Homeಅಂಕಣಗಳುಗೌರಿ ಕಾರ್ನರ್: ಪಿ. ಸಾಯಿನಾಥ್‌ರೊಂದಿಗೆ ಮಾತುಕತೆ; ಸರ್ಕಾರ ತನ್ನ ಕರ್ತವ್ಯವನ್ನು ಪಾಲಿಸುತ್ತಿಲ್ಲ ಎಂದು ಜನರಿಗೆ ಮನವರಿಕೆ...

ಗೌರಿ ಕಾರ್ನರ್: ಪಿ. ಸಾಯಿನಾಥ್‌ರೊಂದಿಗೆ ಮಾತುಕತೆ; ಸರ್ಕಾರ ತನ್ನ ಕರ್ತವ್ಯವನ್ನು ಪಾಲಿಸುತ್ತಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು

- Advertisement -
- Advertisement -

ಪಿ.ಸಾಯಿನಾಥ್ ಅವರು ಕಳೆದ ಒಂದೆರಡು ಬಾರಿ ಬೆಂಗಳೂರಿಗೆ ಬಂದಿದ್ದಾಗ ಅವರನ್ನು ಮಾತನಾಡಿಸಲಾಗಿರಲಿಲ್ಲ. ಆದರೆ, ಈ ಬಾರಿ ಭೇಟಿ ಆಗಲೇಬೇಕೆನಿಸಿತು. ಅವರ ಮೊಬೈಲಿಗೆ “Pl call when u r free – gauri lankesh” ಎಂದು ಒಂದು ಎಸ್‌ಎಂಎಸ್ ಕಳುಹಿಸಿದೆ. ಅರ್ಧ ಗಂಟೆಯಲ್ಲಿ ಅವರೇ ಫೋನ್ ಮಾಡಿದರು.

“ನೀವು ಯಾವಾಗ ಬೆಂಗಳೂರಿಗೆ ಬರುತ್ತೀರಿ? ಯಾವಾಗ free ಆಗುತ್ತೀರಿ. ನಿಮ್ಮನ್ನು ಭೇಟಿ ಮಾಡಬೇಕು” ಅಂದೆ. ಅದಕ್ಕವರು “ನಾನು ಶನಿವಾರ ಮಧ್ಯಾಹ್ನವೇ ಬೆಂಗಳೂರಿಗೆ ಬರುತ್ತೇನೆ. ಎಂದಿನಂತೆ ಹೋಟೆಲ್ ವುಡ್‌ಲ್ಯಾಂಡ್ಸ್‌ನಲ್ಲಿ ಉಳಿದುಕೊಳ್ಳುತ್ತೇನೆ. ಶನಿವಾರ ಸಂಜೆ ನೀನು ಬಿಡುವಾಗಿದ್ದೀಯಾ?” ಎಂದರು. ನಾನು ಓಕೆ ಅಂದೆ. ಶನಿವಾರ ಮಧ್ಯಾಹ್ನ ಅವರು ತಮ್ಮ ಹೋಟೆಲ್ ರೂಮಿಗೆ ಚೆಕ್ ಇನ್ ಮಾಡಿದ ಕೂಡಲೆ ನನಗೆ ಫೋನ್ ಮಾಡಿದರು. ಸಂಜೆ ಐದಕ್ಕೆ ಭೇಟಿ ಆಗೋಣ ಎಂದು ನಿಶ್ಚಯಿಸಿದೆವು.

ಅವರು ಉಳಿದುಕೊಂಡಿದ್ದ ರೂಮನ್ನು ಪ್ರವೇಶಿಸುತ್ತಿದ್ದಂತೆ “ಎಷ್ಟು ವರ್ಷಗಳಾಯಿತು ನಾವು ಭೇಟಿ ಆಗಿ. ಹೇಗಿದ್ದೀಯಾ? ಪತ್ರಿಕೆ ಹೇಗೆ ನಡೆಯುತ್ತಿದೆ?” ಎಂದು ಕೇಳಿದರು. “ಹತ್ತು ವರ್ಷಗಳ ಮೇಲಾಯಿತು. ನಾನು ಚೆನ್ನಾಗಿದ್ದೇನೆ. ಪತ್ರಿಕೆಯೂ ಚೆನ್ನಾಗಿ ನಡೆಯುತ್ತಿದೆ” ಎಂದೆ. “ಈಗಲೂ ಜಾಹೀರಾತು ತೆಗೆದುಕೊಳ್ಳದೆ ಪತ್ರಿಕೆ ನಡೆಸುತ್ತಿದ್ದೀಯಲ್ಲ. ಅದ್ಭುತ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

“ನಿಮ್ಮೊಂದಿಗೆ ಕಾಡುಹರಟೆಹೊಡೆದು ನಮ್ಮಿಬ್ಬರ ಸಮಯವನ್ನೂ ಹಾಳು ಮಾಡಲು ನನಗಿಷ್ಟವಿಲ್ಲ. ಆದ್ದರಿಂದ ಒಂದಿಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ. ಒಂದು ರೀತಿಯಲ್ಲಿ ಇದು freewheeling ಸಂದರ್ಶನ, ಓಕೆನಾ?” ಅಂದೆ.

