ಇಸ್ರೇಲ್ ಸಂಸತ್ತಾದ ನೆಸೆಟ್‌ಗೆ (Knesset) ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಆಡಳಿತರೂಢ ಒಕ್ಕೂಟಕ್ಕೆ ಸೋಲಾಗಿರುವುದು ಹಲವು ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಿದೆ. ಅವುಗಳಲ್ಲಿ ಒಂದು ಅಹ್ಮದ್ ತಿಬಿ ಅವರು ಉಪಸಭಾಪತಿಯಾಗಿ ಆಯ್ಕೆಯಾಗಿರುವುದು.
ಅಹ್ಮದ್ ತಿಬಿ ಅವರು ಸಂಸತ್ತಿಗೆ ಆಯ್ಕೆಯಾಗುವುದನ್ನೇ ವಿರೋಧಿಸಿದ್ದ ನೆತನ್ಯಾಹು ನೇತೃತ್ವದ ಬಲಪಂಥೀಯ ಒಕ್ಕೂಟಕ್ಕೆ, ಈಗ ಅವರು ಉಪಸಭಾಪತಿಯಾಗಿ ಆಯ್ಕೆಯಾಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅರಬ್ ಮೂವ್‌ಮೆಂಟ್ ಫಾರ್ ರಿನ್ಯೂವಲ್ (ತಾ’ಅಲ್ – Ta’al) ಪಕ್ಷದ ಅಧ್ಯಕ್ಷರಾದ ತಿಬಿ, ಇಸ್ರೇಲ್‌ನಲ್ಲಿರುವ ಪ್ಯಾಲೆಸ್ತೀನ್ ನಾಗರಿಕರನ್ನು ದೀರ್ಘಕಾಲದಿಂದ ಪ್ರತಿನಿಧಿಸುತ್ತಿರುವ ಅನುಭವಿ ಜನಪ್ರತಿನಿಧಿ. ಹಾಗಾಗಿ, ಅವರ ಉಪಸಭಾಪತಿ ನೇಮಕ ಒಂದು ಮಹತ್ವದ ಮೈಲಿಗಲ್ಲಾಗಿದೆ.
ತಮ್ಮ ಆಯ್ಕೆಯ ನಂತರ ಸುದ್ದಿ ಸಂಸ್ಥೆ ಅಲ್ ಜಝೀರಾ ಜೊತೆ ಮಾತನಾಡಿರುವ ತಿಬಿ ಅವರು, ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಸರ್ಕಾರವನ್ನು ಮುನ್ನಡೆಸಿದ ಅಥವಾ ಅದರ ಭಾಗವಾಗಿದ್ದ ತೀವ್ರ ಬಲಪಂಥೀಯ ಪಕ್ಷಗಳ ವಿರುದ್ಧ ದೊರೆತ ಜಯವಿದು ಎಂದು ಹೇಳಿದ್ದಾರೆ.
ಅರಬ್ ಬಹುಸಂಖ್ಯಾತ ಪಕ್ಷಗಳ ಮೈತ್ರಿಕೂಟವನ್ನು ಉಲ್ಲೇಖಿಸುತ್ತಾ, “11 ಸ್ಥಾನಗಳನ್ನು ಗೆದ್ದಿರುವ ಜಾಯಿಂಟ್ ಲಿಸ್ಟ್ ಮೈತ್ರಿಕೂಟಕ್ಕೆ ಇದು ನ್ಯಾಯಯುತವಾಗಿ ಸಲ್ಲಬೇಕಾದ ಸಾಧನೆಯಾಗಿದೆ” ಎಂದಿದ್ದಾರೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪಕ್ಷ ಮತ್ತು ತೀವ್ರ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವಿರ್ ಅವರನ್ನು ಉಲ್ಲೇಖಿಸುತ್ತಾ, “ಲಿಕುಡ್ ಮತ್ತು ಬೆನ್-ಗ್ವಿರ್ ನನ್ನ ಆಯ್ಕೆಯನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಅವರ ಬೇಜವಾಬ್ದಾರಿ ಪ್ರಚೋದನೆಯ ಹೊರತಾಗಿಯೂ ಅವರು ವಿಫಲರಾದರು” ಎಂದು ತಿಬಿ ಹೇಳಿದ್ದಾರೆ.
