Homeಮುಖಪುಟಎಜಿಆರ್ ಬಾಕಿ ಪಾವತಿಗೆ 10 ವರ್ಷಗಳ ಗಡುವು: ಹಿಂದೆ ಗುಡುಗಿದ್ದ ಸುಪ್ರೀಂ ತಣ್ಣಗಾಗಿದ್ದೇಕೆ?

ಎಜಿಆರ್ ಬಾಕಿ ಪಾವತಿಗೆ 10 ವರ್ಷಗಳ ಗಡುವು: ಹಿಂದೆ ಗುಡುಗಿದ್ದ ಸುಪ್ರೀಂ ತಣ್ಣಗಾಗಿದ್ದೇಕೆ?

ಈ ಹಿಂದೆ ಟೆಲಿಕಾಂ ಕಂಪನಿಗಳು ಹಣ ಕಟ್ಟದಿದ್ದಾಗ ಸುಪ್ರೀಂ ಅವುಗಳ ವಿರುದ್ಧ ಗರಂ ಆಗಿತ್ತು. ಆಗ ಕೇಂದ್ರ ಸರ್ಕಾರ ಅವುಗಳ ಪರ ನಿಂತಿತ್ತು. ಮೊದಲು ಬಾಕಿ ಪಾವತಿಗೆ 20 ವರ್ಷ ಸಮಯ ಬೇಕೆಂದು ಕೇಳಿದ್ದ ಕೇಂದ್ರ ನಂತರ ಟೆಲಿಕಾಂ ಸಂಸ್ಥೆಗಳು ಕಟ್ಟಬೇಕಿರುವ ಹಣವನ್ನು ಸರ್ಕಾರಿ ಸಂಸ್ಥೆಗಳಿಂದ ತುಂಬಿಕೊಳ್ಳಲು ಮುಂದಾಗಿತ್ತು.

- Advertisement -
- Advertisement -

ಖಾಸಗಿ ಟೆಲಿಕಾಂ ಕಂಪನಿಗಳು ಕಟ್ಟಬೇಕಿರುವ 1.6 ಲಕ್ಷ ಕೋಟಿ ಎಜಿಆರ್ ಹಣ ವಿಚಾರವಾಗಿ ಅವುಗಳ ವಿರುದ್ಧ ಕಿಡಿಕಾರುತ್ತಿದ್ದ ಸುಪ್ರೀಂ ಕೋರ್ಟ್ ಇಂದು ಏಕಾಏಕಿ ಅವುಗಳಿಗೆ ಬಾಕಿ ಪಾವತಿಸಲು 10 ವರ್ಷಗಳ ಕಾಲಾವಕಾಶ ನೀಡಿದೆ.

ವೋಡಾಫೋನ್ ಐಡಿಯಾ, ಭಾರ್ತಿ ಏರ್‌ಟೆಲ್‌ ಸೇರಿದಂತೆ ಹಲವು ಕಂಪನಿಗಳಿಗೆ ಹಣ ಪಾವತಿಗೆ ಮಾರ್ಚ್ 2031 ರವರೆಗೂ ಕಾಲಾವಕಾಶ ನೀಡಿದೆ. ಆದರೆ 2021ರ ಮಾರ್ಚ್ 31ರ ಒಳಗೆ ಎಜಿಆರ್ ಬಾಕಿಯ ಶೇಕಡಾ 10ರಷ್ಟನ್ನು ಪಾವತಿಸಲು ಕೋರ್ಟ್ ತಿಳಿಸಿದೆ.

ನಾಳೆ ನಿವೃತ್ತಿಯಾಗಲಿರುವ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ. ಬಾಕಿ ಪಾವತಿಸಲು ಕನಿಷ್ಟ 7 -10 ವರ್ಷಗಳ ಗಡುವನ್ನು ಟಾಟಾ ಟೆಲಿಕಾಂ ಸಂಸ್ಥೆ ಕೇಳಿದರೇ, ವೋಡಾಫೋನ್-ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ 15 ವರ್ಷಗಳ ಕಾಲಾವಕಾಶವನ್ನು ಕೇಳಿದ್ದವು. ಆದರೆ ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ 20 ವರ್ಷಗಳ ಕಾಲಾವಕಾಶ ನೀಡುವಂತೆ ಸುಪ್ರೀಂಗೆ ಮನವಿ ಮಾಡಿತ್ತು.