“ಓಕೆ.”

“ರೈತರ ಆತ್ಮಹತ್ಯೆಗಳನ್ನು ಕುರಿತು ನೀವು ಹಲವಾರು ಲೇಖನಗಳನ್ನು ಬರೆದಿದ್ದೀರಿ. ರೈತರ ಆತ್ಮಹತ್ಯೆಗಳನ್ನು ಹೇಗೆ ತಡೆಯಬಹುದು ಎಂದು ನಿಮಗನ್ನಿಸುತ್ತದೆ?”

ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನಮ್ಮ ದೇಶದ ಆರ್ಥಿಕ ಕೃಷಿ ನೀತಿಯಿಂದಾಗಿ. ಇವತ್ತು ನಮ್ಮ ದೇಶದ ಕೃಷಿ ಸಿದ್ಧಾಂತ ಕಾರ್ಪೊರೇಟ್ ಫಾರ್ಮಿಂಗ್‌ನತ್ತ ಹೋಗುತ್ತಿದೆ. ಇಂದು ನಮ್ಮ ರೈತರ ಬದುಕನ್ನು ತಾಕುವ ಎಲ್ಲವೂ ಕಾರ್ಪೊರೇಟ್ ಕಂಪನಿಗಳ ಹಿಡಿತದಲ್ಲಿವೆ. ಬೀಜ, ಕ್ರಿಮಿನಾಶಕ, ಗೊಬ್ಬರ, ಮಾರುಕಟ್ಟೆ ಎಲ್ಲವೂ. ಕೈಬೆರಳೆಣಿಕೆಯಷ್ಟು ಮಲ್ಟಿನ್ಯಾಷನಲ್ ಕಂಪನಿಗಳ ಕಪಿಮುಷ್ಠಿಯಲ್ಲಿವೆ. ಅಂದರೆ ಅವರು ನಮ್ಮ ರೈತರ ಬದುಕನ್ನೇ ನಿರ್ಧರಿಸುವವರಾಗಿದ್ದಾರೆ. ನಮ್ಮ ಹಳ್ಳಿಗಳಲ್ಲಿ ಇವತ್ತು ಕೆಲವರು ಭೂಮಾಲೀಕರಾಗಿದ್ದರೆ, ಇತರರು ಆ ಭೂಮಿಯಲ್ಲಿ ದುಡಿಯುವ ಕೂಲಿಕಾರರಾಗಿದ್ದಾರೆ. ಅಂದರೆ ಭೂಮಿಯ ಮಾಲೀಕತ್ವ ಮತ್ತು ಅದರಲ್ಲಿ ಕೃಷಿ ಮಾಡುವುದನ್ನು ಹೊರತುಪಡಿಸಿದರೆ ಯಾವುದೂ ನಮ್ಮ ರೈತರ ಕೈಯಲ್ಲಿಲ್ಲ. ಆದ್ದರಿಂದ ನಾನು ವಿವಿಧ ರಾಜ್ಯಗಳಿಗೆ ಹೋದಾಗ ಅಲ್ಲಿನ ರೈತರು ವಿವಿಧ ಭಾಷೆಗಳಲ್ಲಿ ‘ನಮ್ಮನ್ನು ಯಾಕೆ ರೈತರು ಎಂದು ಕರೆಯುತ್ತೀರಿ?’ ಎಂದು ನನ್ನನ್ನೇ ಕೇಳುತ್ತಾರೆ.

