲದೆ, ತಮ್ಮ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳನ್ನೂ ಅವರು ಒದಗಿಸಿಲ್ಲ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಪರಿಹಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಅವರು ಕರೆಗಳನ್ನು ಸ್ವೀಕರಿಸಿಲ್ಲ. ಅವರ ವಾಟ್ಸಾಪ್ಗೆ ಕಳುಹಿಸಲಾದ ಸಂದೇಶಗಳಿಗೆ ಪ್ರತಿಕ್ರಿಯೆ ಬಂದಲ್ಲಿ ವರದಿಯನ್ನು ನವೀಕರಿಸಲಾಗುವುದು. ಪ್ರತಿಕ್ರಿಯೆಗಾಗಿ ಕಿಶ್ತ್ವಾರ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸನ್ನಿ ಗುಪ್ತಾ ಅವರನ್ನೂ ಸಂಪರ್ಕಿಸಲಾಗಿದೆ. ಅವರು ಪ್ರತಿಕ್ರಿಯಿಸಿದರೆ ಸುದ್ದಿಯನ್ನು ನವೀಕರಿಸಲಾಗುವುದು ಎಂದು ದಿ ವೈರ್ ಹೇಳಿದೆ.
ಪರಿಹಾರ್ ಅವರ ಹೇಳಿಕೆಗಳು ಸ್ಥಳೀಯ ಮುಸ್ಲಿಂ ಸಮುದಾಯದ ಒಂದು ವರ್ಗದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಆಧಾರರಹಿತ ಆರೋಪಗಳು ಚೆನಾಬ್ ಕಣಿವೆಯಲ್ಲಿನ ಸೂಕ್ಷ್ಮ ಕೋಮು ಸೌಹಾರ್ದತೆಗೆ ಧಕ್ಕೆ ತರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ದಿ ವೈರ್ ಜೊತೆ ಮಾತನಾಡಿರುವ ಕಿಶ್ತ್ವಾರ್ನ ಸಾಮಾಜಿಕ ಕಾರ್ಯಕರ್ತ ಬುರ್ಹಾನ್ ದಾರ್ ಅವರು, ಜನಪ್ರತಿನಿಧಿಗಳು ತಮ್ಮ ಪದಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು ಎಂದು ಹೇಳಿದ್ದಾರೆ. “ನಾವು ಈ ಪ್ರದೇಶದಲ್ಲಿ ಕೋಮು ಸೌಹಾರ್ದತೆಗಾಗಿ ಯಾವಾಗಲೂ ಶ್ರಮಿಸಿದ್ದೇವೆ. ಮುಸ್ಲಿಮರು ನಮ್ಮ ಹಿಂದೂ ಸಹೋದರರನ್ನು ಗುರಿಯಾಗಿಸಿದ ಅಥವಾ ಅವರ ವಿರುದ್ಧ ಅಸಭ್ಯ ಭಾಷೆ ಬಳಸಿದ ಒಂದೇ ಒಂದು ಉದಾಹರಣೆಯನ್ನು ತೋರಿಸಿ ನೋಡೋಣ? ಎಲ್ಲಾ ಧರ್ಮದ ಜನರನ್ನು ಪ್ರತಿನಿಧಿಸಲು ಜನಾದೇಶ ಪಡೆದಿರುವವರು ಮಾತನಾಡುವಾಗ ಬಹಳ ಜಾಗರೂಕರಾಗಿರಬೇಕು. ಶಾಸಕಿಯ ಇತ್ತೀಚಿನ ಮಾತುಗಳು ಮುಸ್ಲಿಮರ ವಿರುದ್ಧ ಅವರು ಎಷ್ಟು ದ್ವೇಷ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತವೆ. ಅವರ ಪಕ್ಷದಲ್ಲಿರುವ ಮುಸ್ಲಿಮರೂ ಸಹ ಇಂತಹ ನಾಯಕರು ತಮ್ಮನ್ನು ಎಂದಿಗೂ ಸಮಾನರಾಗಿ ಕಾಣುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದಿದ್ದಾರೆ.
ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ಫಾರೂಕ್ ಅಹ್ಮದ್ ಕಿಚ್ಲೂ ಅವರ ನೇತೃತ್ವದ ‘ಇಸ್ಲಾಮಿ ಮರ್ಕಝ್-ಎ-ಮಜ್ಲಿಸ್ ಶೂರಾ ಕಿಶ್ತ್ವಾರ್’ ಸಂಘಟನೆಯು ಸಹ ಶಾಸಕಿಯ ಆರೋಪಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಅವುಗಳನ್ನು “ಆಧಾರರಹಿತ ಮತ್ತು ಜಿಲ್ಲೆಯ ಶಾಂತಿ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹವು” ಎಂದು ಬಣ್ಣಿಸಿದೆ. ಸಂಘಟನೆಯ ಸಭೆಯ ಬಳಿಕ ಮಾತನಾಡಿದ ಕಿಚ್ಲೂ ಅವರು, ಕಿಶ್ತ್ವಾರ್ ಶಾಸಕಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಕಿಶ್ತ್ವಾರ್ನ ಸೂಕ್ಷ್ಮ ಪರಿಸ್ಥಿತಿಯನ್ನು ಒತ್ತಿಹೇಳಿದ ಕಿಚ್ಲೂ ಅವರು, ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಇಂತಹ ಬೇಜವಾಬ್ದಾರಿ ಹೇಳಿಕೆಗಳು ಮತ್ತು ಆರೋಪಗಳು ಸಮುದಾಯಗಳ ನಡುವೆ ಅಪನಂಬಿಕೆಯನ್ನು ಸೃಷ್ಟಿಸಬಹುದು ಎಂದು ಹೇಳಿದ್ದಾರೆ. “ನಾವು ಪ್ರತಿಯೊಂದು ಹಿಂಸಾಚಾರದ ಕೃತ್ಯವನ್ನೂ ಯಾವಾಗಲೂ ಖಂಡಿಸುತ್ತಲೇ ಬಂದಿದ್ದೇವೆ. ಸಂತ್ರಸ್ತರು ಅಥವಾ ಅಪರಾಧಿಗಳು ಯಾರೇ ಆಗಿರಲಿ, ನಾವು ಯಾವುದೇ ಹತ್ಯೆಯನ್ನು ಎಂದಿಗೂ ಬೆಂಬಲಿಸಿಲ್ಲ” ಎಂದು ಅವರು ತಿಳಿಸಿದ್ದಾರೆ.
“ಕಿಶ್ತ್ವಾರ್ ಶಾಸಕಿಯ ಬಳಿ ನಿಖರವಾದ ಸಾಕ್ಷ್ಯಾಧಾರಗಳಿದ್ದರೆ, ಅವರು ಆ ಮಸೀದಿ ಯಾವುದು ಮತ್ತು ಘೋಷಣೆ ಮಾಡಿದ ವ್ಯಕ್ತಿ ಯಾರು ಎಂಬುದನ್ನು ಬಹಿರಂಗಪಡಿಸಬೇಕು. ಆಡಳಿತ ಮತ್ತು ಹಲವು ಭದ್ರತಾ ಸಂಸ್ಥೆಗಳು ಈ ಬಗ್ಗೆ ತನಿಖೆ ನಡೆಸುತ್ತಿವೆ. ಹಾಗಾದರೆ, ಅಂತಹ ಘಟನೆಯ ಬಗ್ಗೆ ಅವರ್ಯಾರಿಗೂ ಯಾವುದೇ ಮಾಹಿತಿ ಇರಲಿಲ್ಲವೇ?” ಎಂದು ಕಿಚ್ಲೂ ಪ್ರಶ್ನಿಸಿದ್ದಾರೆ.