ಯಾಸರ್ ಅರಾಫಾತ್ ಸಲಹೆಗಾರ
ತಿಬಿ ಅವರ ಆಯ್ಕೆ ಮಹತ್ವ ಪಡೆದುಕೊಳ್ಳಲು ಮತ್ತೊಂದು ಪ್ರಮುಖ ಕಾರಣ, ಅವರು ಪ್ಯಾಲೆಸ್ತೀನ್ ನಾಯಕ ಯಾಸರ್ ಅರಾಫಾತ್ ಅವರ ಮಾಜಿ ರಾಜಕೀಯ ಸಲಹೆಗಾರ ಎಂಬುವುದು.
1948ರ ನಕ್ಬಾ ಸಮಯದಲ್ಲಿ ಜಾಫಾದಿಂದ ಸ್ಥಳಾಂತರಗೊಂಡ ಕುಟುಂಬದಲ್ಲಿ, 1958ರ ಡಿಸೆಂಬರ್ 19ರಂದು ತೈಬೆ ನಗರದಲ್ಲಿ ಜನಿಸಿದ ತಿಬಿ ಅವರು, ಆರಂಭದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದು 1983ರಲ್ಲಿ ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾಲಯದಿಂದ ಅತ್ಯುನ್ನತ ಶ್ರೇಣಿಯೊಂದಿಗೆ ಪದವಿ ಪಡೆದರು. ಆದಾಗ್ಯೂ, ಅವರ ರಾಜಕೀಯ ಹೋರಾಟವು ಶೀಘ್ರದಲ್ಲೇ ಅವರ ವೈದ್ಯಕೀಯ ವೃತ್ತಿಯನ್ನು ಕೊನೆಗೊಳಿಸಿತು.
ಆ ಸಮಯದಲ್ಲಿ ಪ್ಯಾಲೆಸ್ತೀನ್ ವಿಮೋಚನಾ ಸಂಘಟನೆಯನ್ನು (ಪಿಎಲ್‌ಒ – PLO) ‘ಭಯೋತ್ಪಾದಕ ಸಂಘಟನೆ’ ಎಂದು ವರ್ಗೀಕರಿಸಿದ್ದ ಇಸ್ರೇಲಿ ಕಾನೂನುಗಳನ್ನು ಉಲ್ಲಂಘಿಸಿ, ತಿಬಿ ಅವರು 1984ರಲ್ಲಿ ಟ್ಯುನೀಶಿಯಾದ ಟ್ಯುನಿಸ್‌ನಲ್ಲಿ ಪಿಎಲ್‌ಒ ನಾಯಕ ಯಾಸರ್ ಅರಾಫತ್ ಅವರನ್ನು ಭೇಟಿಯಾದರು.
ಹಿಂತಿರುಗಿದ ನಂತರ ಇಸ್ರೇಲಿ ಪೊಲೀಸರಿಂದ ವಿಚಾರಣೆಗೆ ಒಳಗಾದರೂ, ಅವರ ವಿರುದ್ಧ ಎಂದಿಗೂ ಔಪಚಾರಿಕವಾಗಿ ಆರೋಪ ಹೊರಿಸಿರಲಿಲ್ಲ. ನಂತರ ತಿಬಿ ಅವರು 1993 ಮತ್ತು 1999ರ ನಡುವೆ ಅರಾಫತ್ ಅವರಿಗೆ ರಾಜಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. 1998ರಲ್ಲಿ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದ ವೈ ರಿವರ್ (Wye River) ಶೃಂಗಸಭೆಯಲ್ಲಿ ಅವರು ಪ್ಯಾಲೆಸ್ತೀನ್ ನಿಯೋಗದ ವಕ್ತಾರರಾಗಿ ಕಾರ್ಯನಿರ್ವಹಿಸಿದರು.
