HomeಅಂಕಣಗಳುKarnataka against SIR‘ಎಸ್ಐಆರ್’ ಬಳಿಕ ‘ಎಸ್ಎಸ್ಆರ್’ ಮೂಲಕ ಮುಖ ಉಳಿಸಿಕೊಳ್ಳಲು ಚುನಾವಣಾ ಆಯೋಗದ ಕಸರತ್ತು: SIR ವಿರೋಧಿ ಜನಪರ...

‘ಎಸ್ಐಆರ್’ ಬಳಿಕ ‘ಎಸ್ಎಸ್ಆರ್’ ಮೂಲಕ ಮುಖ ಉಳಿಸಿಕೊಳ್ಳಲು ಚುನಾವಣಾ ಆಯೋಗದ ಕಸರತ್ತು: SIR ವಿರೋಧಿ ಜನಪರ ಸಂಘಟನೆಗಳಿಂದ ತೀವ್ರ ಹೋರಾಟದ ಎಚ್ಚರಿಕೆ

- Advertisement -
- Advertisement -

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ತರ್ಕಹೀನ, ದೋಷಪೂರಿತ ಎಂದು ಆರೋಪ; SIR ಪಟ್ಟಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯ; ನವೆಂಬರ್ 26ರಿಂದ ದೇಶದ 100 ನಗರಗಳಲ್ಲಿ ಪ್ರಜಾತಂತ್ರ ಮರುಸ್ಥಾಪನಾ ಅಭಿಯಾನಕ್ಕೆ ಸಿದ್ಧತೆ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಲೋಪದೋಷಗಳು, ಅಕ್ರಮಗಳು ಮತ್ತು ಲಕ್ಷಾಂತರ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿದಿರುವ ಆರೋಪಗಳ ನಡುವೆಯೇ ಇದೀಗ ಚುನಾವಣಾ ಆಯೋಗ ವಿಶೇಷ ಪರಿಷ್ಕರಣೆ (SSR) ಪ್ರಕ್ರಿಯೆಗೆ ಮುಂದಾಗಿರುವುದನ್ನು ತೀವ್ರವಾಗಿ ವಿರೋಧಿಸಿರುವ ‘SIR ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ’, ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಹೊಸ ಹಂತದ ಹೋರಾಟದ ಎಚ್ಚರಿಕೆ ನೀಡಿದೆ. SIR ಪ್ರಕ್ರಿಯೆಯಲ್ಲಿ ನಡೆದಿರುವ ಅವಾಂತರಗಳಿಗೆ ಉತ್ತರ ನೀಡಲಾಗದ ಚುನಾವಣಾ ಆಯೋಗ, ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲು SSR ಹೆಸರಿನಲ್ಲಿ ಮತ್ತೊಂದು ಕಸರತ್ತಿಗೆ ಮುಂದಾಗಿದೆ. ಇದು ತನ್ನ ಮುಖ ಉಳಿಸಿಕೊಳ್ಳುವ ಪ್ರಯತ್ನವಷ್ಟೇ ಹೊರತು, ಮತದಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ನೈಜ ಕ್ರಮವಲ್ಲ ಎಂದು ಒಕ್ಕೂಟ ಆರೋಪಿಸಿದೆ.

SIR ಪ್ರಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತಿದ್ದ ಚುನಾವಣಾ ಆಯೋಗವೇ ಇದೀಗ ಕೆಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವವರನ್ನು ಮತ್ತೆ ಗುರುತಿಸಿ ಸೇರ್ಪಡೆ ಮಾಡಿಕೊಳ್ಳಲು ಹೊಸ ಸೂಚನೆಗಳನ್ನು ನೀಡಿರುವುದು, ಈ ಹಿಂದಿನ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ ಎಂದು ಸಂಘಟನೆಗಳು ಹೇಳಿವೆ. ಕರ್ನಾಟಕದಲ್ಲಿ ಮಾತ್ರ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳದೆ ತಾರತಮ್ಯ ಮಾಡುತ್ತಿರುವುದೇಕೆ ಎಂಬ ಪ್ರಶ್ನೆಯನ್ನೂ ಎತ್ತಿವೆ. ರಾಜ್ಯದಲ್ಲಿ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿನ ಗಂಭೀರ ದೋಷಗಳನ್ನು ಸರಿಪಡಿಸದೆ SSR ನಡೆಸುವುದರಿಂದ ಮೂಲ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ, ಚುನಾವಣಾ ಆಯೋಗದ ಈ ಪ್ರಯತ್ನವನ್ನು ನಾಗರಿಕ ಸಮಾಜ ಒಕ್ಕೊರಲಿನಿಂದ ತಿರಸ್ಕರಿಸಲಿದೆ ಎಂದು ಎಚ್ಚರಿಸಿವೆ.

‘SIR ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ’, ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯಲ್ಲಿ, ಕೇಂದ್ರ ಚುನಾವಣಾ ಆಯೋಗ ನೈತಿಕವಾಗಿ ಸೋಲೊಪ್ಪಿಕೊಂಡಿದೆ ಎಂದು ನೇರವಾಗಿ ಆರೋಪಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಫಾರಂ 6 ಕುರಿತು ಆಯೋಗ ನೀಡಿರುವ ಹೇಳಿಕೆಗಳು, ಕರ್ನಾಟಕದ ಅಂತಿಮ ಮತದಾರರ ಪಟ್ಟಿಯಲ್ಲಿರುವ ಲೋಪಗಳು, SSR ಪ್ರಕ್ರಿಯೆಯ ಹಿಂದಿನ ಉದ್ದೇಶ, ಕಾಂಗ್ರೆಸ್‌ನ ಕೆಲ ಸಚಿವರ ದ್ವಂದ್ವ ನಿಲುವು, ರಾಜ್ಯ ಸರ್ಕಾರದ ಜವಾಬ್ದಾರಿ ಮತ್ತು ಮುಂದಿನ ಹಂತದ ಹೋರಾಟದ ರೂಪುರೇಷೆಗಳನ್ನು ಪ್ರಕಟಿಸಲಾಗಿದೆ. ಈ ಹೋರಾಟವನ್ನು ಯಾವುದೇ ಸಾಂಕೇತಿಕ ಪ್ರತಿಭಟನೆಗೆ ಸೀಮಿತಗೊಳಿಸದೆ, ತಾರ್ಕಿಕ ಅಂತ್ಯ ತಲುಪುವವರೆಗೂ ಮುಂದುವರಿಸುವುದಾಗಿ ಒಕ್ಕೂಟ ಘೋಷಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಫಾರಂ 6 ಕುರಿತು ಸುಳ್ಳು ಹೇಳಿಕೆ: ಆಯೋಗದ ವಿರುದ್ಧ ಗಂಭೀರ ಆರೋಪ

ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವ ಒಕ್ಕೂಟ, ಫಾರಂ 6 ತಿದ್ದುಪಡಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಮುಂದೆ ಆಯೋಗ ನೀಡಿರುವ ಹೇಳಿಕೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದೆ. ಹೊಸ ಮತದಾರರನ್ನು ನೋಂದಾಯಿಸಿಕೊಳ್ಳಲು ಬಳಸುವ ಫಾರಂ 6ರಲ್ಲಿ ತಾನು ಯಾವುದೇ ಬದಲಾವಣೆ ಮಾಡಿಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಆದರೆ, ಈಗಾಗಲೇ ಮತದಾರರಾಗಿ ನೋಂದಣಿಯಾಗಿದ್ದರೂ SIR ಪ್ರಕ್ರಿಯೆಯಲ್ಲಿ ತಪ್ಪಾಗಿ ಪಟ್ಟಿಯಿಂದ ಅಳಿಸಲ್ಪಟ್ಟವರಿಗೆ ಹೊಸ ಮತದಾರರಿಗಾಗಿ ಇರುವ ಫಾರಂ 6ನ್ನೇ ಏಕೆ ನೀಡಲಾಯಿತು ಎಂಬ ಪ್ರಶ್ನೆಗೆ ಆಯೋಗದ ಬಳಿ ಸಮರ್ಥನೆಯಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ.

