Homeಮುಖಪುಟಇಬ್ಬರು ಅತ್ಯಾಚಾರ ಅಪರಾಧಿಗಳಿಗೆ ಜಾಮೀನು : ಕುಟುಂಬ ಸಮೇತ ಗುಜರಾತ್ ತೊರೆದ ಬಿಲ್ಕಿಸ್ ಬಾನು-ವರದಿ

ಇಬ್ಬರು ಅತ್ಯಾಚಾರ ಅಪರಾಧಿಗಳಿಗೆ ಜಾಮೀನು : ಕುಟುಂಬ ಸಮೇತ ಗುಜರಾತ್ ತೊರೆದ ಬಿಲ್ಕಿಸ್ ಬಾನು-ವರದಿ

- Advertisement -
- Advertisement -

ಅತ್ಯಾಚಾರ, ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿ, ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ನಿರ್ಧಾರದಿಂದ ‘ಭಯಭೀತರಾದ’ ಮತ್ತು ‘ಆಘಾತಕ್ಕೊಳಗಾದ’ ಬಿಲ್ಕಿಸ್ ಬಾನು ಹಾಗೂ ಅವರ ಕುಟುಂಬಸ್ಥರು ಈ ತಿಂಗಳ ಆರಂಭದಲ್ಲಿಯೇ ಗುಜರಾತ್ ತೊರೆದಿದ್ದರು ಎಂಬುವುದಾಗಿ ಅವರ ಸಂಬಂಧಿಕರೊಬ್ಬರು ಮಂಗಳವಾರ (ನ.17) ತಿಳಿಸಿದ್ದಾರೆ ಎಂದು timesofindia.indiatimes.com ವರದಿ ಮಾಡಿದೆ.

ಅಕ್ಟೋಬರ್ 28ರಂದು ಹೊರಡಿಸಿದ ಆದೇಶದಲ್ಲಿ, ಬಿಲ್ಕಿಸ್ ಬಾನು ಅವರ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬಸ್ಥರ ಕೊಲೆ ಪ್ರಕರಣದ ಇಬ್ಬರು ಅಪರಾಧಿಗಳಾದ ಬಿಪಿನ್ ಚಂದ್ರ ಜೋಶಿ ಮತ್ತು ಪ್ರದೀಪ್ ಮೊರ್ಧಿಯಾ ಅವರ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿ, ಜಾಮೀನು ಮಂಜೂರು ಮಾಡಿದೆ.

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, 2008ರಲ್ಲಿ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ 11 ಮಂದಿಯಲ್ಲಿ ಇವರೂ ಸೇರಿದ್ದಾರೆ.

2022ರಲ್ಲಿ ಅಪರಾಧಿಗಳ ತಾತ್ಕಾಲಿಕ ಬಿಡುಗಡೆಗೆ ಕಾರಣವಾಗಿದ್ದ ಸಾಮೂಹಿಕ ಶಿಕ್ಷೆ ಕಡಿತ (ಮಾಫಿ) ಆದೇಶವನ್ನು ಸುಪ್ರೀಂ ಕೋರ್ಟ್ 2024ರ ಜನವರಿಯಲ್ಲಿ ರದ್ದುಗೊಳಿಸಿತ್ತು.

“ಅವರು (ಬಿಲ್ಕಿಸ್ ಬಾನು) ಇತ್ತೀಚಿನವರೆಗೂ ಗುಜರಾತ್‌ನಲ್ಲಿಯೇ ಇದ್ದರು. ಆದರೆ, ಅಕ್ಟೋಬರ್ 28ರಂದು ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ, ನವೆಂಬರ್ 2-3ರ ಸುಮಾರಿಗೆ ಕುಟುಂಬವು ರಾಜ್ಯವನ್ನು ತೊರೆದಿದೆ. ಭಯದಿಂದ ಅವರ ಕುಟುಂಬ ಆಗಾಗ ತಮ್ಮ ವಾಸಸ್ಥಳವನ್ನು ಬದಲಾಯಿಸುತ್ತಿತ್ತು, ಆದರೆ ಗುಜರಾತ್‌ನಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಈ ಬಾರಿ ಅವರು ಗುಜರಾತ್ ತೊರೆಯಲು ನಿರ್ಧರಿಸಿದ್ದಾರೆ” ಎಂದು ಗುಜರಾತ್‌ನ ದಾಹೋದ್ ಜಿಲ್ಲೆಯ ದೇವಗಢ್ ಬರಿಯಾ ಪಟ್ಟಣದಲ್ಲಿ ವಾಸಿಸುವ ಬಿಲ್ಕಿಸ್ ಬಾನು ಅವರ ಚಿಕ್ಕಪ್ಪ ರಝಾಕ್ ಮನ್ಸೂರಿ ಹೇಳಿದ್ದಾಗಿ timesofindia.indiatimes.com ವರದಿ ಮಾಡಿದೆ.

