Homeಮುಖಪುಟಸೋಷಿಯಲ್ ಮೀಡಿಯಾ, ಸುದ್ದಿ ವೆಬ್‌ಸೈಟ್, ಒಟಿಟಿ; ಬಗ್ಗುವ ಬೆನ್ನಿಗೆ ಗುದ್ದಲಿರುವ ಮುಷ್ಟಿಗಳು

ಸೋಷಿಯಲ್ ಮೀಡಿಯಾ, ಸುದ್ದಿ ವೆಬ್‌ಸೈಟ್, ಒಟಿಟಿ; ಬಗ್ಗುವ ಬೆನ್ನಿಗೆ ಗುದ್ದಲಿರುವ ಮುಷ್ಟಿಗಳು

- Advertisement -
- Advertisement -

ಗುರುವಾರ (ಫೆ,25) ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸಾಮಾಜಿಕ ಮಾಧ್ಯಮಗಳು, ಡಿಜಿಟಲ್ ಸುದ್ದಿ ಮಾಧ್ಯಮಗಳು ಮತ್ತು ಒಟಿಟಿ ವ್ಯವಸ್ಥೆಗಳ ಕುರಿತಾದ ನಿಯಮಗಳು, ಬಹುತೇಕ ಮೂರನೇ ಅವಧಿಯ ಚುನಾವಣೆ ಎದುರಿಸುವುದಕ್ಕೆ ಹಾಲಿ ಸರ್ಕಾರದ ಪ್ರಾಥಮಿಕ ಹಂತದ ತಯಾರಿಯಂತೆಯೇ ಕಾಣಿಸುತ್ತಿವೆ. ತಾನು ಮೇಲೆದ್ದು ಬಂದ ಏಣಿಯನ್ನು ಇನ್ನೊಬ್ಬರು ಬಳಸಿ ಮೇಲೇರಬಾರದು, ಅಥವಾ ಕನಿಷ್ಠ ಆ ಏಣಿಯ ಮೇಲೆ ನಿಯಂತ್ರಣ ತನ್ನದಾಗಿರಬೇಕು ಎಂಬ ಯೋಚನೆ ಈ ನಿಯಮಗಳ ಹಿಂದೆ ಗಾಢವಾಗಿರುವಂತೆ ಅನ್ನಿಸುತ್ತದೆ.

ಒಂದು ಸಂವಿಧಾನ; ಅದರಡಿ ಜಾರಿಗೆ ಬಂದಿರುವ ಕಾಯಿದೆಗಳು; ಆ ಕಾಯಿದೆಗಳ ಅನುಷ್ಠಾನಕ್ಕೆಂದು ರಚಿತವಾದ ರೂಲ್ಯೂಗಳು? ಇವೆಲ್ಲವುಗಳ ಮೂಲಭೂತ ಉದ್ದೇಶ ದೇಶದ ಪ್ರಜೆಗಳ ಬದುಕನ್ನು ಸುಗಮಗೊಳಿಸುವುದು. ಇವನ್ನೆಲ್ಲ ಕಾರ್ಯರೂಪಕ್ಕೆ ತರಬೇಕಾದ ಶಾಸಕಾಂಗ, ಇದಕ್ಕೆ ವ್ಯತಿರಿಕ್ತವಾಗಿ, ಕೇವಲ ತನ್ನ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕಾರ್ಯಾಚರಿಸುವ ಇತ್ತೀಚೆಗಿನ ಟ್ರೆಂಡಿಗೆ ಲೇಟೆಸ್ಟ್ ಉದಾಹರಣೆ ಏನು? ಮಾಹಿತಿ ತಂತ್ರಜ್ಞಾನ (ಮಧ್ಯಂತರಿಗಳ ಮಾರ್ಗದರ್ಶಿ ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು, 2021.