ಬಿಹಾರ ಚುನಾವಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಅನುಮೋದನೆ ಪಡೆದುಕೊಂಡೇ ಈ ಪ್ರಕ್ರಿಯೆ ಮುಂದುವರಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿತ್ತು. ಆದರೆ, ಫಾರಂ 6ಕ್ಕೆ ತಿದ್ದುಪಡಿ ಮಾಡಲು ತಾವು ಯಾವುದೇ ಅನುಮೋದನೆ ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸುವ ಮೂಲಕ ಜವಾಬ್ದಾರಿಯನ್ನು ಚುನಾವಣಾ ಆಯೋಗದ ಮೇಲೆಯೇ ಹೊರಿಸಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗ ನಡೆಸಿರುವ ಅಕ್ರಮಗಳ ಕುರಿತು ವಿಚಾರಣೆ ಮುಂದುವರಿಯಲಿದ್ದು, ಅದರ ವಿರುದ್ಧ ಕಾನೂನು ಕ್ರಮದ ಸಾಧ್ಯತೆಯೂ ಎದುರಾಗಿದೆ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.

ಇದರ ಬೆನ್ನಲ್ಲೇ, ನವೆಂಬರ್ 6ರಂದು SIR ಪ್ರಕ್ರಿಯೆ ಇನ್ನೂ ಮುಂದುವರಿಯುತ್ತಿರುವ ಏಳು ರಾಜ್ಯಗಳಿಗೆ ಚುನಾವಣಾ ಆಯೋಗ ಹೊಸ ಸುತ್ತೋಲೆ ಹೊರಡಿಸಿರುವುದನ್ನು ಒಕ್ಕೂಟ ತನ್ನ ಆರೋಪಗಳಿಗೆ ಪೂರಕವಾದ ಬೆಳವಣಿಗೆಯಾಗಿ ನೋಡಿದೆ. ದೆಹಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಮತ್ತು ನಾಗಾಲ್ಯಾಂಡ್ ರಾಜ್ಯಗಳಿಗೆ ನೀಡಿರುವ ಸೂಚನೆಗಳಲ್ಲಿ ಈ ಹಿಂದೆ ASDD ಪಟ್ಟಿಯಲ್ಲಿ ಸೇರಿಸಿ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಘೋಷಿಸಿದ್ದವರ ಹೆಸರುಗಳನ್ನು ಪ್ರತಿ ಮತಗಟ್ಟೆಯಲ್ಲೂ ಪ್ರಕಟಿಸುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲದೆ, ಮನೆಮನೆಗೆ ಮತ್ತೊಮ್ಮೆ ಭೇಟಿ ನೀಡುವುದು, ಅಕ್ಕಪಕ್ಕದವರಿಂದ ಮಾಹಿತಿ ಸಂಗ್ರಹಿಸುವುದು ಮತ್ತು ದೂರವಾಣಿ ಮೂಲಕ ಸಂಪರ್ಕಿಸುವುದರ ಮೂಲಕ ತಪ್ಪಾಗಿ ಹೊರಗುಳಿದಿರುವ ಮತದಾರರನ್ನು ಮರುನೋಂದಣಿ ಮಾಡಿಕೊಳ್ಳಲು ವಿಶೇಷ ಅಭಿಯಾನ ನಡೆಸುವಂತೆ ಆದೇಶಿಸಲಾಗಿದೆ.

ಇಲ್ಲಿ ಅತ್ಯಂತ ಪ್ರಮುಖವಾದ ಬದಲಾವಣೆಯೆಂದರೆ, ತಪ್ಪಾಗಿ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿರುವವರಿಂದ ಹೊಸ ಮತದಾರರಿಗಾಗಿ ಇರುವ ಫಾರಂ 6 ಅನ್ನು ಭರ್ತಿ ಮಾಡಿಸಬಾರದು ಎಂಬ ಸೂಚನೆ. ಬದಲಿಗೆ, ಈ ಹಿಂದೆ ಇದ್ದ ಎನ್ಯುಮರೇಷನ್ ಫಾರಂ ಅನ್ನೇ ಮತ್ತೆ ಭರ್ತಿ ಮಾಡಿಸಿಕೊಂಡು ಅವರ ಹಳೆಯ ಎಪಿಕ್ (EPIC) ಗುರುತಿನ ಚೀಟಿ ಸಂಖ್ಯೆಯಡಿಯಲ್ಲೇ ಮತದಾರರ ಪಟ್ಟಿಗೆ ಮರುಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಯೋಗ ಹೇಳಿದೆ. ಒಂದು ವೇಳೆ ಸಂಬಂಧಪಟ್ಟ ಮತದಾರರು ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರೆ, ಅವರಿಂದ ಎನ್ಯುಮರೇಷನ್ ಫಾರಂ ಮತ್ತು ಹೊಸ ವಿಳಾಸದ ವಿವರಗಳನ್ನು ಪಡೆದು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಬೇಕು ಎಂದೂ ಸೂಚಿಸಲಾಗಿದೆ.

ಈ ಏಳು ರಾಜ್ಯಗಳಿಗೆ ಇಂತಹ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಲು ಅವಕಾಶ ನೀಡಿರುವ ಚುನಾವಣಾ ಆಯೋಗ ಕರ್ನಾಟಕಕ್ಕೆ ಮಾತ್ರ ಇದೇ ಕ್ರಮಗಳನ್ನು ಏಕೆ ಅನ್ವಯಿಸುತ್ತಿಲ್ಲ ಎಂದು ಒಕ್ಕೂಟ ಪ್ರಶ್ನಿಸಿದೆ. ಕರ್ನಾಟಕದ ನಾಗರಿಕ ಸಮಾಜ ಈ ಹಿಂದೆ ಹಲವು ಮನವಿ ಪತ್ರಗಳನ್ನು ಸಲ್ಲಿಸಿ, ಪತ್ರಿಕಾಗೋಷ್ಠಿಗಳನ್ನು ನಡೆಸಿ ಇದೇ ಸಮಸ್ಯೆಗಳನ್ನು ಆಯೋಗದ ಗಮನಕ್ಕೆ ತಂದಿದ್ದರೂ ಅವುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿತ್ತು. ಈಗ ಇತರ ಏಳು ರಾಜ್ಯಗಳಿಗೆ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿರುವ ಆಯೋಗ, ಕರ್ನಾಟಕದ ವಿಚಾರದಲ್ಲಿ ಮಾತ್ರ ಮೊಂಡುತನ ಮುಂದುವರಿಸುತ್ತಿರುವುದೇಕೆ ಎಂಬುದು ಒಕ್ಕೂಟದ ಪ್ರಶ್ನೆಯಾಗಿದೆ.

ಕರ್ನಾಟಕದಲ್ಲಿ ಲಕ್ಷಾಂತರ ಮತದಾರರನ್ನು ‘ಪರ್ಮನೆಂಟ್ಲಿ ಶಿಫ್ಟೆಡ್’ ಎಂದು ತಪ್ಪಾಗಿ ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮತ್ತೊಂದೆಡೆ, ಈಗಾಗಲೇ ಮತದಾರರಾಗಿದ್ದ ಲಕ್ಷಾಂತರ ಜನರಿಗೆ ಹೊಸ ಮತದಾರರಿಗಾಗಿ ಇರುವ ಫಾರಂ 6 ನೀಡುವ ಮೂಲಕ ಅವರ ಹಿಂದಿನ ಮತದಾನದ ಇತಿಹಾಸವನ್ನೇ ಅಳಿಸಿ, ಹೊಸ ಮತದಾರರಂತೆ ಮರುನೋಂದಣಿ ಮಾಡಿಕೊಳ್ಳಲಾಗಿದೆ ಎಂಬುದು ಒಕ್ಕೂಟದ ಗಂಭೀರ ಆರೋಪ. ಈ ಅವಾಂತರವನ್ನು ಸರಿಪಡಿಸಲು ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಬೇಕು ಎಂದು ಅದು ಆಗ್ರಹಿಸಿದೆ.

