ಗುಜರಾತ್ ಗಲಭೆಯ ಸಂದರ್ಭದಲ್ಲಿ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ತಮ್ಮ ಕುಟುಂಬ ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಅಪರಾಧಿಗಳ ಪೈಕಿ ಇಬ್ಬರ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿರುವುದು ತನಗೆ “ನೋವು, ಆಘಾತ ಮತ್ತು ಅಪನಂಬಿಕೆ” ತಂದಿದೆ ಎಂದು ಬಿಲ್ಕಿಸ್ ಬಾನು ಹೇಳಿದ್ದಾರೆ. ತನಗೆ ಯಾವುದೇ ಮಾಹಿತಿ ನೀಡದೆ ಅಥವಾ ತಮ್ಮ ವಾದವನ್ನು ಆಲಿಸಲು ಅವಕಾಶವನ್ನೂ ಕೊಡದೆ ನ್ಯಾಯಾಲಯ ಈ ನಿರ್ಧಾರವನ್ನು ಕೈಗೊಂಡಿದೆ ಎಂದಿದ್ದಾರೆ.
ಸೋಮವಾರ (ನ.16) ತಮ್ಮ ವಕೀಲರಾದ ಹಿರಿಯ ನ್ಯಾಯವಾದಿ ಶೋಭಾ ಗುಪ್ತಾ ಅವರ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ 43 ವರ್ಷದ ಬಾನು ಅವರು ಸುಪ್ರೀಂ ಕೋರ್ಟ್‌ನ ಆದೇಶವನ್ನು ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.
ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತಮ್ಮ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದ್ದನ್ನು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಬ್ಬರು ಅಪರಾಧಿಗಳಾದ ಬಿಪಿನ್‌ಚಂದ್ ಕನೈಯಾಲಾಲ್ ಜೋಶಿ ಮತ್ತು ಪ್ರದೀಪ್ ರಮಣ್‌ಲಾಲ್ ಮೋಧಿಯಾ ಅವರ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿದೆ.
“ನೋವು, ಆಘಾತ ಮತ್ತು ಅಪನಂಬಿಕೆಯ ಹೊಸ ಕಣ್ಣೀರಿನ ನಡುವೆ ಪದಗಳು ನಿಧಾನವಾಗಿ ಹೊರಬರುತ್ತಿದ್ದರೂ ನಾನು ಈ ಹೇಳಿಕೆಯನ್ನು ನೀಡುತ್ತಿದ್ದೇನೆ” ಎಂದು ಬಾನು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನನ್ನನ್ನು ಕರೆಯದೆ ಮತ್ತು ನನ್ನ ವಾದವನ್ನು ಆಲಿಸದೆ, ಮತ್ತೊಮ್ಮೆ—ಎರಡನೇ ಬಾರಿಗೆ—ಸುಪ್ರೀಂ ಕೋರ್ಟ್ ಇಂತಹದೊಂದು ಆದೇಶವನ್ನು ಹೊರಡಿಸಿದೆ ಎಂಬುದನ್ನು ನನಗೆ ಈಗಲೂ ನಂಬಲಾಗುತ್ತಿಲ್ಲ. ಪತ್ರಿಕಾ ವರದಿಗಳ ಮೂಲಕ ನನಗೆ ಈ ವಿಷಯ ತಿಳಿಯಿತು” ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಸುಮಾರು ಮೂರು ವಾರಗಳ ಹಿಂದೆ, ಅಂದರೆ ಅಕ್ಟೋಬರ್ 28ರಂದು ತನ್ನ ಆದೇಶವನ್ನು ಹೊರಡಿಸಿದ್ದರೂ, ಅದನ್ನು ಇತ್ತೀಚೆಗಷ್ಟೇ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
2002ರ ಗಲಭೆಯ ಸಂದರ್ಭದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಾಗ ಮತ್ತು ತನ್ನ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದಾಗ ತನಗೆ 19 ವರ್ಷ ವಯಸ್ಸಾಗಿತ್ತು ಹಾಗೂ ತಾನು ಗರ್ಭಿಣಿಯಾಗಿದ್ದೆ ಎಂದು ಬಾನು ಹೇಳಿಕೆಯಲ್ಲಿ ಸ್ಮರಿಸಿಕೊಂಡಿದ್ದಾರೆ. ವರ್ಷಗಳ ಕಾಲ ತಾನು ಅನುಭವಿಸಿದ ಈ ಕಠಿಣ ಪರೀಕ್ಷೆಯ ಉದ್ದಕ್ಕೂ ಲಕ್ಷಾಂತರ ಜನರ ಬೆಂಬಲ ಮತ್ತು ಒಗ್ಗಟ್ಟಿನ ಧ್ವನಿಗಳು ನನ್ನ ಜೊತೆಗಿದ್ದ ಕಾರಣದಿಂದಲೇ ತನಗೆ ಧೈರ್ಯ ಕಂಡುಕೊಳ್ಳಲು ಮತ್ತು ಅದನ್ನು ಪಡೆಯಲು ಸಾಧ್ಯವಾಯಿತು ಎಂದಿದ್ದಾರೆ.