ಭಾರತದಲ್ಲಿ ಐಟಿ ಕಾಯಿದೆ ಜಾರಿಗೆ ಬಂದದ್ದು 2000ನೇ ಇಸವಿಯಲ್ಲಿ. ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ 20ವರ್ಷಗಳ ಅವಧಿ ಎಂದರೆ ಬಲುದೀರ್ಘವಾದದ್ದು. ಪ್ರತೀ ಎರಡು ವರ್ಷಗಳಿಗೊಮ್ಮೆ ಆಟದ ನಿಯಮಗಳೇ ಬದಲಾಗುವಷ್ಟು ವೇಗವಾಗಿ ಬೆಳೆಯುತ್ತಿರುವ ಈ ಉದ್ಯಮವನ್ನು ಇನ್ನೂ ನಿಯಂತ್ರಿಸುತ್ತಿರುವುದು 2000ನೇ ಇಸವಿಯ ಕಾಯಿದೆ! 2011ರಲ್ಲಿ, ಮೊದಲ ಬಾರಿಗೆ ಐಟಿ ಕ್ಷೇತ್ರದ ಮಧ್ಯಂತರಿಗಳ ಮಾರ್ಗದರ್ಶಿ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಆಗ ಐಟಿ ಸಚಿವರಾಗಿದ್ದವರು ಕಪಿಲ್ ಸಿಬಲ್.

ಇಂದು 2021ಕ್ಕೆ ನಾವು ತಲುಪಿದ್ದರೂ, ಈ ದೇಶದ ಜನಸಾಮಾನ್ಯರ ಡೇಟಾವನ್ನು ಸಂರಕ್ಷಿಸುವ, ಖಾಸಗಿತನವನ್ನು ಕಾಪಾಡುವ, ಪಾರದರ್ಶಕ ಮತ್ತು ಸಹಜ ನ್ಯಾಯಕ್ಕೆ ಒದಗಿಬರುವ ಮಾಹಿತಿ ತಂತ್ರಜ್ಞಾನ ಪರಿಸರವೊಂದನ್ನು ರೂಪಿಸುವುದು ನಮ್ಮ ಶಾಸಕಾಂಗಕ್ಕೆ ಸಾಧ್ಯವಾಗಿಲ್ಲ. ಈ ಕೊರತೆ ಹುಟ್ಟುಹಾಕಿರುವ ಸಾಮಾಜಿಕ-ಆರ್ಥಿಕ-ರಾಜಕೀಯ-ಧಾರ್ಮಿಕ ಬಿಕ್ಕಟ್ಟುಗಳು ಊಹಿಸುವುದಕ್ಕೂ ಅಸಾಧ್ಯವೆನ್ನಿಸುವಷ್ಟು ಅಗಾಧ. ಇವೆಲ್ಲ ‘ಗೊತ್ತಿಲ್ಲದಿರುವುದರ ವರದಾನ’ ನಮ್ಮನ್ನು ಇಲ್ಲಿಯ ತನಕ ಕಾಪಾಡಿಕೊಂಡು ಬಂದಿದೆ!

ಇಂದು ಮುಂಚೂಣಿಯಲ್ಲಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ಯಂತ್ರ ಕಲಿಕೆ (ಮಷೀನ್ ಲರ್ನಿಂಗ್) ತಂತ್ರಜ್ಞಾನಗಳು ಮಾಹಿತಿ-ಸುದ್ದಿ-ಮನರಂಜನೆ-ಉದ್ಯೋಗ-ಮಾರುಕಟ್ಟೆ-ಗಳಿಕೆಗಳ ನಡುವಿನ ವಿಭಾಜಕ ರೇಖೆಗಳನ್ನು ಯಾವ ಪರಿ ಅಳಿಸಿಹಾಕುತ್ತಿವೆ ಎಂದರೆ, ಅವೆಲ್ಲವೂ ಒಂದೇ ಆಗಿಬಿಟ್ಟಿವೆ. ಇಂತಹದೊಂದು ಅತ್ಯಾಧುನಿಕ ‘ಯುದ್ಧ’ವನ್ನು ನಾವು ಭರ್ಜಿ-ಕತ್ತಿ-ಬಿಲ್ಲುಬಾಣಗಳನ್ನು ಹಿಡಿದು ಎದುರಿಸುತ್ತಿದ್ದೇವೆ! ಮೊನ್ನೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಕಟಿಸಿರುವ ಐಟಿ ನಿಯಮಗಳೂ ಕೂಡ ಇಂತಹದೇ ಒಂದು ಪುರಾತನ ಹತ್ಯಾರು. ಇದು ಮೇಲ್ನೋಟಕ್ಕೇ, 2024ರ ಲೋಕಸಭಾ ಚುನಾವಣೆಗೆ ಪೂರ್ವಪ್ರಾಥಮಿಕ ತಯಾರಿ. ಅದು ಹೇಗೆಂಬುದನ್ನು ಈ ನಿಯಮಗಳ ಒಳವಿವರಗಳು ಸಮರ್ಥವಾಗಿ ಬಿಚ್ಚಿಡಬಲ್ಲವು.