70 ಲಕ್ಷ ವಯಸ್ಕರು ಮತದಾರರ ಪಟ್ಟಿಯಿಂದ ಹೊರಗುಳಿದಿರುವುದೇಕೆ?

ಕರ್ನಾಟಕದಲ್ಲಿ ಪ್ರಕಟಿಸಿರುವ SIR ಅಂತಿಮ ಮತದಾರರ ಪಟ್ಟಿಯನ್ನೇ ಒಕ್ಕೂಟ ತರ್ಕಹೀನ ಮತ್ತು ದೋಷಪೂರಿತ ಎಂದು ಕರೆದಿದೆ. ‘ಒಬ್ಬ ಅನರ್ಹ ಮತದಾರನನ್ನೂ ಉಳಿಸುವುದಿಲ್ಲ, ಒಬ್ಬ ಅರ್ಹ ಮತದಾರನನ್ನೂ ಕೈಬಿಡುವುದಿಲ್ಲ’ ಎಂಬ ಘೋಷಣೆಯೊಂದಿಗೆ ಆರಂಭವಾದ ವಿಶೇಷ ತೀವ್ರ ಪರಿಷ್ಕರಣೆ, ಕೊನೆಗೆ ಅರ್ಹ ಮತದಾರರೇ ದೊಡ್ಡ ಸಂಖ್ಯೆಯಲ್ಲಿ ಹೊರಗುಳಿಯುವ ಸ್ಥಿತಿಗೆ ತಲುಪಿದೆ ಎಂದು ಟೀಕಿಸಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ 18 ವರ್ಷ ದಾಟಿದ ವಯಸ್ಕರ ಜನಸಂಖ್ಯೆ ಸುಮಾರು 5.2 ಕೋಟಿ ಇದೆ. ಆದರೆ SIR ಅಂತಿಮ ಪಟ್ಟಿಯಲ್ಲಿ ಉಳಿದಿರುವ ಮತದಾರರ ಸಂಖ್ಯೆ ಸುಮಾರು 4.5 ಕೋಟಿ ಮಾತ್ರ. ಹಾಗಾದರೆ ಉಳಿದ ಸುಮಾರು 70 ಲಕ್ಷ ವಯಸ್ಕರು ಮತದಾರರ ಪಟ್ಟಿಯಲ್ಲಿ ಏಕೆ ಇಲ್ಲ? ಅವರು ಮತದಾನದ ಹಕ್ಕಿಗೆ ಅರ್ಹರಲ್ಲವೇ ಅಥವಾ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆಯೇ ಎಂಬುದಕ್ಕೆ ಚುನಾವಣಾ ಆಯೋಗ ಉತ್ತರಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ವಿಶೇಷವಾಗಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿಯೇ ಮತದಾರರ ಸಂಖ್ಯೆಯಲ್ಲಿ ಇಷ್ಟೊಂದು ದೊಡ್ಡ ವ್ಯತ್ಯಾಸ ಕಾಣಿಸಿಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಒಕ್ಕೂಟ ಹೇಳಿದೆ. ಗಾಂಧಿನಗರ, ರಾಜಾಜಿನಗರ ಮತ್ತು ಬಸವನಗುಡಿ ವಿಧಾನಸಭಾ ಕ್ಷೇತ್ರಗಳಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರ ಸಂಖ್ಯೆಯೇ ಈಗಿನ ಮತದಾರರ ಪಟ್ಟಿಯಲ್ಲಿರುವ ಒಟ್ಟು ಮತದಾರರ ಸಂಖ್ಯೆಗಿಂತ ಹೆಚ್ಚಾಗಿದೆ ಎಂಬುದು ಸಂಘಟನೆ ಎತ್ತಿರುವ ಗಂಭೀರ ಪ್ರಶ್ನೆ. ಹಿಂದಿನ ಚುನಾವಣೆಯಲ್ಲಿ ಮತ ಚಲಾಯಿಸಿದ್ದವರು ಈಗಿನ ಪಟ್ಟಿಯಲ್ಲಿ ಇಲ್ಲದಿದ್ದರೆ ಅವರು ಎಲ್ಲಿಗೆ ಹೋದರು? ಅವರನ್ನು ಯಾವ ಆಧಾರದ ಮೇಲೆ ತೆಗೆದುಹಾಕಲಾಯಿತು? ಎಂಬ ಪ್ರಶ್ನೆಗಳಿಗೆ ಆಯೋಗ ಉತ್ತರಿಸಬೇಕಿದೆ.

‘ಮತ ಕಾವಲು ಸಮಿತಿ’ ನಡೆಸಿದ ಪರಿಶೋಧನೆಯೂ ಈ ಅನುಮಾನಗಳಿಗೆ ಮತ್ತಷ್ಟು ಬಲ ನೀಡಿದೆ ಎಂದು ಒಕ್ಕೂಟ ಹೇಳಿದೆ. ಸಮಿತಿ ಪರಿಶೀಲಿಸಿದ ಎಲ್ಲಾ 73 ಮತಗಟ್ಟೆಗಳಲ್ಲಿಯೂ ನೂರಾರು ತಪ್ಪಾದ ಮತದಾರರ ಡಿಲೀಷನ್ ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಕರಣಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ. ಕೇವಲ 73 ಮತಗಟ್ಟೆಗಳಲ್ಲಿ ಇಷ್ಟೊಂದು ಪ್ರಮಾಣದ ಲೋಪಗಳು ಕಂಡುಬಂದಿರುವಾಗ, ರಾಜ್ಯದಾದ್ಯಂತ ಇರುವ ಸುಮಾರು 6,000 ಮತಗಟ್ಟೆಗಳಲ್ಲಿ ಎಷ್ಟು ಮಂದಿ ಅರ್ಹ ಮತದಾರರನ್ನು ತಪ್ಪಾಗಿ ಪಟ್ಟಿಯಿಂದ ಹೊರಗಿಡಲಾಗಿದೆ ಎಂಬುದನ್ನು ಊಹಿಸಬಹುದು ಎಂದು ಸಂಘಟನೆ ಹೇಳಿದೆ.

ನಟ ಪ್ರಕಾಶ್ ರಾಜ್ ಅವರ ಹೆಸರನ್ನೂ ತಪ್ಪಾದ ಕಾರಣಕ್ಕೆ ಮತದಾರರ ಪಟ್ಟಿಯಿಂದ ತೆಗೆದುಹಾಕಿರುವ ಉದಾಹರಣೆಯನ್ನು ಒಕ್ಕೂಟ ಉಲ್ಲೇಖಿಸಿದೆ. ಜೀವಂತವಾಗಿರುವ, ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ವ್ಯಕ್ತಿಯ ಹೆಸರನ್ನೇ ತಪ್ಪಾಗಿ ಡಿಲೀಟ್ ಮಾಡಿರುವ ಪ್ರಕರಣ ಕಣ್ಣೆದುರಿಗಿರುವಾಗ, ಇದೇ ರೀತಿಯ ಸಮಸ್ಯೆ ಎದುರಿಸಿರುವ ಸಾಮಾನ್ಯ ಮತದಾರರಿಗೆ ನ್ಯಾಯ ಒದಗಿಸಲು ಆಯೋಗ ಏಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದೆ.

