Homeಕರ್ನಾಟಕ‘ದೊರೆಸ್ವಾಮಿ ನನ್ನ ಜೊತೆ ಜಗಳಕ್ಕೆ ನಿಂತಿದ್ದನ್ನು ನಾನು ಮರೆಯಲಾರೆ’- ಸಿದ್ದರಾಮಯ್ಯ ಅವರಿಂದ ಶ್ರದ್ದಾಂಜಲಿ ಬರಹ

‘ದೊರೆಸ್ವಾಮಿ ನನ್ನ ಜೊತೆ ಜಗಳಕ್ಕೆ ನಿಂತಿದ್ದನ್ನು ನಾನು ಮರೆಯಲಾರೆ’- ಸಿದ್ದರಾಮಯ್ಯ ಅವರಿಂದ ಶ್ರದ್ದಾಂಜಲಿ ಬರಹ

- Advertisement -
- Advertisement -

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸಾವಿನಿಂದ ಆವರಿಸಿರುವ ಕತ್ತಲನ್ನು ಸಾವಿರ ಸೂರ್ಯೋದಯಗಳಿಂದಲೂ ದೂರ ಮಾಡಲು ಸಾಧ್ಯವಾಗಲಾರದು, ಅವರು ಅಂತಹದ್ದೊಂದು ಬೆಳಕಿನ ಪುಂಜವಾಗಿದ್ದರು. ಕೊನೆ ಉಸಿರಿನ ವರೆಗೆ ಹೋರಾಟದ ಬದುಕಿನಿಂದ ನಿವೃತ್ತರಾಗದೆ ಸಕ್ರಿಯರಾಗಿದ್ದ ದೊರೆಸ್ವಾಮಿ ಅವರ ದೇಶಪ್ರೇಮದ ಬದ್ಧತೆ, ಪ್ರಾಮಾಣಿಕತೆ ಹೋರಾಟದ ಛಲ, ಶಿಸ್ತುಬದ್ಧ ಜೀವನ, ಆರೋಗ್ಯದ ಬಗೆಗಿನ ಕಾಳಜಿ ಎಲ್ಲವೂ ಎಲ್ಲರಿಗೂ ಆದರ್ಶವಾದುದು.

ನನ್ನ ಮತ್ತು ಅವರ ಸಂಬಂಧ ಕೇವಲ ಒಬ್ಬ ರಾಜಕಾರಣಿ ಮತ್ತು ಹೋರಾಟಗಾರನದ್ದಾಗಿರಲಿಲ್ಲ. ತಪ್ಪು ಕಂಡಾಗ ಮುಲಾಜಿಲ್ಲದೆ ಎಚ್ಚರಿಸುತ್ತಿದ್ದ, ಸರಿಕಂಡಾಗ ನನ್ನ ನಿಲುವಿನ ಪರವಾಗಿ ಬಂಡೆಗಲ್ಲಿನಂತೆ ನಿಂತು ಬೆಂಬಲಿಸುತ್ತಿದ್ದ ಅವರು ನನ್ನ ಪಾಲಿನ ಮನೆ ಹಿರಿಯನಾಗಿದ್ದರು. ವೈಯಕ್ತಿಕವಾಗಿ ನಾನು ಮನೆ ಹಿರಿಯನನ್ನು ಕಳೆದುಕೊಂಡ ದು:ಖದಲ್ಲಿದ್ದೇನೆ.

ಇದನ್ನೂ ಓದಿ: ಹಿರಿಯ ಸ್ವಾತಂತ್ಯ್ರ ಹೋರಾಟಗಾರನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ

ಅವರು ಬ್ರಿಟಿಷರ ವಿರುದ್ದ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿದ ವೀರ ಸೇನಾನಿಯಾಗಿದ್ದರು. ದೇಶಕ್ಕೆ ಸ್ವಾಂತಂತ್ರ್ಯ ಸಿಕ್ಕ ನಂತರ ಆ ಹೋರಾಟವನ್ನೇ ಬಂಡವಾಳ ಮಾಡಿಕೊಂಡು ಬಹಳ ಸುಲಭದಲ್ಲಿ ಅವರು ರಾಜಕೀಯ ಪ್ರವೇಶ ಮಾಡಿ ಶಾಸಕ, ಸಂಸದ, ಸಚಿವರಾಗಿಬಿಡಬಹುದಿತ್ತು. ಚುನಾವಣಾ ರಾಜಕೀಯದಿಂದ ಬಹುಬೇಗ ದೂರ ಸರಿದ ದೊರೆಸ್ವಾಮಿಯವರು ಸ್ವತಂತ್ರ ಭಾರತದಲ್ಲಿ ವಿರಮಿಸದೆ ತನ್ನ ಹೋರಾಟವನ್ನು ಮುಂದುವರಿಸಿದ್ದರು.

ಆಸ್ಪತ್ರೆಯಲ್ಲಿ ತಿಂಡಿ ತಿನ್ನುತ್ತಿರುವ ದೊರೆಸ್ವಾಮಿಯವರು

ದೇಶದ, ನಾಡಿನ ಯಾವುದೋ ಮೂಲೆಯಲ್ಲಿ ಅನ್ಯಾಯ-ಅಕ್ರಮ ನಡೆದರೂ ದೊರೆಸ್ವಾಮಿಯವರು ಅಂಜದೆ, ಜಗ್ಗದೆ ನಿರ್ಭೀತಿಯಿಂದ ಹೋರಾಟದ ಕಣಕ್ಕಿಳಿಯುತ್ತಿದ್ದರು. ಈ ಮೂಲಕ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದ್ದರು. ನಾನು ಸಚಿವನಾಗಿದ್ದಾಗ, ನಂತರ ಮುಖ್ಯಮಂತ್ರಿಯವರಿದ್ದಾಗ ಹಲವಾರು ಬಾರಿ ದೊರೆಸ್ವಾಮಿಯವರು ನನ್ನನ್ನು ಭೇಟಿಯಾಗಿದ್ದರು. ಅವೆಲ್ಲವೂ ಸಾರ್ವಜನಿಕ ಮಹತ್ವದ ವಿಷಯಕ್ಕೆ ಸಂಬಂಧಿಸಿದ ಭೇಟಿಯಾಗಿದ್ದವು. ಅವರೆಂದೂ ವೈಯಕ್ತಿಕವಾದ ಯಾವುದೇ ಬೇಡಿಕೆಯನ್ನು ಮಂಡಿಸಿಲ್ಲ. ಸ್ವಾರ್ಥದ ಲವಲೆಶವೂ ಇಲ್ಲದ ಅವರ ಕಠೋರ ನೈತಿಕತೆ ಎದುರು ರಾಜಕಾರಣದಲ್ಲಿರುವ ನಾವೆಲ್ಲರೂ ತಲೆತಗ್ಗಿಸಲೇಬೇಕಾಗುತ್ತಿತ್ತು.

ನಕ್ಸಲೀಯ ಹೋರಾಟದಲ್ಲಿ ತೊಡಗಿದ್ದವರು ಹಿಂಸೆಯ ಮಾರ್ಗ ತ್ಯಜಿಸಿ ನೆಲದ ಕಾನೂನಿಗೆ ಬದ್ಧರಾಗುವಂತೆ ಮನಪರಿವರ್ತಿಸಿ ಜನಪರ ಹೋರಾಟದಲ್ಲಿ ತೊಡಗುವಂತೆ ಮಾಡಲು ಅವರು ಪಟ್ಟ ಪ್ರಯತ್ನ ಮಾದರಿಯಾದುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಜೊತೆ ಹಲವಾರು ಬಾರಿ ನನ್ನನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಅವರು ಕೇವಲ ಬೇಡಿಕೆಗಳನ್ನು ಮುಂದಿಟ್ಟು ಹೋರಾಡುತ್ತಿರಲಿಲ್ಲ, ಬೇಡಿಕೆಗಳ ಈಡೇರಿಕೆಗೆ ಕಾನೂನಿನಡಿಯಲ್ಲಿಯೇ ಇರುವ ಪರಿಹಾರದ ಮಾರ್ಗವನ್ನೂ ತೋರಿಸಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತಿದ್ದರು. ಇದರಿಂದಾಗಿಯೇ ಅವರ ಆ ಹೋರಾಟ ಕೂಡಾ ಫಲಪ್ರದವಾಗಿತ್ತು.