PC : Media Indian Group

ಸಕಾರಣ ಮುನ್ನೆಚ್ಚರಿಕೆಗಳು (ಡ್ಯೂ ಡೆಲಿಜೆನ್ಸ್)

ಹಳೆಯ 2011ರ ನಿಯಮಗಳ ಆವೃತ್ತಿಯಲ್ಲಿದ್ದುದು ಕೇವಲ 11 ಸಕಾರಣ ಮುನ್ನೆಚ್ಚರಿಕೆಗಳು ಮಾತ್ರ. ಈಗ ಹೊಸದಾಗಿ ಆಗಿರುವ ಬದಲಾವಣೆಗಳು ಮೂಲಭೂತವಾಗಿ ಹೇಳುತ್ತಿರುವುದು ಅದನ್ನೇ ಆದರೂ, ಪ್ರಭುತ್ವ ತನಗೆ ನಿರ್ದಿಷ್ಟವಾಗಿ ಎಲ್ಲೆಲ್ಲ ನಿಯಂತ್ರಣ, ಹಸ್ತಕ್ಷೇಪದ ಅವಕಾಶ ಬೇಕೆಂಬುದನ್ನು ಅನುಭವದ ಆಧಾರದಲ್ಲಿ ಕಂಡುಕೊಂಡಿರುವುದರಿಂದ, ಅವನ್ನೆಲ್ಲ ನಿರ್ದಿಷ್ಟವಾಗಿ ಗುರುತಿಸಲಾಗಿದೆ. ಹಾಗಾಗಿ, ಮೊದಲಿದ್ದ ಇಲೆಕ್ಟ್ರಾನಿಕ್ ರೆಕಾರ್ಡ್‌ಗಳು, ಟೆಲಿಕಾಂ ಸೇವಾದಾತರು, ಇಂಟರ್‌ನೆಟ್ ಸೇವಾದಾತರು, ವೆಬ್ ಹೋಸ್ಟಿಂಗ್ ಸೇವೆಗಳು, ಸರ್ಚ್ ಎಂಜಿನ್‌ಗಳು, ಪಾವತಿ-ಹರಾಜು ಸೈಟ್‌ಗಳು, ಆನ್ಲೈನ್ ಮಾರುಕಟ್ಟೆಗಳು, ಸೈಬರ್ ಕೆಫೆಗಳು ಎಂಬ ‘ಮಧ್ಯಂತರಿಗಳ’ ಕಾನೂನಿನ ವ್ಯಾಖ್ಯಾನಕ್ಕೆ ಈಗ ಈ ನಿಯಮದ ಹೆಸರಿನಲ್ಲಿ ವೆಬ್‌ಸೈಟ್‌ಗಳು, ಆಪ್ಲಿಕೇಷನ್‌ಗಳು, ಸಾಮಾಜಿಕ ಮಾಧ್ಯಮಗಳು, ಮೀಡಿಯಾ ಶೇರಿಂಗ್ ವೆಬ್‌ಸೈಟ್‌ಗಳು, ಬ್ಲಾಗ್‌ಗಳು, ಆನ್‌ಲೈನ್ ಚರ್ಚಾಫೋರಂಗಳು, ಮತ್ತು ಅಂತಹ ಚಟುವಟಿಕೆಗಳಿರುವ ಇತರ ವ್ಯವಸ್ಥೆಗಳು ಎಂದು ಸೇರ್ಪಡೆ ಮಾಡಲಾಗಿದೆ.