ಇದರ ಜೊತೆಗೆ, ಅಂತಿಮ ಮತದಾರರ ಪಟ್ಟಿಯನ್ನೇ ಪರಿಶೀಲಿಸಿದ ತನ್ನ ಡೇಟಾ ತಂಡ ಹಲವು ಗಂಭೀರ ದೋಷಗಳನ್ನು ಪತ್ತೆಹಚ್ಚಿದೆ ಎಂದು ಒಕ್ಕೂಟ ತಿಳಿಸಿದೆ. ಪಟ್ಟಿಯಲ್ಲಿ ಸುಮಾರು 9,000 ಡೂಪ್ಲಿಕೇಟ್ ಎಂಟ್ರಿಗಳಿವೆ. ಒಂದೇ ಮನೆಯ ಸಂಖ್ಯೆಯಲ್ಲಿ ನೂರಕ್ಕೂ ಹೆಚ್ಚು ಮತದಾರರು ದಾಖಲಾಗಿರುವ 380 ಪ್ರಕರಣಗಳಿವೆ. ಸರಿಯಾದ ವಿಳಾಸವೇ ಇಲ್ಲದ ಸುಮಾರು 20 ಲಕ್ಷ ನಮೂದುಗಳಿವೆ ಎಂದು ಹೇಳಿದೆ. ಇವು ಕೇವಲ ತಾಂತ್ರಿಕ ತಪ್ಪುಗಳಲ್ಲ; ಮತದಾರರ ಪಟ್ಟಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಹ ಲೋಪಗಳಾಗಿವೆ ಎಂಬುದು ಸಂಘಟನೆಯ ಅಭಿಪ್ರಾಯ.

30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಮತದಾರರಲ್ಲಿ ಶೇ.25ರಷ್ಟು ಮಂದಿ ನೋಂದಣಿಯಾಗದೆ ಹೊರಗುಳಿದಿದ್ದಾರೆ ಎಂದು ಬಿಕ್ಷಂ ಗುಜ್ಜ ಅವರ ಅಧ್ಯಯನ ತಿಳಿಸಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ ಸುಮಾರು 1.2 ಲಕ್ಷ ಹೊಸ ಮತದಾರರನ್ನು ನೋಂದಾಯಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಈ ನೋಂದಣಿಗೆ ಸಂಬಂಧಿಸಿದ ಮೂಲ ಮಾಹಿತಿ ಲಭ್ಯವಿಲ್ಲ ಎಂದು ‘ದಿ ಹಿಂದೂ’ ವರದಿ ಮಾಡಿದೆ ಎಂಬುದನ್ನೂ ಒಕ್ಕೂಟ ಪ್ರಸ್ತಾಪಿಸಿದೆ.

ಇಡೀ ದೇಶದಲ್ಲಿಯೇ ಕರ್ನಾಟಕದಲ್ಲಿ ಅತಿ ಹೆಚ್ಚು ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಆರೋಪವನ್ನೂ ಸಂಘಟನೆ ಮುಂದಿಟ್ಟಿದೆ. ಇಷ್ಟೊಂದು ಪ್ರಮಾಣದ ಲೋಪಗಳು ಮತ್ತು ಗಂಭೀರ ಪ್ರಶ್ನೆಗಳು ಎದುರಿಗಿದ್ದರೂ ಚುನಾವಣಾ ಆಯೋಗ ಅವುಗಳಿಗೆ ತಾರ್ಕಿಕ ಉತ್ತರ ನೀಡುತ್ತಿಲ್ಲ. ಹೀಗಿರುವಾಗ ಅಂತಿಮ ಪಟ್ಟಿಯನ್ನು ದೋಷರಹಿತವೆಂದು ಪರಿಗಣಿಸುವುದು ಹೇಗೆ ಸಾಧ್ಯ ಎಂದು ಅದು ಪ್ರಶ್ನಿಸಿದೆ.

1.08 ಕೋಟಿ ಹೆಸರುಗಳಲ್ಲಿ ಕೇವಲ 14,900 ಮಂದಿಯ ಮರುಸೇರ್ಪಡೆ!

ಕರ್ನಾಟಕದಲ್ಲಿ SIR ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯಿಂದ ಸುಮಾರು 1.08 ಕೋಟಿ ಜನರನ್ನು ಡಿಲೀಟ್ ಮಾಡಲಾಗಿತ್ತು. ಆದರೆ, ನಂತರ ಅವರನ್ನು ಮರಳಿ ಸೇರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕೇವಲ 14,900 ಮಂದಿಯನ್ನು ಮಾತ್ರ ಮರುಸೇರ್ಪಡೆ ಮಾಡಲಾಗಿದೆ. ಅಂದರೆ, ಡಿಲೀಟ್ ಆಗಿದ್ದವರಲ್ಲಿ ಕೇವಲ ಶೇ.0.14ರಷ್ಟು ಮಂದಿಯನ್ನು ಮಾತ್ರ ವಾಪಸ್ ಸೇರಿಸಿಕೊಂಡಂತಾಗಿದೆ ಎಂದು ಒಕ್ಕೂಟ ಅಂಕಿಅಂಶಗಳನ್ನು ಮುಂದಿಟ್ಟಿದೆ.

ಇಂತಹ ಪರಿಸ್ಥಿತಿಯಲ್ಲಿ ಈಗ SSR ಹೆಸರಿನಲ್ಲಿ ಡಿಸೆಂಬರ್ 1ರಿಂದ ಜನವರಿ 1ರವರೆಗೆ ಮತ್ತೊಂದು ನೋಂದಣಿ ಅಭಿಯಾನ ನಡೆಸುವುದಾಗಿ ಚುನಾವಣಾ ಆಯೋಗ ಹೇಳುತ್ತಿರುವುದರ ಉದ್ದೇಶವೇನು ಎಂದು ಸಂಘಟನೆ ಪ್ರಶ್ನಿಸಿದೆ. SIR ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ, ಅಂತಿಮ ಪಟ್ಟಿ ಸಿದ್ಧವಾಗಿದೆ ಎಂದು ಹೇಳಿಕೊಂಡಿರುವ ಆಯೋಗ ಈಗ ಮತ್ತೆ ಬಿಟ್ಟುಹೋದ ಮತದಾರರನ್ನು ಮತ್ತು ಹೊಸ ಮತದಾರರನ್ನು ಸೇರಿಸಿಕೊಳ್ಳಲು ವಿಶೇಷ ಅಭಿಯಾನ ನಡೆಸುತ್ತಿರುವುದೇಕೆ? ಹಿಂದಿನ ಪ್ರಕ್ರಿಯೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರು ಏಕೆ ಹೊರಗುಳಿದರು ಎಂಬುದರ ಬಗ್ಗೆ ಮೊದಲು ಪರಿಶೀಲನೆ ನಡೆಸಬೇಕಲ್ಲವೇ ಎಂದು ಅದು ಕೇಳಿದೆ.

ಹೊಸ ಮತದಾರರನ್ನು ಗುರುತಿಸುವುದು ಮತ್ತು ನೋಂದಾಯಿಸುವುದು SIR ಪ್ರಕ್ರಿಯೆಯಲ್ಲಿಯೇ ನಡೆಯಬೇಕಿತ್ತು. ಮನೆಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ 18 ವರ್ಷ ತುಂಬಿದ ಯುವಜನರ ವಿವರಗಳನ್ನು ಸಂಗ್ರಹಿಸಿ ನೋಂದಾಯಿಸಿಕೊಳ್ಳಲು ಆಯೋಗ ಏಕೆ ಗಮನ ನೀಡಲಿಲ್ಲ? ಈಗ ಮತ್ತೊಂದು ತಿಂಗಳ ಅಭಿಯಾನ ನಡೆಸುವುದರಿಂದ ಹಿಂದಿನ ಲೋಪಗಳು ಸರಿಯಾಗುತ್ತವೆಯೇ? ಈಗಾಗಲೇ ತಪ್ಪಾಗಿ ಡಿಲೀಟ್ ಆಗಿರುವವರನ್ನು ಮತ್ತೆ ಸೇರಿಸಿಕೊಳ್ಳಲು ಹಳೆಯ ಎನ್ಯುಮರೇಷನ್ ಫಾರಂ ಬದಲು ಹೊಸ ಫಾರಂ 6 ಬಳಸಿದ ತಪ್ಪನ್ನು ಹೇಗೆ ಸರಿಪಡಿಸಲಾಗುತ್ತದೆ? ಎಂಬ ಪ್ರಶ್ನೆಗಳನ್ನು ಒಕ್ಕೂಟ ಮುಂದಿಟ್ಟಿದೆ.

ಹೀಗಾಗಿ, SIR ಪ್ರಕ್ರಿಯೆಯಲ್ಲಿನ ಮೂಲ ಲೋಪಗಳನ್ನು ಸರಿಪಡಿಸದೆ SSR ನಡೆಸುವುದು ಮತ್ತೊಂದು ಬೂಟಾಟಿಕೆಯ ಪ್ರಯತ್ನವಷ್ಟೇ. ಈ ಪ್ರಕ್ರಿಯೆಯನ್ನು ಕರ್ನಾಟಕದ ನಾಗರಿಕ ಸಮಾಜ ಒಪ್ಪುವುದಿಲ್ಲ ಮತ್ತು SSR ಅನ್ನು ಒಕ್ಕೊರಲಿನಿಂದ ತಿರಸ್ಕರಿಸುತ್ತದೆ ಎಂದು ಒಕ್ಕೂಟ ಎಚ್ಚರಿಸಿದೆ.

SIR ವಿರುದ್ಧ ಹೋರಾಟದ ನಡುವೆಯೇ ಕೆಲ ಕಾಂಗ್ರೆಸ್ ಸಚಿವರ ದ್ವಂದ್ವ ನಿಲುವು

SIR ವಿರುದ್ಧ ದೇಶಾದ್ಯಂತ ವಿರೋಧ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಕೆಲ ಸಚಿವರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳ ಬಗ್ಗೆಯೂ ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. SIR ಪ್ರಕ್ರಿಯೆಯಲ್ಲಿನ ಅಕ್ರಮಗಳು ಮತ್ತು ಲೋಪಗಳು ಬಹಿರಂಗವಾಗಿರುವಾಗ, ಸ್ವತಃ ಚುನಾವಣಾ ಆಯೋಗವೇ ಕೆಲವು ತಪ್ಪು ಕ್ರಮಗಳನ್ನು ಬದಲಾಯಿಸಿಕೊಳ್ಳಲು ಮುಂದಾಗಿರುವಾಗ, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ SIR ವಿರುದ್ಧ ಹೋರಾಟ ನಡೆಸುವುದಾಗಿ ಘೋಷಿಸಿರುವಾಗ ಕರ್ನಾಟಕದ ಕೆಲ ಸಚಿವರು ಮಾತ್ರ ಈ ವಿಚಾರದಲ್ಲಿ ದ್ವಂದ್ವ ನಿಲುವು ತಾಳುತ್ತಿರುವುದು ಸರಿಯಲ್ಲ ಎಂದು ಟೀಕಿಸಿದೆ.

‘ನಮ್ಮ ಕ್ಷೇತ್ರದಲ್ಲಿ ಏನೂ ಆಗಿಲ್ಲ, ಬದಲಿಗೆ ನಮಗೆ ಲಾಭವಾಗಿದೆ’, ‘ಡಿಲೀಟ್ ಆಗಿರುವವರು ಉತ್ತರ ಭಾರತದ ಬಿಜೆಪಿ ಮತದಾರರು’ ಎಂಬಂತಹ ಅಭಿಪ್ರಾಯಗಳನ್ನು ಕೆಲ ಸಚಿವರು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಹೇಳಿಕೆಗಳು ಸಮಸ್ಯೆಯ ಗಂಭೀರತೆಯನ್ನು ಅರಿಯದ ಸಂಕುಚಿತ ರಾಜಕೀಯ ಮನೋಭಾವವನ್ನು ತೋರಿಸುತ್ತವೆ ಎಂದು ಒಕ್ಕೂಟ ಆರೋಪಿಸಿದೆ.

ಒಂದು ಕ್ಷೇತ್ರದಲ್ಲಿ ತಮಗೆ ರಾಜಕೀಯವಾಗಿ ಲಾಭವಾಗಿದೆ ಎಂಬ ಭ್ರಮೆಯ ಆಧಾರದ ಮೇಲೆ ಇಡೀ ರಾಜ್ಯದ ಮತದಾರರ ಹಕ್ಕುಗಳ ಪ್ರಶ್ನೆಯನ್ನು ನಿರ್ಲಕ್ಷಿಸುವುದು ಸ್ವಾರ್ಥ ರಾಜಕಾರಣವಾಗುತ್ತದೆ. ತಮ್ಮ ಕ್ಷೇತ್ರದಲ್ಲಿ ಏನೂ ಸಮಸ್ಯೆಯಾಗಿಲ್ಲ ಎಂಬ ಕಾರಣಕ್ಕೆ ರಾಜ್ಯದ ಉಳಿದ ಭಾಗಗಳಲ್ಲಿ ನಡೆದಿರುವ ಮತದಾರರ ಡಿಲೀಷನ್‌ಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. SIR ಅಂತಿಮ ಪಟ್ಟಿಯನ್ನೇ ಒಪ್ಪಿಕೊಂಡು ಅದರಲ್ಲಿಯೇ ಉಳಿದವರನ್ನು ಸೇರಿಸಿಕೊಳ್ಳೋಣ ಎಂಬ ಧೋರಣೆ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಂಘಟನೆ ಹೇಳಿದೆ.

ಕಾಂಗ್ರೆಸ್ ಸಚಿವರ ಇಂತಹ ಬೇಜವಾಬ್ದಾರಿ ನಡವಳಿಕೆಯನ್ನು ಪಕ್ಷದ ನಾಯಕತ್ವ ಗಂಭೀರವಾಗಿ ಪರಿಗಣಿಸಬೇಕು ಮತ್ತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

ಕರ್ನಾಟಕದಲ್ಲಿ ನಾಗರಿಕ ಸಂಘಟನೆಗಳು ಮತ್ತು ಕಾಂಗ್ರೆಸ್ ಸೇರಿದಂತೆ ಜಾತ್ಯತೀತ ಪಕ್ಷಗಳು ಒಟ್ಟಾಗಿ ನಡೆಸಿದ ಹೋರಾಟದಿಂದ ಮತದಾರರಲ್ಲಿ ಒಂದು ಮಟ್ಟದ ಜಾಗೃತಿ ಮೂಡಿದೆ. SIR ಪ್ರಕ್ರಿಯೆಯಲ್ಲಿ ಕೆಲವು ಸುಧಾರಣೆಗಳನ್ನು ತರಲು ಸಾಧ್ಯವಾಗಿದೆ. ಬಿಜೆಪಿ ರೂಪಿಸಿದ್ದ ಫಾರಂ 7ರ ಮೂಲಕ ಸಂಘಟಿತವಾಗಿ ಮತದಾರರ ಹೆಸರುಗಳನ್ನು ತೆಗೆಸುವ ಸಂಚು ಕೂಡ ಬಯಲಾಗಿ ವಿಫಲವಾಗಿದೆ ಎಂಬುದು ಒಕ್ಕೂಟದ ಅಭಿಪ್ರಾಯ. ಆದರೆ, ಈ ಬೆಳವಣಿಗೆಗಳನ್ನೇ ಆಧರಿಸಿ ಕರ್ನಾಟಕದಲ್ಲಿ SIR ಷಡ್ಯಂತ್ರವನ್ನು ಸಂಪೂರ್ಣವಾಗಿ ವಿಫಲಗೊಳಿಸಲಾಗಿದೆ ಎಂದು ಭಾವಿಸುವುದು ದೊಡ್ಡ ತಪ್ಪಾಗುತ್ತದೆ ಎಂದು ಎಚ್ಚರಿಸಿದೆ.

ಹೋರಾಟದಿಂದ ಕೆಲವು ಬದಲಾವಣೆಗಳನ್ನು ತರಲು ಸಾಧ್ಯವಾಗಿರುವುದು ನಿಜ. ಆದರೆ, ಅಂತಿಮ ಮತದಾರರ ಪಟ್ಟಿಯಲ್ಲಿನ ದೋಷಗಳು, ಲಕ್ಷಾಂತರ ಮತದಾರರು ಹೊರಗುಳಿದಿರುವ ಪ್ರಶ್ನೆ ಮತ್ತು ಚುನಾವಣಾ ಆಯೋಗದ ಜವಾಬ್ದಾರಿಯ ವಿಚಾರಗಳು ಇನ್ನೂ ಬಗೆಹರಿದಿಲ್ಲ. ಹೀಗಾಗಿ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.

