Homeಮುಖಪುಟಜಿಯೋ ಎಂಬ ಟೆಲಿಕಾಂ ಕಂಪನಿ ಉಳಿದವುಗಳನ್ನು ನುಂಗಿ ಏಕಸ್ವಾಮ್ಯ ಸಾಧಿಸಿದ್ದು ಹೇಗೆ ಗೊತ್ತೆ?

ಜಿಯೋ ಎಂಬ ಟೆಲಿಕಾಂ ಕಂಪನಿ ಉಳಿದವುಗಳನ್ನು ನುಂಗಿ ಏಕಸ್ವಾಮ್ಯ ಸಾಧಿಸಿದ್ದು ಹೇಗೆ ಗೊತ್ತೆ?

ಈ ದೇಶದಲ್ಲಿ ಕಾನೂನುಗಳಿಗೆ ಬೆಲೆ ಇಲ್ಲಿವೇ? ಹೀಗಾದರೆ ಈ ದೇಸ ತೊರೆಯುವುದೇ ಒಳ್ಳೇಯದು ಎಂದು ಜಿಯೋ ಹೊರತುಪಡಿಸಿ ಉಳಿದ ಕಂಪನಿಗಳಿಗೆ ಕಳೆದ ವಾರ ಸುಪ್ರೀಂ ಕೋರ್ಟ್‌ ಚಾಟಿ ಬೀಸಿತು.. ಯಾಕೀ ಪರಿಸ್ಥಿತಿ? ಇಲ್ಲಿದೆ ನೋಡಿ ಉತ್ತರ.

- Advertisement -
- Advertisement -

ಭಾರತದ ಟೆಲಿಕಾಂ ಕಾರ್ಪೊರೇಟ್ ವಿಭಾಗ ಕಳೆದ ಒಂದು ದಶಕದ ಅವಧಿಯಲ್ಲಿ ಯಶಸ್ಸಿನ ಉಚ್ಛಕ್ಕೆ ಏರಿದಂತೆ, ಅಕ್ಷರಶಃ ಪಾತಾಳವನ್ನೂ ಮುಟ್ಟಿದೆ. ಯಾವ ಮಟ್ಟಿನ ಪಾತಾಳ ಎಂದರೆ ಕೆಲವು ಕಂಪೆನಿಗಳು ಮತ್ತೆ ಮೈಕೊಡವಿ ನಷ್ಟದಿಂದ ಮೇಲೇಳುವುದು ದುಸ್ಸಾಧ್ಯ ಎಂದೇ ಹೇಳಲಾಗುತ್ತಿದೆ. ಇದಕ್ಕೆಲ್ಲಾ ಕಾರಣ ರಿಲಾಯನ್ಸ್ ಜಿಯೋ ಮತ್ತು ಭಾರತದ ಟೆಲಿಕಾಂ ಮಾರುಕಟ್ಟೆ ಏಕಸ್ವಾಮ್ಯದತ್ತ ಹೆಜ್ಜೆ ಹಾಕುತ್ತಿರುವ ಅಪಾಯಕಾರಿ ಬೆಳವಣಿಗೆ ಎಂದು ಬೇರೆ ಬಿಡಿಸಿ ಹೇಳಬೇಕಾಗಿಲ್ಲ.

ಒಂದು ಕಾಲದಲ್ಲಿ ಟೆಲಿಕಾಂ ಕ್ಷೇತ್ರದ ದಿಗ್ಗಜರೆನಿಸಿಕೊಂಡಿದ್ದ ಭಾರ್ತಿ ಏರ್ಟೆಲ್, ವೋಡಾಫೋನ್ ಮತ್ತು ಐಡಿಯಾ ದಂತಹ ಕಂಪೆನಿಗಳು ಇಂದು ತಮ್ಮ ನಷ್ಟವನ್ನು ಭರಿಸಲಾಗದೆ ಮತ್ತೊಂದೆಡೆ ಸರ್ಕಾರಕ್ಕೆ ವಾರ್ಷಿಕ ಪರವಾನಗಿಗೆ ನೀಡಬೇಕಾದ ಹಣವನ್ನೂ ಪಾವತಿಸಲಾಗದೆ ಪರಿತಪಿಸುತ್ತಿವೆ. ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಐಡಿಯಾ ಮತ್ತು ವೊಡಾಪೋನ್ ಒಂದಾಗಿ ಕಾರ್ಯನಿರ್ವಹಿಸಲು ಮುಂದಾದರೂ ಪರಿಸ್ಥಿತಿ ಸುಧಾರಿಸಿಲ್ಲ.

