Homeಕರ್ನಾಟಕನುಡಿನಮನ: ಕಳಚಿತು ಜನಪರ ಚಳವಳಿಯ ಮತ್ತೊಂದು ಕೊಂಡಿ

ನುಡಿನಮನ: ಕಳಚಿತು ಜನಪರ ಚಳವಳಿಯ ಮತ್ತೊಂದು ಕೊಂಡಿ

- Advertisement -
- Advertisement -

ನಮ್ಮ ಪ್ರೀತಿಯ ಚಂದ್ರಶೇಖರ ಪಾಟೀಲರು (ಚಂಪಾ, ಜೂನ್‌ 18, 1939– ಜನವರಿ 10, 2022) ಇಂದು ಬೆಳಿಗ್ಗೆ 6.30ಕ್ಕೆ ಬೆಂಗಳೂರಲ್ಲಿ ನಿಧನರಾಗಿದ್ದಾರೆ. ಅವರು 1980ರ ಬಂಡಾಯ ಚಳುವಳಿಯಲ್ಲಿ ಬರಗೂರರೊಡಗೂಡಿ ನಮಗೆಲ್ಲ ಮಾರ್ಗದರ್ಶನ ಮಾಡಿದವರು. ಚಂಪಾ ನಿಧನದೊಂದಿಗೆ ಜನಪರ ಚಳವಳಿಯ ಇನ್ನೊಂದು ಕೊಂಡಿ ಕಳಚಿತು. ನನ್ನಂಥ ಹಲವರು ಏನಾದರೂ ಚಿಕ್ಕ ಪುಟ್ಟ ಪ್ರತಿಭಟನೆಯ ಕಿಚ್ಚು ಉಳಿಸಿಕೊಂಡಿದ್ದರೆ ಅದಕ್ಕೆ ಚಂಪಾ ಮತ್ತು ಅವರು ತರುತ್ತಿದ್ದ ಸಂಕ್ರಮಣ ಪತ್ರಿಕೆ ಕಾರಣ. ಕವಿ, ನಾಟಕಕಾರ, ವಿಮರ್ಶಕ, ಭಾಷಣಕಾರ ಮತ್ತು ಕನ್ನಡ ಪರ ಹೋರಾಟಗಾರರಾಗಿ ಅವರು ಸದಾ ನಮ್ಮ ನೆನಪಲ್ಲಿ ಉಳಿಯುತ್ತಾರೆ.

ಚಂಪಾ ಹುಟ್ಟಿದ್ದು ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ. ಓದಿದ್ದು ಹತ್ತಿಮತ್ತೂರು-ಹಾವೇರಿಗಳಲ್ಲಿನ ಕನ್ನಡ ಶಾಲೆಗಳಲ್ಲಿ. 1956ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿ, 1960ರಲ್ಲಿ ಬಿ.ಎ. ಪೂರೈಸಿದರು. 1962ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದರು. 1996ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. 1980-83ರ ಅವಧಿಯಲ್ಲಿ ಧಾರವಾಡದ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗೋಕಾಕ್ ಚಳವಳಿಗೆ ಪ್ರೇರಣೆ ನೀಡಿದರು. ಗೋಕಾಕ ಚಳವಳಿಯು ಅವರನ್ನು ನಾಡಿನ ಪ್ರಮುಖ ಹೋರಾಟಗಾರರೆಂದು ಗುರುತಿಸುವಂತೆ ಮಾಡಿತು. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದ ಅವರು ಸಾಹಿತಿಗಳ ಮೈ ಚಳಿ ಬಿಡಿಸಿದರು.