ಸುಪ್ರೀಂ ಕೋರ್ಟ್ ಸುಮಾರು ಮೂರು ವಾರಗಳ ಹಿಂದೆ, ಅಂದರೆ ಅಕ್ಟೋಬರ್ 28ರಂದು ತನ್ನ ಆದೇಶವನ್ನು ಹೊರಡಿಸಿದ್ದರೂ, ಅದನ್ನು ಇತ್ತೀಚೆಗಷ್ಟೇ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಅಪರಾಧಿಗಳ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್ ನಿರ್ಧಾರ ಬಗ್ಗೆ ಯಾರೂ ತಮಗೆ ಮಾಹಿತಿ ನೀಡಿದಿರುವುದು ಬಿಲ್ಕಿಸ್ ಬಾನು ಕುಟುಂಬಕ್ಕೆ ಆಘಾತವನ್ನುಂಟುಮಾಡಿದೆ ಎಂದು ಮನ್ಸೂರಿ ಹೇಳಿದ್ದಾರೆ. ಬಾನು ಅವರ ವಕೀಲರಿಗೂ ಈ ವಿಚಾರ ಗೊತ್ತಿರಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅವರಿಗೆ ಮಾಹಿತಿ ತಲುಪಿದೆ ಎಂಬುವುದಾಗಿ ಮನ್ಸೂರಿ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

“ಪೆರೋಲ್ ಮೇಲೆ ಹೊರಬಂದಾಗ ಅಪರಾಧಿಗಳು ಆಗಾಗ್ಗೆ ಗ್ರಾಮಕ್ಕೆ ಮರಳುತ್ತಾರೆ. ಕೆಲವೊಮ್ಮೆ 15 ದಿನಗಳವರೆಗೆ, ಇನ್ನು ಕೆಲವೊಮ್ಮೆ ಒಂದು ತಿಂಗಳವರೆಗೂ ಇಲ್ಲಿಯೇ ಇರುತ್ತಾರೆ. ಅವರು ಪ್ರಸ್ತುತ ಗೋಧ್ರಾ ಮತ್ತು ದಾಹೋದ್ ಉಪ-ಜೈಲುಗಳಲ್ಲಿಯೇ ಇದ್ದಾರೆ. ಒಬ್ಬ ಅಪರಾಧಿ ಸದ್ಯ ಒಂದು ತಿಂಗಳ ಪೆರೋಲ್ ಮೇಲೆ ಹೊರಗಿದ್ದಾನೆ” ಎಂದು ಮನ್ಸೂರಿ ತಿಳಿಸಿದ್ದಾರೆ.

ಅಪರಾಧಿಗಳು ಈ ರೀತಿಯಾಗಿ ಜಾಮೀನು ಪಡೆಯಲು ಸಾಧ್ಯವಾದರೆ, ಅವರು ಏನು ಬೇಕಾದರೂ ಮಾಡಲು ಸಮರ್ಥರಾಗಿದ್ದಾರೆ ಎಂದು ಬಾನು ಮತ್ತು ಅವರ ಕುಟುಂಬಸ್ಥರು ಭಾವಿಸಿದ್ದಾರೆ. “ಆಕೆ ಭಯಭೀತರಾಗಿದ್ದಾರೆ” ಎಂದು ಹೇಳಿದ್ದಾರೆ.

ಮನ್ಸೂರಿ ಅವರ ಪ್ರಕಾರ, ಬಾನು ಅವರ ಕುಟುಂಬವು ನಿರ್ದಿಷ್ಟ ಸಂದರ್ಭಗಳಲ್ಲಿ ದಾಹೋದ್ ಜಿಲ್ಲೆಯ ತಮ್ಮ ಸ್ವಗ್ರಾಮವಾದ ರಾಂಧಿಕ್‌ಪುರಕ್ಕೆ ಭೇಟಿ ನೀಡುತ್ತಿತ್ತು. ಅಪರಾಧಿಗಳು ಶಿಕ್ಷೆ ಕಡಿತದ (ಮಾಫಿ) ಮೇಲೆ ಬಿಡುಗಡೆಯಾಗುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದರು.