ಪರಿಣಾಮ ಫೆ.14 ರಂದು ಟೆಲಿಕಾಂ ಕಂಪೆನಿಗಳಿಗೆ ತಪರಾಕಿ ಹಾಕಿರುವ ಸುಪ್ರೀಂ ಕೋರ್ಟ್, ಏರ್ಟೆಲ್, ವೊಡಾಪೋನ್ ಮತ್ತು ಐಡಿಯಾ ಕಂಪೆನಿಗಳು ಭಾರತದ ದೂರ ಸಂಪರ್ಕ ಇಲಾಖೆಗೆ ಸಲ್ಲಿಸಬೇಕಾಗಿರುವ 1.47 ಲಕ್ಷ ಕೋಟಿ ಎಜಿಆರ್ ಹಣವನ್ನೂ ಕೂಡಲೇ ಪಾವತಿಸಬೇಕು ಎಂದು ತಾಕೀತು ಮಾಡಿದೆ. ಆದರೆ, ನಷ್ಟದ ಸುಳಿಯಲ್ಲಿರುವ ಈ ಕಂಪೆನಿಗಳು ಈ ಮೊತ್ತದ ಹಣವನ್ನು ಪಾವತಿ ಮಾಡುವುದು ಅಸಾಧ್ಯವಾದ ಮಾತು ಎನ್ನುತ್ತಿದೆ ಭಾರತದ ಟೆಲಿಕಾಂ ವಲಯ.

ಹಾಗಾದರೆ ಏನಿದು ತಕರಾರು? ಎಜಿಎಸ್ ಹಣ ಎಂದರೇನು? ಈ ಹಣವನ್ನು ಟೆಲಿಕಾಂ ಕಂಪೆನಿಗಳು ಬಾಕಿ ಉಳಿಸಿಕೊಳ್ಳಲು ಕಾರಣವೇನು? ಭಾರತದ ಟೆಲಿಕಾಂ ಕ್ಷೇತ್ರ ನಷ್ಟದಲ್ಲಿರಲು ಕಾರಣವೇನು? ಈ ನಷ್ಟಕ್ಕೂ ರಿಲಾಯನ್ಸ್ ಜಿಯೋಗೂ ಇರುವ ಸಂಬಂಧ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಏನಿದು ಎಜಿಎಸ್ ಹಣ ಬಾಕಿ ತಕರಾರು?

1994 ರಾಷ್ಟ್ರೀಯ ಟೆಲಿಕಾಂ ನೀತಿಯ ಅಡಿಯಲ್ಲಿ ದೂರ ಸಂಪರ್ಕ ವಲಯವನ್ನು ಉದಾರೀಕರಣಗೊಳಿಸಲಾಯಿತು. ಈ ಬೆಳವಣಿಗೆಯ ನಂತರ ಟೆಲಿಕಾಂ ಕಂಪೆನಿಗಳಿಗೆ ತರಂಗಾಂತರಗಳನ್ನು ಸ್ಥಿರ ಪರವಾನಗಿ ವಾರ್ಷಿಕ ಶುಲ್ಕಕ್ಕೆ ಮಾರಾಟ ಮಾಡುವ ಪರಿಪಾಠ ಆರಂಭವಾಯಿತು.

ಸ್ಥಿರ ಪರವಾನಗಿ ಶುಲ್ಕದಿಂದ ಬಿಡುಗಡೆ ಹೊಂದಲು ಕೇಂದ್ರ ಸರ್ಕಾರ 1999ರಲ್ಲಿ ಆದಾಯ ಹಂಚಿಕೆ ಶುಲ್ಕ ವಿಧಾನಕ್ಕೆ ಪರವಾನಗಿಯನ್ನು ವರ್ಗಾಯಿಸಿಕೊಳ್ಳುವ ಅವಕಾಶವನ್ನು ಆಯಾ ಕಂಪೆನಿಗಳಿಗೆ ನೀಡಿತು.