ಇವತ್ತು ನಮ್ಮ ರೈತಾಪಿ ದೊಡ್ಡಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ ಅದು ನಮ್ಮ ಇಡೀ ಆರ್ಥಿಕ ಮತ್ತು ಕೃಷಿನೀತಿ ಅವರನ್ನು ಯಾವ ಹಂತಕ್ಕೆ ದೂಡಿದೆ ಎಂದು ಸ್ಪಷ್ಟಪಡಿಸುತ್ತದೆ. ಇದನ್ನು ಬಗೆಹರಿಸಬೇಕಿದ್ದರೆ ನಾವು ನಮ್ಮ ಈ ನೀತಿಗಳನ್ನೇ ಸಂಪೂರ್ಣವಾಗಿ ಬದಲಾಯಿಸಬೇಕು. ಅಲ್ಲೊಂದಿಷ್ಟು ಬದಲಾವಣೆ, ಇಲ್ಲೊಂದಿಷ್ಟು ತಿದ್ದುವಿಕೆ ಇಂತಹವು ನಡೆಯುವುದಿಲ್ಲ. ಐಸ್‌ಲ್ಯಾಂಡ್ ದೇಶದಲ್ಲೂ ನಮ್ಮಂತೆಯೇ ಖಾಸಗೀಕರಣ ಮತ್ತು ಮುಕ್ತ ಮಾರುಕಟ್ಟೆಯನ್ನು ತರಲಾಗಿತ್ತು. ಆದರೆ ಆ ನೀತಿಯಿಂದಾಗುತ್ತಿರುವ ಅಪಾಯವನ್ನು ಅರಿತ ಐಸ್‌ಲ್ಯಾಂಡ್ ಅದನ್ನು ಸಂಪೂರ್ಣವಾಗಿ ಬದಲಾಯಿಸಿತಲ್ಲದೆ ಉದಾರೀಕರಣ ಮತ್ತು ಮುಕ್ತ ಮಾರುಕಟ್ಟೆಯನ್ನು ಪರಿಚಯಿಸಿದ್ದ ರಾಜಕೀಯ ನಾಯಕರನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ ಅವರಿಗೆಲ್ಲ ಶಿಕ್ಷೆ ನೀಡಲಾಯಿತು. ಅದನ್ನೇ ಇಲ್ಲೂ ಮಾಡಬೇಕು.

ಎಪ್ಪತ್ತರ ದಶಕದಲ್ಲಿ ನಡೆದ ಹಸಿರುಕ್ರಾಂತಿಯಿಂದಾಗಿ ನಮ್ಮ ಕೃಷಿ ಪದ್ಧತಿಯೂ ಬದಲಾಯಿತು. 90ರ ದಶಕದಲ್ಲಿ ಪ್ರಾರಂಭವಾದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳು ಹಸಿರುಕ್ರಾಂತಿಯಿಂದಾಗಿ ಬದಲಾದ ಕೃಷಿ ಪದ್ಧತಿಯನ್ನೇ ಬಂಡವಾಳ ಮಾಡಿಕೊಂಡು ನಮ್ಮ ಕೃಷಿಕರ ಬದುಕನ್ನು ನಾಶಮಾಡಿತು ಎಂದು ನಿಮಗೆ ಅನ್ನಿಸುತ್ತದೆಯೇ?

ಹಸಿರುಕ್ರಾಂತಿಯ ಬಗ್ಗೆ ಹಲವಾರು ಭ್ರಮೆಗಳಿವೆ. ಅದು ಹೆಚ್ಚಾಗಿ ಜಾರಿಗೆ ಬಂದಿದ್ದು ಪಂಜಾಬ್, ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ. ಆದರೆ ಒಂದು ಅಂಶ ನಿನಗೆ ಗೊತ್ತಾ? ಯಾವ ವರ್ಷಗಳಲ್ಲಿ ಹಸಿರುಕ್ರಾಂತಿಯಿಂದಾಗಿ ಆ ಮೂರು ರಾಜ್ಯಗಳಲ್ಲಿ ಹೆಚ್ಚು ಆಹಾರ ಧಾನ್ಯಗಳನ್ನು ಬೆಳೆಯಲಾಯಿತು ಎಂದು ಸರ್ಕಾರ ಹೇಳಿತ್ತೋ ಅದೇ ವರ್ಷಗಳಲ್ಲಿ ಹಸಿರುಕ್ರಾಂತಿಯ ಬಗ್ಗೆ ಒಂದಿಷ್ಟೂ ಸುಳಿವೂ ಇರದಿದ್ದ ಪಶ್ಚಿಮ ಬಂಗಾಳದಲ್ಲಿ ಅದಕ್ಕಿಂತಲೂ ಹೆಚ್ಚು ಆಹಾರ ಧಾನ್ಯಗಳನ್ನು ಬೆಳೆಯಲಾಗಿತ್ತು!

