Homeಚಳವಳಿರೈತ ಹೋರಾಟದ ವಿಜಯಕ್ಕೆ ಒಂದು ವರ್ಷ: ಮೆಲುಕು ನೋಟ

ರೈತ ಹೋರಾಟದ ವಿಜಯಕ್ಕೆ ಒಂದು ವರ್ಷ: ಮೆಲುಕು ನೋಟ

ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನೂರಾರು ಸಂಘಟನೆಗಳು ಒಗ್ಗೂಡಿ ವರ್ಷವಿಡೀ ಹೋರಾಡಿ ಗೆಲುವು ಸಾಧಿಸಿದ ಈ ರೈತ ಹೋರಾಟ ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ.

- Advertisement -
- Advertisement -

ವಿವಾದಿತ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಮತ್ತು ಎಂಎಸ್‌ಪಿ ಖಾತ್ರಿಗಾಗಿ ಕಾನೂನು ರಚಿಸಬೇಕೆಂಬ ಹಕ್ಕೊತ್ತಾಯಗಳ ಈಡೇರಿಕೆಗಾಗಿ ನಡೆದ ಐತಿಹಾಸಿಕ ರೈತ ಹೋರಾಟದ ವಿಜಯಕ್ಕೆ ಒಂದು ವರ್ಷ ತುಂಬಿದೆ. ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನೂರಾರು ಸಂಘಟನೆಗಳು ಒಗ್ಗೂಡಿ ವರ್ಷವಿಡೀ ಹೋರಾಡಿ ಗೆಲುವು ಸಾಧಿಸಿದ ಈ ರೈತ ಚಳವಳಿ ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ. ಇಡೀ ರೈತ ಹೋರಾಟದ ಮೆಲುಕು ನೋಟಿ ಇಲ್ಲಿದೆ.

2020ರ ಜೂನ್ 5

ಕೊರೊನಾ ಸಾಂಕ್ರಾಮಿಕ ಮತ್ತು ಆ ಕಾರಣದಿಂದ ಹೇರಲಾಗಿದ್ದ ಸಿದ್ಧತೆಯಿಲ್ಲದ ಲಾಕ್‌ಡೌನ್‌ನಿಂದ ಇಡೀ ದೇಶ ತತ್ತರಿಸಿಹೋಗಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಸುಗ್ರೀವಾಜ್ಞೆಗಳ ಮೂಲಕ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ), ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆ 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ ಎಂಬ ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಘೋಷಿಸಿತು.

ಕೇಂದ್ರಕ್ಕೆ ಅನುಗುಣವಾಗಿ ರಾಜ್ಯಗಳ ತಿದ್ದುಪಡಿ

ಕೃಷಿ ಕ್ಷೇತ್ರವು ರಾಜ್ಯಪಟ್ಟಿಯಲ್ಲಿ ಬರುವ ವಿಷಯವಾದ್ದರಿಂದ ಕೇಂದ್ರದ ಸೂಚನೆಯ ಮೇರೆಗೆ ಕೇಂದ್ರದ ಮಸೂದೆಗಳಿಗೆ ಅನುಗುಣವಾಗಿ ಕರ್ನಾಟಕ ಸೇರಿದಂತೆ ಕೆಲವು ಬಿಜೆಪಿ ಆಡಳಿತವಿರುವ ರಾಜ್ಯಗಳು ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಮಸೂದೆಗಳನ್ನು ಘೋಷಿಸಿದವು.

ಲೋಕಸಭೆ ರಾಜ್ಯಸಭೆಯಲ್ಲಿ ಅಂಗೀಕಾರ (2020ರ ಸೆ.13ರಿಂದ 20ರೊಳಗೆ)

ಈ ಮಸೂದೆಗಳು ಕಾರ್ಪೊರೆಟ್‌ಗಳ ಹಿತಾಸಕ್ತಿಗೆ ಪೂರಕವಾಗಿದ್ದು ರೈತರ ವಿರುದ್ಧವಿವೆ ಎಂಬ ದೊಡ್ಡ ಅಸಮಾಧಾನವನ್ನು ರೈತರು, ವಿರೋಧ ಪಕ್ಷಗಳು ವ್ಯಕ್ತಪಡಿಸಿದವು. ಇದನ್ನು ಲೆಕ್ಕಿಸದ ಮೋದಿ ಸರ್ಕಾರ ಸಂಸತ್ತಿನಲ್ಲಾಗಲೀ, ಹೊರಗೆ ಸಾರ್ವಜನಿಕವಾಗಲೀ ಯಾವುದೇ ಚರ್ಚೆ ನಡೆಸದೆ ಸೆಪ್ಟಂಬರ್ 13 ರಿಂದ 20ರ ನಡುವೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ಮಂಡಿಸಿ ಬಹುಮತದೊಂದಿಗೆ ಅಂಗೀಕಾರ ಪಡೆಯಿತು. ಸೆಪ್ಟಂಬರ್ 27 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರು ಸಹಿ ಹಾಕಿದರು.