ಇಸ್ರೇಲ್‌ನ ಅತಿ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿರುವ ಬೆಂಜಮಿನ್ ನೆತನ್ಯಾಹು ಅವರು ಆಗ ತಮ್ಮ ಮೊದಲ ಅವಧಿಯ ಅಧಿಕಾರದಲ್ಲಿದ್ದರು. ಆ ಶೃಂಗಸಭೆಯಲ್ಲಿ, ಆಕ್ರಮಿತ ಪಶ್ಚಿಮ ದಂಡೆಯ (ವೆಸ್ಟ್ ಬ್ಯಾಂಕ್ – West Bank) ಕೆಲವು ಭಾಗಗಳಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲು ಇಸ್ರೇಲ್ ಒಪ್ಪಿಕೊಂಡಿತ್ತು. ಅದೇ ಸಮಯದಲ್ಲಿ ಪ್ಯಾಲೆಸ್ತೀನ್ ಪ್ರತಿರೋಧ ಚಳವಳಿಯ ಸಶಸ್ತ್ರ ಬಣಗಳ ಮೇಲೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಪ್ಯಾಲೆಸ್ತೀನ್ ಪ್ರಾಧಿಕಾರ (ಪಿಎ – PA) ಸಮ್ಮತಿಸಿತ್ತು. ಇತರ ಇಸ್ರೇಲ್-ಪ್ಯಾಲೆಸ್ತೀನ್ ಒಪ್ಪಂದಗಳಂತೆಯೇ, ಈ ‘ವೈ ರಿವರ್ ಮೆಮೊರಾಂಡಮ್’ ಒಪ್ಪಂದವನ್ನೂ ಇಸ್ರೇಲ್ ಶೀಘ್ರದಲ್ಲೇ ಕೈಬಿಟ್ಟಿತು.
ಸಂಸದೀಯ ಕದನಗಳು
ತಿಬಿ ಅವರು 1996ರಲ್ಲಿ ತಾ’ಅಲ್ ಪಕ್ಷವನ್ನು ಸ್ಥಾಪಿಸಿದರು ಮತ್ತು 1999ರಲ್ಲಿ ಮೊದಲ ಬಾರಿಗೆ ಇಸ್ರೇಲ್ ಸಂಸತ್ತಾದ ನೆಸೆಟ್‌ಗೆ ಆಯ್ಕೆಯಾದರು. ತಮ್ಮನ್ನು ತಾವು “ಇಸ್ರೇಲಿ ಪೌರತ್ವ ಹೊಂದಿರುವ ಅರಬ್ ಪ್ಯಾಲೆಸ್ತೀನಿಯನ್” ಎಂದು ಗುರುತಿಸಿಕೊಳ್ಳುವ ಅವರು, ದ್ವಿ-ರಾಷ್ಟ್ರ ಪರಿಹಾರ ಮತ್ತು ಪ್ಯಾಲೆಸ್ತೀನ್ ನಿರಾಶ್ರಿತರಿಗೆ ತಾಯ್ನಾಡಿಗೆ ಮರಳುವ ಹಕ್ಕಿಗಾಗಿ ಪ್ರತಿಪಾದಿಸುತ್ತಾರೆ. ಇಸ್ರೇಲ್ ಅನ್ನು ಒಂದು ‘ಯಹೂದಿ ರಾಷ್ಟ್ರ’ ಎಂದು ವ್ಯಾಖ್ಯಾನಿಸುವುದನ್ನು ನಿರಂತರವಾಗಿ ಪ್ರಶ್ನಿಸುವ ಅವರು, ಅದನ್ನು ಬದಲಾಗಿ ‘ವರ್ಣಭೇದ ನೀತಿಯ ರಾಷ್ಟ್ರ’ ಎಂದು ಬಣ್ಣಿಸುತ್ತಾರೆ ಮತ್ತು ‘ತನ್ನ ಎಲ್ಲಾ ನಾಗರಿಕರಿಗಾಗಿ ಇರುವ ರಾಷ್ಟ್ರ’ ನಿರ್ಮಾಣಕ್ಕಾಗಿ ಧ್ವನಿ ಎತ್ತುತ್ತಾರೆ.