ಈ ಕಾಲಘಟ್ಟದಲ್ಲಿ ಬದಲಾದ ಟೆಲಿಕಾಂ ನೀತಿಯ ಅನ್ವಯ ದೂರ ಸಂಪರ್ಕ ಆದಾಯದ ಜೊತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ವಾರ್ಷಿಕ ಪರವಾನಗಿ ಶುಲ್ಕ (ಎಜಿಎಸ್) ಎಂದು ಕರೆಯಲಾಯಿತು. ತರಂಗಾತರ ಹಂಚಿಕೆ ಶುಲ್ಕದ ಜೊತೆಗೆ ಈ ಶುಲ್ಕವನ್ನು ವರ್ಷಕ್ಕೊಮ್ಮೆ ಕೇಂದ್ರ ದೂರ ಸಂಪರ್ಕ ಇಲಾಖೆಗೆ ಟೆಲಿಕಾಂ ಕಂಪೆನಿಗಳು ಪಾವತಿ ಮಾಡಬೇಕು ಎಂಬುದು ನಿಯಮ.

ಈ ವರೆಗೆ ರಿಲಾಯನ್ಸ್ ಜಿಯೋ ಮಾತ್ರ ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಗೆ 60 ಸಾವಿರ ಕೋಟಿ ರೂಪಾಯಿ ಬಾಕಿ ಶುಲ್ಕವನ್ನು ಪಾವತಿ ಮಾಡಿದೆ. ಆದರೆ, ಭಾರತಿ ಆರ್ಟೆಲ್ 35,586 ಕೋಟಿ, ಐಡಿಯಾ-ವೊಡಾಫೋನ್ 50,000 ಕೋಟಿ ಹಾಗೂ ಟಾಟಾ ಟೆಲಿಸರ್ವೀಸ್ 14,000 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿವೆ. ಇದು ಬಡ್ಡಿ ಮತ್ತು ದಂಡ ಸಹಿತ ಇದೀಗ ಒಟ್ಟು 1,47 ಲಕ್ಷ ಕೋಟಿಗೂ ಮೀರಿದೆ.

ಮುಚ್ಚುವ ಹಂತದಲ್ಲಿ ಬಿಎಸ್ಎನ್ಎಲ್..

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಒಂದು ಕಾಲದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ದಿಗ್ಗಜನಂತೆ ಹೆಸರು ಮಾಡಿತ್ತು. ಹಳ್ಳಿ ಹಳ್ಳಿಗೂ ಮೊಬೈಲ್ ಜಾಲ ಸಂಪರ್ಕಿಸುವ ಗುರಿಯನ್ನು ಸೇವೆ ಎಂದೇ ಪರಿಗಣಿಸಿದ್ದ ಬಿಎಸ್ಎನ್ಎಲ್ ಅಂದಿನ ದಿನಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಸಾಧಿಸಿತ್ತು. ಅಲ್ಲದೆ, ದೇಶದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿತ್ತು.

ಆದರೆ, ಒಂದು ಕಾಲದಲ್ಲಿ ಭಾರಿ ಪ್ರಮಾಣದ ವ್ಯವಹಾರ ಹೊಂದಿದ್ದ ಭಾರತದ ಹೆಮ್ಮೆ ಬಿಎಸ್ಎನ್ಎಲ್ ಇಂದು ಸಾಲದ ಸುಳಿಯಲ್ಲಿ ಸಿಲುಕಿದ್ದು, ಮುಚ್ಚವ ಹಂತಕ್ಕೆ ಬಂದು ನಿಂತಿದೆ. 2015-16ರಲ್ಲಿ ಬಿಎಸ್ಎನ್ಎಲ್ ನಿಗಮ 4,859 ಕೋಟಿ, 2016-17ರಲ್ಲಿ 4,793 ಕೋಟಿ, 2017-18ರಲ್ಲಿ 1,993 ಕೋಟಿ, 2018-19ರಲ್ಲಿ 14,202 ಕೋಟಿ ನಷ್ಟ ಹೊಂದಿದೆ ಎಂದು ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯೇ ಸಂಸತ್ ಅಧಿವೇಶನದಲ್ಲಿ ಮಾಹಿತಿ ನೀಡಿದೆ.

ಈ ಸಂಸ್ಥೆಯ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಎಂಟಿಎನ್ಎಲ್ ಅನ್ನು ಬಿಎಸ್ಎನ್ಎಲ್ ಜೊತೆಗೆ ವಿಲೀನ ಮಾಡಿ 69,000 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದರೂ ಬಿಎಸ್ಎನ್ಎಲ್ ಮಾತ್ರ ಉಸಿರಾಡುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈಗಾಗಲೇ ಈ ಸಂಸ್ಥೆಯಲ್ಲಿ ಲಕ್ಷಾಂತರ ಉದ್ಯೋಗಗಳು ಕಡಿತವಾಗಿವೆ. ಭವಿಷ್ಯದಲ್ಲಿ ನಷ್ಟ ಬರಿಸಲಾಗದೆ ಈ ಸಂಸ್ಥೆಯನ್ನು ಮುಚ್ಚಿದರೂ ಅಚ್ಚರಿ ಇಲ್ಲ.