ಅದರಲ್ಲೂ ಸರ್ಕಾರದ ಮುಖ್ಯ ಗಮನ ಇರುವುದು ಸಾಮಾಜಿಕ ಮಾಧ್ಯಮಗಳು, ಸುದ್ದಿ ವೆಬ್‌ಸೈಟ್‌ಗಳ ಕುರಿತು. ಇದರೊಂದಿಗೆ ಅಯಾಚಿತವಾಗಿ ಕೊರೊನೋತ್ತರ ಒಟಿಟಿ ದೃಶ್ಯ ಮಾಧ್ಯಮ ವ್ಯವಸ್ಥೆಯೂ ಸೇರಿಕೊಂಡಿದೆ.

ಏನು ಬದಲಾವಣೆಗಳು?

ಹೊಸ ನಿಯಮಗಳು ತಂದಿರುವ ಪ್ರಮುಖ ಬದಲಾವಣೆಗಳನ್ನು ಹೀಗೆ ಪಟ್ಟಿ ಮಾಡಬಹುದು:

1. ಸ್ವಂತ ವಿವೇಚನೆಯ ನಿಯಂತ್ರಣ, ಬಾಹ್ಯ ವ್ಯವಸ್ಥೆಯೊಂದರ ನಿಯಂತ್ರಣ (ಹೈಕೋರ್ಟು ನ್ಯಾಯಾಧೀಶರ ದರ್ಜೆಯ ಮುಖ್ಯಸ್ಥರಿರುವ ಸಮಿತಿ) ಮತ್ತು ಸರ್ಕಾರದ ಉನ್ನತಾಧಿಕಾರಿ ಸಮಿತಿಯ ನಿಯಂತ್ರಣ ಎಂಬ ಮೂರು ಹಂತದ ನಿಯಂತ್ರಣ ವ್ಯವಸ್ಥೆ ಮತ್ತು ಅವೆಲ್ಲದರ ನಡುವೆ ನೇರ ಸಂವಹನಕ್ಕೆ ಅವಕಾಶ ಆಗುವಂತೆ ‘ಕಂಪ್ಲಯನ್ಸ್ ಅಧಿಕಾರಿ’, ‘ನೋಡಲ್ ಸಂಪರ್ಕ ವ್ಯಕ್ತಿ’ ‘ರೆಸಿಡೆಂಟ್ ಗ್ರಿವೆನ್ಸ್ ಅಧಿಕಾರಿ’, ಜಂಟಿ ಕಾರ್ಯದರ್ಶಿ ದರ್ಜೆಯ ‘ಆಥರೈಸ್ಡ್ ಅಧಿಕಾರಿ’ ಎಂಬೆಲ್ಲ ಸಂಪರ್ಕ ಬಿಂದುಗಳನ್ನು ರಚಿಸಲಾಗಿದೆ. ವಿದೇಶಿ ಮೂಲದ ಮಧ್ಯಂತರಿಗಳಲ್ಲೂ ಈ ಹುದ್ದೆಗಳಲ್ಲಿ ಭಾರತೀಯ ಮೂಲದವರಿರಬೇಕು ಎಂದು ನಿರ್ದಿಷ್ಟಪಡಿಸಲಾಗಿದೆ.

2. ಮಧ್ಯಂತರಿಗಳು ಅಥವಾ ಸುದ್ದಿ ಸೈಟ್‌ಗಳಲ್ಲಿರುವ, ಸರ್ಕಾರಕ್ಕೆ ಆಕ್ಷೇಪಾರ್ಹ ಅನ್ನಿಸಿದ ವಿಚಾರಗಳನ್ನು ತೆಗೆದುಹಾಕಿಸಲು ಸಮಯಬದ್ಧವಾದ ವ್ಯವಸ್ಥೆಯೊಂದು ಏರ್ಪಾಡಾಗಿದೆ.

