ಲೇಖಕರು: ಅಮನ್ ಭಾರ್ಗವ
ಮೂಲ: Diagram Chasing
ಕನ್ನಡಕ್ಕೆ: ಸೋಮಶೇಖರ್ ಚಲ್ಯ
“ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ನಾಗರಿಕನನ್ನೂ ಹೊರಗಿಟ್ಟಿಲ್ಲ; ಒಬ್ಬ ಅನರ್ಹ ವ್ಯಕ್ತಿಯನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸಿಲ್ಲ” – ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ, ಅಕ್ಟೋಬರ್ 27, 2026.
ಅಕ್ಟೋಬರ್ 27ರಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದರು.
ಭಾರತದಲ್ಲಿ ಸ್ವಾತಂತ್ರ್ಯನಂತರದಿಂದ ಈವರೆಗೆ ನಡೆದಿರುವ ಮತಪಟ್ಟಿ ಪರಿಷ್ಕರಣೆಗಳ ಪೈಕಿ ಇದು ಎಂಟನೆಯದು. ಆದರೆ, ಹಿಂದಿನ ಏಳು ಪರಿಷ್ಕರಣೆಗಳಿಗಿಂತ ಈ ಪರಿಷ್ಕರಣೆ ಭಿನ್ನವಾಗಿದೆ. ಈ ಹಿಂದೆ, ನಡೆದ ಎಲ್ಲ ಏಳು ಪರಿಷ್ಕರಣೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಮತದಾರರ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಚುನಾವಣಾ ಆಯೋಗ ನೀಡಿರುವ ಕಾರಣಗಳೂ ಒಂದೇ ರೀತಿಯಾಗಿಲ್ಲ.
ಮುಖ್ಯ ಚುನಾವಣಾಧಿಕಾರಿಗಳ ‘ಸಾರಾಂಶ ಕೈಪಿಡಿ’ಯ ಪ್ರತಿಯೊಂದು ಪುಟದ ಕೆಳಭಾಗದಲ್ಲೂ ಒಂದೇ ಘೋಷಣೆಯನ್ನು ಮುದ್ರಿಸಲಾಗಿದೆ: “ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ನಾಗರಿಕನನ್ನೂ ಹೊರಗಿಟ್ಟಿಲ್ಲ; ಒಬ್ಬ ಅನರ್ಹ ವ್ಯಕ್ತಿಯನ್ನೂ ಸೇರಿಸಿಲ್ಲ”
ಕೇಳಲು ಇದು ಭರವಸೆ ಮೂಡಿಸುವ ಹೇಳಿಕೆ. ಆದರೆ, ಈ ಹೇಳಿಕೆ ಸಂಪೂರ್ಣ ಮತ್ತು ನಿರಪೇಕ್ಷವಾಗಿದೆ. ಈ ಹೇಳಿಕೆಗೆ ವಿರುದ್ಧವಾದ ಒಂದೇ ಒಂದು ಉದಾಹರಣೆ ಸಿಕ್ಕರೂ ಆ ಘೋಷಣೆಯ ಸತ್ಯಾಸತ್ಯತೆಯನ್ನು ಪ್ರಶ್ನಿಬಹುದು. ಆದರೆ, ಅಂತಹ ನೂರಾರು ಉದಾಹರಣೆಗಳು ನಮ್ಮೆದುರಿಗಿವೆ.
ದೇಶಾದ್ಯಂತ ಎಸ್ಐಆರ್ ಪ್ರಕ್ರಿಯೆಯ ಸಮಸ್ಯೆಗಳು ತೀವ್ರವಾಗಿ ವರದಿಯಾಗಿವೆ. ಹೊಸ ಸಮಸ್ಯೆಯೊಂದು ವರದಿಯಾದಾಗಲೆಲ್ಲ ‘ಇದರಲ್ಲಿ ಅಚ್ಚರಿಯೇನಿದೆ?’ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿದೆ.
