HomeUncategorizedಎಲ್ಲರ ನೋವನು ಬಲ್ಲವನಾದರೆ...

ಎಲ್ಲರ ನೋವನು ಬಲ್ಲವನಾದರೆ…

- Advertisement -
- Advertisement -

ಅವನ ಬಾಗಿದ ಬೆನ್ನ ಮೇಲವರು ಹತ್ತಿ ನಡೆದರು. ಬೇರೆ ಗತ್ಯಂತರವೇ ಇಲ್ಲದೇ. ದೋಣಿ ಹತ್ತಲಾಗದ ನಿರಾಶ್ರಿತ ಹೆಂಗಸರ ಪಾಲಿಗೆ ದೇವರಂತೆ ಒದಗಿಬಂದಿದ್ದ. ದುಡಿಮೆಗಾರನಾಗಿದ್ದ ಅವನಿಗೆ ಪ್ರಾಯಶಃ ದೇವರೆಂದರೆ ಕೈ-ಕಾಲು-ಕುತ್ತಿಗೆಗಳ ಬಿಗಿದ ದಾರ, ಹಣೆಯ ಕುಂಕುಮ, ಗಳಿಗೆ-ಮುಹೂರ್ತ-ವಾಸ್ತು-ಶಾಸ್ತ್ರ-ದೇವಸ್ಥಾನ, ಚರ್ಚು, ಮಸೀದಿಗಳಲ್ಲ. ಯಾರದೋ ಮಗುವನ್ನು ಎದೆಗವಚಿಕೊಂಡು ಬೆನ್ನಟ್ಟಿ ಧಾವಿಸುತ್ತಿರುವ ಪ್ರವಾಹಕ್ಕೇ ಸವಾಲಾಗಿ ಓಡಿ, ಮಗುವನ್ನು ಕಾಪಾಡಿದನಲ್ಲ- ಆ ಸೈನಿಕನ ಕಾಲುಗಳಿಗೆ ತ್ರಾಣ ಕೊಟ್ಟಿದ್ದು, ಎಳೆಯ ಜೀವವನ್ನು ಅಪಾಯದಿಂದ ರಕ್ಷಿಸಬೇಕೆಂಬ ಅದಮ್ಯ ನಿಷ್ಠೆ. ಅದನ್ನು ಯಾವ ದೇವರೂ ತಡೆಯಲಾಗುತ್ತಿರಲಿಲ್ಲ. ಅವನ ತೋಳಿನಲ್ಲಿದ್ದ ಆ ಪುಟ್ಟ ಕಂದನಿಗೆ ಉಸಿರುಸಿರಲ್ಲೂ ದೇವರ ಸಾಕ್ಷಾತ್ಕಾರವಾಗಿರಬಹುದು. ನಿಂತ ನೆಲವೇ ಕುಸಿದು ಜೀವಂತವಾಗಿ ಒಳನುಂಗುವಾಗ ಅದು ಹೇಗೋ ಜೀವವುಳಿದು- ಯಾರ್ಯಾರದೋ ಕೈಯಾಸರೆಯಲ್ಲಿ ನಿರಾಶ್ರಿತ ಶಿಬಿರ ತಲುಪಿದರಲ್ಲ ಆ ಹಿರಿಯ ಜೀವಗಳು. ಅವರ ಕಣ್ಣಾಳದ ಕೃತಜ್ಞತೆಯಲ್ಲಿ- ಫಳಫಳ ಹೊಳೆದದ್ದು; ತುಟಿಯಂಚಿನಲ್ಲಿ ಉದ್ಗರಿತವಾದದ್ದು ‘ದೇವರೇ’ ಎಂಬ ಪಿಸುದನಿಯಲ್ಲವೇ? ಕುಸಿದ ಮಣ್ಣಿನ ರಾಶಿಯಲ್ಲಿ ಸಿಲುಕಿ ಹೆಣವೂ ನಾಪತ್ತೆಯಾಗುವ ದುರ್ದಮ್ಯದಿಂದ ಪಾರಾಗಿ, ಒಂದು ಗೌರವದ ಸಾವಿನ ಸಾಧ್ಯತೆ ತೆರೆದ ಹೊತ್ತಲ್ಲಿ ಅವರ ಮನಸ್ಸು