ತಮಿಳುನಾಡಿನ ಅರಿಯಲೂರು ಜಿಲ್ಲೆಯ ಜಯಂಕೊಂಡಂ ಸಮೀಪದ ಕೀಲವೆಲಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಪ್ರಯೋಗಾಲಯ ಸಹಾಯಕ (ಲ್ಯಾಬ್ ಅಸಿಸ್ಟೆಂಟ್) ಪಿ. ಕಣ್ಣದಾಸನ್ ಅವರ ಮೇಜಿನ ಮೇಲೆ ಕೆಲವು ಸಿಬ್ಬಂದಿ ಮಾನವ ಮಲ ಸುರಿದಿದ್ದಾರೆ ಎಂದು ಆರೋಪಿಸಲಾಗಿದೆ. ನವೆಂಬರ್ 10ರಂದು ಈ ಘಟನೆ ನಡೆದಿದ್ದರೂ, ಕಣ್ಣದಾಸನ್ ಅವರು ಶನಿವಾರ (ನವೆಂಬರ್ 22) ಜಯಂಕೊಂಡಂ ಡಿವೈಎಸ್‌ಪಿ ಎ. ವೇಲ್ಮುರುಗನ್ ಅವರಿಗೆ ದೂರು ಸಲ್ಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸಾರ್ವಜನಿಕ ಶಿಕ್ಷಣ ಸಂಸ್ಥೆಯಲ್ಲೇ ಇಂತಹ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ ಜಾತಿ ತಾರತಮ್ಯದ ವಿರುದ್ಧ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಶಂಕಿತ ಮಲದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಡಿವೈಎಸ್‌ಪಿ ವೇಲ್ಮುರುಗನ್ ತಿಳಿಸಿದ್ದಾರೆ. ಶಾಲೆಯಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯದ ಬಗ್ಗೆಯೂ ಕಣ್ಣದಾಸನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಶಾಲೆಯ ದಲಿತ ಶಿಕ್ಷಕರನ್ನು ಒಂದು ಕೊಠಡಿಯಲ್ಲಿ ಕೂರಿಸಿ, ಇತರ ಶಿಕ್ಷಕರು ಮತ್ತೊಂದು ಕೊಠಡಿಯಲ್ಲಿ ಕೂರುತ್ತಾರೆ ಎಂದು ಅವರು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಸಮಾಜ ವಿಜ್ಞಾನ ಶಿಕ್ಷಕರೊಬ್ಬರು ಶಾಲೆಗೆ ಸೇರ್ಪಡೆಯಾದ ಬಳಿಕ ಈ ತಾರತಮ್ಯ ಆರಂಭವಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನವೆಂಬರ್ 10ರ ಘಟನೆಯ ಬಗ್ಗೆ ಮುಖ್ಯೋಪಾಧ್ಯಾಯರು ತಮಗೆ ಮಾಹಿತಿ ನೀಡಿದ್ದರು, ಆದರೆ ತಾವು ಶಾಲೆಗೆ ತಲುಪುವಷ್ಟರಲ್ಲಿ ಅದನ್ನು ತೊಳೆದು ಸ್ವಚ್ಛಗೊಳಿಸಲಾಗಿತ್ತು ಎಂದು ಮುಖ್ಯ ಶಿಕ್ಷಣಾಧಿಕಾರಿ (ಸಿಇಒ) ರೇಣುಗೋಪಾಲ್ ಹೇಳಿದ್ದಾರೆ. ಆದಾಗ್ಯೂ, ಕೆಲವು ಶಿಕ್ಷಕರು ಘಟನೆಯ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡುವಂತೆ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ. ಇದೇ ವೇಳೆ, ಸಿಬ್ಬಂದಿ ನಡುವಿನ ಜಾತಿ ತಾರತಮ್ಯದ ದೂರುಗಳ ಕುರಿತು ವಿಚಾರಣೆ ನಡೆಸಿದ ಸಿಇಒ, ನವೆಂಬರ್ 18ರಂದು ಮುಖ್ಯೋಪಾಧ್ಯಾಯ ಮುರುಗನ್ ಸೇರಿದಂತೆ ಮೂವರನ್ನು ವರ್ಗಾವಣೆ ಮಾಡಿದ್ದು, ಮುರುಗನ್ ಅವರನ್ನು ಶ್ರೀಪುರಂದನ್‌ಗೆ ನಿಯೋಜಿಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ಪೊಲೀಸ್ ತನಿಖೆಯನ್ನು ತೀವ್ರಗೊಳಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿದುತಲೈ ಚಿರುತೈಗಳ್ ಕಚ್ಚಿ (VCK) ಸೋಮವಾರ (ನವೆಂಬರ್ 23) ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಕರೆ ನೀಡಿದೆ.


