ಅಮೆರಿಕ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ (55) ಅವರಿಗೆ ಅಮೆರಿಕದ ಫೆಡರಲ್ ನ್ಯಾಯಾಲಯವು 235 ತಿಂಗಳುಗಳ (ಸುಮಾರು 19 ವರ್ಷ ಮತ್ತು 7 ತಿಂಗಳು) ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.
ಶುಕ್ರವಾರ (ನವೆಂಬರ್ 20) ಅಮೆರಿಕದ ನ್ಯಾಯಾಂಗ ಇಲಾಖೆಯು ಈ ಶಿಕ್ಷೆಯ ವಿವರಗಳನ್ನು ಪ್ರಕಟಿಸಿದೆ. ಭಾರತ ಸರ್ಕಾರದ ಉದ್ಯೋಗಿಯೊಬ್ಬರ ನಿರ್ದೇಶನದ ಮೇರೆಗೆ ಅಮೆರಿಕದ ನೆಲದಲ್ಲಿ ಪನ್ನುನ್ ಅವರನ್ನು ಹತ್ಯೆ ಮಾಡಲು ರೂಪಿಸಲಾದ ಪಿತೂರಿಯಲ್ಲಿ ‘ನಿಕ್’ ಎಂದೂ ಕರೆಯಲ್ಪಡುವ ನಿಖಿಲ್ ಗುಪ್ತಾ ಭಾಗಿಯಾಗಿದ್ದರು ಎಂದು ಇಲಾಖೆ ತಿಳಿಸಿದೆ. 2026ರ ಫೆಬ್ರವರಿಯಲ್ಲಿ ಗುಪ್ತಾ ಅವರು ಸುಪಾರಿ ಹತ್ಯೆ, ಹತ್ಯೆಗೆ ಸಂಚು ಮತ್ತು ಅಕ್ರಮ ಹಣ ವರ್ಗಾವಣೆ ಪಿತೂರಿ ಆರೋಪಗಳನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ‘ರಾ’ (RAW) ಒಳಗೊಂಡಿರುವ ಕ್ಯಾಬಿನೆಟ್ ಸೆಕ್ರೆಟರಿಯೇಟ್ನ ಉದ್ಯೋಗಿ ವಿಕಾಸ್ ಯಾದವ್ ಎಂಬುವವರು 2023ರ ಮೇ ತಿಂಗಳಲ್ಲಿ ಪನ್ನುನ್ ಹತ್ಯೆಗಾಗಿ ನಿಖಿಲ್ ಗುಪ್ತಾ ಅವರನ್ನು ನೇಮಿಸಿಕೊಂಡಿದ್ದರು.
ಹತ್ಯೆ ಮಾಡಲು ಬಾಡಿಗೆ ಹಂತಕನನ್ನು ಹುಡುಕುವ ಭರದಲ್ಲಿ ಗುಪ್ತಾ ಅವರು ತಮಗೆ ಪರಿಚಯವಿದ್ದ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ್ದರು. ಆದರೆ, ಆ ವ್ಯಕ್ತಿ ಅಮೆರಿಕದ ಮಾದಕವಸ್ತು ನಿಗ್ರಹ ದಳದ (DEA) ರಹಸ್ಯ ಮಾಹಿತಿದಾರನಾಗಿದ್ದು, ಡಿಇಎಯ ರಹಸ್ಯ ಅಧಿಕಾರಿಯನ್ನೇ ಬಾಡಿಗೆ ಹಂತಕನಂತೆ ಗುಪ್ತಾಗೆ ಪರಿಚಯಿಸಿದ್ದರು.