ಇದೇ ವೇಳೆ, ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬಾನು ಅವರು, ತಮ್ಮ ವಾದವನ್ನು ಆಲಿಸದೆಯೇ ಸುಪ್ರೀಂ ಕೋರ್ಟ್ ಈ ಆದೇಶವನ್ನು ಹೊರಡಿಸಿರುವುದರಿಂದ ತಮಗೆ ಆಘಾತವಾಗಿದೆ ಮತ್ತು ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

“ನೋವು, ಆಘಾತ ಮತ್ತು ಅಪನಂಬಿಕೆಯ ಹೊಸ ಕಣ್ಣೀರಿನ ನಡುವೆ ಪದಗಳು ನಿಧಾನವಾಗಿ ಹೊರಬರುತ್ತಿದ್ದರೂ ನಾನು ಈ ಹೇಳಿಕೆಯನ್ನು ನೀಡುತ್ತಿದ್ದೇನೆ” ಎಂದು ಬಾನು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನನ್ನನ್ನು ಕರೆಯದೆ ಮತ್ತು ನನ್ನ ವಾದವನ್ನು ಆಲಿಸದೆ, ಮತ್ತೊಮ್ಮೆ—ಎರಡನೇ ಬಾರಿಗೆ—ಸುಪ್ರೀಂ ಕೋರ್ಟ್ ಇಂತಹದೊಂದು ಆದೇಶವನ್ನು ಹೊರಡಿಸಿದೆ ಎಂಬುದನ್ನು ನನಗೆ ಈಗಲೂ ನಂಬಲಾಗುತ್ತಿಲ್ಲ. ಪತ್ರಿಕಾ ವರದಿಗಳ ಮೂಲಕ ನನಗೆ ಈ ವಿಷಯ ತಿಳಿಯಿತು” ಎಂದು ಅವರು ಹೇಳಿದ್ದಾರೆ.

2002ರ ಗಲಭೆಯ ಸಂದರ್ಭದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಾಗ ಮತ್ತು ತನ್ನ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದಾಗ ತನಗೆ 19 ವರ್ಷ ವಯಸ್ಸಾಗಿತ್ತು ಹಾಗೂ ತಾನು ಗರ್ಭಿಣಿಯಾಗಿದ್ದೆ ಎಂದು ಬಾನು ಹೇಳಿಕೆಯಲ್ಲಿ ಸ್ಮರಿಸಿಕೊಂಡಿದ್ದಾರೆ. ವರ್ಷಗಳ ಕಾಲ ತಾನು ಅನುಭವಿಸಿದ ಈ ಕಠಿಣ ಪರೀಕ್ಷೆಯ ಉದ್ದಕ್ಕೂ ಲಕ್ಷಾಂತರ ಜನರ ಬೆಂಬಲ ಮತ್ತು ಒಗ್ಗಟ್ಟಿನ ಧ್ವನಿಗಳು ನನ್ನ ಜೊತೆಗಿದ್ದ ಕಾರಣದಿಂದಲೇ ತನಗೆ ಧೈರ್ಯ ಕಂಡುಕೊಳ್ಳಲು ಮತ್ತು ಅದನ್ನು ಪಡೆಯಲು ಸಾಧ್ಯವಾಯಿತು ಎಂದಿದ್ದಾರೆ.

“ಆದರೆ ಇಂದು, ನಾನು ಇಷ್ಟೊಂದು ಕಷ್ಟಪಟ್ಟು ಹೋರಾಡಿ ಗೆದ್ದ ನ್ಯಾಯವನ್ನೇ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ನ್ಯಾಯದ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ಕಳೆದುಕೊಳ್ಳುವ ಭಯವಾಗುತ್ತಿದೆ. ನನಗೆ ಇಂತಹ ಘೋರ ಅನ್ಯಾಯ ಎಸಗಿದವರ ಶಿಕ್ಷೆಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಹೇಗೆ ಇಷ್ಟು ಸುಲಭವಾಗಿ ಅಮಾನತುಗೊಳಿಸಲು ಸಾಧ್ಯ? ಅವರು ನನಗೆ ಕನಿಷ್ಠ ಮಾಹಿತಿಯನ್ನೂ ನೀಡದಿರಲು ಹೇಗೆ ಸಾಧ್ಯ? ತಮ್ಮ ನ್ಯಾಯಾಲಯದ ಕೊಠಡಿಯಲ್ಲಿ ನನ್ನ ಧ್ವನಿಯನ್ನೂ ಆಲಿಸಲಾಗಿದೆಯೇ ಎಂಬುದನ್ನು ಅವರು ಖಚಿತಪಡಿಸಿಕೊಳ್ಳದೆ ಇರಲು ಹೇಗೆ ಸಾಧ್ಯ?” ಎಂದು ಬಾನು ಪ್ರಶ್ನಿಸಿದ್ದಾರೆ.