3. ಇಂಟರ್‌ನೆಟ್ ಮೂಲದ ವೆಬ್ ಸೀರೀಸ್‌ಗಳಿಗೆ ಮತ್ತು ಬೇರೆ ಕಂಟೆಂಟ್‌ಗಳಿಗೆ ಇನ್ನು ಸಾಂಪ್ರದಾಯಿಕ ಸೆನ್ಸಾರ್ ವ್ಯವಸ್ಥೆ ಅಪ್ರಸ್ತುತಗೊಳ್ಳಲಿರುವುದರಿಂದ(?), ಒಂದು ರೇಟಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.

4. ಸುದ್ದಿ ವೆಬ್‌ಸೈಟ್‌ಗಳಿಗೆ ನೋಂದಾಯಿಸಿಕೊಳ್ಳಲು ‘ಬ್ರಾಡ್ಕಾಸ್ಟ್ ಸೇವಾ’ ಎಂಬ ನಿಯಂತ್ರಕ ಪೋರ್ಟಲ್ ರಚನೆಯನ್ನು ಪ್ರಕಟಿಸಲಾಗಿದೆ.

5. ಮಧ್ಯಂತರಿಗಳಲ್ಲಿ (ಹಾಗೆಂದರೆ, ಫೇಸ್ಬುಕ್, ಟ್ವಿಟ್ಟರ್, ಯುಟ್ಯೂಬ್‌ನಂತಹ ಇನ್ನೊಬ್ಬರ ಕಂಟೆಂಟ್ ಪ್ರಕಟಿಸುವ ಮಧ್ಯವರ್ತಿ ಮಾಧ್ಯಮಗಳು) ಐದು ಲಕ್ಷ ಚಂದಾದಾರರು ಅಥವಾ ಐವತ್ತು ಲಕ್ಷ ಹಿಂಬಾಲಕರಿಗಿಂತ ಹೆಚ್ಚಿರುವವರನ್ನು ‘ಗಮನಾರ್ಹ ಮಧ್ಯಂತರಿಗಳು’ ಎಂದು ಪ್ರತ್ಯೇಕಿಸಲಾಗಿದೆ.

ಮೇಲ್ನೋಟಕ್ಕೆ, ಇವಿಷ್ಟು ಈ ಹೊಸ ನಿಯಮಗಳ ಅನ್ವಯ ಆಗಿರುವ ಗಮನಾರ್ಹ ಬದಲಾವಣೆಗಳು. ಅರೇ? ಇಷ್ಟೇನಾ? ಇದರಲ್ಲೇನಿದೆ?! ಎಂದುಕೊಂಡರೆ, ಈ ನಿಯಮಗಳಲ್ಲಿ ವ್ಯಕ್ತವಾಗಿ ಹೇಳದಿರುವ ಹಲವು ಅಂಶಗಳು ಮುನ್ನೆಲೆಗೆ ಬರತೊಡಗುತ್ತವೆ. ಅವುಗಳನ್ನು ಸ್ವಲ್ಪ ವಿವರವಾಗಿ ನೋಡೋಣ.

ಆಟ ಇರೋದು ಎಲ್ಲಿ?