ಈ ಆರೋಪಗಳು ಪರಿಶೀಲಿಸಬಹುದಾದ ನಿಖರ ಮಾಹಿತಿಯನ್ನು ಆಧರಿಸಿವೆಯೇ ಅಥವಾ ಮುಸ್ಲಿಂ ಸಮುದಾಯದ ಮೇಲೆ ಅನುಮಾನದ ದೃಷ್ಟಿ ಬೀರಲು ಗಂಭೀರ ಭದ್ರತಾ ಘಟನೆಯೊಂದನ್ನು ಬಳಸಿಕೊಳ್ಳಲಾಗುತ್ತಿದೆಯೇ ಎಂದೂ ಸಮಿತಿಯು ಪ್ರಶ್ನಿಸಿದೆ.
ತನಿಖೆಗೆ ಕಾಂಗ್ರೆಸ್ ಆಗ್ರಹ
ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ (JKPCC) ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಅವರು ಈ ಹತ್ಯೆಗಳ ಸುತ್ತಲಿನ ಅಧಿಕೃತ ನಿರೂಪಣೆಯನ್ನು ಪ್ರಶ್ನಿಸಿದ್ದು, “ಉಗ್ರಗಾಮಿತ್ವದ ಕೋನವನ್ನೂ ಮೀರಿದ ತನಿಖೆ” ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಸಾಮಾನ್ಯವಾಗಿ ಈ ರೀತಿಯ ಹತ್ಯೆಗಳು ನಡೆದಾಗ, ಭದ್ರತಾ ಪಡೆಗಳು ಅಥವಾ ಸರ್ಕಾರ “ಇದು ಭಯೋತ್ಪಾದಕರ (ಉಗ್ರರ) ಕೃತ್ಯ” ಎಂದು ಹೇಳುತ್ತವೆ (ಇದನ್ನೇ ‘ಅಧಿಕೃತ ನಿರೂಪಣೆ’ ಎನ್ನುತ್ತಾರೆ).
ಆದರೆ, ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷರಾದ ತಾರಿಕ್ ಹಮೀದ್ ಕರ್ರಾ ಅವರು ಈ ಮಾತಿಗೆ ಅನುಮಾನ ವ್ಯಕ್ತಪಡಿಸಿದ್ದಾರೆ. “ಈ ಹತ್ಯೆಗಳನ್ನು ಕೇವಲ ಉಗ್ರರ ದಾಳಿ ಎಂದು ನೋಡದೆ, ಬೇರೆ ಯಾವುದಾದರೂ ಕಾರಣವಿರಬಹುದೇ (ಉದಾಹರಣೆಗೆ ಸೇನೆಯಿಂದಲೇ ಗುರುತು ತಪ್ಪಿ ಗುಂಡು ಹಾರಿಸಲಾಗಿದೆಯೇ) ಎಂಬ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಬೇಕು” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನವೆಂಬರ್ 11ರಂದು ಇಬ್ಬರೂ ಎಸ್ಪಿಒಗಳು ದಚ್ಚನ್ ಪ್ರದೇಶಕ್ಕೆ ಬೇಟೆಯಾಡಲು ತೆರಳಿದ್ದರು ಮತ್ತು ಮರ್ವಾಹ್ ಪ್ರವೇಶಿಸುವಾಗ ಎರಡು ಸೇನಾ ಪಿಕೆಟ್ಗಳನ್ನು ದಾಟಿದ್ದರು ಎಂದು ಕರ್ರಾ ಮಾಹಿತಿ ನೀಡಿದ್ದಾರೆ.
ಕರ್ರಾ ಅವರ ಪ್ರಕಾರ, ಅವರಿಬ್ಬರೂ ಹಿಂದಿರುಗುವಾಗ ಸಾಮಾನ್ಯ ಉಡುಪು (ಸಿವಿಲ್ ಡ್ರೆಸ್) ಧರಿಸಿದ್ದರಿಂದ ಸೇನಾ ಸಿಬ್ಬಂದಿ ಅವರನ್ನು ಉಗ್ರರೆಂದು ತಪ್ಪಾಗಿ ಭಾವಿಸಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ. ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕರ್ರಾ ಆರೋಪಿಸಿದ್ದಾರೆ.
Courtesy : thewire.in