ನಮಿಸಿದ ದೇವರಿಗೆ ರೂಪವಿಲ್ಲ, ಬಣ್ಣವಿಲ್ಲ, ಆಕಾರವಿಲ್ಲ. ವಿಪತ್ತಿನ ಅನೂಹ್ಯ ಗಳಿಗೆಗಳಲ್ಲಿ ಹುಟ್ಟುವ ಹಾಡಿಗೆ ಒಂದೇ ರಾಗ- ಅದು ಮಾನವೀಯತೆ. ಕೇರಳ-ಕೊಡಗುಗಳ ವರದಿಗಳು ನನ್ನೊಳಗೆ ಬೆಚ್ಚಗೆ ಕುಳಿತಿದ್ದ ಕೆಲ ಅನುಭವಗಳನ್ನು ಮರಳಿಸಿದ್ದವು. ಒಳಗೆ ಬಚ್ಚಿಟ್ಟ ನಿಧಿಯೊಂದು ಸಿಕ್ಕಂತೆ. ಹದಿನೇಳು ವರ್ಷಗಳ ಹಿಂದಿನ ಮಾತು. ಲಕ್ಷ್ಮೇಶ್ವರದಿಂದ ಸವಣೂರಿಗೆ ಮನೆ ಬದಲಿಸುತ್ತಿದ್ದೆವು. ಹೊಟ್ಟೆಯಲ್ಲಿ ಆರು ತಿಂಗಳ ಕೂಸಿತ್ತು. ಸಾಮಾನು ತುಂಬಿದ ಟ್ರಕ್ಕನ್ನು ಹೇಗೆ ಏರಿದ್ದೆನೋ. ಕ್ಯಾಬಿನ್ನಿನಲ್ಲಿ ನಾಯಿ-ಬೆಕ್ಕು ಸಹಿತ ನನ್ನ ಸಂಸಾರ. ಗಂಡ ಹಿಂದಿನಿಂದ ಬೈಕ್‍ನಲ್ಲಿ. ಇಳಿಯುವಾಗ ಮಾತ್ರ ಏನು ಮಾಡಿದರೂ ಸಾಧ್ಯವಾಗುತ್ತಿಲ್ಲ. ಮನೆಗೆ ಮನೆಯನ್ನೇ ಎತ್ತಿಹಾಕಿಕೊಂಡು ಬಂದು ಮರಳಿ ಜೋಡಿಸಲು ಸಿದ್ಧರಾಗಿದ್ದ ನನ್ನ ಕಾಲೇಜಿನ ಮಕ್ಕಳಿಬ್ಬರು ಮುಂದೆ ಓಡಿ ಬಂದರು. ನಾಲ್ಕು ಹಸ್ತಗಳನ್ನು ಬಿಗಿದು ಮೆಟ್ಟಿಲು ಮಾಡಿ ‘ಹೂಂ ಇಳೀರಿ ಮೇಡಂ’ ಒತ್ತಾಯ. ಆ ಎಳೆಯ ಹಸ್ತಗಳ ಮೇಲೆ ನನ್ನ ಒರಟು ಪಾದಗಳನ್ನೂರಲು ಸರ್ವಥಾ ಸಾಧ್ಯವಿರಲಿಲ್ಲ. ನಾನು ಒಪ್ಪಲಿಲ್ಲ. ಅವರು ಬಿಡಲಿಲ್ಲ. ಕಡೆಗೂ ಅನಿವಾರ್ಯವಾಗಿ ಹೆಜ್ಜೆಯಿಟ್ಟೆ. ನನ್ನ ಪಾದಗಳಂದು ತಮ್ಮ ಜೀವಿತದ ಅತ್ಯಮೂಲ್ಯ ಮಾರ್ದವ ಸ್ಪರ್ಶವನ್ನನುಭವಿಸಿದ್ದವು. ಆ ಮಕ್ಕಳಿಗದು ನೆನಪಿದೆಯೋ ಇಲ್ಲವೋ. ಅವರೀಗ ಎಲ್ಲೆಲ್ಲಿ ತಮ್ಮ ಬಾಳಿನ ಬೇರು ಕಚ್ಚಿ ಬೆಳೆಯುತ್ತಿದ್ದಾರೋ. ಮೊನ್ನೆ ಕಂಡ ಬಾಗಿದ ಬೆನ್ನು ನನ್ನೆದುರು ಜೋಡು ಹೆಣೆದ ಹಸ್ತಗಳನ್ನು ನೆನಪಿಸಿತ್ತು.