ಮಾತೃಭಾಷಾ ಮಾಧ್ಯಮ ಚಳುವಳಿಗೆ ಚಂಪಾ ಕೊಡುಗೆ ಬಹಳ ದೊಡ್ಡದು. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಬೋಧನಾ ಮಾಧ್ಯಮವಾಗಿರಬೇಕು, ಬೇಕಿದ್ದರೆ ಇಂಗ್ಲಿಷನ್ನು ಪ್ರಾಥಮಿಕ 5ನೇ ತರಗತಿಯಿಂದ ಕಲಿಸಬೇಕು, ಕೇಂದ್ರ ಪಠ್ಯಕ್ರಮದ ಮಾಧ್ಯಮಗಳ ಶಾಲೆಗಳು ಕರ್ನಾಟಕದಲ್ಲಿದ್ದರೆ ಅವು ಕನ್ನಡವನ್ನು ಕಲಿಸಬೇಕು- ಎಂಬ ವಿಷಯಗಳ ಬಗ್ಗೆ ಚಂಪಾ ಅವರು ನಿರಂತರವಾಗಿ ಹೋರಾಡಿದರು. ಕನ್ನಡ ಮಾಧ್ಯಮದಲ್ಲಿ ಶಾಲೆಯನ್ನು ನಡೆಸಲು ಅನುಮತಿ ಪಡೆದು ಆಂಗ್ಲಮಾಧ್ಯಮದಲ್ಲಿ ಶಾಲೆ ನಡೆಸುತ್ತಿದ್ದ ಸುಮಾರು 2215 ಶಾಲೆಗಳ ಮಾನ್ಯತೆಯನ್ನು ರದ್ದು ಮಾಡಿಸುವಲ್ಲಿ ಚಂಪಾ ಅವರು ಯಶಸ್ವಿಯಾಗಿದ್ದರು.

1979ರಲ್ಲಿ ಬಂಡಾಯ ಚಳವಳಿಯು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಹಿಷ್ಕಾರ ಹಾಕಿದರೂ ಚಂಪಾ ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ( ನವೆಂಬರ್ 2004ರಿಂದ 2008ರವರೆಗೆ) ಸೇವೆ ಸಲ್ಲಿಸಿದರು. ಅವರ ನೇತೃತ್ವದಲ್ಲಿ ನಡೆದ ಶಿವಮೊಗ್ಗ ಸಾಹಿತ್ಯ ಸಮ್ಮೇಳನ ಅನೇಕ ಘಟನೆಗಳಿಗೆ ಸಾಕ್ಷಿಯಾಯಿತು. ಕಸಾಪವನ್ನು ಜನರ ಹತ್ತಿರ ಕೊಂಡೊಯ್ಯಲು ಅವರು ಮಾಡಿದ ಕೆಲಸಗಳು ಹಲವು. ಅದರಲ್ಲಿ ಅವರು ಚಾಲ್ತಿಗೆ ತಂದ ಶನಿವಾರದ ಪುಸ್ತಕಸಂತೆ ಕಾರ್ಯಕ್ರಮವೂ ಒಂದು. ಪ್ರತಿ ಶನಿವಾರವೂ ಪರಿಷತ್ತಿನ ಅಂಗಳದಲ್ಲಿ ಕನ್ನಡ ಪುಸ್ತಕ ಪ್ರಕಾಶಕರನ್ನು ಮತ್ತು ಮಾರಾಟಗಾರರನ್ನು ಆಹ್ವಾನಿಸಿ ರಿಯಾಯಿತಿ ದರದಲ್ಲಿ ಓದುಗರಿಗೆ ಪುಸ್ತಕಗಳು ದೊರೆಯುವಂತೆ ವ್ಯವಸ್ಥೆ ಮಾಡಿದರು. ಈ ಪುಸ್ತಕಸಂತೆಯಲ್ಲಿ ಹೊಸ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಜತೆಗೆ ಹಳೆ ಪುಸ್ತಕ ವ್ಯಾಪಾರಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಅಷ್ಟೇ ಅಲ್ಲದೆ ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸುತ್ತಿದ್ದ ಲೇಖಕರೂ ಇಲ್ಲಿ ತಮ್ಮ ಪುಸ್ತಕಗಳನ್ನು ತಂದು ಮಾರುತ್ತಿದ್ದರು. ಅಪರೂಪದ ಮತ್ತು ಅಲಭ್ಯ ಗ್ರಂಥಗಳು ಇಲ್ಲಿ ಸಿಗುತ್ತಿದ್ದವು. ಇದರ ಜತೆಗೆ ಪರಿಷತ್ತಿನ ಮುಂಭಾಗದಲ್ಲಿ ಹಾಡು, ನೃತ್ಯ, ಭಾಷಣ ಇತ್ಯಾದಿ ಕಾರ್ಯಕ್ರಮಗಳೂ ನಡೆದುವು. ಅವರ ಅಧಿಕಾರಾವಧಿ ಮುಗಿಯುತ್ತಿದ್ದಂತೆ ಅದು ಯಾಕೋ ನಿಂತು ಹೋಯಿತು.