SIR ಅಂತಿಮ ಪಟ್ಟಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರಕ್ಕೆ ಆಗ್ರಹ

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ವಿಚಾರದಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಸ್ಪಷ್ಟ ಮತ್ತು ನೀತಿಬದ್ಧ ನಿಲುವು ತೆಗೆದುಕೊಳ್ಳಬೇಕು ಎಂದು ಒಕ್ಕೂಟ ಒತ್ತಾಯಿಸಿದೆ. ಈ ವಿಚಾರದಲ್ಲಿ ರಾಜ್ಯ ಚುನಾವಣಾ ಆಯೋಗವೂ ಗೊಂದಲಕಾರಿ ಮತ್ತು ದ್ವಂದ್ವ ನಿಲುವು ತಾಳಿದೆ ಎಂದು ಆರೋಪಿಸಿದೆ.

ಒಂದೆಡೆ, ಬಿಬಿಎಂಪಿ ವ್ಯಾಪ್ತಿಯ ಚುನಾವಣಾ ಅಧಿಕಾರಿಗಳಿಗೆ SIR ಅಂತಿಮ ಮತದಾರರ ಪಟ್ಟಿಯನ್ನೇ ಆಧರಿಸಿ ಸ್ಥಳೀಯ ಚುನಾವಣೆಗಳಿಗೆ ಸಿದ್ಧತೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ. ಮತ್ತೊಂದೆಡೆ, SIR ಮತದಾರರ ಪಟ್ಟಿಯನ್ನೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಬಳಸಬಹುದೇ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಒಂದೇ ವಿಚಾರದಲ್ಲಿ ಎರಡು ವಿಭಿನ್ನ ನಿಲುವುಗಳನ್ನು ತಾಳಿರುವುದರಿಂದ ಚುನಾವಣಾ ಪ್ರಕ್ರಿಯೆಯ ಕುರಿತು ಗೊಂದಲ ಸೃಷ್ಟಿಯಾಗಿದೆ ಎಂದು ಒಕ್ಕೂಟ ಹೇಳಿದೆ.

ಸಚಿವರ ಹೇಳಿಕೆಗಳು ಮತ್ತು ರಾಜ್ಯ ಚುನಾವಣಾ ಆಯೋಗದ ಕ್ರಮಗಳಿಂದ ಉಂಟಾಗಿರುವ ಈ ಗೊಂದಲಕ್ಕೆ ರಾಜ್ಯ ಸರ್ಕಾರವೇ ಅಂತಿಮ ತೆರೆ ಎಳೆಯಬೇಕು. ಈ ಸಂಬಂಧ ಮುಖ್ಯಮಂತ್ರಿ ಮೂರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಮೊದಲನೆಯದಾಗಿ, ಕರ್ನಾಟಕದಲ್ಲಿ ಪ್ರಕಟಿಸಿರುವ SIR ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಬೇಕು. ಎರಡನೆಯದಾಗಿ, ಮತದಾರರ ಪಟ್ಟಿಯಿಂದ ಡಿಲೀಟ್ ಆಗಿರುವವರು ಮತ್ತು ನೋಂದಣಿಯಾಗದೆ ಹೊರಗುಳಿದಿರುವ ಅರ್ಹ ಮತದಾರರನ್ನು ಗುರುತಿಸಲು ರಾಜ್ಯ ಸರ್ಕಾರ ಸ್ವತಂತ್ರ ಹಾಗೂ ವ್ಯವಸ್ಥಿತವಾದ ಸಾಮಾಜಿಕ ಪರಿಶೋಧನಾ (Social Audit) ಅಭಿಯಾನವನ್ನು ಕೈಗೆತ್ತಿಕೊಳ್ಳಬೇಕು. ಮೂರನೆಯದಾಗಿ, ಈ ಸಾಮಾಜಿಕ ಪರಿಶೋಧನೆಯ ಮೂಲಕ ಪರಿಷ್ಕರಿಸಲಾದ 2025ರ ಮತದಾರರ ಪಟ್ಟಿಯನ್ನೇ ಆಧರಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಬೇಕು ಎಂದು ಒಕ್ಕೂಟ ತನ್ನ ಬೇಡಿಕೆಗಳನ್ನು ಮುಂದಿಟ್ಟಿದೆ.

ಈ ಸಂದರ್ಭದಲ್ಲಿ ಬಿಜೆಪಿ ಆಡಳಿತವಿರುವ ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿಯೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ SIR ಮತದಾರರ ಪಟ್ಟಿಯನ್ನು ಬಳಸಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಗಮನಿಸಬೇಕು ಎಂದು ಸಂಘಟನೆ ಹೇಳಿದೆ. ಹೀಗಿರುವಾಗ ಕರ್ನಾಟಕದಲ್ಲಿ ಮಾತ್ರ ದೋಷಪೂರಿತ SIR ಪಟ್ಟಿಯನ್ನೇ ಸ್ಥಳೀಯ ಚುನಾವಣೆಗಳಿಗೆ ಬಳಸುವ ಅಗತ್ಯವೇನಿದೆ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದೆ.

ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವ ಹೊಣೆಗಾರಿಕೆ ಕೇವಲ ಚುನಾವಣಾ ಆಯೋಗದ ಮೇಲಿದೆ ಎಂದು ಹೇಳಿ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳಬಾರದು. ಪ್ರಜಾಪ್ರಭುತ್ವದ ಹಕ್ಕುಗಳಿಂದ ಅರ್ಹ ನಾಗರಿಕರು ವಂಚಿತರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯೂ ಆಗಿದೆ. ಆದ್ದರಿಂದ ಮುಖ್ಯಮಂತ್ರಿ ಈ ವಿಚಾರದಲ್ಲಿ ರಾಜಕೀಯ ಲಾಭ-ನಷ್ಟಗಳನ್ನು ಬದಿಗಿಟ್ಟು ಸ್ಪಷ್ಟವಾದ ನಿಲುವು ಪ್ರಕಟಿಸಬೇಕು ಎಂಬುದು ಒಕ್ಕೂಟದ ಒತ್ತಾಯವಾಗಿದೆ.

ನವೆಂಬರ್ 26ರಿಂದ ದೇಶದ 100 ನಗರಗಳಲ್ಲಿ ‘ಪ್ರಜಾತಂತ್ರ ಮರುಸ್ಥಾಪನಾ ಅಭಿಯಾನ’

SIR ವಿರುದ್ಧದ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಾಗರಿಕ ಸಂಘಟನೆಗಳು ಸಿದ್ಧತೆ ನಡೆಸಿವೆ. ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ದೇಶದ ವಿವಿಧ ಭಾಗಗಳಲ್ಲಿ SIR ವಿರೋಧಿ ಹೋರಾಟ ನಡೆಸುತ್ತಿರುವ ಸಮಾನ ಮನಸ್ಕ ಸಂಘಟನೆಗಳು ಮತ್ತು ವೇದಿಕೆಗಳು ಒಗ್ಗೂಡಿ ‘People Against SIR’ ಎಂಬ ವಿಶಾಲ ರಾಷ್ಟ್ರೀಯ ವೇದಿಕೆಯನ್ನು ರೂಪಿಸಿವೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವೇದಿಕೆಯ ವತಿಯಿಂದ ನವೆಂಬರ್ 26ರ ಸಂವಿಧಾನ ದಿನದಂದು ‘ಪ್ರಜಾತಂತ್ರ ಮರುಸ್ಥಾಪನಾ ಅಭಿಯಾನ’ಕ್ಕೆ ಚಾಲನೆ ನೀಡಲಾಗುತ್ತಿದೆ. ಮತದಾನದ ಹಕ್ಕು, ಪ್ರತಿಭಟಿಸುವ ಹಕ್ಕು ಮತ್ತು ಜೀವಿಸುವ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶದಿಂದ ದೇಶವ್ಯಾಪಿ ಬೃಹತ್ ಆಂದೋಲನವನ್ನು ರೂಪಿಸಲಾಗಿದೆ.