ಅಷ್ಟೇ ಮುಖ್ಯವಾಗಿ, ಹಸಿರುಕ್ರಾಂತಿಯಲ್ಲಿ ಅಳವಡಿಸಿದ್ದ ಕೃಷಿ ಪದ್ಧತಿಯನ್ನೇ ಅದಕ್ಕಿಂತ ಮುನ್ನ ಅಮೆರಿಕದಲ್ಲಿ ಪ್ರಯೋಗಿಸಿ ಅಲ್ಲಿನ ಭೂಮಿಯ ಫಲವತ್ತತೆ ನಾಶವಾಗಿತ್ತು. ಹೋಗಲಿ, ಆಗ ಅದರ ಬಗ್ಗೆ ನಮ್ಮ ಸರ್ಕಾರಕ್ಕೆ ಗೊತ್ತಿರಲಿಲ್ಲ ಎಂದಿಟ್ಟುಕೊಳ್ಳೋಣ. ಆದರೆ ಈ ಯುಗದಲ್ಲಿ ಸರ್ಕಾರದ ಆರ್ಥಿಕ ನೀತಿಯಿಂದಾಗಿ ನಮ್ಮ ಕೃಷಿಕರ ಬದುಕೇ ಅಧೋಗತಿ ಆಗುತ್ತೆ ಎಂದು ತನಗೆ ಗೊತ್ತಿರಲಿಲ್ಲ ಎಂದು ನಮ್ಮ ಸರ್ಕಾರ ಹೇಳುವಂತಿಲ್ಲ.

ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿ ಮತ್ತು ಇವತ್ತು ಜಿಎಂ ಬೀಜ, ಕೆಮಿಕಲ್ ಗೊಬ್ಬರ ಮತ್ತು ಹಾನಿಕಾರಕ ಕ್ರಿಮಿನಾಶಕಗಳನ್ನು ಉಪಯೋಗಿಸುತ್ತಿರುವ ಆಧುನಿಕ ಕೃಷಿ ಪದ್ಧತಿಯ ನಡುವಿನ ವ್ಯತ್ಯಾಸವನ್ನು ನೀವು ಹೇಗೆ ಬಣ್ಣಿಸುತ್ತೀರಿ?

ಈಗ ಹೆಚ್ಚಿನ ರೈತರು ಅನುಸರಿಸುತ್ತಿರುವ ಕೃಷಿ ಪದ್ಧತಿಯನ್ನು ನಾನು ಸ್ಟೆರಾಯ್ಡ್ಸ್ ಮೇಲೆ ನಡೆಸುತ್ತಿರುವ ಪದ್ಧತಿ ಎಂದು ಕರೆಯುತ್ತೇನೆ. ಇದಕ್ಕೆ ಒಂದು ಹೇಳಿಕೆಯನ್ನು ಕೊಡಬಹುದು. ಉದಾಹರಣೆಗೆ ಇಬ್ಬರು ಅವಳಿಜವಳಿ ಸಹೋದರರಿದ್ದಾರೆ ಎಂದಿಟ್ಟುಕೊಳ್ಳಿ. ಮೊದಲನೆಯವನಿಗೆ ಎಲ್ಲರೂ ತಿನ್ನುವ ಆಹಾರವನ್ನೇ ಕೊಟ್ಟು ಬೆಳೆಸಲಾಗಿದೆ. ಎರಡನೆಯವನಿಗೆ ಸ್ಟೆರಾಯ್ಡ್ ಕೊಟ್ಟು ಬೆಳೆಸಲಾಗಿದೆ. ಕೆಲವರ್ಷಗಳಲ್ಲಿ ಮೊದಲನೆಯವನು ಸಾಮಾನ್ಯ ಗಾತ್ರದ ದೇಹ ಮತ್ತು ದೈಹಿಕ ಶಕ್ತಿಯನ್ನು ಹೊಂದಿರುತ್ತಾನೆ. ಆದರೆ ಎರಡನೆಯವನು ದೈತ್ಯಾಕಾರವಾಗಿ ಬೆಳೆದಿರುತ್ತಾನಲ್ಲದೆ ಎಲ್ಲಾ ದೈಹಿಕ ಸ್ಪರ್ಧೆಗಳನ್ನು ಗೆಲ್ಲುತ್ತಾನೆ. ಆದರೆ ಆನಂತರ ಏನು? ಅವರಿಬ್ಬರೂ ಪ್ರಾಯಕ್ಕೆ ಬರುವ ಹೊತ್ತಿಗೆ ಮೊದಲನೆಯವನು ಸಾಮಾನ್ಯ ಜನರಂತೆ ಬೆಳೆದಿರುತ್ತಾರೆ, ಆರೋಗ್ಯವಂತನಾಗಿರುತ್ತಾನೆ. ಆದರೆ ಎರಡನೆಯವರು ಅಷ್ಟುಹೊತ್ತಿಗಾಗಲೇ ತೀರಿಕೊಂಡಿರುತ್ತಾನೆ! ನಮ್ಮ ಭೂಮಿಗೆ ಆಧುನಿಕ ಕೃಷಿ ಪದ್ಧತಿಯಿಂದಾಗಿ ಆಗುತ್ತಿರುವುದೂ ಇದೆ.

