ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಪತ್ರಕರ್ತರಿಗೆ ನೀಡಲಾದ ರಕ್ಷಣಾ ಆದೇಶಗಳು ಸಾಮಾಜಿಕ ಜಾಲತಾಣಗಳ ರೀಲ್-ಮೇಕರ್ಗಳು ಹಾಗೂ ಕಂಟೆಂಟ್ ಕ್ರಿಯೇಟರ್ಗಳಿಗೆ ಅನ್ವಯಿಸುವುದಿಲ್ಲ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ. ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿನ ಅಕ್ರಮಗಳ (SIR) ವಿರುದ್ಧ ನಡೆದ ಈ ಪ್ರತಿಭಟನೆಗಳ ವೇಳೆ ಪೊಲೀಸರ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅಧಿಕೃತ ಅಫಿಡವಿಟ್ ಸಲ್ಲಿಸಿದ್ದು, ವೃತ್ತಿಪರ ಪತ್ರಿಕೋದ್ಯಮಕ್ಕೂ ಮತ್ತು ಡಿಜಿಟಲ್ ಕಂಟೆಂಟ್ ಸೃಷ್ಟಿಗೂ ಸ್ಪಷ್ಟ ವ್ಯತ್ಯಾಸವಿದೆ ಎಂದು ವಾದಿಸಿದ್ದಾರೆ.
ಪ್ರತಿಭಟನಾ ಸ್ಥಳಗಳಲ್ಲಿ ವೃತ್ತಿಪರ ಕರ್ತವ್ಯ ನಿರ್ವಹಿಸುವ ಪತ್ರಕರ್ತರಿಗೆ ತೊಂದರೆ ನೀಡಬಾರದು ಎಂಬ ಸುಪ್ರೀಂ ಕೋರ್ಟ್ನ ಅಕ್ಟೋಬರ್ 11ರ ನಿರ್ದೇಶನವು ಸಾಂಸ್ಥಿಕ ಮಾಧ್ಯಮಗಳ ಪತ್ರಕರ್ತರ ರಕ್ಷಣೆಗಾಗಿ ಮಾತ್ರವೇ ಹೊರತು, ರೀಲ್-ಮೇಕರ್ಗಳು ಅಥವಾ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ಗಳಿಗೆ ಸಾಮಾನ್ಯ ಕಾನೂನಿನಿಂದ ವಿನಾಯಿತಿ ನೀಡಲು ಉದ್ದೇಶಿಸಿಲ್ಲ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಡಿಜಿಟಲ್ ಮಾಧ್ಯಮದಲ್ಲಿ ಸ್ವತಂತ್ರವಾಗಿ ಸುದ್ದಿ ಸಂಗ್ರಹಿಸುವ ಹಕ್ಕು ಎಲ್ಲರಿಗೂ ಇದ್ದು, ಪಿಐಬಿ ಮಾನ್ಯತೆ ಅಥವಾ ಸಾಂಸ್ಥಿಕ ಪ್ರೆಸ್ ಕಾರ್ಡ್ ಇಲ್ಲದಿದ್ದರೂ ಸ್ವತಂತ್ರ ಪತ್ರಕರ್ತರು ಮತ್ತು ಯೂಟ್ಯೂಬರ್ಗಳ ಸುದ್ದಿ ಸಂಗ್ರಹಣಾ ಹಕ್ಕನ್ನು ತಾವು ನಿರಾಕರಿಸುವುದಿಲ್ಲ. ಆದರೆ, ಕಾನೂನು ಸುವ್ಯವಸ್ಥೆ ಮತ್ತು ಗುಂಪುಗಳ ನಿಯಂತ್ರಣದ ಸಂದರ್ಭದಲ್ಲಿ ಎಲ್ಲ ನಾಗರಿಕರಂತೆ ಇವರೂ ಸಾಮಾನ್ಯ ಕಾನೂನುಗಳಿಗೆ ಬದ್ಧರಾಗಿರಬೇಕು ಎಂದು ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಕೆಲವರು ಕ್ಯಾಮೆರಾ ಮತ್ತು ಮೈಕ್ರೋಫೋನ್ ಹಿಡಿದು ತಾವೇ ಪತ್ರಕರ್ತರು ಎಂದು ಸುಳ್ಳು ಹೇಳಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅಫಿಡವಿಟ್ನಲ್ಲಿ ಕಳವಳ ವ್ಯಕ್ತಪಡಿಸಿರುವ ಪೊಲೀಸರು, ತಟಸ್ಥವಾಗಿ ಸುದ್ದಿ ವರದಿ ಮಾಡುವ ವೃತ್ತಿಪರರಿಗೂ ಮತ್ತು ಕೇವಲ ಕಂಟೆಂಟ್ ಸೃಷ್ಟಿಗಾಗಿ ಘಟನೆಗಳನ್ನು ದಾಖಲಿಸುವವರಿಗೂ ಇರುವ ವ್ಯತ್ಯಾಸವನ್ನು ನ್ಯಾಯಾಲಯವು ಪರಿಶೀಲಿಸಬೇಕು ಎಂದು ಕೋರಿದ್ದಾರೆ. ಪ್ರತಿಭಟನೆಗಳ ವೇಳೆ ಪತ್ರಕರ್ತರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಮಹಿಳಾ ಪತ್ರಕರ್ತರು ಮಾಡಿದ್ದ ಲೈಂಗಿಕ ಕಿರುಕುಳದ ದೂರುಗಳಿಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಅಂತಹ ಯಾವುದೇ ಕೃತ್ಯ ಕಂಡುಬಂದಿಲ್ಲವಾದ್ದರಿಂದ ಆ ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದಿದ್ದಾರೆ.
‘ದಿ ಕ್ಯಾರವಾನ್’ ಮತ್ತು ‘ದಿ ಹಿಂದೂ’ ಸೇರಿದಂತೆ ಕೆಲವು ಪತ್ರಕರ್ತರ ಬಂಧನ ಅಥವಾ ತಡೆಗೆ ಸಂಬಂಧಿಸಿದಂತೆ, ಪ್ರತಿಭಟನಾ ಸ್ಥಳದಲ್ಲಿ ಜನಸಂದಣಿ ನಿಯಂತ್ರಣದ ವೇಳೆ ಭದ್ರತಾ ದೃಷ್ಟಿಯಿಂದ ಅವರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆಯೇ ವಿನಃ ಉದ್ದೇಶಪೂರ್ವಕವಾಗಿ ಯಾವುದೇ ಅಡಚಣೆ ಮಾಡಿಲ್ಲ ಎಂದು ಪೊಲೀಸರು ಸುಪ್ರೀಂ ಕೊರ್ಟ್ ಗಮನಕ್ಕೆ ತಂದಿದ್ದಾರೆ. ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ತಾವೂ ಪ್ರತಿಭಟನಾಕಾರರಂತೆ ವರ್ತಿಸಿದ ಕೆಲವರು ಪತ್ರಕರ್ತರ ಸೋಗಿನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿರುವ ಪೊಲೀಸರು ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.
ದೆಹಲಿ ಪೊಲೀಸರ ಈ ನಿಲುವು ಡಿಜಿಟಲ್ ಯುಗದಲ್ಲಿ ಸ್ವತಂತ್ರ ಪತ್ರಿಕೋದ್ಯಮ ಮತ್ತು ನಾಗರಿಕ ಪತ್ರಿಕೋದ್ಯಮದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಕುರಿತು ಚರ್ಚೆಗಳು ಆರಂಭವಾಗಿವೆ.