ಇದನ್ನೂ ಓದಿ: ‘ಬದುಕಿದರೆ ದೊರೆಸ್ವಾಮಿಯವರ ಹಾಗೆ ಬದುಕಬೇಕು’

ಕೊಡಗಿನಲ್ಲಿ ಭೂಮಾಲೀಕರು ಬಡ ಅದಿವಾಸಿಗಳ ಒಕ್ಕಲೆಬ್ಬಿಸಿದಾಗ ಕೆಂಡಾಮಂಡಲವಾಗಿದ್ದ ದೊರೆಸ್ವಾಮಿಗಳು ನನ್ನ ಜೊತೆ ಜಗಳಕ್ಕೆ ನಿಂತಿದ್ದನ್ನು ನಾನು ಮರೆಯಲಾರೆ. ಆ ಆದಿವಾಸಿಗಳಿಗೆ ಇಂದು ನ್ಯಾಯ ಸಿಕ್ಕಿದ್ದರೆ ಅದಕ್ಕೆ ದೊರೆಸ್ವಾಮಿಯವರು ಕಾರಣ. ಅವರ ಸಾತ್ವಿಕ, ಅಷ್ಟೇ ಪ್ರಾಮಾಣಿಕವಾದ ಸಿಟ್ಟಿಗೆ ಎಷ್ಟೋ ಬಾರಿ ನಾನು ಭಯಪಡುವಂತಾಗಿತ್ತು. ಅದೇ ರೀತಿ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳ ವಿರುದ್ಧ ಟೀಕೆ-ಟಿಪ್ಪಣಿಗಳು ವ್ಯಕ್ತವಾದಾಗ ನಮ್ಮ ಪರವಾಗಿ ಗಟ್ಟಿಯಾಗಿ ನಿಂತು ಸಮರ್ಥಿಸಿ ಶಕ್ತಿತುಂಬಿದ್ದನ್ನು ಕೂಡಾ ನಾನು ಮರೆಯಲಾರೆ.

ಈ ದೇಶದ ಏಕತೆ, ಸೌಹಾರ್ದತೆ, ಜಾತ್ಯತೀತತೆಯ ರಕ್ಷಣೆಗಾಗಿ ಹಗಲಿರುಳು ಚಿಂತಿಸುತ್ತಿದ್ದ ದೊರೆಸ್ವಾಮಿಯವರು ಈ ಮೌಲ್ಯಗಳೂ ಇತ್ತೀಚಿನ ದಿನಗಳಲ್ಲಿ ಅಪಮೌಲ್ಯಗೊಳ್ಳುತ್ತಿರುವುದನ್ನು ಕಂಡು ಚಿಂತಿತರಾಗಿದ್ದರು. ಇದಕ್ಕೆ ಮುಖ್ಯ ಕಾರಣ ಭವಿಷ್ಯದ ದೇಶ ಮತ್ತು ಮುಂದಿನ ತಲೆಮಾರಿನ ಬಗ್ಗೆ ಅವರಿಗಿದ್ದ ಕಾಳಜಿ.

ಪತ್ನಿಯೊಂದಿಗೆ

ವೈಯಕ್ತಿಕವಾಗಿ ನನ್ನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು, ನನಗೆ ಅವರ ಬಗ್ಗೆ ಅಷ್ಟೇ ಗೌರವ ಇತ್ತು. ದೊರೆಸ್ವಾಮಿಯವರು ಭೇಟಿಯಾಗಲು ಬರುತ್ತಾರೆಂದ ಕೂಡಲೆ ನಾನು ಸ್ವಲ್ಪ ವಿಚಲಿತನಾಗುತ್ತಿದ್ದೆ. ರಾಜಕೀಯದ ಚಕ್ರವ್ಯೂಹದೊಳಗಿದ್ದು ನಮ್ಮದೇ ಇತಿಮಿತಿಯೊಳಗೆ ಕೆಲಸಮಾಡಬೇಕಾದ ನನ್ನಂತಹವರಿಗೆ ದೊರೆಸ್ವಾಮಿಯವರಂತಹ ಪ್ರಾಮಾಣಿಕ ಹೋರಾಟಗಾರರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಾಗುತ್ತಿತ್ತು.

ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿ ಜೊತೆಗಿನ ನೆನಪು

ಮೇಲ್ನೋಟಕ್ಕೆ ಹಟಮಾರಿ ಹಿರಿಯನಂತೆ ಕಂಡರೂ ದೊರೆಸ್ವಾಮಿಯವರ ಮನಸ್ಸು ಮೃದು ಮಾತ್ರವಲ್ಲ ಅಷ್ಟೇ ಉದಾರವಾಗಿತ್ತು. ನಮ್ಮ ಇತಿಮಿತಿ-ಅಸಹಾಯಕತೆಯನ್ನು ಅರ್ಥಮಾಡಿಕೊಂಡು ಸಹಕರಿಸುತ್ತಿದ್ದ ಅವರ ಔದಾರ್ಯದ ಗುಣ ಹೋರಾಟಗಾರರೆಲ್ಲರಿಗೂ ಅನುಕರಣೀಯವಾದುದು.

ಒಂದು ಸಾರ್ಥಕವಾದ ಬದುಕನ್ನು ಪೂರ್ಣವಾಗಿ ಬದುಕಿ ದೊರೆಸ್ವಾಮಿಯವರು ನಮ್ಮನ್ನಗಲಿ ಹೋಗಿದ್ದಾರೆ. ಇದರಿಂದ ಸಾರ್ವಜನಿಕ ಬದುಕಿನಲ್ಲಿ ಯಾರೂ ತುಂಬಲಾರದ ನಿರ್ವಾತವೊಂದು ನಿಸ್ಸಂಶಯವಾಗಿ ಸೃಷ್ಟಿಯಾಗಿದೆ. ಸಾರ್ವಜನಿಕ ಹೋರಾಟ ಮತ್ತು ಹೋರಾಟಗಾರ ಹೇಗಿರಬೇಕು ಎನ್ನುವುದಕ್ಕೆ ಅವರ ಬದುಕು ಒಂದು ಮಾದರಿ. ಈ ಮಾದರಿಯನ್ನು ಆದರ್ಶವಾಗಿಟ್ಟುಕೊಂಡು ಅವರು ಬಹುವಾಗಿ ನಂಬಿದ್ದ ಹೊಸ ತಲೆಮಾರು ದೊರೆಸ್ವಾಮಿಯವರ ಹೋರಾಟವನ್ನು ಮುಂದುವರಿಸಿಕೊಂಡು ಹೋದರೆ ಅದೇ ಈ ಹಿರಿಯನಿಗೆ ಸಲ್ಲಿಸುವ ನಿಜವಾದ ಗೌರವವಾಗಲಿದೆ.

ಇದನ್ನೂ ಓದಿ: ಗೌರವ ನಮನ | ದೊರೆಸ್ವಾಮಿ ಅವರ ಸಾರ್ಥಕ ಬದುಕಿನ ಮೈಲಿಗಲ್ಲುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಪ್ರಜ್ಞಾಕ್ಷಿತಿಜ ವಿಸ್ತಾರವಾಗುವ ವಿಚಾರ ಲಹರಿ ಹೊತ್ತ ‘ ನಾನು ಗೌರಿ’ ಗೆ ಶರಣು ಶರಣು.

  2. ವರ್ಷವಿದ್ದವು ಕರೋ ನ ಹೋಗದು; ಒಂದು ಗುಂಗಾಡನ್ನು ಒಡಿಶಾದ ಸರ್ಕಾರ ಎಂದು ಹೇಳಬೇಕಾಗುತ್ತೆ ವರ್ಷ ನಂತಸಾರ>?ACCULTURATE: he works hard but not preaches!
    only talk but not financial transactions is allowed what usew of f.m’s way!>? do U agree>!<

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...