ಎಂಟು ವರ್ಷಗಳ ಹಿಂದೆ ಧಾರವಾಡದ ರೇಲ್ವೆ ಸ್ಟೇಷನ್ನಿನಲ್ಲಿ ಟ್ರೇನು ಹತ್ತಲು ಹೋಗಿ ತಪ್ಪಿ ನಡೆದಿದ್ದೆ. ಎದುರು ಧಾವಿಸುತ್ತಿರುವ ಟ್ರೇನು ಈ ಕಡೆ ನನ್ನ ಎರಡು ಪಟ್ಟು ಎತ್ತರದ ಗೋಡೆ. ಕೈ ಎತ್ತಿದರೂ ಮೇಲಿನವರಿಗೆ ನಿಲುಕದ್ದು. ಇಡೀ ಸ್ಟೇಷನ್ನು ವಿದ್ರಾವಕ ಸಾವನ್ನು ಎದುರ್ಗೊಳ್ಳಲು ಸಜ್ಜಾಗುತ್ತಿದ್ದ ಅರೆ ಸೆಕೆಂಡಿನಲ್ಲಿ, ಎಲ್ಲಿಂದಲೋ ನನ್ನೆದುರು ಜಿಗಿದು ಒಂದು ಕಲ್ಲು ಇಟ್ಟು, ‘ಹತ್ತಿ ಮೇಲೆ’ ಅಂದವರೇ ಮೇಲಿನಿಂದ ಬಾಗಿ ನನ್ನೆಳೆದು ಇತ್ತ ಬಿಸಾಡಿ ತಮ್ಮ ಚಹ ಕ್ಯಾನುಗಳನ್ನೆತ್ತಿಕೊಂಡು ಹೋದರಲ್ಲ- ಆ ಹುಡುಗರನ್ನು ದೇವರೆನ್ನದೆ ಏನೆನ್ನಲಿ? ಮಗುವನ್ನಪ್ಪಿ ಓಡಿದ ಸೈನಿಕನ ಕಾಲುಗಳ ತ್ರಾಣ ನನ್ನನ್ನೆಳೆದು ಎತ್ತಿದ್ದ ಆ ಚಹ ಮಾರುವ ಹುಡುಗರ ತ್ರಾಣವನ್ನು ನೆನಪಿಸುತ್ತಿದೆ. ಇಷ್ಟು ಸುಂದರವಾಗಿದೆಯೇ ಬದುಕು ಎಂಬ ಆಲ್ಹಾದವನ್ನೂ. ಆ ಘಟನೆ ನನಗೆ ಸಾವಿನ ಗೌರವವೆಂದರೇನೆಂದು ಕಲಿಸಿತ್ತು. ರೈಲು ಗಾಲಿಗೆ ಸಿಕ್ಕಿ ಜಜ್ಜಿ ಹೋಗುತ್ತಿದ್ದ ದೇಹವನ್ನು ನೆನಪಿಸಿಕೊಂಡು ಒಸರಿದ ಕಣ್ಣೀರು ಥೇಟ್, ಕೊಡಗಿನ ಅಜ್ಜಿಯಂದಿರ ಕಣ್ಣೀರಿನಷ್ಟೇ ಬೆಚ್ಚಗಿತ್ತು. ನಂನಮ್ಮ ಬದುಕಿನ ದರ್ಶನಗಳೇ ಲೋಕದರ್ಶನಗಳ ಮೂಲಮಾತೃಕೆಗಳಿರಬಹುದೇ?
