Homeನ್ಯಾಯ ಪಥ"ಜಾತಿಯ ಅಸ್ತಿತ್ವದಲ್ಲಿ ನಿಮ್ಮ ಧರ್ಮ ನೈತಿಕವಾಗಿ ವಿಕೃತಗೊಂಡಿದೆ": ಲಿಯೋ ಟಾಲ್‌ಸ್ಟಾಯ್

“ಜಾತಿಯ ಅಸ್ತಿತ್ವದಲ್ಲಿ ನಿಮ್ಮ ಧರ್ಮ ನೈತಿಕವಾಗಿ ವಿಕೃತಗೊಂಡಿದೆ”: ಲಿಯೋ ಟಾಲ್‌ಸ್ಟಾಯ್

- Advertisement -
- Advertisement -

’ಹಿಂದೂ ಪೇಪರ್ ಒಂದರ ಸಂಪಾದಕರಿಗೆ’: ಲಿಯೋ ಟಾಲ್‌ಸ್ಟಾಯ್ ಪತ್ರ

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಕೋರಿ ತಾರಕನಾಥ್ ದಾಸ್ ಅವರು ರಷಿಯಾದ ಖ್ಯಾತ ಸಾಹಿತಿ-ಚಿಂತಕ ಟಾಲ್‌ಸ್ಟಾಯ್ ಅವರಿಗೆ ಪತ್ರ ಬರೆದರು. ಅದಕ್ಕೆ ಪ್ರತಿಕಿಯೆಯಾಗಿ ಟಾಲ್‌ಸ್ಟಾಯ್ ಅವರು 1908ರ ಡಿಸೆಂಬರ್ 14ರಂದು ಒಂದು ಪತ್ರ ಬರೆದರು. ಆ ಪತ್ರವೇ ’ಅ ಲೆಟರ್ ಟು ಅ ಹಿಂದೂ’ ಎಂದು ಪ್ರಸಿದ್ಧವಾಗಿ, ಪುಸ್ತಕರೂಪದಲ್ಲೂ ಪ್ರಕಟವಾಯಿತು. ಅದರಿಂದ ಸ್ಫೂರ್ತಿ ಪಡೆದ ಮಹಾತ್ಮ ಗಾಂಧಿ ಟಾಲ್‌ಸ್ಟಾಯ್ ಚಿಂತನೆಗಳನ್ನು ಗಹನವಾಗಿ ಅಭ್ಯಸಿಸತೊಡಗುತ್ತಾರೆ ಹಾಗೂ ಅಹಿಂಸೆ ಮತ್ತು ಸತ್ಯಾಗ್ರಹದ ಬಗ್ಗೆ ಪ್ರೇರಣೆ ಪಡೆದುಕೊಳ್ಳುತ್ತಾರೆ. ತಾವು ಹೊರತರುತ್ತಿದ್ದ ’ಇಂಡಿಯನ್ ಒಪಿನಿಯನ್’ ಪತ್ರಿಕೆಯಲ್ಲಿ ಟಾಲ್‌ಸ್ಟಾಯ್ ಅವರ ಪತ್ರವನ್ನು ಪ್ರಕಟಿಸುತ್ತಾರೆ. ನಂತರ ಗಾಂಧಿ ಮತ್ತು ಟಾಲ್‌ಸ್ಟಾಯ್ ನಡುವೆಯೂ ಪತ್ರ ವ್ಯವಹಾರ ನಡೆಯುತ್ತದೆ. ಈ ಪತ್ರಗಳು ಅತ್ಯಂತ ಪರಿಚಿತ.