ಅವರ ನೇರ ನಿಲುವುಗಳು ಮತ್ತು ತಳಮಟ್ಟದ (ನೆಲಮಟ್ಟದ) ಹೋರಾಟಗಳು ಅವರನ್ನು ಪದೇ ಪದೇ ಇಸ್ರೇಲ್ ಸರ್ಕಾರ ಹಾಗೂ ಹಿಂಸಾತ್ಮಕ ತೀವ್ರ ಬಲಪಂಥೀಯ ಕಾರ್ಯಕರ್ತರ ಗುರಿಯನ್ನಾಗಿಸಿವೆ.
2000ನೇ ಇಸವಿಯ ಸೆಪ್ಟೆಂಬರ್‌ನಲ್ಲಿ ನಡೆದ ಎರಡನೇ ಇಂತಿಫಾದಾ ಸಮಯದಲ್ಲಿ, ಮರುವರ್ಷ ಪ್ರಧಾನ ಮಂತ್ರಿಯಾದ ಏರಿಯಲ್ ಶರೋನ್ ಅವರು ಅಲ್-ಅಕ್ಸಾ ಮಸೀದಿ ಆವರಣಕ್ಕೆ ಪ್ರಚೋದನಕಾರಿಯಾಗಿ ನುಗ್ಗಿದಾಗ ಅವರನ್ನು ಎದುರಿಸುವ ಭರದಲ್ಲಿ ತಿಬಿ ಅವರ ಬಲಗೈ ಮುರಿದಿತ್ತು.
2002ರಲ್ಲಿ, ಸೇನಾ ಕಾರ್ಯಾಚರಣೆ ನಡೆಯುತ್ತಿದ್ದ ಸಮಯದಲ್ಲಿ ಜೆನಿನ್ ನಿರಾಶ್ರಿತರ ಶಿಬಿರವನ್ನು ಪ್ರವೇಶಿಸಿ ಸೈನಿಕರನ್ನು ಎದುರಿಸಿದ ನಂತರ, ಇಸ್ರೇಲ್ ತಿಬಿ ಅವರ ಸಂಸದೀಯ ವಿನಾಯಿತಿಯನ್ನು ರದ್ದುಗೊಳಿಸಿತ್ತು.
ತಿಬಿ ಅವರು ತಮ್ಮ ನಾಟಕೀಯ ಸಂಸದೀಯ ಪ್ರತಿಭಟನೆಗಳಿಗೂ ಹೆಸರುವಾಸಿಯಾಗಿದ್ದಾರೆ. ಜೆರುಸಲೆಮ್ ಮತ್ತು ಆಕ್ರಮಿತ ಪ್ಯಾಲೆಸ್ತೀನಿಯನ್ ಪ್ರದೇಶಗಳಲ್ಲಿ ಧ್ವನಿವರ್ಧಕಗಳನ್ನು (ಲೌಡ್‌ಸ್ಪೀಕರ್) ನಿಷೇಧಿಸುವ ಗುರಿ ಹೊಂದಿದ್ದ ಇಸ್ರೇಲ್‌ನ ಪ್ರಸ್ತಾವಿತ ಮಸೂದೆಯನ್ನು ವಿರೋಧಿಸಿ, 2016ರಲ್ಲಿ ಅವರು ಇಸ್ರೇಲ್ ಸಂಸತ್ತಾದ ನೆಸೆಟ್ ಸಭಾಂಗಣದ ಒಳಗೆಯೇ ಇಸ್ಲಾಮಿಕ್ ಪ್ರಾರ್ಥನೆಯ ಕರೆಯನ್ನು (ಅಝಾನ್) ಕೂಗುವ ಮೂಲಕ ಗಮನ ಸೆಳೆದಿದ್ದರು.


