ಹೊರ್ಮುಝ್ ಜಲಸಂಧಿಯಲ್ಲಿರುವ ಕೇಶ್ಮ್ ದ್ವೀಪದ (Qeshm Island) ಮೇಲೆ ಅಮೆರಿಕ ದಾಳಿ ನಡೆಸಿದ ನಂತರ, ಕುವೈತ್ನಲ್ಲಿರುವ ಅಮೆರಿಕದ ಡ್ರೋನ್ ಮತ್ತು ಕ್ಷಿಪಣಿ ನೆಲೆಗಳನ್ನು ರಾತ್ರೋರಾತ್ರಿ ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ. ಇದು ಸೆಪ್ಟೆಂಬರ್ ನಂತರ ಅಮೆರಿಕದ ಮಿತ್ರರಾಷ್ಟ್ರವಾದ ಕುವೈತ್ ಮೇಲೆ ಮೇಲೆ ಇರಾನ್ ನಡೆಸಿದ ಮೊದಲ ದಾಳಿಯಾಗಿದೆ.
ಇರಾನ್ನ ವೈಮಾನಿಕ ದಾಳಿಗಳನ್ನು ವಾರದಲ್ಲಿ ಮೂರನೇ ಬಾರಿಗೆ ತಡೆಹಿಡಿದಿರುವುದಾಗಿ ಬಹ್ರೇನ್ ತಿಳಿಸಿದೆ. ಅಮೆರಿಕ ನೌಕಾಪಡೆಯ ಐದನೇ ಫ್ಲೀಟ್ನ ಪ್ರಧಾನ ಕಛೇರಿ ಇರುವ ಬಹ್ರೇನ್ ವಿರುದ್ಧ ಇರಾನ್ “ವ್ಯವಸ್ಥಿತ ಹಗೆತನದ ಧೋರಣೆ” ಅನುಸರಿಸುತ್ತಿದೆ ಎಂಬುವುದಾಗಿ ಆರೋಪಿಸಿದೆ ಎಂದು reuters.com ವರದಿ ಮಾಡಿದೆ.
ಮಧ್ಯಪ್ರಾಚ್ಯವನ್ನು ಅಸ್ಥಿರಗೊಳಿಸಿರುವ, ಹಡಗು ಸಂಚಾರಕ್ಕೆ ಅಡ್ಡಿಪಡಿಸಿರುವ, ಜಾಗತಿಕ ಇಂಧನ ಬೆಲೆಗಳನ್ನು ಹೆಚ್ಚಿಸಿರುವ ಮತ್ತು ಈ ಪ್ರದೇಶದಾದ್ಯಂತ ಇರುವ ದೇಶಗಳನ್ನು ಸಂಘರ್ಷದೊಳಗೆ ಎಳೆದಿರುವ ಈ ಬಿಕ್ಕಟ್ಟನ್ನು ಕೊನೆಗೊಳಿಸುವ ರಾಜತಾಂತ್ರಿಕ ಪ್ರಯತ್ನಗಳಿಗೆ ಎದುರಾಗಿರುವ ಅಡೆತಡೆಗಳನ್ನು ಈ ಇತ್ತೀಚಿನ ದಾಳಿಗಳು ಎತ್ತಿ ತೋರಿಸಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಕುವೈತ್ನ ವಾಯು ರಕ್ಷಣಾ ಪಡೆಗಳು ಪ್ರತಿಕೂಲ ಡ್ರೋನ್ ದಾಳಿಗಳನ್ನು ಎದುರಿಸುತ್ತಿವೆ ಎಂದು ಹೇಳಿದ ಬೆನ್ನಲ್ಲೇ, ಕುವೈತ್ನ ಅಲೀ ಅಲ್ ಸಲೇಂ (Ali Al Salem) ನೆಲೆಯಲ್ಲಿರುವ ಅಮೆರಿಕದ ಡ್ರೋನ್ ಮತ್ತು ಕ್ಷಿಪಣಿ ಸ್ಥಾವರಗಳನ್ನು ತಾನು ಗುರಿಯಾಗಿಸಿಕೊಂಡಿರುವುದಾಗಿ ಇರಾನ್ ಸೇನೆ ತಿಳಿಸಿದೆ ಎಂದು reuters.com ವರದಿ ಉಲ್ಲೇಖಿಸಿದೆ.
ಅಮೆರಿಕದ ಸಿಬ್ಬಂದಿ ಮತ್ತು ಆಸ್ತಿಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಅಮೆರಿಕದ ಯುದ್ಧ ವಿಮಾನಗಳು ಕೇಶ್ಮ್ (Qeshm) ದ್ವೀಪದಲ್ಲಿರುವ ಕ್ಷಿಪಣಿ ಉಡಾವಣಾ ನೆಲೆಯನ್ನು ಗುರಿಯಾಗಿಸಿಕೊಂಡಿದ್ದವು ಎಂದು ಅಮೆರಿಕದ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ reuters.com ಹೇಳಿದೆ. ಅಮೆರಿಕದ ಈ ದಾಳಿಯಿಂದ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಇರಾನ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ ಎಂದಿದೆ.
ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಮತ್ತು ಯಾವುದೇ ಆಕ್ರಮಣ ಅಥವಾ ಬೆದರಿಕೆಯ ವಿರುದ್ಧ ತನ್ನ ಭೂಪ್ರದೇಶ ಹಾಗೂ ಪ್ರಮುಖ ಸೌಲಭ್ಯಗಳನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ತಾನು ಕಾಯ್ದಿರಿಸಿಕೊಂಡಿರುವುದಾಗಿ ಕುವೈತ್ ಹೇಳಿದೆ ಎಂದು ವರದಿ ಉಲ್ಲೇಖಿಸಿದೆ.
ಬುಧವಾರ ಸರ್ಕಾರಿ ಮಾಧ್ಯಮಗಳು ಪ್ರಕಟಿಸಿದ ವೀಡಿಯೊಗಳಲ್ಲಿ, ಫೆಬ್ರವರಿಯಲ್ಲಿ ಇಸ್ರೇಲ್ ಜೊತೆಗೂಡಿ ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಅಮೆರಿಕಕ್ಕೆ ಇರಾನ್ ಸೇನೆಯ ಮಹಾದಂಡನಾಯಕ ಅಮೀರ್ ಹತಾಮಿ ಹೊಸ ಎಚ್ಚರಿಕೆಯನ್ನು ನೀಡಿದ್ದಾರೆ.
“ಶತ್ರು ತನ್ನ ತಪ್ಪನ್ನು ಪುನರಾವರ್ತಿಸಿದರೆ… ಭೌಗೋಳಿಕ ಮಿತಿಗಳಿಲ್ಲದೆ, ಅದನ್ನು ಮತ್ತು ಅದರ ಬೆಂಬಲಿಗರನ್ನು ಇನ್ನೂ ಬಲವಾಗಿ ಹಾಗೂ ಸಂಪೂರ್ಣವಾಗಿ ಹತ್ತಿಕ್ಕುವ ರೀತಿಯಲ್ಲಿ ಎದುರಿಸಲು ನಾವು ಸಿದ್ಧರಾಗಿದ್ದೇವೆ ಮತ್ತು ಅದಕ್ಕೆ ಬೇಕಾದ ಯೋಜನೆಗಳನ್ನು ಹೊಂದಿದ್ದೇವೆ” ಎಂದು ಅವರು ಹೇಳಿದ್ದಾರೆ.