ಬಾನುಲಿ, ಮಧ್ಯಬಿಂದು, ಹೂವು ಹಣ್ಣು ತಾರೆ, ಓ ಎನ್ನ ದೇಶ ಬಾಂಧವರೇ, ಗುಂಡಮ್ಮನ ಹಾಡು ಮೊದಲಾದುವು ಅವರ ಕವನ ಸಂಗ್ರಹಗಳು. ಕೊಡೆಗಳು, ಗೋಕರ್ಣದ ಗೌಡಶಾನಿ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ಮೊದಲಾದುವು ಅವರ ಜನಪ್ರಿಯ ನಾಟಕಗಳು. ಅವರ ಕೆಲವು ನಾಟಕಗಳಲ್ಲಿ ನಾನು ಅಭಿನಯಿಸಿದ್ದೂ ಉಂಟು. ಬೇಂದ್ರೆ-ನಾನು ಕಂಡಂತೆ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ, ಚಂಪಾದಕೀಯ, ಮೊದಲಾದುವು ಅವರ ಇತರ ಕೃತಿಗಳು.

ನವ್ಯ ಸಾಹಿತ್ಯ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರನ್ನು ʼ ಒಂದು ಜನಾಂಗದ ಕಣ್ಣು ತೆರೆಸಿದʼ ಕವಿ ಎಂದು ಕೊಂಡಾಡಲಾಗುತ್ತಿತ್ತು. ಆದರೆ ನಾವೆಲ್ಲರೂ ಸಂಕ್ರಮಣ ಪತ್ರಿಕೆಯ ಮೂಲಕ ಅನೇಕ ಲೇಖಕರನ್ನು ಬೆಳೆಸಿದ ಚಂಪಾ ಅವರನ್ನು ʼಅಡಿಗರು ಕಣ್ಣು ಮುಚ್ಚಿಸಿದರು, ಚಂಪಾ ಕಣ್ಣು ತೆರೆಸಿದರುʼ ಎಂದು ಹೇಳಿಕೊಂಡು ಕರ್ನಾಟಕಾದ್ಯಂತ ಓಡಾಡುತ್ತಿದ್ದೆವು. ನಮ್ಮೆಲ್ಲರ ಓದಿನ ಕೇಂದ್ರವಾಗಿದ್ದ ಸಂಕ್ರಮಣವನ್ನು ಚಂದ್ರಶೇಖರ ಪಾಟೀಲರು ಗಿರಡ್ಡಿ ಗೋವಿಂದರಾಜ, ಮತ್ತು ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಜೊತೆ ಸೇರಿ ಆರಂಭಿಸಿದರು. ಈ ಪತ್ರಿಕೆಯು ನವ್ಯದ ಉಚ್ಛ್ರಾಯ ಸ್ಥಿತಿಯಲ್ಲಿ ಪ್ರಾರಂಭವಾಗಿ, ಎಪ್ಪತ್ತರ ದಶಕದ ನಂತರ ದಲಿತ, ಬಂಡಾಯ ಸಾಹಿತ್ಯ ಚಳವಳಿಗೆ ಬೆಂಬಲ ನೀಡಿ ಹಲವಾರು ಯುವ ಬರಹಗಾರರಿಗೆ ವೇದಿಕೆಯನ್ನು ಒದಗಿಸಿತು. ಆ ಹೊತ್ತಿಗೆ ಗಿರಡ್ಡಿ, ಪಟ್ಟಣಶೆಟ್ಟರು ಸಂಕ್ರಮಣದಿಂದ ಕಳಚಿಕೊಂಡಿದ್ದರು.

