Homeಅಂಕಣಗಳುಶೋಷಿತ ಸಮುದಾಯಗಳ ಪರ ರಾಜಕೀಯ ಕಥನಕ್ಕೆ ತಿಲಾಂಜಲಿ?

ಶೋಷಿತ ಸಮುದಾಯಗಳ ಪರ ರಾಜಕೀಯ ಕಥನಕ್ಕೆ ತಿಲಾಂಜಲಿ?

- Advertisement -
- Advertisement -

ಐದು ರಾಜ್ಯಗಳ ಪೈಕಿ, ಮೂರರಲ್ಲಿ ಗೆಲುವನ್ನು ಸಾಧಿಸಿದ ನಂತರ ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್‍ಗಾಂಧಿಯವರು ಪತ್ರಕರ್ತರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಗಮನಿಸಬಹುದಾದ ಕೆಲವು ಅಂಶಗಳಿದ್ದವು. ಅದರಲ್ಲಿ ಒಂದು ಅಂಶವನ್ನು ಈ ಸದ್ಯ ದೇಶಾದ್ಯಂತ ಗಟ್ಟಿಗೊಳ್ಳುತ್ತಿರುವ ಕಥನವೊಂದರ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಅದೇನೆಂದರೆ, ಸುಮಾರು 28 ನಿಮಿಷಗಳ ಆ ಪತ್ರಿಕಾಗೋಷ್ಠಿಯಲ್ಲಿ ಒಮ್ಮೆಯೂ ರಾಹುಲ್ ಶೋಷಿತ ಸಮುದಾಯಗಳನ್ನು ಉಲ್ಲೇಖಿಸಲೇ ಇಲ್ಲ. ದೇಶದಲ್ಲಿ ಬಿಕ್ಕಟ್ಟಿನಲ್ಲಿರುವ ರೈತರು ಮತ್ತು ನಿರುದ್ಯೋಗಿ ಯುವಜನರ ಪರವಾಗಿ ಅವರು ವ್ಯಕ್ತಪಡಿಸಿದ ಕಾಳಜಿ ಸರಿಯಾಗಿಯೇ ಇತ್ತು. ಆದರೆ, ವಿವಿಧ ರೀತಿಯ ದಾಳಿಗಳಿಗೆ ಗುರಿಯಾಗಿರುವ ಮುಸ್ಲಿಂ ಸಮುದಾಯವನ್ನಾಗಲೀ, ದಲಿತ ಸಮುದಾಯವನ್ನಾಗಲೀ ಅವರು ಹೆಸರಿಸಲಿಲ್ಲ. ಕನಿಷ್ಠ, ತಮ್ಮ ಪಕ್ಷವು ಜಾತ್ಯಾತೀತತೆಗೆ ಹಾಗೂ ದಮನಿತ ಸಮುದಾಯಗಳ ಏಳಿಗೆಗೆ ಬದ್ಧವಾಗಿರುತ್ತದೆಂಬ ಮಾತುಗಳನ್ನು ಅವರು ತೇಲಿಸಿದಂತೆಯೂ ಆಡಲಿಲ್ಲ.
ಇದು ಈ ನಿರ್ದಿಷ್ಟ ಪತ್ರಿಕಾಗೋಷ್ಠಿಯಲ್ಲಿ ಮಾತ್ರ ನಡೆದ ಒಂದು ಪ್ರತ್ಯೇಕಿತ ಬೆಳವಣಿಗೆಯಾಗಿದ್ದರೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ, ಕರ್ನಾಟಕದ ಚುನಾವಣೆಯ ಹೊತ್ತಿಗೆ ಶುರುವಾದ ಭಿನ್ನ ಕಥನದ ಸ್ವರೂಪವು ಈ ಐದು ರಾಜ್ಯಗಳ ಚುನಾವಣೆಯ ಹೊತ್ತಿಗೆ ಗಟ್ಟಿಕೊಂಡಿತ್ತು. ಕರ್ನಾಟಕದಲ್ಲಾದರೂ, ಸಿದ್ದರಾಮಯ್ಯನವರು ಅಹಿಂದ ಸಮುದಾಯಗಳಿಗೆ ಒಳಿತನ್ನು