ಏರ್ಟೆಲ್-ವೊಡಾಪೋನ್ ಕಥೆಯೂ ಇದಕ್ಕಿಂತ ಭಿನ್ನ ಏನಲ್ಲ..!

ಸರ್ಕಾರಿ ಸ್ವಾಮ್ಯದ ಬಿಎಸ್ಎನ್‌ಎಲ್‌ ಕಥೆ ಒಂದೆಡೆಯಾದರೆ, ಏರ್ಟೆಲ್, ವೊಡಾಪೋನ್-ಐಡಿಯಾ ನಷ್ಟದ ಕಥೆ ಇದಕ್ಕಿಂತ ಶೋಚನೀಯ. ಒಂದು ಕಾಲದಲ್ಲಿ ಭಾರತದ ಟೆಲಿಕಾಂ ಕ್ಷೇತ್ರವನ್ನು ಆಳಿದ್ದ ಈ ಕಂಪೆನಿಗಳು ಕಳೆದ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 74,000 ಕೋಟಿ ನಷ್ಟ ಅನುಭವಿಸಿವೆ.

ವೊಡಾಪೋನ್-ಐಡಿಯಾ ಸಂಸ್ಥೆಗಳಿಗೆ 50,921 ಕೋಟಿ ನಷ್ಟ ಉಂಟಾಗಿದ್ದರೆ, ಏರ್ಟೆಲ್ ಕಂಪೆನಿ ಒಟ್ಟಾರೆಯಾಗಿ 23,045 ಕೋಟಿ ನಷ್ಟ ಅನುಭವಿಸಿದೆ. ಕೇಂದ್ರ ಸರ್ಕಾರವೇ ನೀಡುವ ಅಂಕಿಅಂಶಗಳ ಪ್ರಕಾರ ಒಂದು ತ್ರೈಮಾಸಿಕ ಅವಧಿಯಲ್ಲಿ ಭಾರತದ ಕಾರ್ಪೋರೇಟ್ ಸಂಸ್ಥೆಗಳು ಅನುಭವಿಸಿದ ಅತಿದೊಡ್ಡ ನಷ್ಟ ಇದಾಗಿದೆ. 2018ರ ಡಿಸೆಂಬರ್ನಲ್ಲಿ ಟಾಟಾ ಮೋಟಾರ್ 26,961 ಕೋಟಿ ನಷ್ಟ ಅನುಭವಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಕುಮಾರಮಂಗಲಂ ಬಿರ್ಲಾ ಅವರ ಐಡಿಯಾ ಕಂಪೆನಿ ತನ್ನ ನಷ್ಟವನ್ನು ಬರಿಸಲಾಗದೆ ಕಳೆದ 2019 ಜೂನ್‌ನಲ್ಲಿ ವೊಡಾಪೋನ್ ಜೊತೆಗೆ ವಿಲೀನವಾಗಿತ್ತು. ಈ ವಿಲೀನದ ಬಳಿಕ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿತ್ತು. ಆದಾಗ್ಯೂ ವಿಲೀನ ಮಾಡಿದ ದಿನದಿಂದಲೂ ಈ ಎರಡೂ ಕಂಪೆನಿಗಳು ನಷ್ಟದಲ್ಲೇ ಇವೆ.

ಈ ನಷ್ಟಕ್ಕೆಲ್ಲಾ ಕಾರಣ ಜಿಯೋ..

ಅಸಲಿಗೆ ಬಿಎಸ್ಎನ್ಎಲ್ ಸೇರಿದಂತೆ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳು ಅಪಾರ ಪ್ರಮಾಣದ ನಷ್ಟ ಅನುಭವಿಸಲು ಜಿಯೋ ಮತ್ತು ಈ ಜಿಯೋ ಕಂಪೆನಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಕ್ಷೇತ್ರದ ನಿಯಮಗಳನ್ನು ಬದಲಿಸುತ್ತಿರುವುದೇ ಕಾರಣ ಎನ್ನಲಾಗುತ್ತಿದೆ.

ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಗೆ ಲಗ್ಗೆ ಇಟ್ಟು ಕೇವಲ 3 ವರ್ಷಗಳಾಗಿವೆ. ಆದರೆ ಈ 3 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಕರೆ ಮತ್ತು ಡೇಟಾ ಸೌಲಭ್ಯಗಳನ್ನು ನೀಡುವ ಮೂಲಕ ಜಿಯೋ ಸಂಪಾದಿಸಿರುವ ಗ್ರಾಹಕರ ಸಂಖ್ಯೆ ಬರೋಬ್ಬರಿ 30 ಕೋಟಿ.

ದಶಕಗಳ ಕಾಲ ಮಾರುಕಟ್ಟೆಯಲ್ಲಿರುವ ಬೃಹತ್ ಕಂಪೆನಿಗಳನ್ನು ಬದಿಗಿಟ್ಟು ಜಿಯೋ ಕೇವಲ 3 ವರ್ಷದಲ್ಲಿ 30 ಕೋಟಿ ಗ್ರಾಹಕರನ್ನು ಸಂಪಾದಿಸುವುದು ಎಂದರೆ ಸುಮ್ಮನೆ ಮಾತಲ್ಲ. ಇದಕ್ಕೆ ಜಿಯೋ ಬಳಸಿದ ಅಸ್ತ್ರ ಉಚಿತ.

ಆರಂಭದಲ್ಲಿ ಜಿಯೋ ಕರೆ ಹಾಗೂ ಡೇಟಾ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡಿತ್ತು. 4ಜಿ ವೇಗದಲ್ಲಿ ಡಾಟಾ ಉಚಿತವಾಗಿ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಗ್ರಾಹಕರು ಜಿಯೋ ಕಡೆಗೆ ವಾಲಿದ್ದರು. ಪರಿಣಾಮ ಜಿಯೋ ಹೊರತಾಗಿ ಉಳಿದ ಎಲ್ಲಾ ಕಂಪೆನಿಗಳು ಅಪಾರ ನಷ್ಟಕ್ಕೆ ಒಳಗಾದವು. ಇದರ ಜೊತೆಗೆ ದೂರ ಸಂಪರ್ಕ ಇಲಾಖೆ ಬದಲಿಸಿದ ಕೆಲವು ನಿಯಮಗಳೂ ಸಹ ಜಿಯೋ ಪಾಲಿಗೆ ವರದಾನವಾಯಿತು.

ಜಿಯೋ ಗ್ರಾಹಕರು ಬೇರೆ ಯಾವುದೇ ಕಂಪೆನಿ ನಂಬರ್‌ಗೆ ಕರೆ ಮಾಡಿದರೆ ನಿಮಿಷಕ್ಕೆ 13 ಪೈಸೆಯನ್ನು ಜಿಯೋ ಸಂಸ್ಥೆ ಇತರೆ ಕಂಪೆನಿಯ ನೆಟ್ವರ್ಕ್ ಬಳಿಸಿದ್ದಕ್ಕಾಗಿ ನೀಡಬೇಕು. ಎಲ್ಲಾ ಕಂಪೆನಿಗಳಿಗೂ ಈ ಕಾನೂನು ಅನ್ವಯ. ಹೀಗೆ ಮೊದಲ ವರ್ಷ ಜಿಯೋ ಇತರೆ ಕಂಪೆನಿಗಳಿಗೆ ಪಾವತಿ ಮಾಡಿದ ಹಣ ಮಾತ್ರ ಬರೋಬ್ಬರಿ 53 ಸಾವಿರ ಕೋಟಿ. ಆದರೆ, ದೂರ ಸಂಪರ್ಕ ಇಲಾಖೆಯ ಟ್ರಾಯ್ ಈ ಮೊತ್ತವನ್ನು ನಿಮಿಷಕ್ಕೆ 13 ಪೈಸೆಯಿಂದ ಇದೀಗ 7 ಪೈಸೆಗೆ ಇಳಿಸಿದ್ದು ಜಿಯೋ ಬೆಳೆಯಲು ಇದು ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ.

ಜಿಯೋ ಉದ್ಘಾಟನೆಯ ದಿನ ಖುದ್ದು ಈ ದೇಶದ ಪ್ರಧಾನಿಯೇ ಅದರ ಜಾಹೀರಾತಿಗೆ ಬೆಂಬಲವಾಗಿ ನಿಂತಿದ್ದರು. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಪ್ರಧಾನಿ ಮೋದಿಯವರ ಫೋಟೊ ರಾರಾಜಿಸುತ್ತಿತ್ತು. ತದನಂತರ ಸಹ ತರಂಗಾಂತರಗಳ ಹಂಚಿಕೆಯಲ್ಲಿಯೇ ಅಂಬಾನಿಗೆ ಬಹುಬೆಂಬಲ ಕೇಂದ್ರದಿಂದ ಸಿಕ್ಕಿತ್ತು.