ತುಂಬ ಪೊಗದಸ್ತಾದ ಬಾಲ್ಯವನ್ನು ಕಳೆದವಳು ನಾನು. ಸಮುದ್ರವನ್ನು ಸೇರುವ ಶಾಲ್ಮಲೆಯ ವೈಭವದ ಅಬ್ಬರದ ಅಳವೆ ಅದು. ಗುಡ್ಡದ ಕೆಮ್ಮಣ್ಣು ಒರೆದು ಮಾಡಿದ ಕೆಂಪು ಹೊಳಪಿನ ನೆಲದ ಮೇಲೆ ಡಬ್ಬು ಬಿದ್ದು, ನೆಲಕ್ಕೆ ಪೂರ್ತಿ ಕಿವಿ ಹಚ್ಚಿದರೆ ಅನತಿ ದೂರದಲ್ಲಿ ಮೊರೆವ ಕಡಲ ಅಲೆಗಳ ಸದ್ದು ಕೇಳುತ್ತಿತ್ತು. ಎಷ್ಟು ಸ್ಪಷ್ಟವಾಗಿ ಅಂದರೆ, ನಾನೀಗ ಸಮುದ್ರದ ಮೇಲೇ ಮಲಗಿ ಅಲೆಗಳ ಸದ್ದನ್ನು ಆಲಿಸುತ್ತಿದ್ದೇನೆ ಎನ್ನುವಷ್ಟು. ನಾವು ನಾಲ್ಕೈದು ಮಕ್ಕಳು ಹೀಗೆ ಮಲಗಿ ಆಲಿಸುತ್ತಲೇ ಬರಿ ಕೈ ಬೆರಳೆಣಿಕೆಯಲ್ಲಿ ಎಷ್ಟು ಅಲೆಗಳ ಸದ್ದು ಕೇಳಿದೆವೆಂದು ಲೆಕ್ಕ ತೋರುವುದಿತ್ತು. ಬಹಳ ಸುಳ್ಳು ಗೊತ್ತಿಲ್ಲದ ಆ ದಿನಗಳಲ್ಲಿ ನಮ್ಮೆಲ್ಲರ ಬೆರಳುಗಳಲ್ಲೂ ಅಷ್ಟಷ್ಟೇ ಅಂಕಿಗಳಿರುತ್ತಿದ್ದವು. ನನ್ನಜ್ಜನ ಮನೆ ಎಂಬ ಪುರಾತನ ಮರ ಬಿಟ್ಟ ಪುಟ್ಟ ಚಿಗುರಿನಂತಿದ್ದೆ ನಾನು. ಆ ಮರದ ಸಾರಕ್ಕೂ ನಿಸ್ಸಾರಕ್ಕೂ ಒಂದು ಉದಾಹರಣೆಯಾಗಿ. ನಮಗಾಗ ಮಳೆಗಾಲವೆಂದರೆ, ಬಿಸಿಲು ಸುರಿದಂತೆ ಮಳೆಯೂ ಸುರಿವ ಸಹಜ ವಿದ್ಯಮಾನ. ಹೊಳೆಯಂಚಿನ ಬಾಳು. ಹೊಳೆಗೆ ನೆಗಸ ಬರುವುದೂ ಒಂದು ಸಂಗತಿ. ಅದಕ್ಕೊಂದಿಷ್ಟು ಸಿದ್ಧತೆ. ಒಮ್ಮೆ ಮಾತ್ರ ಹೊಳೆ ಏರಿದ್ದೆಂದರೆ… ದಂಡೆಯಲ್ಲಿದ್ದ ತೆಂಗಿನಮರದ ಗರಿಗಳು ಹೊಳೆಯಲ್ಲಿ ಹುಲ್ಲಿನೆಸಳಿನಂತೆ ಕಾಣುತ್ತಿದ್ದವು. ಘಟ್ಟದ ಮೇಲಿಂದ ಕೆಂಪುನೀರು