ಬಿಹಾರದಲ್ಲಿ ಒಂದೇ ರೀತಿಯ ನಕಲಿ ಮತದಾರರ ನಮೂದುಗಳು ಪತ್ತೆಯಾಗಿವೆ. ಜೀವಂತವಾಗಿರುವ ವ್ಯಕ್ತಿಗಳನ್ನು ಮೃತಪಟ್ಟಿದ್ದಾರೆಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 2002ರ ಮತದಾರರ ಪಟ್ಟಿಯಲ್ಲಿದ್ದವರನ್ನೇ ಪಟ್ಟಿಯಲ್ಲಿ ಇಲ್ಲ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿಯೂ ಅವಳಿ ಮಕ್ಕಳ ಜನನವನ್ನು ‘ತಾರ್ಕಿಕ ವ್ಯತ್ಯಾಸ’ ಎಂದು ಗುರುತಿಸಲಾಗಿದೆ. ಊರು ಬದಲಾಯಿಸದವರನ್ನೇ ಸ್ಥಳಾಂತರಗೊಂಡಿದ್ದಾರೆಂದು ದಾಖಲಿಸಲಾಗಿದೆ. ಕೆಲವು ಮತದಾರರ ಹೆಸರುಗಳನ್ನು ಯಾವುದೇ ಕಾರಣ ನೀಡದೆ ಕೈಬಿಡಲಾಗಿದೆ.
ಚುನಾವಣಾ ಆಯೋಗದ ಈ ಕೃತ್ಯದ ತುತ್ತಾದವರಲ್ಲಿ ಬೆಂಗಳೂರಿನ ಮತದಾರ ಪೃಥ್ವಿರಾಜ್ ಕೂಡ ಒಬ್ಬರು. ಅವರು, “ನಾನು ಮಾಡಬೇಕಾದ ಎಲ್ಲವನ್ನೂ ಮಾಡಿದ್ದೆ. ಆದರೂ ನನ್ನನ್ನು ಸ್ಥಳಾಂತರಗೊಂಡವನೆಂದು ಗುರುತಿಸಿದ್ದಾರೆ” ಎಂದಿದ್ದಾರೆ.
ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಎರಡು ದಿನಗಳ ನಂತರ, ಅಮನ್ ಭಾರ್ಗವ ಅವರು 60,923 ಪಿಡಿಎಫ್ ದಾಖಲೆಗಳನ್ನು ವಿಶ್ಲೇಷಿಸಿ, ಸುಮಾರು 4.5 ಕೋಟಿ ನಮೂದುಗಳ ದತ್ತಾಂಶವನ್ನು ಸಿದ್ದಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ‘ದಿ ಹಿಂದೂ’ ಪತ್ರಿಕೆಯು ಮತದಾರರ ಪಟ್ಟಿಯಲ್ಲಿ ಅರ್ಥಹೀನ ಹೆಸರುಗಳು ಇರುವುದನ್ನು ವರದಿ ಮಾಡಿತು. ಉದಾಹರಣೆಗೆ, ಕೆಲವು ಹೆಸರುಗಳು ಓದಲು ಸಾಧ್ಯವಾಗದ ಸಂಕೇತಗಳ ರೂಪದಲ್ಲಿದ್ದವು. ಕೆಲವರ ಸಂಬಂಧಿಕರ ಹೆಸರು ‘Husband Husband’ ಎಂದಿತ್ತು. ಮತ್ತೊಬ್ಬರ ತಂದೆಯ ಹೆಸರಿನ ಜಾಗದಲ್ಲಿ ಇಮೇಲ್ ವಿಳಾಸವಿತ್ತು.
ಅಮನ್ ಭಾರ್ಗವಅವರು ಪ್ರಕಟಿಸಿರುವ ದತ್ತಾಂಶದ ಪ್ರಕಾರ, ಎಸ್ಐಆರ್ನ ಇತ್ತೀಚಿನ ಮತಪಟ್ಟಿಯಲ್ಲಿ ಸುಮಾರು 1.88 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ. ಆದರೆ, ರಾಜ್ಯದ ಜೂನ್ ತಿಂಗಳ ಮತಪಟ್ಟಿಗೆ ಹೋಲಿಸಿದರೆ, ಎಸ್ಐಆರ್ನಲ್ಲಿ 99.32 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ.
ಈ ಎರಡು ಸಂಖ್ಯೆಗಳ ನಡುವೆ ಇಷ್ಟೊಂದು ವ್ಯತ್ಯಾಸ ಏಕೆ?
ಏಕೆಂದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದ ಸುಮಾರು 1.08 ಕೋಟಿ ಮತದಾರರ ಹೆಸರುಗಳನ್ನು ಎಸ್ಐಆರ್ ಕರಡು ಪಟ್ಟಿ ಪ್ರಕಟಿಸುವ ಮೊದಲೇ ಎಎಸ್ಡಿಡಿಒ ವರ್ಗದಡಿ ಕೈಬಿಡಲಾಗಿತ್ತು. ಹೀಗೆ ಕೈಬಿಡಲಾದವರಿಗೆ ನಂತರ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಿ ಮತ್ತೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಯಿತು. ಬಳಿಕ, 1.08 ಕೋಟಿ ಮತದಾರರ ಪೈಕಿ, ಹೊಸ ಮತದಾರರು ಮತ್ತು ಸ್ಥಳಾಂತರಗೊಂಡವರು ಸೇರಿದಂತೆ 10.08 ಲಕ್ಷ ಹೆಸರುಗಳನ್ನು ಮತಪಟ್ಟಿಗೆ ಸೇರಿಸಲಾಯಿತು. ಈ ಸೇರ್ಪಡೆಯ ಅವಧಿಯಲ್ಲಿಯೂ 1.88 ಲಕ್ಷ ಮತದಾರರನ್ನು ತೆಗೆದುಹಾಕಲಾಗಿದೆ. ಆ ಮತದಾರರನ್ನು ಅಮನ್ ಭಾರ್ಗವ ಅವರ ದತ್ತಾಂಶ ಪತ್ತೆಹಚ್ಚಿದೆ.
ಈ ಪ್ರಕ್ರಿಯೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಎಸ್ಐಆರ್ಗೂ ಮುನ್ನ ಇದ್ದ ಮತದಾರರ ಪಟ್ಟಿಗಳ ಅಗತ್ಯವಿತ್ತು. ಆ ಪಟ್ಟಿಗಳನ್ನು ‘ಮತ ಕಾವಲು ಸಮಿತಿ’ ಮತ್ತು ‘ಎದ್ದೇಳು ಕರ್ನಾಟಕ’ ಸಂಘಟನೆಗಳು ಡಿಜಿಟಲೀಕರಣಗೊಳಿಸಿದ್ದವು. ಅವುಗಳ ನೆರವಿನಿಂದ 2002ರ ಮತದಾರರ ಪಟ್ಟಿ, 2025ರ ಜನವರಿಯಲ್ಲಿದ್ದ ಮತದಾರರ ಪಟ್ಟಿ, 2026ರ ಎಸ್ಐಆರ್ ಕರಡು ಪಟ್ಟಿ ಹಾಗೂ ಕರಡು ಪಟ್ಟಿ ಪ್ರಕಟವಾಗುವ ಮೊದಲು ಕೈಬಿಡಲಾದ 1.08 ಕೋಟಿ ಮತದಾರರ ಮೊದಲ ಪಟ್ಟಿ ಮತ್ತು ಪ್ರತಿಯೊಬ್ಬರ ಹೆಸರನ್ನು ಕೈಬಿಟ್ಟ ಕಾರಣಗಳನ್ನು ಸುಲಭವಾಗಿ ದೊರೆತವು.
ಈ ಎಲ್ಲ ದಾಖಲೆಗಳನ್ನು ಬಳಸಿಕೊಂಡು 2002ರಿಂದ 2026ರ ಅಕ್ಟೋಬರ್ ಅಂತ್ಯದವರೆಗೆ ಒಬ್ಬ ಮತದಾರನ ಹೆಸರಿನಲ್ಲಿ ಏನೇನು ಬದಲಾವಣೆಗಳಾಗಿವೆ ಎಂಬುದನ್ನು ಪರಿಶೀಲಿಸಲು ಸಾಧ್ಯವಾಯಿತು.
ಮತದಾರರ ಗುರುತಿನ ಚೀಟಿ ಸಂಖ್ಯೆ (ಎಪಿಕ್) ಆಧರಿಸಿ ಈ ಪಟ್ಟಿಗಳನ್ನು ಪರಸ್ಪರ ಜೋಡಿಸಿ, ಚುನಾವಣಾ ಆಯೋಗದ ಎರಡು ಪ್ರಮುಖ ಘೋಷಣೆಗಳನ್ನು ಪರಿಶೀಲಿಸಿದಾಗ, ಆಯೋಗ ಈ ಎರಡೂ ಹೇಳಿಕೆಗಳು ಸಂಪೂರ್ಣವಾಗಿ ನಿಜವಲ್ಲ ಎಂಬುದು ಕಂಡುಬಂದಿದೆ. ಜೊತೆಗೆ, ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾಗಿರುವ ಮತದಾರರು, ಮೃತಪಟ್ಟಿದ್ದಾರೆಂದು ಘೋಷಿಸಲ್ಪಟ್ಟ ನಂತರ ಅದನ್ನು ಪ್ರಶ್ನಿಸಿದ ವ್ಯಕ್ತಿಗಳು, ಅರ್ಥಹೀನ ಹೆಸರುಗಳು ಹಾಗೂ ಒಂದೇ ನಿಯಮಗಳ ಅಡಿಯಲ್ಲಿ ಕೆಲಸ ಮಾಡುವ ವಿಧಾನಸಭಾ ಕ್ಷೇತ್ರಗಳ ನಡುವೆ ನೋಟಿಸ್ಗಳ ಸಂಖ್ಯೆಯಲ್ಲಿ ಕಂಡುಬಂದಿರುವ ಭಾರೀ ಅಸಮಾನತೆಗಳು ಪತ್ತೆಯಾಗಿವೆ.