ಮಾಡಲು ಪ್ರಯತ್ನಿಸಿದ ಧುರೀಣರಾಗಿ ರಾಹುಲ್ ಜೊತೆಯಲ್ಲಿಯೇ ಇದ್ದರು. ಆದರೆ ಉಳಿದ ರಾಜ್ಯಗಳಲ್ಲಿ ಬಲಾಢ್ಯ ಜಾತಿಗಳಿಗೆ ಸೇರಿದವರೇ ಹೆಚ್ಚು ಮುಂಚೂಣಿಯಲ್ಲಿದ್ದ ಪ್ರಚಾರದಲ್ಲಿ ಮತ್ತೆ ಮತ್ತೆ ಕೇಳಿಬಂದದ್ದು ರೈತರು ಮತ್ತು ಯುವಜನರು. ರಾಫೇಲ್ ಹಗರಣವನ್ನು ವಿವರಿಸಬೇಕಾದಾಗಲೂ ರಾಹುಲ್ ಗಾಂಧಿ ಹೇಳುತ್ತಿರುವುದೇನೆಂದರೆ, ಅದೆಷ್ಟೋ ಸಾವಿರ ಕೋಟಿ ಸಾಲದಲ್ಲಿರುವ ಒಬ್ಬ ವ್ಯಕ್ತಿಗೆ ನೀವು ಇನ್ನೆಷ್ಟೋ ಸಾವಿರ ಕೋಟಿಗಳ ಡೀಲ್‍ಅನ್ನು ಉಡುಗೊರೆಯಾಗಿ ನೀಡಿದ್ದೀರಿ. ಅದೇ ಹಣವನ್ನು ನೀವು ರೈತರ ಸಾಲಮನ್ನಾಕ್ಕೆ ಬಳಸಬಹುದಿತ್ತಲ್ಲವೇ? ಎಂದು.
ರೈತರು ಮತ್ತು ಯುವಜನರು ಎಂದಾಗ ಸೀಮಿತ ಐಡೆಂಟಿಟಿಗಳಾಚೆ ಜನರನ್ನು ಒಗ್ಗೂಡಿಸುವ ಸಾಮುದಾಯಿಕ ಪರಿಭಾಷೆಯೆಂದು ನಾವು ಸಕಾರಾತ್ಮಕವಾಗಿಯೂ ನೋಡಬಹುದು; ಬಹುತೇಕ ಭೂಮಿ ಹೊಂದಿದ ಬಲಾಢ್ಯ ಸಮುದಾಯಗಳನ್ನಷ್ಟೇ ‘ರೈತರು’ ಎಂಬ ಪದ ಸಾಮಾನ್ಯವಾಗಿ ಬಿಂಬಿಸುತ್ತದೆಂದೂ ಭಾವಿಸಬಹುದು. ದೆಹಲಿಯಲ್ಲಿ ಬೃಹತ್ ರೈತ ಪ್ರತಿಭಟನೆ ಆಯೋಜಿಸಿದ್ದ ‘ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ’ಯು ಸ್ಪಷ್ಟವಾಗಿ ‘ನಾವು ರೈತರು ಎಂದಾಗ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭೂಮಿಯನ್ನು, ಕೃಷಿಯನ್ನು ನಂಬಿ ಬದುಕುತ್ತಿರುವ ಎಲ್ಲಾ ಗ್ರಾಮೀಣ ಸಮುದಾಯ’ ಎಂದೇ ವ್ಯಾಖ್ಯಾನಿಸುತ್ತೇವೆಂದು ಹೇಳಿದೆ. ಜೊತೆಗೆ ಎರಡು ಖಾಸಗಿ ಮಸೂದೆಗಳನ್ನು ತಯಾರಿಸುವಾಗಲೂ, ಈ ಎಲ್ಲಾ ಸಮುದಾಯಗಳಿಗೂ ಅನುಕೂಲವಾಗುವಂತೆಯೇ ರೂಪಿಸಿದೆ. ಆದರೂ ಇಂದು ಹೊಸ ಸರ್ಕಾರಗಳು ಸಾಲಮನ್ನಾ ಘೋಷಣೆಯನ್ನು ಮಾಡುವಾಗ, ಅದು ಭೂಮಿಯುಳ್ಳ ರೈತರ ಸಾಲಮನ್ನಾ ಮಾತ್ರ ಆಗುತ್ತಿದೆ. ಹಲವು ಸಾರಿ ದೊಡ್ಡ ಭೂಮಾಲೀಕರಿಗೆ ಮಾತ್ರ ಈ ಸಾಲಮನ್ನಾ ಅನುಕೂಲ ಮಾಡಿಕೊಡುವ ಸಾಧ್ಯತೆಯೇ ಹೆಚ್ಚು.