ಚಂಪಾ ತಮ್ಮ ಹರಿತವಾದ ವ್ಯಂಗ್ಯಕ್ಕೆ ಹೆಸರಾದವರು.

‘ಕನ್ನಡ ಕಾವ್ಯದ ಭೂತ ಭವಿಷ್ಯವ ಬಣ್ಣಿಸಿ ಹೇಳೋ ಗಾಂಪಾ;

ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ’

ಅಂದು ತಮ್ಮನ್ನೇ ತಾವು ವಿನೋದ ಮಾಡಿಕೊಳ್ಳುತ್ತಿದ್ದರು.

ನಿನ್ನೆ ಬಸವಲಿಂಗಯ್ಯ, ಇವತ್ತು ಚಂಪಾ, ಯಾಕೋ ಸಾವು ಹತ್ತಿರದಲ್ಲೆಲ್ಲೋ ಓಡಾಡುವಂತೆ ಭಾಸವಾಗುತ್ತಿದೆ.

ಸರ್‌, ಹೋಗಿ ಬನ್ನಿ, ನಮಸ್ಕಾರ…


ಇದನ್ನೂ ಓದಿರಿ: ಹಿರಿಯ ಸಾಹಿತಿ ಚಂಪಾ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಸ್ರೇಲ್ ಚುನಾವಣೆ: ನೆತನ್ಯಾಹು, ಐಸೆನ್‌ಕೋಟ್ ಬಣಗಳಿಗೆ ಬಹುಮತದ ಕೊರತೆ; ಸರ್ಕಾರ ರಚನೆಯಲ್ಲಿ ಅರಬ್ ಪಕ್ಷಗಳೇ ನಿರ್ಣಾಯಕ!

ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಆಡಳಿತಾರೂಢ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಬಣಗಳೆರಡಕ್ಕೂ ಭಾರಿ ಸವಾಲು ತಂದೊಡ್ಡಿದೆ. 120 ಸದಸ್ಯ ಬಲದ...

ನ.1ರ ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಬೆಂಬಲ ಘೋಷಿಸಿದ ‘ಪೀಪಲ್ ಅಗೆನ್ಸ್ಟ್ ಎಸ್‌ಐಆರ್’

ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸಲಿರುವ ಬೃಹತ್ ರ‍್ಯಾಲಿಗೆ ಪೀಪಲ್ ಅಗೆನೆಸ್ಟ್ ಎಸ್‌ಐಆರ್‌ ಬೆಂಬಲ ಘೋಷಿಸಿದೆ. ಪ್ರಜಾಪ್ರಭುತ್ವವನ್ನು ಉಳಿಸಲು, ಎಸ್‌ಐಆರ್ ರದ್ದುಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ...

‘ನುಸುಳುಕೋರರನ್ನು’ ಹೊರಹಾಕಲು SIR ಎಂದಿತ್ತು ಬಿಜೆಪಿ ಮತ್ತು ಚು. ಆಯೋಗ : ಆರು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಕೇವಲ 1,600 ವಿದೇಶಿಯರು ಮಾತ್ರ

'ನುಸುಳುಕೋರರನ್ನು' ಪತ್ತೆ ಹಚ್ಚುವುದು ಅಥವಾ 'ವಿದೇಶಿ ಅಕ್ರಮ ವಲಸಿಗರನ್ನು' ಪತ್ತೆ ಹಚ್ಚುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿತ್ತು....