ಹಲವು ದಶಕಗಳ ಹಿಂದೆ ನಮ್ಮ ಸರ್ಕಾರಗಳು – ಅದು ಗಿಮ್ಮಿಕ್ಕೇ ಆಗಿದ್ದರೂ – ಜನರನ್ನು ಸಂತೈಸಲು ‘ಜೈ ಜವಾನ್, ಜೈ ಕಿಸಾನ್’ ಎಂದು ಘೋಷಿಸುತ್ತಿದ್ದವು. ನಿಮ್ಮ ಪ್ರಕಾರ ಈಗಿನ ಸರ್ಕಾರಗಳ ಘೋಷವಾಕ್ಯ ಎಂತಹದ್ದಾಗಿದೆ?

ಈಗ ಜೈ ಜವಾನೂ ಇಲ್ಲ, ಜೈ ಕಿಸಾನೂ ಇಲ್ಲ. ಬದಲಾಗಿ ಎಲ್ಲೆಲ್ಲೂ ‘ಜೈ ಲೂಯಿ ವಿಟ್ಟಾನ್’ ಎಂಬ ಘೋಷಣೆಯೇ ಕೇಳಿಬರುತ್ತಿದೆ.

(ಲೂಯಿ ವಿಟ್ಟಾನ್ ಎಂಬುದು ಒಂದು ಅಂತರರಾಷ್ಟ್ರೀಯ ಫ್ಯಾಷನ್ ಕಂಪನಿ ಆಗಿದ್ದು ಅದು ತಯಾರಿಸುವ ಒಡವೆ, ಬಟ್ಟೆ, ಬ್ಯಾಗು, ಶೂ ಇತ್ಯಾದಿಗಳು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತವೆ- ಗೌರಿ)

ಎಂಭತ್ತರ ದಶಕದವರೆಗೂ ನಮ್ಮ ದೇಶದಲ್ಲಿ ಶಕ್ತಿಶಾಲಿಯಾದ ಮಾಸ್ ಮೂವ್‌ಮೆಂಟ್‌ಗಳಿದ್ದವು…..

ಆದರೀಗ ಮಾಸ್ ಸೂಯಿಸೈಡ್‌ಗಳಿವೆ…

ಆಗ ಉತ್ತರ ಭಾರತದಲ್ಲಿ ಮಹೇಂದರ್ ಸಿಂಗ್ ಟಿಕಾಯತ್ ಮತ್ತು ದಕ್ಷಿಣದಲ್ಲಿ ನಮ್ಮ ಪ್ರೊ. ಎಂ.ಡಿ. ನಂಜುಂಡಸ್ವಾಮಿಗಳಂತಹ ರೈತನಾಯಕರಿದ್ದರು. ಆದರೀಗ ಮಾಸ್ ಮೂವ್‌ಮೆಂಟ್‌ಗಳಾಗಲಿ, ಟಿಕಾಯತ್ ಮತ್ತು ನಂಜುಂಡಸ್ವಾಮಿ ತರಹದ ರೈತನಾಯಕರಾಗಲಿ ಇಲ್ಲ. ಯಾಕೆ ಹೀಗೆ?

ಇವತ್ತು ಮಾಸ್ ಮೂವ್‌ಮೆಂಟ್ ಗಳಿಲ್ಲದಿರಬಹುದು. ಆದರೆ ವಿವಿಧ ಕಡೆ ವಿವಿಧ ರೀತಿಯಲ್ಲಿ ಸಾವಿರಾರು ಪ್ರತಿಭಟನೆಗಳು, ಪ್ರತಿರೋಧಗಳು ವ್ಯಕ್ತವಾಗುತ್ತಿವೆ. ಧರಣಿ, ಉಪವಾಸ ಸತ್ಯಾಗ್ರಹ, ಮುತ್ತಿಗೆ, ಕಾನೂನು ಹೋರಾಟ, ಸಶಸ್ತ್ರ ಹೋರಾಟ ಇತ್ಯಾದಿಗಳು ನಡೆಯುತ್ತಿವೆ. ಇವತ್ತಿಗೂ ಜಾರ್ಖಂಡದಲ್ಲಿ ಮಲ್ಟಿನ್ಯಾಷನಲ್ ಕಂಪನಿಯಾದ ಪಾಸ್ಕೋದ ಗಣಿ ಪ್ರಾಜೆಕ್ಟ್‌ಅನ್ನು ತಡೆಹಿಡಿದಿರುವುದು ಎರಡು ಪುಟ್ಟಹಳ್ಳಿಗಳ ಜನರು ಎಂಬುದನ್ನು ನಾವು ಮರೆಯಬಾರದು….

ಸರ್ಕಾರ ಇವತ್ತು ಜನದ್ರೋಹಿ ನೀತಿಗಳನ್ನು ಅನುಸರಿಸುತ್ತಿದೆ. ಇದರ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವುದು ಮತ್ತು ಹೋರಾಟದ ಮನೋಸ್ಥಿತಿಯನ್ನು ನಿರ್ಮಿಸುವುದು ಹೇಗೆ?