ಅಂದರೆ, ಮೇಲ್ಜಾತಿಗಳ ಧ್ರುವೀಕರಣಕ್ಕೆ ಕಾರಣವಾಗಿರುವ ಮತ್ತು ಬಹುಸಂಖ್ಯಾತ ಮತೋನ್ಮಾದವನ್ನು ಹೆಚ್ಚಿಸಿ ಧ್ರುವೀಕರಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಹಾಗೂ ಅದರ ಪರಿವಾರಕ್ಕೆದುರು, ಶೋಷಿತ ಸಮುದಾಯಗಳೆಲ್ಲದರ ಧ್ರುವೀಕರಿಸುವ ಮತ್ತು ಮೇಲ್ಜಾತಿಗಳಲ್ಲೂ ಒಂದಷ್ಟು ಭಾಗವನ್ನು ಸೆಳೆಯುವ ಸಾಧ್ಯತೆ ಇಲ್ಲವೆಂದು ಕಾಂಗ್ರೆಸ್ ಭಾವಿಸಿದಂತಿದೆ. ಇಂದು ಬಿಜೆಪಿಯನ್ನು ಸೋಲಿಸಲು ಹೀಗೆ ಮಾಡಿದರೇ ಸರಿ ಎಂದು ರಾಹುಲ್‍ಗಾಂಧಿ ಮುಂದಿಡುತ್ತಿರುವ ಕಥನವನ್ನು ರೂಪಿಸುತ್ತಿರುವ ತಂಡವು ನಿಶ್ಚಯಿಸಿದಂತಿದೆ. ಇದೇ ರೀತಿ ರಾಹುಲ್‍ಗಾಂಧಿಯ ಹಿಂದೂ ದೈವ ಭಕ್ತಿ ಮತ್ತು ಬ್ರಾಹ್ಮಣ ಐಡೆಂಟಿಟಿಯನ್ನೂ ಮುನ್ನೆಲೆಗೆ ತರುವ ಕೆಲಸ ಪ್ರಜ್ಞಾಪೂರ್ವಕವಾಗಿಯೇ ನಡೆಯುತ್ತಿದೆ.
ರಾಹುಲ್‍ಗಾಂಧಿ ಸರಿಯಾಗಿಯೇ ಮಾಡುತ್ತಿದ್ದಾರೆಂದು ಪ್ರತಿಪಾದಿಸುವ ನಿಲುವನ್ನು ಕ್ವಿಂಟ್ ಮತ್ತು ಪ್ರಿಂಟ್ ವೆಬ್‍ಪೋರ್ಟಲ್ ಸಂಪಾದಕರು ತೆಗೆದುಕೊಂಡಿದ್ದರೆ, ವೈರ್ ವೆಬ್‍ಪೋರ್ಟಲ್‍ನಲ್ಲೂ ಈ ನಿಲುವನ್ನು ಮುಂದಿಡುವ ಲೇಖನವು (Why Rahul Gandhi Is Right to Pit Hinduism Against Hindutva) ಪ್ರಕಟವಾಗಿದೆ. ಅಂದರೆ, ಈ ರೀತಿ ಭಾವಿಸುವ ದೊಡ್ಡ ಗುಂಪೇ ಇದೆಯೆಂದಾಯಿತು. ಇಂದಿನ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಸೋಲಿಸುವುದು ಅತ್ಯಂತ ಪ್ರಮುಖವಾದ ರಾಷ್ಟ್ರೀಯ ಒಳಿತಿನ ಕೆಲಸವಾಗಿರುವುದರಿಂದ, ಇದೆಲ್ಲವನ್ನೂ ಸಹಜ, ಅನಿವಾರ್ಯ ಎಂದು ತಳ್ಳಿ ಹಾಕಲೂಬಹುದು. ಬಿಜೆಪಿ ಸೋತಾಗ ಹೇಗೂ ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯ ಇಂದಿನ ಮಟ್ಟಕ್ಕೆ ಸಂಕಷ್ಟಕ್ಕೀಡಾಗದಿರರು. ಹಾಗಾಗಿ ಬಿಜೆಪಿ ಸೋಲುವುದರಲ್ಲೇ ಅವರ ಹಿತವೂ ಅಡಗಿದೆ ಎಂದೂ ಹೇಳಿಬಿಡಬಹುದು.