ಧಾಂಗುಡಿಯಿಡುತ್ತಲೇ ಇತ್ತು. ಮಧ್ಯಾಹ್ನದಷ್ಟೊತ್ತಿಗೆ ಊರ ಹಿರೀಕರು ನನ್ನ ಅಜ್ಜನ ಮನೆಯಲ್ಲಿ ಸೇರಿದ್ದರು. ರಾತ್ರಿ ಏನಾಗುತ್ತೋ ಬಲ್ಲವರ್ಯಾರು? ಹಗಲೇ ಕಾಳಕಪ್ಪು ಕವಿದಿತ್ತು. ಊರಿಗೆ ಬರುತ್ತಿದ್ದ ಎರಡು ಬಸ್ಸುಗಳು ನಿಂತು ಹದಿನೈದು ದಿನಗಳಾಗಿತ್ತು. ವಿದ್ಯುತ್ ಎಂಬ ಪದವೇ ಹೊಸದು. ಏನಿದ್ದರೂ, ‘ಬರ್ರ್„„’ ಅಂತ ಸದ್ದು ಮಾಡುವ ಗ್ಯಾಸಲೈಟಿನ ಕಾಲ. ಹೊಳೆಯಂಚಿನ ಅಂಬಿಗರ ಕೇರಿ ಮುಳುಗಡೆಯಾದರೆ ಎಂಬ ಭಯ. ಅವರನ್ನು ಅಲ್ಲಿಂದ ಊರಿನ ಮೇಲ್ಭಾಗಕ್ಕೆ ತರಬೇಕು. ಆಗೇರ ವೋಮು ಕೈಗೆ ಸೈಕಲ್ ಕೊಟ್ಟು ಆದೇಶ ಕೊಡಲಾಯ್ತು. ‘ಹೋಗಿ ಸುದ್ದಿ ಮುಟ್ಟಿಸಿ, ಅವರನ್ನೆಲ್ಲ ಈಗಿಂದೀಗಲೇ ಹೊರಡಿಸಿಕೊಂಡು ಬಾ’. ಅಪಾಯದ ಮುನ್ಸೂಚನೆ ಕೊಡಲು ಅಜ್ಜ ಕಹಳೆ ಊದುತ್ತಿದ್ದ. ಆದರೆ ಜಡಿಮಳೆಗೆ ಅಜ್ಜನ ಕಹಳೆಯ ದರಕಾರವಿರಲಿಲ್ಲ. ಆಗ ನಾನಿನ್ನೂ ಶಾಲೆ ಮೆಟ್ಟಿಲು ಹತ್ತಿರಲಿಲ್ಲ. ನನ್ನ ಬಳಿಯೊಂದು ಜಬರ್ದಸ್ತ ಶೀಟಿ ಇತ್ತು. ಈ ಓಮು ಅದ್ಯಾವಾಗ ನೋಡಿದ್ದನೋ. ಸೈಕಲ್ ಮೇಲೆ ಶೀಟಿ ಊದುತ್ತ ಹೋಗಬಹುದೆಂಬುದು ಅವನ ಲೆಕ್ಕಾಚಾರ. ಅಜ್ಜನ ಮುಂದೆ ನನ್ನ ಶೀಟಿಯ ಬೇಡಿಕೆಯಿಟ್ಟ. ನಾನು, ನನ್ನ ಆ ಕೆಂಪುಶೀಟಿ ಅದ್ಯಾವುದೋ ಪುಣ್ಯಯಾತ್ರೆಯಲ್ಲಿ ಪಾಲುದಾರವಾಗುತ್ತದೆಂಬ ಹುರುಪಿನಲ್ಲಿ ತಂದು ಕೊಟ್ಟಾಯಿತು. ವೋಮುವಿನ ಹಿಂದೆ ತಂಡ ತಂಡ ಮಂದಿ ಬಂದು ಅಜ್ಜನ ಮನೆ ತೆಣಿ, ಜಗಲಿ, ಹೊರಕೋಣೆ ತುಂಬಿಯಾಯಿತು. ಆ ಕಡೆ ಬಚ್ಚಲ ಮನೆಮಾಡಿನಲ್ಲಿ ಹಂಡೆ ತುಂಬಿದ ಗಂಜಿ ಬೆಂದು ಅರಳುತ್ತಿತ್ತು. ಯಾರೋ ಒಣ ಮೀನಿನ ಚಟ್ನಿಯ ಸಿದ್ಧತೆಯಲ್ಲಿದ್ದರು. ಮಳೆಯಲ್ಲಿ ತೊಯ್ದ ಮೀನುಗಾರರ ಮೈಯ ಪರಿಮಳದ ಆ ಮಳೆರಾತ್ರಿ, ಆ ಗುಲುಗುಲು ಮಾತು, ‘ಒಡೀದಿರೆ, ನೀವು ತಾನ ಮಾಡಿ ಗುಡಿಯಮ್ಮಗೊಂದು ಕಾಯ್ ತಗದಿಡಿ ನೋಡ್ವಾ. ಮಳಿ ಕಮ್ಮಿ ಮಾಡಿ ಹೊಳು ಕೊಡುಕೆ’ ಹಸಿರು ಪತ್ತಲದ ಸುಕ್ರಜ್ಜಿಯ ಆದೇಶ. ಚಯ್‍ಪಯ್ ಮಕ್ಕಳು. ರಾತ್ರಿಯಿಡೀ ಹಚ್ಚಿಟ್ಟ ಲಾಟೀನು. ಈ ಮಧ್ಯೆ ಶೀಟಿಗೆ ಎಂಜಲು ಸೇರಿದೆಯೆಂದು ಮಳೆನೀರಲ್ಲಿ ಪೂರಾ ತೊಳೆದು ತನ್ನ ಮುಂಡದಲ್ಲಿ ಒರೆಸಿ ಕೊಟ್ಟಿದ್ದ ವೋಮುವಿನ ದಯೆಯಿಂದ ಎಷ್ಟು ಬಾಯಿಗಿಟ್ಟು ಉಸಿರಿಟ್ಟರೂ ಕುಂಯ್ ಅನ್ನದ ಶೀಟಿ… ನಾನು ಕುಸುಕುಸು ಮಾಡುತ್ತ ಕಣ್ಣೊರೆಸಿಕೊಳ್ಳುವ ಸೋಗು ಮಾಡುವಾಗ ಅಜ್ಜಿ ಹೇಳಿದ್ದಳು- “ನೋಡು, ನೀರು ಏರ್ತು ಅಂದ್ರೆ ಊರಿಗೆ ಊರೇ ಇಲ್ಲವಾಗೋ ಪರಾಪತಿಯದು. ಶೀಟಿಯೇ ಬ್ಯಾಡ. ಅದಿದ್ರೆ ಮತ್ತೆ ಹಿಂಗೆ ಈ ಜನರೆಲ್ಲ ಪಾಪ…” ಮುಂದೆಂದೂ ಯಾವ ಜಾತ್ರೆಯಲ್ಲೂ ನಾನು ಶೀಟಿ ಕೊಡಿಸಿಕೊಳ್ಳಲಿಲ್ಲ. ಏರಿದ್ದ ನೀರು ಒಂದಿಷ್ಟು ಗಾಯ ಗೀರು ಮಾಡಿ ಒಂದೆರಡು ದಿನದಲ್ಲಿ ಇಳಿದು ಹೋಗಿತ್ತು. ಆ ಎರಡ್ಮೂರು ದಿನವೂ ಬಚ್ಚಲ ಮಾಡದಲ್ಲಿ ಬೆಂದ ಗಂಜಿಯೇ ನಮಗೂ. ಅಜ್ಜ ಮಾತ್ರ ಭರಪೂರ ಪೂಜೆ ಮಾಡ್ತಿದ್ದ. ಬರೀ ಕಚ್ಚೆಯುಟ್ಟು