ಅದಕ್ಕೆ ನಾವು ನಮ್ಮ ಸಂವಿಧಾನದ ಆಶ್ರಯವನ್ನೇ ಪಡೆಯಬೇಕು. ನನ್ನ ಪ್ರಕಾರ ನಮ್ಮ ಸಂವಿಧಾನದ ಮುಖ್ಯ ಅಂಶ ಇರುವುದೇ Directive principles of State policy ಎಂಬ ಭಾಗದಲ್ಲಿ. ಈ ಭಾಗದ ಪ್ರಕಾರ ಭಾರತದ ಪ್ರಜೆಗಳಿಗೆ ಆರೋಗ್ಯ ಸೌಲಭ್ಯ, ಶಿಕ್ಷಣ, ಪೌಷ್ಠಿಕ ಆಹಾರ, ಉದ್ಯೋಗ ಮತ್ತು ರಕ್ಷಣೆಯನ್ನು ನೀಡುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಜನರಲ್ಲಿ ಸರ್ಕಾರ ತನ್ನ ಈ ಕರ್ತವ್ಯವನ್ನು ಪಾಲಿಸುತ್ತಿಲ್ಲ ಎಂದು ಮನವರಿಕೆ ಮಾಡಿಕೊಡಬೇಕು. ಸಂವಿಧಾನವನ್ನು ಸರ್ಕಾರ ಪಾಲಿಸುತ್ತಿಲ್ಲ ಎಂದರೆ ಜನರನ್ನು ಒಗ್ಗೂಡಿಸುವುದು ಕಷ್ಟವಾಗಲಿಕ್ಕಿಲ್ಲ. ಆ ನಿಟ್ಟಿನಲ್ಲಿ ಮಾಧ್ಯಮಗಳೂ ತಮ್ಮ ಕರ್ತವ್ಯವನ್ನು ಪಾಲಿಸಬೇಕು.

ನೀವು ಮಾಜಿ ರಾಷ್ಟ್ರಪತಿ ವಿ.ವಿ.ಗಿರಿ ಅವರ ಮೊಮ್ಮಗ. ಉನ್ನತ ಶಿಕ್ಷಣ ಪಡೆದವರು. ನೀವು ಕೂಡ ಇತರೆ ಪತ್ರಕರ್ತರಂತಾಗುವ ಬದಲು ಗ್ರಾಮೀಣ ಪ್ರದೇಶದ ಜನರತ್ತ ನಿಮ್ಮ ಗಮನಹರಿಸಲು ಯಾಕೆ ನಿರ್ಧರಿಸಿದಿರಿ?

ಮೊದಲನೆಯದಾಗಿ ನನ್ನ ಪ್ರಕಾರ ನಮ್ಮ ದೇಶದ ಪತ್ರಿಕೋದ್ಯಮ ನಮ್ಮ ದೇಶದ ಸ್ವಾತಂತ್ರ ಸಂಗ್ರಾಮದ ಕೂಸು. ಅಂದರೆ ನಮ್ಮ ಪತ್ರಿಕೋದ್ಯಮ ನಮ್ಮ ದೇಶದ ಜನರ ಸ್ಥಿತಿಗತಿಗಳನ್ನು, ಆಶೋತ್ತರಗಳನ್ನು ಪ್ರತಿಬಿಂಬಿಸುವ ಒಂದು ಮಾರ್ಗ. ಆದ್ದರಿಂದ ನಾನು ನಮ್ಮ ದೇಶದ ಸಾಮಾನ್ಯ ಜನರ ಬದುಕಿನ ಬಗ್ಗೆ ಬರೆಯಲು ನಿರ್ಧರಿಸಿದೆ.

ಎರಡನೆಯದಾಗಿ ನಮ್ಮ ಮನೆಯಲ್ಲಿ ನಾವೆಂದೂ ರಾಜಕೀಯವನ್ನು ಒಂದು bad word ಎಂದು ಪರಿಗಣಿಸಿರಲಿಲ್ಲ. ಬದಲಾಗಿ ರಾಜಕೀಯ ಎಂಬುದು ಸಾಮಾನ್ಯ ಜನರ ಪರವಾಗಿರುವ ಕ್ರಿಯೆ ಎಂದೇ ಭಾವಿಸಿದ್ದೆವು. ಜನರ ಬದುಕನ್ನು ರಾಜಕೀಯ ನೀತಿಗಳು ಎಲ್ಲ ತರಹದಲ್ಲೂ ತಾಗುವುದರಿಂದ ನಾನು ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮೀಣ ಜನರ ಬದುಕಿನ ಮೇಲೇ ನನ್ನ ಗಮನಹರಿಸಲು ನಿರ್ಧರಿಸಿದೆ.