“ಆದರೆ ಇಂದು, ನಾನು ಇಷ್ಟೊಂದು ಕಷ್ಟಪಟ್ಟು ಹೋರಾಡಿ ಗೆದ್ದ ನ್ಯಾಯವನ್ನೇ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ನ್ಯಾಯದ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ಕಳೆದುಕೊಳ್ಳುವ ಭಯವಾಗುತ್ತಿದೆ. ನನಗೆ ಇಂತಹ ಘೋರ ಅನ್ಯಾಯ ಎಸಗಿದವರ ಶಿಕ್ಷೆಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಹೇಗೆ ಇಷ್ಟು ಸುಲಭವಾಗಿ ಅಮಾನತುಗೊಳಿಸಲು ಸಾಧ್ಯ? ಅವರು ನನಗೆ ಕನಿಷ್ಠ ಮಾಹಿತಿಯನ್ನೂ ನೀಡದಿರಲು ಹೇಗೆ ಸಾಧ್ಯ? ತಮ್ಮ ನ್ಯಾಯಾಲಯದ ಕೊಠಡಿಯಲ್ಲಿ ನನ್ನ ಧ್ವನಿಯನ್ನೂ ಆಲಿಸಲಾಗಿದೆಯೇ ಎಂಬುದನ್ನು ಅವರು ಖಚಿತಪಡಿಸಿಕೊಳ್ಳದೆ ಇರಲು ಹೇಗೆ ಸಾಧ್ಯ?” ಎಂದು ಬಾನು ಪ್ರಶ್ನಿಸಿದ್ದಾರೆ.
“ನಾನು ಈ ಆದೇಶದ ವಿರುದ್ಧ ಹೋರಾಡುತ್ತೇನೆ. ನಾನು ಹೋರಾಡಲೇಬೇಕು. ಏಕೆಂದರೆ ಯಾವುದೇ ಮಹಿಳೆ, ಯಾವುದೇ ಸಂತ್ರಸ್ತೆ ಅಥವಾ ಯಾವುದೇ ನಾಗರಿಕಳು ತನ್ನ ಅಸ್ತಿತ್ವ ಮತ್ತು ಸಮಾನತೆಯ ಈ ನಿರಂತರ ಪರೀಕ್ಷೆಯನ್ನು ಸಹಿಸಿಕೊಳ್ಳಬಾರದು ಮತ್ತು ತನ್ನ ಜೀವನದುದ್ದಕ್ಕೂ ನ್ಯಾಯಕ್ಕಾಗಿ ಹೋರಾಡುವಂತಾಗಬಾರದು” ಎಂದಿದ್ದಾರೆ.
ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೋಶಿ ಮತ್ತು ಮೋಧಿಯಾ ಜೊತೆ ಇತರ ಒಂಬತ್ತು ಮಂದಿ ಅಪರಾಧಿಗಳೆಂದು ಸಾಬೀತಾಗಿತ್ತು. ಆದರೆ, ಅವರೆಲ್ಲರೂ ಶಿಕ್ಷೆ ಕಡಿತಕ್ಕೆ (ರೆಮಿಷನ್) ಅರ್ಹರಾಗಿದ್ದಾರೆ ಎಂದು ಗುಜರಾತ್ ಸರ್ಕಾರ ಹೇಳಿದ ನಂತರ, 2022ರಲ್ಲಿ ಎಲ್ಲಾ 11 ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿತ್ತು. ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದ ನಡುವೆ ತೆಗೆದುಕೊಳ್ಳಲಾದ ಮತ್ತು ಮೋದಿ ಸರ್ಕಾರದಿಂದ ಅನುಮೋದನೆ ಪಡೆದ ಆ ನಿರ್ಧಾರವು ತಕ್ಷಣದ ಹಾಗೂ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ಎರಡು ವರ್ಷಗಳ ನಂತರ ಸುಪ್ರೀಂ ಕೋರ್ಟ್ ಕಟುವಾದ ಆದೇಶವೊಂದನ್ನು ಹೊರಡಿಸುವ ಮೂಲಕ ಅವರ ಶಿಕ್ಷೆ ಕಡಿತವನ್ನು (ರೆಮಿಷನ್) ರದ್ದುಗೊಳಿಸಿತ್ತು.
ಸೋಮವಾರ, ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಲೆ ಅವರ ಪೀಠವು, ಜೋಶಿ ಮತ್ತು ಮೋಧಿಯಾ ಅವರು 17 ವರ್ಷಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದಾರೆ ಹಾಗೂ ಅವರಲ್ಲಿ ಒಬ್ಬರು ತೀವ್ರ ಅಂಗವೈಕಲ್ಯವನ್ನು ಹೊಂದಿದ್ದಾರೆ ಎಂದು ಹೇಳಿದೆ. “ಖಂಡಿತವಾಗಿಯೂ, ಈ ಮೇಲ್ಮನವಿಯಲ್ಲಿ ವಾಸ್ತವಾಂಶ ಮತ್ತು ಕಾನೂನಿನ ದೃಷ್ಟಿಯಿಂದ ನಿರ್ಧರಿಸಬೇಕಾದ ಹಲವು ವಿಷಯಗಳಿವೆ” ಎಂದ ನ್ಯಾಯಪೀಠ, ಇಬ್ಬರ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿದೆ.