ಹಣ ಪಾವತಿಯ ಜವಾಬ್ದಾರಿಯನ್ನು ಟೆಲಿಕಾಂ ಕಂಪನಿ ಅಧ್ಯಕ್ಷರು ವಹಿಸಬೇಕಾಗುತ್ತದೆ. ಕೇವಲ ಬಾಕಿ ಇರುವ ಹಣವಷ್ಟೇ ಅಲ್ಲದೇ, ಡಿಫಾಲ್ಟ್ ಬಡ್ಡಿ, ದಂಡ  ಮತ್ತು ನ್ಯಾಯಾಂಗ ನಿಂದನೆಯ ಹಣವನ್ನು ತುಂಬಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಏನಿದು ಎಜಿಆರ್ ಹಣ ಬಾಕಿ ತಕರಾರು?

1994 ರಾಷ್ಟ್ರೀಯ ಟೆಲಿಕಾಂ ನೀತಿಯ ಅಡಿಯಲ್ಲಿ ದೂರ ಸಂಪರ್ಕ ವಲಯವನ್ನು ಉದಾರೀಕರಣಗೊಳಿಸಲಾಯಿತು. ಈ ಬೆಳವಣಿಗೆಯ ನಂತರ ಟೆಲಿಕಾಂ ಕಂಪೆನಿಗಳಿಗೆ ತರಂಗಾಂತರಗಳನ್ನು ಸ್ಥಿರ ಪರವಾನಗಿ ವಾರ್ಷಿಕ ಶುಲ್ಕಕ್ಕೆ ಮಾರಾಟ ಮಾಡುವ ಪರಿಪಾಠ ಆರಂಭವಾಯಿತು.

ಸ್ಥಿರ ಪರವಾನಗಿ ಶುಲ್ಕದಿಂದ ಬಿಡುಗಡೆ ಹೊಂದಲು ಕೇಂದ್ರ ಸರ್ಕಾರ 1999ರಲ್ಲಿ ಆದಾಯ ಹಂಚಿಕೆ ಶುಲ್ಕ ವಿಧಾನಕ್ಕೆ ಪರವಾನಗಿಯನ್ನು ವರ್ಗಾಯಿಸಿಕೊಳ್ಳುವ ಅವಕಾಶವನ್ನು ಆಯಾ ಕಂಪೆನಿಗಳಿಗೆ ನೀಡಿತು.

ಈ ಕಾಲಘಟ್ಟದಲ್ಲಿ ಬದಲಾದ ಟೆಲಿಕಾಂ ನೀತಿಯ ಅನ್ವಯ ದೂರ ಸಂಪರ್ಕ ಆದಾಯದ ಜೊತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ವಾರ್ಷಿಕ ಪರವಾನಗಿ ಶುಲ್ಕ (ಎಜಿಆರ್) ಎಂದು ಕರೆಯಲಾಯಿತು. ತರಂಗಾತರ ಹಂಚಿಕೆ ಶುಲ್ಕದ ಜೊತೆಗೆ ಈ ಶುಲ್ಕವನ್ನು ವರ್ಷಕ್ಕೊಮ್ಮೆ ಕೇಂದ್ರ ದೂರ ಸಂಪರ್ಕ ಇಲಾಖೆಗೆ ಟೆಲಿಕಾಂ ಕಂಪೆನಿಗಳು ಪಾವತಿ ಮಾಡಬೇಕು ಎಂಬುದು ನಿಯಮ.


ಇದನ್ನೂ ಓದಿ: ಟೆಲಿಕಾಂ ಕುರಿತ ನಮ್ಮ ತೀರ್ಪು ದುರುಪಯೋಗವಾಗುತ್ತಿದೆ : ಕೇಂದ್ರಕ್ಕೆ ಸುಪ್ರೀಂ ಚಾಟಿ