ಮೂರನೆಯದಾಗಿ, ಇವತ್ತು ನಮ್ಮ ಪತ್ರಿಕಾರಂಗದಲ್ಲಾಗುತ್ತಿರುವುದನ್ನು ನೋಡಿದರೆ ನಾನು ಇತರರ ಹಾದಿಯನ್ನು ಅನುಸರಿಸಿದ್ದರೆ ನಾನೂ ಕಾರ್ಪೊರೇಟ್ ಕಂಪನಿಯೊಂದು ಹೇಳುವುದನ್ನೆಲ್ಲ ವರದಿ ಮಾಡುವ ಸ್ಟೆನೊ ಆಗಿರುತ್ತಿದ್ದೆ ಅಥವಾ ಅಂತಹ ಕಂಪನಿಗಳ ಹಿತಾಸಕ್ತಿಯನ್ನು ಪ್ರತಿನಿಧಿಸುವ ಓರ್ವ ವೇಶ್ಯೆ ಆಗಿರುತ್ತಿದ್ದೆ ಎಂದೆನಿಸುತ್ತದೆ…..

ಇವತ್ತು ಮುಖ್ಯವಾಹಿನಿಯಲ್ಲಿರುವ ಮಾಧ್ಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನಮ್ಮ ಪತ್ರಿಕಾರಂಗ ರಾಜಕೀಯ ಒತ್ತಡದಿಂದ ಮುಕ್ತವಾಗಿದೆ ನಿಜ. ಆದರೆ ಅದು ಲಾಭ ಎಂಬ ಬಲೆಯಲ್ಲಿ ಬಂಧಿ ಆಗಿದೆ. ಪ್ರತಿಯೊಂದು ಪತ್ರಿಕೆ ಮತ್ತು ಟಿವಿ ಚಾನೆಲ್‌ನ ಮಾಲೀಕರಿಗೆ ನಮ್ಮ ದೇಶದ ಸಾಮಾನ್ಯ ಜನರ ಹಿತಾಸಕ್ತಿಗಿಂತ ತಮ್ಮ ಲಾಭವೇ ಇವತ್ತು ಮುಖ್ಯವಾಗಿದೆ.ಇನ್ನೊಂದು ಮುಖ್ಯ ವಿಚಾರ ಯಾವುದೆಂದರೆ ಇವತ್ತು ಮಾಧ್ಯಮಗಳೂ ಹೆಚ್ಚಿನ ಲಾಭ ತರುವ ಬೃಹತ್ ಕಂಪನಿಗಳಾಗಿರುವುದು. ಈ ಕಾರಣದಿಂದಲೇ ಇಂದು ರಾಜಕಾರಣಿಗಳು ಮತ್ತು ಬಿಸಿನೆಸ್‌ಮೆನ್‌ಗಳು ಪತ್ರಿಕೆಗಳನ್ನೋ, ಟಿವಿ ಚಾನೆಲ್‌ಗಳನ್ನೋ ಸ್ಥಾಪಿಸುತ್ತಿದ್ದಾರೆ. ಹಾಗೆಯೇ ಪತ್ರಿಕೆಗಳ ಮಾಲೀಕರೂ ರಾಜಕೀಯ ಮತ್ತು ಬಿಸಿನೆಸ್ ವಲಯವನ್ನು ಪ್ರವೇಶಿಸುತ್ತಿದ್ದಾರೆ. ಇವತ್ತು ಭಾರತದಲ್ಲಿ ಅತಿದೊಡ್ಡ ಮಾಧ್ಯಮ ಸಂಸ್ಥೆಯ ಮಾಲೀಕ ಬೇರೆ ಯಾರೂ ಅಲ್ಲ. ಅದು ಮುಖೇಶ್ ಅಂಬಾನಿ. ಆತ ಹಲವು ಪತ್ರಿಕೆಗಳ ಮತ್ತು ಹತ್ತಾರು ಭಾಷಾ ಚಾನೆಲ್‌ಗಳ ಒಡೆಯ. ಪ್ರಾಯಶಃ ಆತನಿಗೇ ತಾನು ಯಾವ ಯಾವ ಭಾಷೆಗಳ ಚಾನೆಲ್‌ಗಳನ್ನು ಹೊಂದಿದ್ದೇನೆ ಎಂಬುದೂ ಗೊತ್ತಿರಲಿಕ್ಕಿಲ್ಲ. ಆದರೆ ಇದರಲ್ಲಿ ಅಡಗಿರುವ ಅಪಾಯ ಯಾವುದೆಂದರೆ ಆತನ ಮಾಲೀಕತ್ವದ ಮಾಧ್ಯಮಗಳು ಆತನ ಯಾವ ಭ್ರಷ್ಟಾಚಾರದ ಬಗ್ಗೆಯೂ ವರದಿ ಮಾಡದೆ ಜನರನ್ನು ಅಂಧತ್ವದಲ್ಲಿ ಇಡುತ್ತವೆ. ಇದು ಹೀಗೆ ಮುಂದುವರೆದರೆ ನಮ್ಮ ಎಲ್ಲಾ ಮಾಧ್ಯಮಗಳು ನಮ್ಮ ದೇಶದಲ್ಲಿರುವ ಕೆಲವೇ ಸಾಹುಕಾರರ ಹಿತಾಸಕ್ತಿಗಳನ್ನು, ಆಶಯಗಳನ್ನು ಪ್ರತಿನಿಧಿಸುವ ಅಸ್ತ್ರಗಳಾಗುತ್ತವೆ.