ಆದರೆ ಇದಕ್ಕೆ ಸುಮಾರು 8 ವರ್ಷಗಳ ಮುಂಚೆಯೇ ಒಂದು ಹಿಂದೂ ಪತ್ರಿಕೆಗೆ ಪ್ರತಿಕ್ರಿಯೆಯಾಗಿ ಟಾಲ್‌ಸ್ಟಾಯ್ ಒಂದು ಪತ್ರ ಬರೆದಿರುತ್ತಾರೆ. ಆ ಪತ್ರ ’ಮಾಸ್ಟರ್ ಆಂಡ್ ಮ್ಯಾನ್; ದಿ ಕ್ರುಟ್ಜೆರ್ ಸೊನಾಟ ಮಿಸಲೇನಿಯಸ್’ ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. ಪತ್ರದ ದಿನವನ್ನು ಜುಲೈ 1901 ಎಂದು ನಮೂದಿಸಲಾಗಿದೆ. ’ಅ ಹಂಡ್ರೆಡ್ ಇಯರ್‍ಸ್ ಆಫ್ ದ ಹಿಂದು – ದ ಎಪಿಕ್ ಸ್ಟೋರಿ ಆಫ್ ಇಂಡಿಯನ್ ನ್ಯಾಷನಲಿಸಂ’ ಪುಸ್ತಕದಲ್ಲಿ ಸಿಗುವ ಮಾಹಿತಿಯಂತೆ, ಸೆಪ್ಟಂಬರ್ 1901ರಲ್ಲಿ ಮದ್ರಾಸ್ ಜರ್‍ನಲ್ ’ಆರ್ಯ’ಗೆ ಟಾಲ್‌ಸ್ಟಾಯ್ ಈ ಪತ್ರ ಬರೆದಿರುತ್ತಾರೆ. ಈ ಪತ್ರವನ್ನು ’ದ ಹಿಂದೂ’ ಸಂಪಾದಕೀಯ ಮರುಪ್ರಕಟಿಸಿ ಅದಕ್ಕೆ ಪ್ರತಿಕ್ರಿಯೆಯನ್ನು ಕೂಡ ನೀಡಿರುತ್ತದೆ. 1901 ರಲ್ಲಿ, ಈ ದೇಶದಿಂದ ಅಷ್ಟು ದೂರದಲ್ಲಿದ್ದರೂ ಇಲ್ಲಿನ ಸ್ಥಿತಿಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಟಾಲ್‌ಸ್ಟಾಯ್ ಪತ್ರ ಇವತ್ತಿಗೂ ಚಿಂತನಾರ್ಹವಾಗಿದೆ.

ಡಿಯರ್ ಸರ್,
ನಿಮ್ಮ ಆಸಕ್ತಿದಾಯಕ ಪತ್ರಕ್ಕೆ ಧನ್ಯವಾದಗಳು. ನಿಮ್ಮ ದೇಶದ ಸಾಮಾಜಿಕ ಸಮಸ್ಯೆಗಳಿಗೆ ಯೂರೋಪ್ ನೀಡುವ ಪರಿಹಾರಗಳನ್ನು ನಿಮ್ಮ ದೇಶ ಒಪ್ಪಿಕೊಳ್ಳುವುದಿಲ್ಲ ಎಂಬ ನಿಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ಸಹಮತಿ ವ್ಯಕ್ತಪಡಿಸುತ್ತೇನೆ ಹಾಗೂ ವಾಸ್ತವದಲ್ಲಿ ಅದೊಂದು ಪರಿಹಾರವೂ ಅಲ್ಲ.

ಬಲಪ್ರಯೋಗದ ಆಧಾರದ ಮೇಲೆ ಸ್ಥಾಪಿಸಲಾದ ಒಂದು ಸಮಾಜ ಅಥವಾ ಜನರ ಗುಂಪು ಒಂದು ಪುರಾತನ/ಅನಾಗರಿಕ ರಾಜ್ಯವಷ್ಟೇ ಅಲ್ಲ, ಅದೊಂದು ಅತ್ಯಂತ ಅಪಾಯಕಾರಿ ಪರಿಸ್ಥಿತಿ ಕೂಡ. ಇಂತಹ ಒಂದು ಸಮಾಜವನ್ನು ಒಗ್ಗೂಡಿಸುವ ಸಂಬಂಧವನ್ನು ಯಾವ ಕಾಲದಲ್ಲಾದರೂ ಛಿದ್ರಗೊಳಿಸಬಹುದು ಹಾಗೂ ಭೀಕರ ವಿಪತ್ತುಗಳು ಆ ಸಮಾಜವನ್ನು ಮೀರಿಸಬಹುದು. ಯೂರೋಪಿನ ಎಲ್ಲಾ ರಾಷ್ಟ್ರಗಳೂ ಇದೇ ಪರಿಸ್ಥಿತಿಯಲ್ಲಿವೆ.

