ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ (HRW), ಭಾರತದಲ್ಲಿ ಭಯೋತ್ಪಾದನೆ ನಿಗ್ರಹ ಕಾನೂನುಗಳ ಬಳಕೆಯ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ – UAPA) ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಪ್ರಮಾಣದಲ್ಲಿ ಆರೋಪಿಗಳಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ‘ದಿ ವೈರ್’ನ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ HRW ಏಷ್ಯಾ ನಿರ್ದೇಶಕಿ ಎಲೈನ್ ಪಿಯರ್ಸನ್, ಕರ್ನಾಟಕಕ್ಕೆ ಸಂಬಂಧಿಸಿದ SOAS ಅಧ್ಯಯನದ ಅಂಕಿಅಂಶಗಳನ್ನು ಉಲ್ಲೇಖಿಸಿ ಈ ಕುರಿತು ವಿವರಿಸಿದ್ದಾರೆ.
ಸಂದರ್ಶನದಲ್ಲಿ ಪ್ರಸ್ತಾಪಿಸಲಾದ ಅಧ್ಯಯನದ ಪ್ರಕಾರ, 2005ರಿಂದ 2025ರವರೆಗಿನ 20 ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಯುಎಪಿಎ ಅಡಿಯಲ್ಲಿ ಆರೋಪ ಎದುರಿಸಿದವರಲ್ಲಿ ಸುಮಾರು ಶೇ.80ರಷ್ಟು ಜನರ ವಿರುದ್ಧ ಬಿಜೆಪಿ ಅಧಿಕಾರದಲ್ಲಿದ್ದ ಹತ್ತು ವರ್ಷಗಳ ಅವಧಿಯಲ್ಲೇ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಒಟ್ಟು ಆರೋಪಿಗಳಲ್ಲಿ ಶೇ.84ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ ಎಂಬ ಅಂಕಿಅಂಶವನ್ನು ಕರಣ್ ಥಾಪರ್ ಸಂದರ್ಶನದಲ್ಲಿ ಮುಂದಿಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಎಲೈನ್ ಪಿಯರ್ಸನ್, ಯುಎಪಿಎ ಪ್ರಕರಣಗಳನ್ನು ಧರ್ಮ, ಜಾತಿ ಅಥವಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಆಧಾರದಲ್ಲಿ ವರ್ಗೀಕರಿಸಿದ ಅಧಿಕೃತ ಕೇಂದ್ರ ಸರ್ಕಾರದ ಅಂಕಿಅಂಶಗಳು ಸಾರ್ವಜನಿಕವಾಗಿ ಲಭ್ಯವಿಲ್ಲ ಆದಾಗ್ಯೂ, 2005ರಿಂದ 2025ರ ಅವಧಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಬಹುತೇಕ ಸಮಾನ ಅವಧಿಗೆ ಅಧಿಕಾರದಲ್ಲಿದ್ದ ಹಿನ್ನೆಲೆಯಲ್ಲಿ, ಎರಡೂ ಆಡಳಿತಾವಧಿಗಳನ್ನು ತುಲನೆ ಮಾಡುವ SOAS ಅಧ್ಯಯನದ ಅಂಕಿಅಂಶಗಳು ಮಹತ್ವ ಪಡೆದುಕೊಂಡಿವೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಮೋದಿ ಆಡಳಿತದ ಅವಧಿಯಲ್ಲಿ ಮುಸ್ಲಿಂ ವಿರೋಧಿ ಹೇಳಿಕೆಗಳು ಮತ್ತು ದ್ವೇಷದ ವಾತಾವರಣ ಹೆಚ್ಚಾಗಿದೆ; ಜಾಗೃತ ಗುಂಪುಗಳ ಹಿಂಸಾಚಾರ, ತಾರತಮ್ಯಪೂರಿತ ಕಾನೂನುಗಳು ಹಾಗೂ ಶಿಕ್ಷೆಯ ರೂಪದಲ್ಲಿ ಅಕ್ರಮ ಕಟ್ಟಡಗಳ ಧ್ವಂಸ (ಬುಲ್ಡೋಜರ್ ಕಾರ್ಯಾಚರಣೆ) ಸೇರಿದಂತೆ ಹಲವು ಬೆಳವಣಿಗೆಗಳು ನಡೆದಿವೆ ಎಂಬುದನ್ನೂ ಅವರು ವರದಿಯ ಆಧಾರದ ಮೇಲೆ ಉಲ್ಲೇಖಿಸಿದ್ದಾರೆ.
ಇದೇ ವೇಳೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ – NIA) ಕೋಮುವಾದಿ ಮತ್ತು ಮುಸ್ಲಿಂ ವಿರೋಧಿ ಸ್ವರೂಪ ಪಡೆದುಕೊಂಡಿದೆ ಎಂದು ವಕೀಲರೊಬ್ಬರು ನೀಡಿರುವ ಹೇಳಿಕೆಯನ್ನು HRW ತನ್ನ ವರದಿಯಲ್ಲಿ ದಾಖಲಿಸಿದೆ. ಇದು ಆ ವಕೀಲರ ಆರೋಪವಾಗಿದ್ದು, ತನಿಖಾ ಸಂಸ್ಥೆಯ ಕಾರ್ಯವೈಖರಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಪಿಯರ್ಸನ್ ಸ್ಪಷ್ಟಪಡಿಸಿದ್ದಾರೆ.
ಮುಸ್ಲಿಂ ಆರೋಪಿಗಳಿಗೆ ಜಾಮೀನು ನಿರಾಕರಿಸುವುದು, ಆರೋಪಪಟ್ಟಿಗಳಲ್ಲಿ ಕಾನೂನುಬದ್ಧ ಸಾಕ್ಷ್ಯಗಳಿಗಿಂತ ಕೋಮು ನಿರೂಪಣೆಗೆ ಆದ್ಯತೆ ನೀಡಲಾಗುತ್ತಿದೆ ಎಂಬ ವಕೀಲರ ಆತಂಕಗಳನ್ನೂ ಸಂದರ್ಶನದಲ್ಲಿ ವಿವರಿಸಲಾಗಿದೆ.
ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯ ಮತ್ತು ಹಿಂಸಾಚಾರದ ವಿಶಾಲ ವಾತಾವರಣದ ಹಿನ್ನೆಲೆಯಲ್ಲಿ ಈ ಕಾನೂನು ಪ್ರಕ್ರಿಯೆಗಳನ್ನು ಗಂಭೀರವಾಗಿ ಪರಿಶೀಲಿಸಬೇಕೆಂದು ಹ್ಯೂಮನ್ ರೈಟ್ಸ್ ವಾಚ್ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.


