ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿರುವ ಅರ್ಜಿದಾರರು ಸುಪ್ರೀಂ ಕೋರ್ಟ್ ಮುಂದೆ ತಮ್ಮ ವಾದವನ್ನು ಮಂಡಿಸಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವು (ಇಸಿಐ) ತೆಗೆದುಕೊಂಡ ನಿರ್ಧಾರಗಳನ್ನು ಅದರ ಮೂವರು ಸದಸ್ಯರು ಸರ್ವಾನುಮತದಿಂದ ತೆಗೆದುಕೊಂಡಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಸಮಕಾಲೀನ ದಾಖಲೆಗಳನ್ನು ಹಾಜರುಪಡಿಸಲು ಆಯೋಗವು ವಿಫಲವಾಗಿದೆ ಎಂದು ಹೇಳಿದ್ದಾರೆ; ಆಯೋಗವು ಸಾಮೂಹಿಕ ಅನುಮೋದನೆಯನ್ನು ಪದೇ ಪದೇ ಪ್ರತಿಪಾದಿಸುತ್ತಿದ್ದರೂ ಈ ದಾಖಲೆಗಳನ್ನು ಒದಗಿಸಿಲ್ಲ ಎಂದು ಅವರು ಹೇಳಿದ್ದಾರೆ.
ಸೋಮವಾರ (ನ.16) ಅಡ್ವೊಕೇಟ್ ಆನ್ ರೆಕಾರ್ಡ್ ಮುದಿತ್ ಗುಪ್ತಾ ಅವರ ಮೂಲಕ ಸಲ್ಲಿಸಲಾದ ಮರು-ಪ್ರತ್ಯುತ್ತರ ಅಫಿಡವಿಟ್ನಲ್ಲಿ (rejoinder affidavit), ಅರ್ಜಿದಾರ ರಾಕೇಶ್ ಕುಮಾರ್ ಸಿಂಗ್ ಅವರು ಚುನಾವಣಾ ಆಯೋಗದ ಪ್ರತಿ-ಅಫಿಡವಿಟ್ ಮತ್ತು ಪೂರಕ ಅಫಿಡವಿಟ್ ಅನ್ನು ಆಕ್ಷೇಪಿಸಿದ್ದಾರೆ. ಆ ಅಫಿಡವಿಟ್ಗಳಲ್ಲಿ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಆಯೋಗವು ವಾದಿಸಿತ್ತು.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023ರ ಸೆಕ್ಷನ್ 18ರ ಅನುಸರಣೆಯನ್ನು ಸಾಬೀತುಪಡಿಸದೆ ತೆಗೆದುಕೊಂಡ ನಿರ್ಧಾರಗಳನ್ನು, ಚುನಾವಣಾ ಆಯೋಗವು ನಂತರ ಕೈಗೊಂಡ ಸರಿಪಡಿಸುವ ಕ್ರಮಗಳ ಮೂಲಕ ಪೂರ್ವಾನ್ವಯವಾಗುವಂತೆ (retrospectively) ಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದ್ದಾರೆ.
ಸಿಂಗ್ ಅವರು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಈ ಮರು-ಪ್ರತ್ಯುತ್ತರವನ್ನು (rejoinder) ದಾಖಲಿಸಲಾಗಿದೆ. ಚುನಾವಣಾ ಆಯೋಗದ ಕಾರ್ಯನಿರ್ವಹಣೆಯನ್ನು ಪ್ರಶ್ನಿಸುವ ಈ ಅರ್ಜಿಯಲ್ಲಿ, ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಹಲವಾರು ನಿರ್ಧಾರಗಳನ್ನು ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಚುನಾವಣಾ ಆಯೋಗದ ಪ್ರತಿ-ಅಫಿಡವಿಟ್ಗೆ ಪ್ರತಿಯಾಗಿ ಈ ಮರು-ಪ್ರತ್ಯುತ್ತರ ಅಫಿಡವಿಟ್ ಅನ್ನು ಸಲ್ಲಿಸಲಾಗಿದೆ. ಆ ಪ್ರತಿ-ಅಫಿಡವಿಟ್ನಲ್ಲಿ, ಎಸ್ಐಆರ್ ಪ್ರಕ್ರಿಯೆಯು ಕಾನೂನುಬದ್ಧವಾಗಿದೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗವು ಪ್ರತಿಪಾದಿಸಿತ್ತು. ಈ ಪ್ರಕರಣವನ್ನು ಇಂದಿಗೆ (ನ 17) ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
Courtesy :livelaw.in


