ಉತ್ತರ ಪ್ರದೇಶದ ಹತ್ರಾಸ್ ಪ್ರಕರಣದ ಯುವತಿಯ ಸಹೋದರ ಪೊಲೀಸರ ಕಣ್ಣುತಪ್ಪಿಸಿಕೊಂಡು ಬಂದು ಮಾದ್ಯಮಗಳೊಂದಿಗೆ ಮಾತನಾಡಿದ್ದು, “ನಮಗೆ ಪೊಲೀಸರು ಬೆದರಿಕೆ ಒಡ್ಡುತ್ತಿದ್ದಾರೆ” ಎಂದು ಆರೋಪಿಸಿದ್ದಾನೆ.
“ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ನಮಗೆ ಬೆದರಿಕೆ ಒಡ್ಡಿ, ನಮ್ಮ ಕುಟುಂಬದವರು ಹೊರಗೆ ಹೋಗಲು, ಯಾರನ್ನೂ ಸಂಪರ್ಕಿಸಲು ಅಥವಾ ಮಾಧ್ಯಮದವರನ್ನು ಬೇಟಿಯಾಗಲೂ ಬಿಡುತ್ತಿಲ್ಲ. ನಮ್ಮ ಮೊಬೈಲನ್ನು ಕಿತ್ತುಕೊಂಡಿದ್ದಾರೆ. ಈಗ ಹೊಲದ ಮೂಲಕ ತಪ್ಪಿಸಿಕೊಂಡು ಓಡಿ ಬಂದಿದ್ದೇನೆ” ಎಂದು ಶುಕ್ರವಾರ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾನೆ.
ಗ್ರಾಮ ಹಾಗೂ ಸಂತ್ರಸ್ತೆಯ ಮನೆಗೆ ಹೋಗುವ ದಾರಿ ಮತ್ತು ಬೀದಿಯನ್ನು ಯುಪಿ ಪೊಲೀಸರು ಸುತ್ತುವರೆದಿದ್ದಾರೆ. “ಮಾಧ್ಯಮವನ್ನು ಸಂಪರ್ಕಿಸುವಂತೆ ನನ್ನ ತಾಯಿ ಹಾಗೂ ಅತ್ತೆ ನನಗೆ ಹೇಳಿದರು. ಯಾರೊಬ್ಬರೂ ಹೊರಗೆ ಬರಲು ಅವಕಾಶ ಕೊಡುತ್ತಿಲ್ಲ. ನನ್ನ ಮಾವ ಹೊರಗೆ ಬಂದು ಮಾಧ್ಯಮವನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಜಿಲ್ಲಾ ದಂಡಾಧಿಕಾರಿ ನನ್ನ ಮಾವನ ಎದೆಗೆ ಒದ್ದರು. ಈಗ ಅವರು ಅಸ್ವಸ್ಥರಾಗಿದ್ದಾರೆ” ಎಂದು ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾನೆ.
ಸಂತ್ರಸ್ತೆಯ ಸಹೋದರನ ಮಾತುಗಳನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗಳ ಪರ ನಿಂತ ಸವರ್ಣ ಪರಿಷತ್!
ಸೆಪ್ಟೆಂಬರ್ 14 ರಂದು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್ ಎಂಬ ಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಯುವತಿ ತನ್ನ ಹೊಲದಲ್ಲಿ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ಆಕೆಯ ಬಟ್ಟೆಯಿಂದಲೇ ಕಟ್ಟಿ ಪಕ್ಕದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿತ್ತು.
ಈ ಪ್ರಕರಣದ ನಾಲ್ವರು ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ. ಮೃತ ಯುವತಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅತ್ಯಾಚಾರ ಆರೋಪಿಗಳು ಮೇಲ್ಜಾತಿಯವರು ಎನ್ನಲಾಗಿದೆ. ಈ ಘಟನೆ ಇತ್ತೀಚಿನ ತಿಂಗಳುಗಳಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು: NCRB
ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೃತಪಟ್ಟಿದ್ದ ದಲಿತ ಯುವತಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಹಲವು ಕಾಂಗ್ರೆಸ್ ಮುಖಂಡರು ಹೊರಟಿದ್ದರು. ಹತ್ರಾಸ್‌ಗೆ ಭೇಟಿ ನೀಡಲು ಹೊರಟ ಸುದ್ದಿ ಬರುತ್ತಿದ್ದಂತೆ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.
ನಿಷೇದಾಜ್ಞೆ ನಡುವೆಯೂ ಹೊರಟ ಕಾಂಗ್ರೆಸ್ ನಾಯಕರ ಕಾರುಗಳನ್ನು ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ತಡೆಯಲಾಗಿತ್ತು. ಆದರೆ ತಾವು ಹತ್ರಾಸ್‌ಗೆ ಭೇಟಿ ನೀಡಿಯೇ ನೀಡುತ್ತೇವೆ ಎಂದು ಪಾದಯಾತ್ರೆ ಹೊರಟ್ಟಿದ್ದ ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದರು. ಆ ವೇಳೆ ನೂಕುನುಗ್ಗಲು, ತಳ್ಳಾಟ ಉಂಟಾಗಿ ರಾಹುಲ್ ಗಾಂಧಿ ನೆಲಕ್ಕೆ ಬಿದ್ದಿದ್ದರು. ದೆಹಲಿಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಬಟ್ಟೆ ಹರಿದುಹೋಗಿತ್ತು. ಈ ಘಟನೆಗೆ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದ ಈ ಅಂಕಿ-ಅಂಶಗಳನ್ನು ನೋಡಿ: ನೀವೇ ಪ್ರಶ್ನಿಸಿಕೊಳ್ಳಿ