ಆದರೆ, ಇದು ಅಷ್ಟು ಸರಳ ಸಂಗತಿಯಲ್ಲ. ಸಾರ್ವಜನಿಕ ಡಿಸ್‍ಕೋರ್ಸ್‍ನಿಂದಲೇ ದೇಶದ ಬಹುಸಂಖ್ಯಾತ ಶೋಷಿತ ಜನಸಮುದಾಯಗಳ ಪರವಾದ ಕಥನವು ಮರೆಯಾಗುವುದು ದೀರ್ಘಕಾಲಿಕ ನಕಾರಾತ್ಮಕ ಪರಿಣಾಮವನ್ನೇ ಉಂಟು ಮಾಡುತ್ತದೆ. ತಾನೇ ಕಟ್ಟಿಕೊಂಡು ಬಂದ ಕಥನವನ್ನು ತೃಪ್ತಿಪಡಿಸುವ ಕ್ರಮಗಳನ್ನೇ ಆಯ್ಕೆಯಾಗಿ ಬಂದ ಸರ್ಕಾರವು ತೆಗೆದುಕೊಳ್ಳುತ್ತದೆ. ಶೋಷಿತ ಸಮುದಾಯಗಳ ಸುಖ-ದುಃಖಗಳು ಅಪ್ರಸ್ತುತವಾಗುತ್ತಾ ಹೋಗುತ್ತವೆ. ಈಗಾಗಲೇ ಮುಸ್ಲಿಂ ಸಮುದಾಯವು ಹಕ್ಕನ್ನು ಕೇಳುವುದಕ್ಕಿಂತ ಹೆಚ್ಚು ಶಾಂತಿಯನ್ನು ಮಾತ್ರ ಬಯಸುವ ಕಡೆಗೆ ತಳ್ಳಲ್ಪಟ್ಟಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಉಪಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳನ್ನು ಕೇಳಲು ಶ್ರಮಹಾಕುವ ಗೋಜಿಗೇ ‘ಜಾತ್ಯಾತೀತ ಕೂಟ’ದ ನಾಯಕರು ಹೋಗಲಿಲ್ಲ. ಕನಿಷ್ಠ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆಯಾದರೂ ಅಲ್ಪಸಂಖ್ಯಾತರ ಓಟಿನ ಲಾಭಕ್ಕಾಗಿ ಪ್ರಯತ್ನಿಸುವ, ಅಗತ್ಯವೂ ಇಲ್ಲದಂತೆ ಹೊಸ ಮೈತ್ರಿಯು ನೋಡಿಕೊಂಡಿತು.
ಹೇಗೂ ಈ ಸಮುದಾಯಗಳಿಗೆ ನಮಗೆ ಮತ ಹಾಕುವುದಲ್ಲದೇ ಬೇರೆ ದಿಕ್ಕಿಲ್ಲ ಎಂಬ ಅಭಿಪ್ರಾಯವು ಬಲವಾಗಿರುವುದರಿಂದಲೇ ಇಂತಹ ಬೆಳವಣಿಗೆಗಳು ನಡೆಯುತ್ತವೆ. ಮೊದಲು ಎನ್‍ಡಿದಲ್ಲಿದ್ದ ಮಮತಾ ಬ್ಯಾನರ್ಜಿ ಹೆಚ್ಚೆಚ್ಚು ಮೋದಿ ವಿರೋಧಿ ಆಗುತ್ತಾ ಬಂದಿದ್ದು ಮುಸ್ಲಿಂ ಮತಗಳ ಕಾರಣಕ್ಕೇ ಎಂಬುದರಲ್ಲಿ ಸಂಶಯವೇನೂ ಇಲ್ಲ. ಈಗೊಂದು ವೇಳೆ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳ ನಡುವೆ ಮಹಾಘಟಬಂಧನ್ ಏರ್ಪಟ್ಟರೆ, ಉಳಿಯುವ ಪೈಪೋಟಿ ‘ಹಿಂದೂ ಮತ’ಗಳನ್ನು ಪಡೆಯುವುದಕ್ಕೆ ಮಾತ್ರವಾಗಿರುತ್ತದೆ.
ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸುವವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಯಾವುದೇ ಕ್ಷೇತ್ರದಲ್ಲೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಬಹುಸಂಖ್ಯಾತರಾಗಿರದಿರುವುದರಿಂದ, ಹೆಚ್ಚಿನ ಪೈಪೋಟಿ ಮೇಲ್ಜಾತಿಗಳನ್ನು ತೃಪ್ತಿಪಡಿಸುವುದಕ್ಕೇ ಆಗಿರುತ್ತದೆ. ಹೆಚ್ಚು ಕಡಿಮೆ ಇದೇ ಪರಿಸ್ಥಿತಿ, ‘ಅನಿವಾರ್ಯ ಓಟ್‍ಬ್ಯಾಂಕ್’ ಆಗಿ ಸೃಷ್ಟಿಯಾದ ಸಮುದಾಯಗಳದ್ದು ಆಗುತ್ತಿದೆ.