ಆರಂಭದಲ್ಲಿ ಉಚಿತ ನೀಡಿದ್ದರ ಪರಿಣಾಮವಾಗಿ ಒಂದಷ್ಟು ಹಣವನ್ನು ನಷ್ಟ ಮಾಡಿಕೊಂಡ ಜಿಯೋ ಗ್ರಾಹಕರ ಸಂಖ್ಯೆ ಹೆಚ್ಚಿದಂತೆ ಮತ್ತು ಬೇರೆ ಕಂಪನಿಗಳು ಕುಸಿದಂತೆ ತನ್ನ ಕರೆ ಮತ್ತು ಡೇಟಾ ದರವನ್ನು ಹೆಚ್ಚಿಸಿತು. ಮುಂಚೆಯೇ ಸಾಲದಲ್ಲಿದ್ದು ಬೇರೆ ಕಂಪನಿಗಳು ಸಹ ದರ ಹೆಚ್ಚಿಸಿದರು. ಹಾಗಾಗಿ ಜನ ಅನಿವಾರ್ಯವಾಗಿ ಜಿಯೋದಲ್ಲಿಯೇ ಉಳಿದುಕೊಂಡರು. ಒಂದು ರೀತಿಯಲ್ಲಿ ಏಕಸ್ವಾಮ್ಯವನ್ನು ಸಾಧಿಸಿದ ಜಿಯೋ ಈಗ ಲಾಭದ ಹಾದಿಗೆ ಮರಳಿದೆ. ಆದರೆ ಉಳಿದ ಕಂಪನಿಗಳು ಕೊನೆಯುಸಿರು ಎಳೆಯುತ್ತಿವೆ.

ಒಂದೆಡೆ ಜಿಯೋದಿಂದಾಗಿ ಭಾರತದ ಎಲ್ಲಾ ಟೆಲಿಕಾಂ ಕಂಪೆನೆಗಳು ನಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಎಜಿಎಸ್ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಚಾಟಿ ಬೀಸಿರುವುದು ನಷ್ಟದಲ್ಲಿರುವ ಕಂಪೆನಿಗಳನ್ನು ಮತ್ತಷ್ಟು ಉಸಿರುಗಟ್ಟಿಸುವ ಹಂತಕ್ಕೆ ತಂದು ನಿಲ್ಲಿಸಿದೆ.

ಈಗಾಗಲೇ ಭಾರತದಲ್ಲಿ ಜನ ಊಟ ಇಲ್ಲದೆಯೂ ಇರುವರೇನೋ ಆದರೆ, ಡೇಟಾ ಇಲ್ಲದೆ ಬದುಕಲಾರರು ಎಂಬಂತಹ ಸ್ಥಿತಿಗೆ ಇಡೀ ದೇಶವನ್ನು ತಂದು ನಿಲ್ಲಿಸಿದ ಕೀರ್ತಿ ಜಿಯೋ ಮತ್ತು ಅದಕ್ಕೆ ಅನುಕೂಲವಾಗುವಂತೆ ಕಾನೂನು ರೂಪಿಸಿದ ಸರ್ಕಾರಕ್ಕೆ ಸಲ್ಲುತ್ತದೆ.

ಪರಿಸ್ಥಿತಿ ಹೀಗೆ ಮುಂದುವರೆದರೆ ಟೆಲಿಕಾಂ ಕ್ಷೇತ್ರದ ಎಲ್ಲಾ ಕಂಪೆನಿಗಳು ಬಾಗಿಲು ಎಳೆದುಕೊಂಡು ಜಿಯೋ ಮಾತ್ರ ಇಡೀ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಿದರೂ ಅಚ್ಚರಿ ಇಲ್ಲ. ಆ ಸಂದರ್ಭದಲ್ಲಿ ಜಿಯೋ ಕಂಪೆನಿ ಒಂದು ಜಿಬಿ ಡೇಟಾಗೆ ಚಿನ್ನದ ಬೆಲೆ ನಿಗದಿ ಮಾಡಿದರೂ ಅದನ್ನು ಖರೀದಿಸದೆ ಬೇರೆ ವಿಧಿಯಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...