ಪ್ರೀತಿಸುವ ಸಾಮರ್ಥ್ಯದ ಕೊಡುಗೆಯನ್ನು ಪಡೆದಿರುವ ವಿವೇಚನೆಯುಳ್ಳವರಿಗೆ ಸಾಮಾಜಿಕ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರವು ಬಲಪ್ರಯೋಗದ ನಿರ್ನಾಮದಲ್ಲಿ ಅಡಗಿರುತ್ತದೆ ಹಾಗೂ ಪರಸ್ಪರ ಗೌರವದ ಆಧಾರದ ಮೇಲೆ ಸ್ಥಾಪಿಸಲಾದ ಒಂದು ಸಮಾಜದ ಸಂಘಟನೆಯಲ್ಲಿ ಹಾಗೂ ಎಲ್ಲರೂ ಸ್ವಇಚ್ಛೆಯಿಂದ ಒಪ್ಪಿಕೊಂಡ ವಿವೇಚನೆಯುಳ್ಳ ಸಿದ್ಧಾಂತಗಳ ಆಧಾರದ ಮೇಲೆ ಇರುತ್ತದೆ. ನಿಜವಾದ ಧರ್ಮದ ಅಭಿವೃದ್ಧಿಯಿಂದ ಮಾತ್ರ ಇಂತಹ ಪರಿಸ್ಥಿತಿಯನ್ನು ತಲುಪಲು ಸಾಧ್ಯ. ಇದರ ಮೂಲಕ ನಾನು ಸೂಚಿಸುತ್ತಿರುವುದೇನೆಂದರೆ, ಎಲ್ಲಾ ಧರ್ಮಗಳ ಮೂಲಭೂತ ತತ್ವಗಳನ್ನು. ಅವುಗಳು: ಮೊದಲನೆಯದು ಮಾನವನ ದಿವ್ಯ ಆತ್ಮದ ಜೀವಾಳದ ಅರಿವು ಹಾಗೂ ಎರಡನೆಯದಾಗಿ ಅದರ ಸಾಕಾರತೆಗೆ ಇರುವ ಗೌರವ.

ನಿಮ್ಮ ಧರ್ಮ ಅತ್ಯಂತ ಪುರಾತನವಾದದ್ದು ಹಾಗೂ ಆಧ್ಯಾತ್ಮದ ಸರ್ವಸ್ವವಾದ ’ಆತ್ಮನ್ಗೆ ಮತ್ತು ಮಾನವನಿಗೆ ಇರುವ ಸಂಬಂಧದ ಮೆಟಾಫಿಸಿಕಲ್ ವ್ಯಾಖ್ಯಾನದಲ್ಲೂ ಅತ್ಯಂತ ಉನ್ನತವಾದದ್ದು. ಆದರೆ ಅದು ತನ್ನ ನೈತಿಕತೆಯಲ್ಲಿ ವಿಕೃತಗೊಂಡಿದೆ; ಆ ವಿಕೃತಗೊಂಡಿರುವ ನೈತಿಕತೆ ಎಂದರೆ ಜಾತಿಯ ಅಸ್ತಿತ್ವದಲ್ಲಿ ಜೀವನವನ್ನು ಲೌಕಿಕವಾಗಿ ಅಳವಡಿಸಿಕೊಂಡಿರುವುದು. ನನಗೆ ಗೊತ್ತಿರುವಂತೆ, ಜೈನರು, ಬೌದ್ಧರು ಹಾಗೂ ಕಬೀರ್ ಪಂಥಿಯಂತಹ ಮತ್ತು ಇತರ ಪಂಥಗಳಿಂದ ಜೀವನವನ್ನು ಲೌಕಿಕಕ್ಕೆ ಅಳವಡಿಸಿಕೊಂಡು ಸ್ಥಾಪಿಸಲಾಗಿತ್ತು, ಅದರಲ್ಲಿ ಜೀವನದ ಪಾವಿತ್ರ್ಯವು ಮೂಲಭೂತ ನಿಯಮವಾಗಿತ್ತು ಹಾಗಾಗಿ ಯಾವುದೇ ಜೀವಿಯನ್ನು, ವಿಶೇಷವಾಗಿ ಮನುಷ್ಯನ ಜೀವ ತೆಗೆಯುವುದು ನಿಷೇಧವಾಗಿತ್ತು.