ಸಂತ್ರಸ್ತೆ ಮತ್ತು ಆರೋಪಿ ನಡುವಿನ ‘ಒಪ್ಪಂದ’ವನ್ನಷ್ಟೇ ಆಧರಿಸಿ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪಕ್ಷಕಾರರ (ಸಂತ್ರಸ್ತೆ ಮತ್ತು ಆರೋಪಿ) ನಡುವಿನ ರಾಜಿ ಸಂಧಾನದ ಆಧಾರದ ಮೇಲೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇವಲ ಒಪ್ಪಂದದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು...

DELHI SIR : 2026ರ ಮತದಾರರ ಪಟ್ಟಿಯಲ್ಲಿದ್ದರೂ ಕೂಡ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸುವಂತೆ ಸೂಚಿಸಿದ್ದು ಏಕೆ? ಚು. ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ, 2026ರ ಮತದಾರರ ಪಟ್ಟಿಯಲ್ಲಿದ್ದರೂ ಸಹ ಗಣತಿ ನಮೂನೆಗಳನ್ನು (enumeration forms) ಭರ್ತಿ ಮಾಡದ ಕಾರಣಕ್ಕಾಗಿ ಕರಡು ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ವ್ಯಕ್ತಿಗಳು,...

ಮರ್ಯಾದೆಗೇಡು ಹತ್ಯೆ ಶಂಕೆ: ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿಯ ಸಹೋದರ ಬಂಧನ

ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನನ್ನು ಇಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಶಂಕೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪತ್ನಿಯ ಹಿರಿಯ...

Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ ಬಹಿರಂಗ ಸವಾಲು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಹೋರಾಟಗಾರರು ತಿರಸ್ಕರಿಸಿದ್ದು, ಹೋರಾಟ ಮುಂದುವರಿಸುವ ಘೋಷಣೆ ಮಾಡಿದ್ದಾರೆ. ಬುಧವಾರ (ಅ.28) ಬೆಂಗಳೂರಿನ ಶಾಸಕರ ಭವನದಲ್ಲಿ...

ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ; ಪ್ರತಿಭಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ಸಾಧ್ಯತೆ

ಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುವ ನಿರೀಕ್ಷೆಯಿರುವ ಬೆನ್ನಲ್ಲೇ, ವಿದ್ಯಾರ್ಥಿಗಳ ಹೋರಾಟಕ್ಕೆ ಪಕ್ಷವು ಬೆಂಬಲ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಸಂಘವನ್ನು (ಜೆಎಂಐಎಸ್‌ಯು)...

ಎಂಎಲ್‌ಸಿ ಚುನಾವಣೆ ಸೋಲಿನ ಹಿಂದಿರುವ ರಾಜಕೀಯ – ಸಂಘಟನಾತ್ಮಕ ಕಾರಣಗಳ ಕುರಿತು ಪರಾಮರ್ಶಿಸುತ್ತೇವೆ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್

ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಸೋಲಿನ ಹಿಂದಿರುವ ರಾಜಕೀಯ ಹಾಗೂ ಸಂಘಟನಾತ್ಮಕ ಕಾರಣಗಳ ಕುರಿತು ಸಮಗ್ರ ಪರಾಮರ್ಶೆ ನಡೆಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್...

ಸ್ಪೇನ್‌ನಲ್ಲಿ ಅತಿ ವೇಗದ ರೈಲುಗಳ ನಡುವೆ ಡಿಕ್ಕಿ; ಕನಿಷ್ಠ 46 ಮಂದಿ ಸಾವು

ಸ್ಪೇನ್‌ನ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಎರಡು ಅತಿ ವೇಗದ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪೇನ್‌ನ ಎಬಿಸಿ (ಎಬಿಸಿ) ಸುದ್ದಿ ಸಂಸ್ಥೆ ವರದಿ ಮಾಡಿದೆ....