ಗಂಧ ಬಳಿದು ನಿಂತು ಗುಡಿಯಮ್ಮಗೆ ಸಂದೇಶ ರವಾನೆಯಾಗುತ್ತಿತ್ತು. “ನೋಡ್ ತಾಯಿ, ಇದ್ಯಾಕೋ ಚೆಂದ ಕಾಣುದಲಾ. ನಿನ್ನ ಮಕ್ಳ ಬದ್ಕಿಗೆ ನೀನೇ ಬಲೆ ಹಾಕಿದರೆ ನಾಳಗೆ ನಿಂಗೇ ಮರ್ಯಾದಿ. ನೀರ ಇಳ್ಸ. ದುಡ್ದ ತಿನ್ನೂ ಮಂದಿ ಕಣ್ಣೀರ ನಿಂಗೆ ಗನಾದಲ್ಲಾ…” ಅಜ್ಜನಿಗೆ ದೇವರೆಂದರೆ ಹೀಗೆ… ತನ್ನೊಳಗನ್ನು ಹೊರಹಾಕಿಕೊಳ್ಳಲು, ತನ್ನ ಜನರಿಗೆ ಧೈರ್ಯ ಕೊಡಲು ಒದಗಿದ್ದು. ಅವರೆಲ್ಲ ಹೊರಟು ನಿಂತಾಗ ‘ಬೆನ್ನ ಕಾದ್ರಿ ಒಡ್ಯಾ, ನಾವೀಗ ಬತ್ತೀವು’ ಅನ್ನುತ್ತಿದ್ದರೆ, ನನ್ನಜ್ಜ ‘ಇದ್ಕೆ ಮಳ್ಳ ಅಂಬೂದು. ಹಿಂಗಂದು ನನ್ನ ಮೊಮ್ಮಕ್ಕಳಿಗೆ ಸೊಕ್ಕ ಕಲ್ಸಬ್ಯಾಡ್ರಿ, ನಡೀರಿ, ಅಲ್ಲಿ ಏನೇನಾಗೀದೋ ಸರಿಮಾಡ್ಕಳಿ’ ಅಂತಿದ್ದ. ಈಗನ್ನಿಸುತ್ತಿದೆ- ಆ ತಲೆಮಾರಿಗೆ ಗಾಂಧಿಯ ರಾಮ ತಿಳಿದಿದ್ದ. “ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು ಬಾಳಲ್ಲಿ” ಪ್ರಾರ್ಥನೆಯೂ. ನಿರಾಶ್ರಿತರಾಗಿ ಕೈಯೊಡ್ಡುವ ಜೀವದ ಸಂಕಟದ ತಿಳಿವಿಲ್ಲದಿದ್ದರೆ ಕೊಡುವವನ ಅಹಂಕಾರವೊಂದು ಹೂಂಕರಿಸುತ್ತದೆ.
ಜೀವವೊಂದು ಬಿಟ್ಟು ಏನೂ ಇಲ್ಲ- ಎಂದು ಬಯಲಲ್ಲಿ ನಿಂತುಬಿಟ್ಟವರ ವಿಷಾದಕ್ಕೆ ಇಡೀ ಸಮುದಾಯ ಸ್ಪಂದಿಸಿದೆ. ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ… ಎನ್ನುವಂತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...