ಫೇಸ್‌ಬುಕ್, ಟ್ವಿಟ್ಟರ್ ಇತ್ಯಾದಿಗಳೆಲ್ಲ, ಭಾರತದಲ್ಲಿ ತಮ್ಮ ಕೇಂದ್ರಸ್ಥಾನವಾಗಲೀ, ಸರ್ವರ್ ಆಗಲೀ ಇಲ್ಲದ ಬಹುರಾಷ್ಟ್ರೀಯ ಸಂಸ್ಥೆಗಳು. ಅವುಗಳ ಚಂದಾದಾರರಾಗುವಾಗಲೇ ನಾವು ಅವರ ನಿಯಮ ಮತ್ತು ಷರತ್ತುಗಳಿಗೆ ಒಪ್ಪಿರುತ್ತೇವೆ. ಆ ನಿಯಮಗಳು ಸ್ಪಷ್ಟವಾಗಿ, ತಮ್ಮ ಕಾನೂನು ವ್ಯಾಪ್ತಿ ಕ್ಯಾಲಿಫೋರ್ನಿಯಾದಲ್ಲಿ ಊರ್ಜಿತವಿರುವ ಕಾನೂನುಗಳು ಮತ್ತು ಯಾವುದೇ ತಗಾದೆ ತಕರಾರುಗಳಿದ್ದಲ್ಲಿ, ಇದ್ದವರು ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ಅಥವಾ ಸ್ಟೇಟ್ ನ್ಯಾಯಾಲಯದಲ್ಲಿ ಅದು ಇತ್ಯರ್ಥವಾಗಬೇಕು ಎಂದು ವಿಧಿಸುತ್ತವೆ. ಅವರ ಬಳಕೆ ಒಪ್ಪಂದಗಳ ‘ಫೈನ್ ಲೈನ್’ಗಳು ಬಹುತೇಕ ಏಕಮುಖಿ. ಸದ್ಯಕ್ಕೆ General Data Protection Regulation (Regulation (EU) 2016/679) ಅಡಿ ಡೇಟಾ ಸಂರಕ್ಷಣೆ ಮತ್ತು ಡೇಟಾ ವಿನಿಮಯಕ್ಕೆ EU-U.S. Privacy Shield Framework and the Swiss-U.S. Privacy Shield Framework ಒಪ್ಪಂದದ ಅಡಿ ಕಾರ್ಯಾಚರಿಸುವ ಈ ದೊಡ್ಡ ಕಂಪನಿಗಳು, ಜಗತ್ತಿನ ಬಹುತೇಕ ಸರ್ಕಾರಗಳನ್ನೇ ತಿರುಗಿ ಪ್ರಶ್ನಿಸಬಲ್ಲ ಸ್ನಾಯುಬಲ ಬೆಳೆಸಿಕೊಂಡಿರುವುದನ್ನು ಕಳೆದ 2-3 ವರ್ಷಗಳಲ್ಲಿ ಜಗತ್ತು ಗಮನಿಸಿದೆ. ಅಮೆರಿಕ, ಯುರೋಪು, ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಈ ಅನುಭವಗಳಾಗಿವೆ.

ಸರ್ಕಾರಗಳಿಗೆ ಕ್ಯಾರೇ ಅನ್ನದ ಈ ಜಯಂಟ್ ಕಂಪನಿಗಳು ಸದ್ಯಕ್ಕೆ ಸ್ವಲ್ಪ ಮರ್ಯಾದೆ ಕೊಡುತ್ತಿರುವುದು ಅದರ ಬಳಕೆದಾರರ ಖಾಸಗಿತನದ ಸೋರಿಕೆಯ ಪ್ರಶ್ನೆ ಎದ್ದಾಗ ಬರುವ ನೈತಿಕ ಪ್ರಶ್ನೆಗಳಿಗೆ ಮಾತ್ರ. ಉಳಿದಂತೆ ಅವರನ್ನು ಹಿಡಿಯುವವರಿಲ್ಲ. ಈಗ ಭಾರತದ ಹೊಸ ನಿಯಮಗಳು ಈ ಸಂಸ್ಥೆಗಳಿಗೆ ಹೇಗೆ ಅನ್ವಯ ಆಗುತ್ತವೆ? ಒಂದು ವೇಳೆ ಭಾರತೀಯ ಮೂಲದ ಅಧಿಕಾರಿಗಳೇ ಆಯಕಟ್ಟಿನ ಜಾಗಗಳಲ್ಲಿ ಇದ್ದರೂ, ಅವರು ಸಂಸ್ಥೆಯ ನಿಯಮಗಳಿಗೆ ಎಷ್ಟರಮಟ್ಟಿಗೆ ಉತ್ತರದಾಯಿಯಾದಾರು? ಎಂಬುದು ಸ್ಪಷ್ಟವಿಲ್ಲ. ಆ ಸಂಸ್ಥೆಗಳು ಅಗತ್ಯ ಬಿದ್ದರೆ ಅಂತಹ ಅಧಿಕಾರಿಗಳನ್ನು ಕೆಳಗಿಳಿಸಿ ಕೈ ತೊಳೆದುಕೊಳ್ಳುತ್ತವೆ ಎಂಬುದಕ್ಕೂ ಭಾರತದಲ್ಲೇ ಇತ್ತೀಚೆಗಿನ ಉದಾಹರಣೆ (ಆಂಕಿದಾಸ್ ಪ್ರಕರಣ) ಇದೆ.