ಈ ಹಿಂದೆ ಟೆಲಿಕಾಂ ಕಂಪನಿಗಳು ಹಣ ಕಟ್ಟದಿದ್ದಾಗ ಸುಪ್ರೀಂ ಅವುಗಳ ವಿರುದ್ಧ ಗರಂ ಆಗಿತ್ತು. ಆಗ ಕೇಂದ್ರ ಸರ್ಕಾರ ಅವುಗಳ ಪರ ನಿಂತಿತ್ತು. ಮೊದಲು ಬಾಕಿ ಪಾವತಿಗೆ 20 ವರ್ಷ ಸಮಯ ಬೇಕೆಂದು ಕೇಳಿದ್ದ ಕೇಂದ್ರ ನಂತರ ಟೆಲಿಕಾಂ ಸಂಸ್ಥೆಗಳು ಕಟ್ಟಬೇಕಿರುವ ಹಣವನ್ನು ಸರ್ಕಾರಿ ಸಂಸ್ಥೆಗಳಿಂದ ತುಂಬಿಕೊಳ್ಳಲು ಮುಂದಾಗಿತ್ತು. ಆದರೆ ಆ ಎರಡು ವಿಚಾರಕ್ಕೆ ಸುಪ್ರೀಂ ತಡೆ ನೀಡಿತ್ತು.

ಆಯಿಲ್ ಇಂಡಿಯಾ, ದೆಹಲಿ ಮೆಟ್ರೋ ರೈಲು ನಿಗಮ ಮತ್ತು ಪವರ್ ಗ್ರಿಡ್ ಕಾರ್ಪೊರೇಶನ್‌ನಂತಹ ಸಾರ್ವಜನಿಕ ವಲಯದ ಘಟಕಗಳಿಂದ ಬಾಕಿ ಹಣ ತುಂಬಿ ಕೊಡಬೇಕೆಂದು ಸರ್ಕಾರದ ದೂರಸಂಪರ್ಕ ಇಲಾಖೆ ಕೋರಿತ್ತು. ಇದಕ್ಕೆ ಸುಪ್ರೀಂಕೋರ್ಟ್ ಅನುಮತಿ ನಿರಾಕರಿಸಿ, ಕೇಂದ್ರಕ್ಕೆ ಟೆಲಿಕಾಂ ಕಂಪನಿಗಳಿಂದ ವಸೂಲಿ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿತ್ತು.

ತನ್ನ ಹಲವು ಆದೇಶಗಳ ಹೊರತಾಗಿಯೂ ಟೆಲಿಕಾಂ ಕಂಪನಿಗಳು ಹಣ ಪಾವತಿ ಮಾಡದಿದ್ದಾಗ ಸುಪ್ರೀಂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ ಇಂದು ಮಾತ್ರ ಸರಾಗವಾಗಿ 10 ವರ್ಷ ಸಮಯ ನೀಡುವ ಮೂಲಕ ಸುಪ್ರೀಂ ತನ್ನ ಹಿಂದಿನ ಆದೇಶಗಳನ್ನು ಮರೆತಿದ್ದು ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ವೋಡಾಫೋನ್ -ಐಡಿಯಾ, ಭಾರ್ತಿ ಏರ್‌ಟೆಲ್, ಟಾಟಾ ಡೊಕೊಮೆ, ಜಿಯೋ ಸೇರಿದಂತೆ ಹಲವು ಕಂಪನಿಗಳು ಸುಮಾರು 1.6 ಲಕ್ಷ ಕೋಟಿ ಎಜಿಆರ್ ಹಣ ಬಾಕಿ ಉಳಿಸಿಕೊಂಡಿವೆ. ದಿವಾಳಿಯಾಗಿರುವ ಅನಿಲ್ ಅಂಬಾನಿ ನೇತೃತ್ವದ ರಿಲೆಯನ್ಸ್ ಕಮ್ಯುನಿಕೇ‍ಷನ್ ಈಗ ಆತನ ಸಹೋದರ ಮುಖೇಶ್ ಅಂಬಾನಿ ಪಾಲಾಗಿದ್ದು ಅದರ ಎಜಿಆರ್ ಯಾರು ಕಟ್ಟಬೇಕೆಂಬುದರ ಕುರಿತು ಸಹ ಚರ್ಚೆ ನಡೆಯುತ್ತಿವೆ.


ಇದನ್ನೂ ಓದಿ: ಜಿಯೋ ಎಂಬ ಟೆಲಿಕಾಂ ಕಂಪನಿ ಉಳಿದವುಗಳನ್ನು ನುಂಗಿ ಏಕಸ್ವಾಮ್ಯ ಸಾಧಿಸಿದ್ದು ಹೇಗೆ ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...