“ನಾನು ಈ ಆದೇಶದ ವಿರುದ್ಧ ಹೋರಾಡುತ್ತೇನೆ. ನಾನು ಹೋರಾಡಲೇಬೇಕು. ಏಕೆಂದರೆ ಯಾವುದೇ ಮಹಿಳೆ, ಯಾವುದೇ ಸಂತ್ರಸ್ತೆ ಅಥವಾ ಯಾವುದೇ ನಾಗರಿಕಳು ತನ್ನ ಅಸ್ತಿತ್ವ ಮತ್ತು ಸಮಾನತೆಯ ಈ ನಿರಂತರ ಪರೀಕ್ಷೆಯನ್ನು ಸಹಿಸಿಕೊಳ್ಳಬಾರದು ಮತ್ತು ತನ್ನ ಜೀವನದುದ್ದಕ್ಕೂ ನ್ಯಾಯಕ್ಕಾಗಿ ಹೋರಾಡುವಂತಾಗಬಾರದು” ಎಂದಿದ್ದಾರೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಲೆ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಇಬ್ಬರು ಅಪರಾಧಿಗಳು 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ ಎಂಬುದನ್ನು ಗಮನಿಸಿ ಅವರಿಗೆ ಜಾಮೀನು ಮಂಜೂರು ಮಾಡಿದೆ.
































ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪತ್ರಕರ್ತರು ಬೇರೆ, ರೀಲ್-ಮೇಕರ್‌ಗಳು ಬೇರೆ: ರೀಲ್-ಮೇಕರ್‌ಗಳಿಗೆ ಮಾಧ್ಯಮ ರಕ್ಷಣೆ ಅನ್ವಯಿಸುವುದಿಲ್ಲ: ದೆಹಲಿ ಪೊಲೀಸರಿಂದ ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಪತ್ರಕರ್ತರಿಗೆ ನೀಡಲಾದ ರಕ್ಷಣಾ ಆದೇಶಗಳು ಸಾಮಾಜಿಕ ಜಾಲತಾಣಗಳ ರೀಲ್-ಮೇಕರ್‌ಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ...

ಮತ್ತೆ ಉಲ್ಬಣಗೊಂಡ ಸಂಘರ್ಷ : ಕುವೈತ್‌ನ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ವೈಮಾನಿಕ ದಾಳಿ

ಹೊರ್ಮುಝ್ ಜಲಸಂಧಿಯಲ್ಲಿರುವ ಕೇಶ್ಮ್ ದ್ವೀಪದ (Qeshm Island) ಮೇಲೆ ಅಮೆರಿಕ ದಾಳಿ ನಡೆಸಿದ ನಂತರ, ಕುವೈತ್‌ನಲ್ಲಿರುವ ಅಮೆರಿಕದ ಡ್ರೋನ್ ಮತ್ತು ಕ್ಷಿಪಣಿ ನೆಲೆಗಳನ್ನು ರಾತ್ರೋರಾತ್ರಿ ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ. ಇದು...

ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ನಿಷೇಧ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್; ಕಾಯ್ದೆ ತಿದ್ದುಪಡಿ ಮನವಿಗೆ ಸಿಗದ ಮನ್ನಣೆ

ದೇವಸ್ಥಾನಗಳು ಸೇರಿದಂತೆ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ನೀಡುವುದನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂ ಕೋರ್ಟ್ ಬುಧವಾರ (ನವೆಂಬರ್ 18) ವಜಾಗೊಳಿಸಿದೆ ಎಂದು ‘ಬಾರ್...

‘ಆಕಾಶವೇನೂ ಕಳಚಿಬೀಳುವುದಿಲ್ಲ, ಅವರು ಮಧ್ಯಂತರ ಜಾಮೀನಿನ ಮೇಲೆಯೇ ಇರಲಿ’: ಆಜಮ್ ಖಾನ್ ಜಾಮೀನಿಗೆ ತುರ್ತು ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ! ಇಡಿಗೆ ಮತ್ತೆ ಹಿನ್ನಡೆ

ಜಾರಿ ನಿರ್ದೇಶನಾಲಯ (ED) ನಡೆಸಿದ ಬಂಧನ ಪ್ರಕ್ರಿಯೆಯನ್ನು ‘ಪ್ರೇರಿತ ಮತ್ತು ದುರುದ್ದೇಶಪೂರಿತ’ ಎಂದು ಕಟುವಾಗಿ ಟೀಕಿಸಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಆಜಮ್ ಖಾನ್ ಅವರಿಗೆ...

