Homeಮುಖಪುಟರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಪ್ರಕರಣ

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಪ್ರಕರಣ

- Advertisement -
- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಿರುದ್ಧ ಹೈದರಾಬಾದ್ ಪೊಲೀಸ್‌ ಠಾಣೆಯಲ್ಲಿ ಕಾಂಗ್ರೆಸ್‌ ದೂರು ದಾಖಲಿಸಿದೆ.

ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ (ಟಿಪಿಸಿಸಿ) ಅಧ್ಯಕ್ಷ ರೇವಂತ್ ರೆಡ್ಡಿ ಅವರು ಹೈದರಾಬಾದ್ ನಗರದ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 504 ಮತ್ತು 505 (2) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫೆಬ್ರವರಿ 11 ರಂದು ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ವಿರುದ್ದ ಅಸಭ್ಯವಾಗಿ ವಾಗ್ದಾಳಿ ನಡೆಸಿದ್ದ ಅಸ್ಸಾಂ ಮುಖ್ಯಮಂತ್ರಿ, “ರಾಹುಲ್ ಗಾಂಧಿ ಅವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಮ್ಮ ಸೇನೆಯಿಂದ ಪುರಾವೆ ಕೇಳುತ್ತಾರೆ. ನೀವು ರಾಜೀವ್ ಗಾಂಧಿ ಅವರ ಮಗ ಅಥವಾ ಅಲ್ಲವೇ ಎಂಬುದಕ್ಕೆ ನಾವು ಎಂದಾದರೂ ನಿಮ್ಮ ಬಳಿ ಪುರಾವೆ ಕೇಳಿದ್ದೇವೆಯೇ? ನಿಮಗೆ ಯಾವ ಹಕ್ಕಿದೆ? ನನ್ನ ಸೇನೆಯಿಂದ ಪುರಾವೆ ಕೇಳಲು?” ಎಂದು ನಿಂದಿಸಿದ್ದರು.

ನಮ್ಮ ರಾಷ್ಟ್ರೀಯ ನಾಯಕರ ವಿರುದ್ದ ಅವಹೇನಕಾರಿ ಹೇಳಿಕೆ ನೀಡಿರುವ ಹಿಮಂತ್ ಬಿಸ್ವಾ ಶರ್ಮಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೇವೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ರೇವಂತ್‌ ರೆಡ್ಡಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೋದೀಜಿ, ಇದೇನಾ ಭಾರತೀಯ ಸಂಸ್ಕೃತಿ?: ಅಸ್ಸಾಂ ಸಿಎಂ ವಜಾಕ್ಕೆ ತೆಲಂಗಾಣ ಸಿಎಂ ಆಗ್ರಹ

“ಅಸ್ಸಾಂ ಮುಖ್ಯಮಂತ್ರಿಯ ಹೇಳಿಕೆಗಳು ಮಹಿಳೆಗೆ ಅವಮಾನ ಮಾಡುತ್ತವೆ. ಇಂತಹ ಹೇಳಿಕೆಗಳನ್ನು ನೀಡಿರುವ ಹಿಮಂತ್‌ ಶರ್ಮಾ ಅವರನ್ನು ಬಂಧಿಸುವಂತೆ ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಏಕೆ ಆದೇಶಿಸಲಿಲ್ಲ” ಎಂದು ರೇವಂತ್ ರೆಡ್ಡಿ ಪ್ರಶ್ನಿಸಿದ್ದಾರೆ.

’ಬಿಸ್ವಾ ಅವರ ಹೇಳಿಕೆಗಳು ಗಾಂಧಿ ಕುಟುಂಬಕ್ಕೆ ಅವಮಾನವಲ್ಲ, ಈ ದೇಶದ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ. ಮಹಿಳೆಯನ್ನು ನಿಂದಿಸುವಂತಹ ಹೇಳಿಕೆ ನೀಡಿದ ಹಿಮಂತ್‌ ಬಿಸ್ವಾ ಅವರನ್ನು ಬಿಜೆಪಿ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಬೇಕಿತ್ತು. ಆದರೆ, ಬಿಜೆಪಿ ಆತನ ಹೇಳಿಕೆಗಳನ್ನು ಬೆಂಬಲಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

’ನಮ್ಮ ದೂರಿನ ಆಧಾರ ಮೇಲೆ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು. ಅಸ್ಸಾಂ ಮುಖ್ಯಮಂತ್ರಿಗೆ ತಕ್ಷಣವೇ ನೋಟಿಸ್ ನೀಡಬೇಕು. ಅಸ್ಸಾಂ ಮುಖ್ಯಮಂತ್ರಿಯನ್ನು ಬಂಧಿಸುವುದು ಪೊಲೀಸರ ಜವಾಬ್ದಾರಿಯಾಗಿದೆ’ ಎಂದು ರೇವಂತ್ ರೆಡ್ಡಿ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ರಾಹುಲ್ ಗಾಂಧಿ V/s ಹಿಮಂತ್ ಬಿಸ್ವಾ: ಉಭಯ ಪಕ್ಷಗಳಿಂದ ನೂರಾರು ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read