ಇನ್ನೊಂದು ದಿಕ್ಕಿನಿಂದ ನೋಡಿದರೆ, ಈ ಸಂಸ್ಥೆಗಳ ಜೊತೆ ಸೌಹಾರ್ದ ಸಂಬಂಧವನ್ನೇ ಹೊಂದಿರುವ ಹಾಲಿ ಪ್ರಭುತ್ವ, ತನಗೆ ಬೇಡವೆನ್ನಿಸಿದ ಕಂಟೆಂಟ್‌ಗಳನ್ನು ಅಲ್ಲಿಂದ ಹೊರತೆಗೆಸಲು ಅಧಿಕೃತ ಸಂಪರ್ಕ ಬಿಂದು ವ್ಯವಸ್ಥೆಯೊಂದನ್ನು ಈ ಹೊಸ ನಿಯಮಗಳ ಮೂಲಕ ರೂಪಿಸಿಕೊಂಡಂತಾಗಿದೆ. ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದಿರುವುದೇ ಇಂತಹದೊಂದು ಸಾಧ್ಯತೆಯ ಸ್ಪಷ್ಟ ಸೂಚನೆ. ಹಾಗಾಗಿ, ಒಂದು ವಿಚಾರ ಸ್ಪಷ್ಟ. ಅದೇನೆಂದರೆ ಈ ನಿಯಮಗಳ ಉದ್ದೇಶ ವಿದೇಶೀ ಮೂಲದ ‘ಗಮನಾರ್ಹ ಮಧ್ಯಂತರಿಗಳಲ್ಲ!’ ಹಾಗಾದರೆ ಬಾಕಿ ಉಳಿದದ್ದು ಯಾರು? ಅದು ದೇಶದೊಳಗಿನ ಸಣ್ಣಪುಟ್ಟ ವೆಬ್ ಸುದ್ದಿ ಮಾಧ್ಯಮಗಳು. ಸಾಂಪ್ರದಾಯಿಕ ಮಾಧ್ಯಮಗಳನ್ನೆಲ್ಲ ತನ್ನ ಸೇವೆಗೆ ತಾಲೀಮು ಕೊಟ್ಟು ತಗ್ಗಿಸಿ ಬಗ್ಗಿಸಿದ ಬಳಿಕ ಪ್ರಭುತ್ವಕ್ಕೆ ಈಗ ಉಳಿದಿರುವುದು, ‘ಕಡು ಸತ್ಯ’ಗಳನ್ನು ಕ್ಷೀಣವಾದರೂ, ಖಚಿತ ಧ್ವನಿಯಲ್ಲಿ ಹೇಳುತ್ತಿರುವ ಸಣ್ಣ ಮಾಧ್ಯಮಗಳು. ಉದ್ಯೋಗದಿಂದ ಹೊರಬಂದ ಬರ್ಖಾ ದತ್ ಅವರಂತಹ ಜನಪ್ರಿಯ ಪತ್ರಕರ್ತರಿಗೆ ಸ್ವಂತ ಟೆಲಿವಿಷನ್ ಚಾನೆಲ್ ಒಂದನ್ನು ಆರಂಭಿಸುವ ಸಾಧ್ಯತೆಗಳನ್ನು ಹೊಸಕಿ ಹಾಕಿದ ಚರಿತ್ರೆ ಇರುವ ಪ್ರಭುತ್ವಕ್ಕೆ ಸಣ್ಣಪುಟ್ಟ ಮಾಧ್ಯಮಗಳನ್ನು ಹುಡುಹುಡುಕಿ ಹೊಸಕಿಹಾಕಲು ಈ ಹೊಸ ನಿಯಮಗಳು ಕಾನೂನುಬದ್ಧವಾಗಿಯೇ ಅವಕಾಶ ಮಾಡಿಕೊಡಲಿವೆ.