ನೀವು ಅನುಭವಿಸುವ ಎಲ್ಲಾ ಕೆಡುಕುಗಳು – ಹಸಿವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಖಾನೆಯ ಜೀವನದಿಂದ ನಿಮ್ಮ ದೇಶ ಎದುರಿಸುವ ಅವಮಾನಗಳು, ನಿಮ್ಮ ಜನರು ಸೈನಿಕರಾಗುವುದಕ್ಕೆ ಒಪ್ಪಿಕೊಳ್ಳುವುದನ್ನು ಮುಂದುವರೆಸುವ ತನಕ ಮುಂದುವರೆಯಲಿವೆ. ಪರಾವಲಂಬಿಜೀವಿಗಳು ಕೊಳೆಯಾದ ದೇಹಗಳಲ್ಲಿಯೇ ಆಹಾರ ಪಡೆದು ಬದುಕುತ್ತವೆ. ನಿಮ್ಮ ದೇಶ ತನ್ನ ನೈತಿಕ ಪರಿಶುದ್ಧತೆಯನ್ನು ಕಾಪಾಡಬೇಕು, ಹಾಗೂ ಅದು ಕೊಲೆ ಅಥವಾ ಕೊಲೆಗೆ ತಯ್ಯಾರಿಯಾಗುವುದರಿಂದ ಮುಕ್ತವಾಗುವ ಶುದ್ಧತೆಯ ಪ್ರಮಾಣದ್ದಾಗಿರಬೇಕು. ಆ ಪ್ರಮಾಣದಲ್ಲಿದ್ದಾಗ ನೀವು ಸದ್ಯಕ್ಕೆ ಸಮಸ್ಯೆಯಲ್ಲಿರುವ ಆಳ್ವಿಕೆಯಿಂದಲೂ ಮುಕ್ತವಾಗುವುದಕ್ಕೆ ಸಾಧ್ಯ. ನಿಮಗಾಗಿ ಇಂಗ್ಲಿಷರು ಏನೆಲ್ಲ ಮಾಡಿದ್ದಾರೆ, ಅವರು ಮಾಡಿದ ಕಲ್ಯಾಣ ಕೆಲಸಕ್ಕಾಗಿ ಧನ್ಯರಾಗಿರಬೇಕು ಹಾಗೂ ನಿಮ್ಮ ದೇಶದ ನಾಗರಿಕತೆಗೆಯೆಡೆಗೆ ಕೊಂಡೊಯ್ಯುವ ಎಲ್ಲ ಪ್ರಯತ್ನಗಳಿಗೆ ಕೈಜೋಡಿಸಬೇಕು ಎಂಬ ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ. ಆದರೆ ಇಂಗ್ಲಿಷ್ ಜನರ ’ಬಲಪ್ರಯೋಗದ ಸರಕಾರ’ಕ್ಕೆ ನೀವು ಸಹಾಯ ಮಾಡಕೂಡದು, ಹಾಗೂ ಯಾವುದೇ ಸಂದರ್ಭದಲ್ಲೂ ಹಿಂಸೆಯನ್ನು ಆಧಾರವಾಗಿಟ್ಟುಕೊಂಡು ಸ್ಥಾಪನೆಯಾದ ಸಂಘಟನೆಯಲ್ಲಿ ಭಾಗವಹಿಸಬಾರದು.