ಇದಕ್ಕೆ ಕೇವಲ ರಾಹುಲ್‍ಗಾಂಧಿ ಅಥವಾ ಕಾಂಗ್ರೆಸ್ ಪಕ್ಷವನ್ನು ದೂರುವ ಹಾಗಿಲ್ಲ. ಬಹುಸಂಖ್ಯಾತರಾಗಿದ್ದರೂ, ರಾಜಕೀಯ ಧ್ರುವೀಕರಣವನ್ನು ಸಾಧಿಸಿಕೊಳ್ಳಲಾಗದ ಅಹಿಂದ ಸಮಷ್ಟಿಯೂ ತನ್ನೊಳಗೆ ಆಲೋಚಿಸಿಕೊಳ್ಳಬೇಕಾಗುತ್ತದೆ. ಅಂತಹದೊಂದು ಧ್ರುವೀಕರಣ ಸಾಧ್ಯವಾಗದಂತೆ ಅತ್ಯಂತ ಶೋಷಿತ ಸಮುದಾಯಗಳನ್ನು ಒಡೆಯಲು ನಡೆಯುವ ಪ್ರಯತ್ನಗಳಿಗೆ ಇಂಬುಕೊಡುವ ಈ ಸಮುದಾಯಗಳ ‘ಪ್ರಜ್ಞಾವಂತ’ರೂ ಉತ್ತರ ಕೊಡಬೇಕಾಗುತ್ತದೆ. ಅದೇನೇ ಇದ್ದರೂ, ಹೆಚ್ಚೆಚ್ಚು ಜಾತಿ, ಧರ್ಮಗಳ ಅಸ್ಮಿತೆಗಳನ್ನು ಆಧರಿಸಿ ಮಾಡುವ ರಾಜಕಾರಣವು ಇಂತಹ ಅಪಾಯಗಳಿಗೆ ಎದುರಾಗುವ ಸಾಧ್ಯತೆ ಇದ್ದೇ ಇರುತ್ತದೆ. ಅಂತಹ ಅಪಾಯಗಳನ್ನು ಎದುರಿಸುವ ಮತ್ತು ಶೋಷಿತ ಸಮುದಾಯಗಳ ಹಿತವನ್ನೂ ಕಾಪಾಡುವ ರಾಜಕೀಯ ಸಮೀಕರಣವನ್ನು ಇನ್ನೂ ಫೈಸಲ್ ಮಾಡಿಕೊಳ್ಳಲಾಗದ ಸಮಸ್ಯೆಯೂ ಒಂದು ಕಾರಣವಾಗಿದೆ.
ಆ ಜವಾಬ್ದಾರಿ ರಾಹುಲ್‍ಗಾಂಧಿಯದ್ದೇ ಎಂದು ಯಾರಾದರೂ ಭಾವಿಸಿದರೆ ಅದಕ್ಕಿಂತ ಮೂರ್ಖರಿರಲು ಸಾಧ್ಯವಿಲ್ಲ. ಈ ನಿರ್ದಿಷ್ಟ ಸಂದರ್ಭದಲ್ಲಿ ಮೋದಿಗೆದುರಾಗಿ ಆತ ಪರವಾಗಿಲ್ಲ ಎಂದು ಕಾಣುತ್ತಿರಬಹುದು. ಆದರೆ, ಭಾರತದ ಸಂಸದೀಯ ರಾಜಕಾರಣದಲ್ಲಿ, ನಮ್ಮ ರಾಜಕೀಯಾರ್ಥಿಕತೆ ಹಾಗೂ ಚಳವಳಿಗಳು ರೂಪಿಸಿದ ಶೋಷಿತ ಸಮುದಾಯಗಳ ವೋಟ್‍ಬ್ಯಾಂಕ್‍ಅನ್ನು ಅಡ್ರೆಸ್ ಮಾಡಲು ರಾಜಕೀಯ ಪಕ್ಷಗಳು ಜನಪರವಾಗಿದೆಯೇ ಹೊರತು ತಮ್ಮಂತೆ ತಾವೇ ಜನಮುಖಿಯಾಗಿರುವುದು ಸಾಧ್ಯವಿಲ್ಲ. ಹಾಗಾಗಿ ಸಮಾಜದಲ್ಲಿ ರೂಪಿತಗೊಳ್ಳಬೇಕಾದ ಶೋಷಿತ ಸಮುದಾಯಗಳ ರಾಜಕೀಯ ಒತ್ತಾಸೆಯು, ರಾಜಕೀಯ ಪಕ್ಷಗಳಿಂದ ಪೂರಕವಾದ ರಾಜಕೀಯ ಕಥನವನ್ನು ರೂಪಿಸುತ್ತದೆಯೇ ಹೊರತು ಅದರ ವಿರುದ್ಧ ದಿಕ್ಕಿನಲ್ಲಿ ಅಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...