2024ರ ಚುನಾವಣೆ | 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂಬ ದಾಖಲೆಯೇ ಚುನಾವಣಾ ಆಯೋಗದ ಬಳಿಯಿಲ್ಲ : ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ವರದಿ

2024ರಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಹಾರಾಷ್ಟ್ರ, ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ಒಟ್ಟು 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಎಷ್ಟು ಮಂದಿ ಮತದಾನ ಮಾಡಿದ್ದಾರೆ ಎಂಬುದರ...

‘Shall we move?’: ಮನಿಲಾ ಕ್ವಾಡ್ ಶೃಂಗಸಭೆಯಲ್ಲಿ ಟ್ರಂಪ್‌ರ ಮಾತು ಮುಗಿಸಲು ಹೆಣಗಾಡಿದ ಮೋದಿ; ವೈರಲ್ ಆದ ಮುಜುಗರದ ಕ್ಷಣ

ಫಿಲಿಪೈನ್ಸ್‌ನ ರಾಜಧಾನಿ ಮನಿಲಾದಲ್ಲಿ ನವೆಂಬರ್ 17ರಂದು ನಡೆದ ಕ್ವಾಡ್  ನಾಯಕರ ಶೃಂಗಸಭೆಯ ಫೋಟೋ-ಆಪ್ ಒಂದು ಅನಿರೀಕ್ಷಿತ ಮತ್ತು ಅಸಹಜ ಮುಜುಗರದ ದೃಶ್ಯಕ್ಕೆ ಸಾಕ್ಷಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿಗದಿತ ಫೋಟೋ...

ಸಿಜೆಐ ಅವಹೇಳನ ಆರೋಪ : ವಕೀಲನಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್

ನವೆಂಬರ್ 16ರಂದು ಬಹಿರಂಗ ನ್ಯಾಯಾಲಯದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ವಕೀಲರಿಗೆ ಸುಪ್ರೀಂ ಕೋರ್ಟ್ ಇಂದು (ನವೆಂಬರ್ 18) ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ವಕೀಲರ ವಿರುದ್ಧ ಕ್ರಿಮಿನಲ್...

SIR ನಿರ್ಧಾರಗಳ ಕುರಿತು 48 ಪ್ರಶ್ನೆಗಳನ್ನು ಕೇಳಲು ಅನುಮತಿ ಕೋರಿ ಇಂಡಿಯಾ ಒಕ್ಕೂಟ ಅರ್ಜಿ : ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ 'ಇಂಡಿಯಾ' ಒಕ್ಕೂಟದ ನಾಯಕರು, ಚುನಾವಣಾ ಆಯೋಗಕ್ಕೆ 48 ಪ್ರಶ್ನೆಗಳನ್ನು ಕೇಳಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್...

ಖುಲಾಸೆಗೊಂಡರೂ 7 ವರ್ಷ ಜೈಲಿನಲ್ಲಿದ್ದ ವ್ಯಕ್ತಿಗೆ ₹30 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್; ಅಕ್ರಮ ಬಂಧನಕ್ಕೆ ಪರಿಹಾರ ನೀಡಲು ಕಾನೂನು ರಚಿಸುವಂತೆ ಶಿಫಾರಸು

ಖುಲಾಸೆ ಆದೇಶದ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ತಲುಪಿಸುವಲ್ಲಿ ಉಂಟಾದ ಸಂವಹನದ ಕೊರತೆಯಿಂದಾಗಿ, ನಿರ್ದೋಷಿ ಎಂದು ಸಾಬೀತಾದ ನಂತರವೂ ಏಳು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲೇ ಕಳೆದ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಸೋಮವಾರ (ನವೆಂಬರ್...

SIR ನಿರ್ಧಾರಗಳಿಗೆ ಮೂವರು ಆಯುಕ್ತರ ಸರ್ವಾನುಮತದ ಒಪ್ಪಿಗೆ ಇತ್ತು ಎಂಬುದಕ್ಕೆ ಚುನಾವಣಾ ಆಯೋಗ ದಾಖಲೆ ಸಲ್ಲಿಸಿಲ್ಲ : ಸುಪ್ರೀಂ ಕೋರ್ಟ್‌ಗೆ ಅರ್ಜಿದಾರರ ಹೇಳಿಕೆ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿರುವ ಅರ್ಜಿದಾರರು ಸುಪ್ರೀಂ ಕೋರ್ಟ್ ಮುಂದೆ ತಮ್ಮ ವಾದವನ್ನು ಮಂಡಿಸಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ ಭಾರತೀಯ ಚುನಾವಣಾ...