ನವೆಂಬರ್ 26ರಂದು ದೆಹಲಿ ಮತ್ತು ಬೆಂಗಳೂರನ್ನು ಒಳಗೊಂಡಂತೆ ದೇಶದ 100 ನಗರಗಳಲ್ಲಿ ಏಕಕಾಲಕ್ಕೆ ಬೃಹತ್ ಪ್ರತಿಭಟನೆಗಳು ಮತ್ತು ಪ್ರದರ್ಶನಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಪ್ರತಿಭಟನೆಗಳ ಮೂಲಕ SIR ರದ್ದತಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆ ಮತ್ತು ಚುನಾವಣಾ ಆಯೋಗದ ಆಯ್ಕೆ ವಿಧಾನದಲ್ಲಿ ಬದಲಾವಣೆ ತರಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗುತ್ತದೆ ಎಂದು ಒಕ್ಕೂಟ ತಿಳಿಸಿದೆ.

ಕರ್ನಾಟಕದಲ್ಲಿಯೂ ಅಂದು ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ಜನವರ್ಗಗಳ ಸಂಘಟನೆಗಳು, ಜನಪರ ಹೋರಾಟಗಳು ಮತ್ತು ಸಮಾನ ಮನಸ್ಕ ವೇದಿಕೆಗಳೊಂದಿಗೆ ಸಮನ್ವಯ ಸಾಧಿಸಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪರಿಣಾಮಕಾರಿಯಾದ ‘ಪ್ರಜಾ ಪಾರ್ಲಿಮೆಂಟ್’ ಆಯೋಜಿಸಲು ನಿರ್ಧರಿಸಲಾಗಿದೆ. ಇದರ ರೂಪುರೇಷೆ ಮತ್ತು ಇತರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದೆ.

ನವೆಂಬರ್ 20ರಿಂದ ಡಿಸೆಂಬರ್ 20ರವರೆಗೆ ರಾಜ್ಯಾದ್ಯಂತ ಪರಿಶೋಧನಾ ಅಭಿಯಾನ

SIR ಪ್ರಕ್ರಿಯೆಯ ನೈಜ ಸ್ವರೂಪವನ್ನು ಜನರ ಮುಂದಿಡಲು ತಳಮಟ್ಟದಲ್ಲಿ ಪರಿಶೋಧನೆ ನಡೆಸುವುದು ಹೋರಾಟದ ಮುಂದಿನ ಪ್ರಮುಖ ಕಾರ್ಯತಂತ್ರವಾಗಿದೆ. ಈ ಉದ್ದೇಶದಿಂದ ನವೆಂಬರ್ 20ರಿಂದ ಡಿಸೆಂಬರ್ 20ರವರೆಗೆ ಒಂದು ತಿಂಗಳ ಕಾಲ ರಾಜ್ಯಾದ್ಯಂತ ವಿಶೇಷ ಪರಿಶೋಧನಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಒಕ್ಕೂಟ ಪ್ರಕಟಿಸಿದೆ.

ಈ ಅಭಿಯಾನದ ಮೂಲಕ ಮತದಾರರ ಪಟ್ಟಿಯಿಂದ ತಪ್ಪಾಗಿ ಹೆಸರುಗಳನ್ನು ತೆಗೆದುಹಾಕಿರುವ ಪ್ರಕರಣಗಳು, ಅರ್ಹ ಮತದಾರರು ನೋಂದಣಿಯಾಗದೆ ಉಳಿದಿರುವುದು, ತಪ್ಪಾದ ವಿಳಾಸ ಮತ್ತು ಇತರ ದೋಷಗಳು ಸೇರಿದಂತೆ SIR ಪ್ರಕ್ರಿಯೆಯಲ್ಲಿ ನಡೆದಿರುವ ಲೋಪಗಳನ್ನು ನೇರವಾಗಿ ಪರಿಶೀಲಿಸಲಾಗುತ್ತದೆ. ಮತಗಟ್ಟೆ ಮಟ್ಟದಲ್ಲಿ ಜನರ ಸಹಭಾಗಿತ್ವದೊಂದಿಗೆ ಈ ಪರಿಶೋಧನೆ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿನ ಅಕ್ರಮಗಳು ಮತ್ತು ಲೋಪಗಳ ಕುರಿತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದು ಇದರ ಉದ್ದೇಶವಾಗಿದೆ.

ಇದರ ಮುಂದುವರಿದ ಭಾಗವಾಗಿ ಡಿಸೆಂಬರ್ 20ರಂದು ರಾಜ್ಯದ ಹಲವು ಕಡೆ ಬೂತ್ ಮಟ್ಟದ ‘ಪಬ್ಲಿಕ್ ಹಿಯರಿಂಗ್’ಗಳನ್ನು ಆಯೋಜಿಸಲಾಗುತ್ತದೆ. ಮತದಾರರು ತಮ್ಮ ಅನುಭವಗಳನ್ನು, ಎದುರಿಸಿರುವ ಸಮಸ್ಯೆಗಳನ್ನು ಮತ್ತು ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕ ವಿಚಾರಣೆಯಲ್ಲಿ ಮಂಡಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಮೂಲಕ SIR ಪ್ರಕ್ರಿಯೆಯಿಂದ ನಿಜವಾಗಿಯೂ ಎಷ್ಟು ಜನರು ತೊಂದರೆಗೊಳಗಾಗಿದ್ದಾರೆ ಎಂಬುದನ್ನು ಜನರ ಮುಂದೆಯೇ ದಾಖಲಿಸುವ ಪ್ರಯತ್ನ ನಡೆಯಲಿದೆ.

ಒಟ್ಟಾರೆಯಾಗಿ, SIR ಪ್ರಕ್ರಿಯೆಯಲ್ಲಿನ ಲೋಪಗಳನ್ನು ಸರಿಪಡಿಸದೆ SSR ಮೂಲಕ ಹೊಸ ನೋಂದಣಿ ಅಭಿಯಾನ ನಡೆಸುವುದು ಸಮಸ್ಯೆಗೆ ಪರಿಹಾರವಲ್ಲ ಎಂಬುದು ಒಕ್ಕೂಟದ ನಿಲುವು. ತಪ್ಪಾಗಿ ಹೊರಗುಳಿದಿರುವ ಮತದಾರರನ್ನು ಅವರ ಹಳೆಯ ಗುರುತಿನೊಂದಿಗೆ ಮರುಸೇರ್ಪಡೆ ಮಾಡುವುದು, ದೋಷಪೂರಿತ ಅಂತಿಮ ಪಟ್ಟಿಯನ್ನು ತಿರಸ್ಕರಿಸುವುದು, ಸ್ವತಂತ್ರ ಸಾಮಾಜಿಕ ಪರಿಶೋಧನೆ ನಡೆಸುವುದು ಮತ್ತು ಮತದಾನದ ಹಕ್ಕನ್ನು ರಕ್ಷಿಸುವುದು ಹೋರಾಟದ ಪ್ರಮುಖ ಗುರಿಗಳಾಗಿವೆ.