ಎಸ್ಐಅರ್ ಪ್ರಕ್ರಿಯೆಯ ಅವಧಿಯಲ್ಲಿ ನಿಯಮಗಳನ್ನು ಹಲವು ಬಾರಿ ಬದಲಾಯಿಸಲಾಗಿದೆ. ಇದರಿಂದ ಇಡೀ ಪ್ರಕ್ರಿಯೆ ಸಾಕಷ್ಟು ಆತಂಕವನ್ನು ಉಂಟುಮಾಡಿತು.
ಅಧ್ಯಯನದಲ್ಲಿ ಪತ್ತೆಯಾದ ಪ್ರಮುಖ ಅಂಕಿಅಂಶಗಳು

2025ರ ಜನವರಿಯಿಂದ 2026ರ ಅಕ್ಟೋಬರ್ವರೆಗಿನ 224 ವಿಧಾನಸಭಾ ಕ್ಷೇತ್ರಗಳ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಈ ಪೈಕಿ, ಬೊಮ್ಮನಹಳ್ಳಿಯಲ್ಲಿ ಅತೀ ಹೆಚ್ಚು ಅಂದರೆ, ಬರೋಬ್ಬರಿ ಶೇ.53 ರಷ್ಟು ಮತದಾರರ ಸಂಖ್ಯೆ ಕಡಿಮೆಯಾಗಿದೆ. ಆದರೆ, ರಾಜ್ಯದ ವಿಧಾನಸಭಾ ಕ್ಷೇತ್ರಗಳ ಸರಾಸರಿ ಕಡಿತವು ಶೇ.11 ರಷ್ಟಿದೆ.
ಬೊಮ್ಮನಹಳ್ಳಿಯಲ್ಲಿ ಶೇ.53 ರಷ್ಟು ಮತದಾರರ ಇಳಿಕೆ
ಬೊಮ್ಮನಹಳ್ಳಿಯ ಶೇ.46 ರಷ್ಟು ಮತದಾರರಿಗೆ ನೋಟಿಸ್ ನೀಡಲಾಗಿದ್ದರೆ, ಉಳಿದೆಲ್ಲ ಕ್ಷೇತ್ರಗಳ ಸರಾಸರಿಯು ಶೇ.5 ರಷ್ಟಿದೆ. ನೋಟಿಸ್ ಪಡೆದವರಲ್ಲಿ ಅನರ್ಹರೆಂದು ಕೈಬಿಟ್ಟವರ ಪ್ರಮಾಣ ಬೊಮ್ಮನಹಳ್ಳಿಯಲ್ಲಿ ಶೇ.4.0 ರಷ್ಟಿದ್ದರೆ, ಉಳಿದೆಡೆ ಸರಾಸರಿ ಶೇ.1.1 ರಷ್ಟಿದೆ. ಬೊಮ್ಮನಹಳ್ಳಿಯಲ್ಲಿ ಸರಿಯಾದ ಮನೆ ಸಂಖ್ಯೆಯಿಲ್ಲದ ಮತದಾರರ ಪ್ರಮಾಣ ಶೇ.0.3 ರಷ್ಟಿದ್ದು, ಇತರಡೆ ಶೇ.3 ರಷ್ಟಿದೆ.

ಇನ್ನು ಮುಂದೆ ಈ ಅಂಕಿಅಂಶಗಳ ಹಿಂದಿರುವ ಸಾಕ್ಷ್ಯಗಳನ್ನು ಒಂದೊಂದಾಗಿ ನೋಡೋಣ.
ಲೇಖನದ ವಿವಿಧ ಭಾಗಗಳಿಗೆ ಚಲನಚಿತ್ರಗಳ ಹೆಸರುಗಳನ್ನು ಬಳಸಲಾಗಿದೆ. ಇದಕ್ಕೆ ವಿಶೇಷ ಕಾರಣವೇನಿಲ್ಲ. ಸ್ವಲ್ಪ ಹಾಸ್ಯ ಬೆರೆಸುವುದು ಮತ್ತು ಓದುಗರನ್ನು ಸುದೀರ್ಘ ಲೇಖನ ಓದಲು ಪ್ರೋತ್ಸಾಹಿಸುವುದೇ ಉದ್ದೇಶ!
ಮುಂದುವರೆಯುವುದು…