ನ್ಯೂಯಾರ್ಕ್ ನಗರದಲ್ಲಿ ಪನ್ನುನ್ ಅವರನ್ನು ಹತ್ಯೆ ಮಾಡಲು 1,00,000 ಡಾಲರ್ (ಸುಮಾರು 83 ಲಕ್ಷಕ್ಕೂ ಅಧಿಕ ರೂಪಾಯಿ) ನೀಡಲು ಒಪ್ಪಂದವಾಗಿತ್ತು. ಇದರ ಮುಂಗಡವಾಗಿ 2023ರ ಜೂನ್ 9 ರಂದು ಸಹಚರನೊಬ್ಬನ ಮೂಲಕ 15,000 ಡಾಲರ್ ನಗದನ್ನು ತಲುಪಿಸಲಾಗಿತ್ತು.
ಪನ್ನುನ್ ಅವರ ನ್ಯೂಯಾರ್ಕ್ ನಿವಾಸದ ವಿಳಾಸ, ಫೋನ್ ಸಂಖ್ಯೆಗಳು ಮತ್ತು ದಿನಚರಿಯ ವಿವರಗಳನ್ನು ಯಾದವ್ ಅವರು ಗುಪ್ತಾಗೆ ನೀಡಿದ್ದರು. ಗುಪ್ತಾ ಈ ಮಾಹಿತಿ ಮತ್ತು ಪನ್ನುನ್ ಅವರ ಕಣ್ಗಾವಲು ಫೋಟೋಗಳನ್ನು ರಹಸ್ಯ ಅಧಿಕಾರಿಗೆ ಹಸ್ತಾಂತರಿಸಿದ್ದರು.
2023ರ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ನಿಗದಿಯಾಗಿದ್ದ ಕಾರಣ, ಆ ಸಮಯದಲ್ಲಿ ಹತ್ಯೆ ನಡೆಸದಂತೆ ಗುಪ್ತಾ ಸೂಚಿಸಿದ್ದರು. ಆದರೆ, ಜೂನ್ 18ರಂದು ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾದ ಮರುದಿನ, “ನಿಜ್ಜರ್ ಕೂಡ ನಮ್ಮ ಗುರಿಯಾಗಿದ್ದರು, ಇನ್ನು ಕಾಯುವ ಅಗತ್ಯವಿಲ್ಲ” ಎಂದು ಗುಪ್ತಾ ರಹಸ್ಯ ಅಧಿಕಾರಿಗೆ ತಿಳಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕದ ಮನವಿಯ ಮೇರೆಗೆ 2023ರ ಜೂನ್ 30ರಂದು ಜೆಕ್ ಗಣರಾಜ್ಯದಲ್ಲಿ ನಿಖಿಲ್ ಗುಪ್ತಾ ಅವರನ್ನು ಬಂಧಿಸಲಾಗಿತ್ತು. ಬಳಿಕ 2024ರ ಜೂನ್ನಲ್ಲಿ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ವಿಕಾಸ್ ಯಾದವ್ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಅವರನ್ನು ಇನ್ನೂ ಬಂಧಿಸಲಾಗಿಲ್ಲ.
“ಅಮೆರಿಕದ ನೆಲದಲ್ಲಿ ಅಥವಾ ಅಮೆರಿಕದ ಪ್ರಜೆಗಳ ವಿರುದ್ಧ ಹಿಂಸಾಚಾರ ನಡೆಸಲು ಯತ್ನಿಸುವವರು ಎಲ್ಲೇ ಇದ್ದರೂ ಅವರನ್ನು ಕಾನೂನಿನ ಕುಣಿಕೆಗೆ ತರಲಾಗುವುದು ಎಂಬುದಕ್ಕೆ ಈ ಶಿಕ್ಷೆ ಸ್ಪಷ್ಟ ಎಚ್ಚರಿಕೆಯಾಗಿದೆ” ಎಂದು ನ್ಯೂಯಾರ್ಕ್ನ ದಕ್ಷಿಣ ಜಿಲ್ಲೆಯ ಅಮೆರಿಕ ಅಟಾರ್ನಿ ಜೇಮೀ ಮೆಕ್ಡೊನಾಲ್ಡ್ ತಿಳಿಸಿದ್ದಾರೆ.