ಅಂತಿಮವಾಗಿ, ಈ ಹೊಸ ನಿಯಮಗಳ ಆಸಿಡ್ ಟೆಸ್ಟ್ ಇರುವುದು, ಪ್ರಭುತ್ವ ತಾನು ಸ್ವತಃ ಸಾಕುತ್ತಿರುವ ಫೇಕ್ ಸುದ್ದಿ ಕಾರ್ಖಾನೆಗಳು, ಪ್ರಚಾರ ತಂತ್ರಗಳ ನಿಯಂತ್ರಣ ಹೇಗಾಗಲಿದೆ ಎಂಬುದರಲ್ಲಿ. ಅದು ಎಂದಿನಂತೆಯೇ ಮುಂದುವರಿದಿದ್ದರೆ, ಈ ಎಲ್ಲ ಬೆಳವಣಿಗೆಗಳು 2024ಕ್ಕೆ ತಯಾರಿ ಎಂಬುದರ ಸ್ಪಷ್ಟ ಸೂಚನೆ; ಅನುಮಾನವೇ ಬೇಡ.

ಒಟಿಟಿ ಕಥೆ

ಅಮೆಜಾನ್, ಸೋನಿ, ನೆಟ್‌ಫ್ಲಿಕ್ಸ್, ಆಪಲ್, ಡಿಸ್ನಿ+, ವಾರ್ನರ್ ಮೀಡಿಯಾದಂತಹ ರಕ್ಕಸ ಗಾತ್ರದ ಕಂಪನಿಗಳು ಸಿನಿಮಾ/ವೆಬ್ ಸೀರೀಸ್ ರಂಗಕ್ಕೆ ಬಿಲಿಯಗಟ್ಟಲೆ ತೊಡಗಿಸಿ ಇಳಿಯತೊಡಗಿರುವಾಗ, ಅವನ್ನು ಈ ಹೊಸ ನಿಯಮ ಭಾರತದೊಳಗೆ ನಿಯಂತ್ರಿಸ ಹೊರಟರೆ, ಅದು ಈ ಸರ್ಕಾರದ ‘ಅಶ್ಲೀಲ ವೆಬ್‌ಸೈಟ್ ನಿಷೇಧ’ ತೀರ್ಮಾನದಷ್ಟೇ ಕೆಲಸಕ್ಕೆ ಬಾರದ ತೀರ್ಮಾನವಾಗಲಿದೆ. ಹಾಗಾಗಿ ಒಟಿಟಿ ಕಂಟೆಂಟ್ ಮೇಲಿನ ನಿಯಂತ್ರಣ ಕೂಡ ದೇಶದೊಳಗಿನ ಸಣ್ಣಪುಟ್ಟವರನ್ನು ಗಮನದಲ್ಲಿರಿಸಿಕೊಂಡು ಮಾಡಿದ್ದೇ ಹೊರತು ದೊಡ್ಡವರನ್ನಲ್ಲ. ಒಟಿಟಿ ದೀರ್ಘಕಾಲಿಕವಾಗಿ ನಿಲ್ಲಲಿದೆ ಮತ್ತು ಅದು ತನ್ನೊಂದಿಗೆ ಭಾರತದ ಸಾಂಪ್ರದಾಯಿಕ (ಈಗಾಗಲೇ ಅಪ್ರಸ್ತುತವೂ ಆಗಿರುವ) ಸೆನ್ಸಾರ್ ವ್ಯವಸ್ಥೆಯನ್ನು ಸಮಾಧಿ ಮಾಡಲಿದೆ ಎಂಬುದಕ್ಕೆ ಸಾಕಷ್ಟು ಮುನ್ಸೂಚನೆಗಳನ್ನು ಈ ಹೊಸ ನಿಯಮಗಳು ಕೊಟ್ಟಿವೆ ಎಂದರೆ ಅದು ಸರಿಯಾದ ವಿವರಣೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ


ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಫೇಸ್‌ಬುಕ್ ಬ್ಯಾನ್! ಟೆಕ್ ದೈತ್ಯನ ಅಹಂಗೆ ಬಿದ್ದ ಪೆಟ್ಟು: ಎಸ್ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...