ಹಾಗಾಗಿ, ನನಗೆ ಅನಿಸುವುದೇನೆಂದರೆ, ಎಲ್ಲಾ ಶಿಕ್ಷಿತ ಹಿಂದೂಗಳ ಕರ್ತವ್ಯ ಇರುವುದು; ಜನಸ್ತೋಮಕ್ಕೆ ನಿಜವಾದ ಧರ್ಮವನ್ನು ಕಾಣದಂತೆ ಮುಚ್ಚಿಟ್ಟರುವ ಎಲ್ಲಾ ಪುರಾತನ ಮೂಢನಂಬಿಕೆಗಳನ್ನು ನಿಷೇಧಿಸುವುದು. ನಿಜವಾದ ಧರ್ಮ ಅಂದರೆ ಮಾನವನ ಆತ್ಮದ ದಿವ್ಯ ಜೀವಾಳದ ಅರಿವು ಹಾಗೂ ಯಾವುದನ್ನೂ ಹೊರತುಪಡಿಸದೇ ಪ್ರತಿಯೊಂದು ಜೀವಿಯ ಜೀವಕ್ಕೆ ಗೌರವ ಹಾಗೂ ಈ ತತ್ವಗಳನ್ನು ಎಷ್ಟು ಸಾಧ್ಯವೋ ಅಷ್ಟು ಹರಡುವುದು.

ನಾನು ಕಂಡಂತೆ, ನಿಮ್ಮ ಪ್ರಾಚೀನ ಮತ್ತು ಗಹನವಾದ ಧರ್ಮದಲ್ಲಿ ಈ ತತ್ವಗಳು ಹಾಗೆಯೇ ಕಾಣಿಸಿಕೊಳ್ಳದೇ ಇದ್ದರೂ, ವ್ಯಕ್ತಗೊಳ್ಳುತ್ತವೆ. ಹಾಗೂ ಅವುಗಳನ್ನು ಇತರರಿಗೆ ಕಾಣದಂತೆ ಮುಚ್ಚಿಟ್ಟರುವ ಹೊದಿಕೆಯಿಂದ ಮುಕ್ತಿ ನೀಡುವುದು ಮತ್ತು ಅಭಿವೃದ್ಧಿಪಡಿಸುವ ಕೆಲಸವಾಗಬೇಕಾಗಿದೆ. ಈ ರೀತಿಯ ಕಾರ್ಯವಿಧಾನ ಮಾತ್ರ ತಮ್ಮ ಮೇಲೆ ವಿಧಿಸಲಾದ ಕೆಡಕುಗಳಿಂದ ಬಿಡುಗಡೆಗೊಳಿಸಬಹುದು ಹಾಗೂ ತಾವು ಪ್ರಯತ್ನಪಡುತ್ತಿರುವ ಗುರಿಯನ್ನು ತಲುಪಲು ಅತ್ಯಂತ ಪರಿಣಾಮಕಾರಿಯಾಗಬಲ್ಲದು.

ನನ್ನ ಅಭಿಪ್ರಾಯವನ್ನು ತುಂಬಾ ಮುಕ್ತವಾಗಿ ಹಂಚಿಕೊಂಡಿದ್ದೇನೆ ಕ್ಷಮೆ ಇರಲಿ ಹಾಗೂ ನಂಬಿಕೆಯಿರಲಿ.
ನಿಮ್ಮ,.
(ಜುಲೈ 1901)

(ಅನುವಾದ): ರಾಜಶೇಖರ್ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...