ನಮ್ಮ ದೇಶದಲ್ಲಿ ಇವತ್ತಿಗೂ ಅರ್ಧಕ್ಕರ್ಧ ಜನ ಬಡತನದಿಂದಾಗಿ ಅಪೌಷ್ಠಿಕತೆಯಿಂದ, ಹಸಿವಿನಿಂದ ನರಳುತ್ತಿದ್ದಾರೆ. ಆದರೂ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅವರು ಇತ್ತೀಚೆಗೆ ಯೂರೋಪಿನ ದೇಶಗಳಿಗೆ ಬರೋಬ್ಬರಿ ಹತ್ತು ಬಿಲಿಯನ್ ಡಾಲರ್‌ಗಳ – ಅಂದರೆ 56,000 ಕೋಟಿ ರೂಪಾಯಿಗಳ – ನೆರವನ್ನು ನೀಡುವುದಾಗಿ ಘೋಷಿಸಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಅದೇ 56,000 ಕೋಟಿ ರೂಪಾಯಿಗಳಲ್ಲಿ ಭಾರತದ ಬಡಜನರಿಗೆ ಒಂದು ಇಡೀ ವರ್ಷ ಉಚಿತವಾಗಿ ಆಹಾರ ಧಾನ್ಯಗಳನ್ನು ನಮ್ಮ ಸರ್ಕಾರ ನೀಡಬಹುದಿತ್ತು….

ಮಾರನೆದಿನ ಅವರ ಉಪನ್ಯಾಸಕ್ಕೆ ಹಾಜರಾದೆ. ಅವತ್ತೇ ರಾತ್ರಿ ಎಂಟೂವರೆಗೆ ಸಾಯಿನಾಥ್ ಫೋನ್ ಮಾಡಿದರು. “ಆಗಲೇ ಮುಂಬೈ ತಲುಪಿದಿರಾ?” ಎಂದೆ.

“ಇಲ್ಲ, ಈಗ ಫ್ಲೈಟ್ ಹತ್ತುತ್ತಿದ್ದೇನೆ. It was nice meeting you again. Thank you’’ ಅಂದರು.

“Same here.. ಆದರೆ ಒಂದನ್ನು ನೆನಪಿಟ್ಟುಕೊಳ್ಳಿ. ನೀವು ಇನ್ನು ಮುಂದೆ ಕರ್ನಾಟಕದ ಗ್ರಾಮೀಣ ಪ್ರದೇಶಗಳಿಗೆ ಅಧ್ಯಯನ ಮಾಡಲು ಹೋದಾಗ ನಾನೂ ನಿಮ್ಮೊಂದಿಗೆ ಬರುತ್ತೇನೆ. ಓಕೆನಾ?” ಅಂದೆ.
“That would be great. Take care’’ ಎಂದರು….

(ಜುಲೈ 18, 2012 ರಂದು ಗೌರಿಯವರ ಕಂಡಹಾಗೆ ಅಂಕಣದಲ್ಲಿ ಮೂಡಿಬಂದ ಸಂದರ್ಶನದ ಈ ಭಾಗವನ್ನು, ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ರೈತ ಕಾಯ್ದೆಗಳನ್ನು ವಿರೋಧಿಸಿ ನಡೆಯಲಿರುವ ಮಹಾಪಂಚಾಯತ್ ಸಮಯದಲ್ಲಿ ಮರುಪ್ರಕಟಿಸುತ್ತಿದ್ದೇವೆ.)


ಇದನ್ನೂ ಓದಿ: ರೈತ ಹೋರಾಟ ಸರ್ಕಾರದ ವಿರುದ್ಧವೂ ಅಲ್ಲ ಕಾಂಗ್ರೆಸ್‌ನ ಪರವೂ ಅಲ್ಲ: ಚುಕ್ಕಿ ನಂಜುಂಡಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...