ಚುನಾವಣಾ ಆಯೋಗದ ವಿರುದ್ಧದ ಆರೋಪಗಳಿಗೆ ಉತ್ತರ ಸಿಗುವವರೆಗೆ, ಅರ್ಹ ಮತದಾರರಿಗೆ ಆಗಿರುವ ಅನ್ಯಾಯ ಸರಿಯಾಗುವವರೆಗೆ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು SIR ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ನೀಡಿದೆ. ಈ ಆಂದೋಲನವನ್ನು ಕೇವಲ ಒಂದು ಪ್ರತಿಭಟನೆ ಅಥವಾ ರಾಜಕೀಯ ವಿರೋಧಕ್ಕೆ ಸೀಮಿತಗೊಳಿಸದೆ, ಜನರ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ತಾರ್ಕಿಕ ಅಂತ್ಯ ತಲುಪುವವರೆಗೂ ಮುಂದುವರಿಸುವುದಾಗಿ ಸಂಘಟನೆಗಳು ಎಚ್ಚರಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಡಿಶಾದ ಬುಡಕಟ್ಟು ಪ್ರದೇಶದಲ್ಲಿ ಗಣಿ ಭೂಸ್ವಾಧೀನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಬುಡಕಟ್ಟು ಸಮುದಾಯಗಳ ಪೂರ್ವಾನುಮತಿ ಕಡ್ಡಾಯ ಎಂದು ತೀರ್ಪು

ಒಡಿಶಾದ ಸುಂದರಗಢ ಜಿಲ್ಲೆಯ ಅನುಸೂಚಿತ ಗ್ರಾಮ ಪ್ರದೇಶಗಳಲ್ಲಿ ಡಾಲ್ಮಿಯಾ ಸಿಮೆಂಟ್ ಸ್ಥಾವರಕ್ಕಾಗಿ ಕೈಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಬುಡಕಟ್ಟು ಪ್ರದೇಶಗಳಲ್ಲಿ ಭೂಸ್ವಾಧೀನಕ್ಕೆ ಮುಂದುವರಿಯುವ ಮೊದಲು ಸ್ಥಳೀಯ ಗ್ರಾಮ ಪಂಚಾಯತ್‌ ಅಥವಾ...

ಪ್ಯಾಲೆಸ್ತೀನ್ ನಾಯಕ ಯಾಸರ್ ಅರಾಫಾತ್ ಸಲಹೆಗಾರರಾಗಿದ್ದ ಅಹ್ಮದ್ ತಿಬಿ ಇಸ್ರೇಲ್ ಸಂಸತ್ತಿನ ಉಪಸಭಾಪತಿಯಾಗಿ ಆಯ್ಕೆ

ಇಸ್ರೇಲ್‌ ಸಂಸತ್ತಾದ ನೆಸೆಟ್‌ಗೆ (Knesset) ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಆಡಳಿತರೂಢ ಒಕ್ಕೂಟಕ್ಕೆ ಸೋಲಾಗಿರುವುದು ಹಲವು ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಿದೆ. ಅವುಗಳಲ್ಲಿ ಒಂದು ಅಹ್ಮದ್ ತಿಬಿ ಅವರು ಉಪಸಭಾಪತಿಯಾಗಿ...

“ಚುನಾವಣೆ ಬಹಿಷ್ಕರಿಸಿದರೆ ಪ್ರಜಾಪ್ರಭುತ್ವ ಅಂತ್ಯ”: ರಾಹುಲ್ ಗಾಂಧಿ ಎಚ್ಚರಿಕೆ; ಆಯೋಗದೊಳಗಿಂದಲೇ ಮಾಹಿತಿ ಸಿಗುತ್ತಿದೆ ಎಂದ ವಿಪಕ್ಷ ನಾಯಕ

ಅಮೆರಿಕ: ಭಾರತೀಯ ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯ ಎದುರಾಗಿದೆ ಎಂಬ ಮಾಹಿತಿ ಚುನಾವಣಾ ಆಯೋಗದ ಒಳಗಿನಿಂದಲೇ ವಿರೋಧ ಪಕ್ಷಗಳಿಗೆ ಲಭ್ಯವಾಗುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ...

ಸೈನಿಕರು ಸಂಕಲ್ಪ ಮಾಡಿದರೆ ಪಂಜಾಬ್ ಸರ್ಕಾರವನ್ನು ಕಿತ್ತೊಗೆಯಲು ಸಾಧ್ಯ: ಪಂಜಾಬ್‌ನಲ್ಲಿ ಹೊಸ ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್!

ಜಲಂಧರ್: ಪಂಜಾಬ್‌ನ ಆಮ್ ಆದ್ಮಿ ಪಕ್ಷದ (AAP) ಸರ್ಕಾರವನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಂತ ಗುರು ರವಿದಾಸ್...

ಮಹಿಳಾ ಪತ್ರಕರ್ತರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ : ದೆಹಲಿ ಪೊಲೀಸರಿಂದ ದೂರುಗಳ ವಿಚಾರಣೆ ಮುಕ್ತಾಯ

ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಗಳ ವರದಿ ಮಾಡುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮೂವರು ಮಹಿಳಾ ಪತ್ರಕರ್ತರು...

ತಿರುಪರಂಕುಂದ್ರಂ ವಿವಾದ | ಹೈಕೋರ್ಟ್ ಆದೇಶಕ್ಕೆ ತಡೆ ನೀಡದಿದ್ದರೆ ಸಾವಿರಾರು ಸರ್ವೆ ಕಂಬಗಳು ಧಾರ್ಮಿಕ ಸ್ವರೂಪ ಪಡೆಯಲಿವೆ : ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಸರ್ಕಾರ ವಾದ

ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದರ್ಗಾದ ಸಮೀಪದ ಕಲ್ಲಿನ ಸ್ತಂಭದ ಮೇಲೆ ಸಾಂಪ್ರದಾಯಿಕ ಕಾರ್ತಿಕ ದೀಪವನ್ನು ಬೆಳಗಿಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ತಮಿಳುನಾಡು ಸರ್ಕಾರ ಬುಧವಾರ (ನ.18)...

ಇಬ್ಬರು ಅತ್ಯಾಚಾರ ಅಪರಾಧಿಗಳಿಗೆ ಜಾಮೀನು : ಕುಟುಂಬ ಸಮೇತ ಗುಜರಾತ್ ತೊರೆದ ಬಿಲ್ಕಿಸ್ ಬಾನು-ವರದಿ

ಅತ್ಯಾಚಾರ, ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿ, ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ನಿರ್ಧಾರದಿಂದ 'ಭಯಭೀತರಾದ' ಮತ್ತು 'ಆಘಾತಕ್ಕೊಳಗಾದ' ಬಿಲ್ಕಿಸ್ ಬಾನು ಹಾಗೂ ಅವರ ಕುಟುಂಬಸ್ಥರು ಈ ತಿಂಗಳ...

ಪತ್ರಕರ್ತರು ಬೇರೆ, ರೀಲ್-ಮೇಕರ್‌ಗಳು ಬೇರೆ: ರೀಲ್-ಮೇಕರ್‌ಗಳಿಗೆ ಮಾಧ್ಯಮ ರಕ್ಷಣೆ ಅನ್ವಯಿಸುವುದಿಲ್ಲ: ದೆಹಲಿ ಪೊಲೀಸರಿಂದ ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಪತ್ರಕರ್ತರಿಗೆ ನೀಡಲಾದ ರಕ್ಷಣಾ ಆದೇಶಗಳು ಸಾಮಾಜಿಕ ಜಾಲತಾಣಗಳ ರೀಲ್-ಮೇಕರ್‌ಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ...

ಮತ್ತೆ ಉಲ್ಬಣಗೊಂಡ ಸಂಘರ್ಷ : ಕುವೈತ್‌ನ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ವೈಮಾನಿಕ ದಾಳಿ

ಹೊರ್ಮುಝ್ ಜಲಸಂಧಿಯಲ್ಲಿರುವ ಕೇಶ್ಮ್ ದ್ವೀಪದ (Qeshm Island) ಮೇಲೆ ಅಮೆರಿಕ ದಾಳಿ ನಡೆಸಿದ ನಂತರ, ಕುವೈತ್‌ನಲ್ಲಿರುವ ಅಮೆರಿಕದ ಡ್ರೋನ್ ಮತ್ತು ಕ್ಷಿಪಣಿ ನೆಲೆಗಳನ್ನು ರಾತ್ರೋರಾತ್ರಿ ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ. ಇದು...

ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ನಿಷೇಧ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್; ಕಾಯ್ದೆ ತಿದ್ದುಪಡಿ ಮನವಿಗೆ ಸಿಗದ ಮನ್ನಣೆ

ದೇವಸ್ಥಾನಗಳು ಸೇರಿದಂತೆ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ನೀಡುವುದನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂ ಕೋರ್ಟ್ ಬುಧವಾರ (ನವೆಂಬರ್ 18) ವಜಾಗೊಳಿಸಿದೆ ಎಂದು ‘ಬಾರ್...