ಮಸೂದೆಗೆ ವಿರೋಧ: ಎನ್‌ಡಿಎ ಮೈತ್ರಿಯಲ್ಲಿ ಬಿರುಕು

ಶಿರೋಮಣಿ ಅಕಾಲಿ ದಳ ಪಕ್ಷವು ಎನ್‌ಡಿಎ ಸರ್ಕಾರದ ಭಾಗವಾಗಿತ್ತು. ಆರಂಭದಲ್ಲಿ ಕೃಷಿ ಮಸೂದೆಯ ಪರವಾಗಿ ಈ ಪಕ್ಷ ವಾದಿಸುತ್ತಿತ್ತು. ಆದರೆ ಪಂಜಾಬ್‌ನಲ್ಲಿ ಈ ಮಸೂದೆಗಳು ವಿರೋಧಿಸಿ ಬೃಹತ್ ಪ್ರತಿಭಟನೆ ಭುಗಿಲೆದ್ದಿತು. ತದನಂತರ ತನ್ನ ನಿಲುವು ಬದಲಿಸಿದ ಶಿರೋಮಣಿ ಅಕಾಲಿ ದಳ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಅದಕ್ಕೂ ಮೊದಲು ಪಕ್ಷದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸಚಿವೆ
PC: Amal KS

ರಾಜ್ಯದಲ್ಲಿಯೂ ಕಾಯ್ದೆಗಳಿಗೆ ತಿದ್ದುಪಡಿ

ಮೋದಿ ಸರ್ಕಾರದ ಬೆನ್ನಲ್ಲೆ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ತೀವ್ರ ವಿರೋಧದ ನಡುವೆಯೇ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆಗಳಿಗೆ ತಿದ್ದುಪಡಿ ತಂದಿತು.

ಸೆಪ್ಟಂಬರ್ 25: ದೇಶವ್ಯಾಪಿ ಬಂದ್‌ಗೆ ರೈತರ ಕರೆ

ಕೇಂದ್ರ ಸರ್ಕಾರ ಯಾವುದೇ ಪ್ರತಿರೋಧವನ್ನು ಲೆಕ್ಕಿಸದೆ ಕೃಷಿ ಕಾಯ್ದೆಗಳನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕರಿಸಿದ್ದನ್ನು ವಿರೋಧಿಸಿ 2020ರ ಸೆಪ್ಟಂಬರ್ 25ರಂದು ದೇಶವ್ಯಾಪಿ ಬಂದ್‌ಗೆ ರೈತರು ಕರೆ ನೀಡಿದ್ದರು. ಪಂಜಾಬ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಡೊಡ್ಡ-ಸಣ್ಣ ಸೇರಿದಂತೆ 31 ರೈತ ಸಂಘಟನೆಗಳು ಒಟ್ಟುಗೂಡಿದ್ದವು. ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಸೆಪ್ಟಂಬರ್ 25ರಂದು ಬೃಹತ್ ರಾಜ್ಯವ್ಯಾಪಿ ಬಂದ್ ನಡೆಸಿದವು.

ಕರ್ನಾಟಕದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಅಲ್ಲದೇ ಸೆಪ್ಟಂಬರ್ 28ರಂದು ಕರ್ನಾಟಕ ಬಂದ್ ಆಚರಿಸಲಾಯಿತು. ಎಲ್ಲಾ ರೈತ, ಪ್ರಗತಿಪರ ಸಂಘಟನೆಗಳು ಸೇರಿ ’ಐಕ್ಯ ಹೋರಾಟ ಕರ್ನಾಟಕ’ ಎಂಬ ಒಕ್ಕೂಟ ರಚಿಸಿದವು. ಬಂದ್‌ಗೆ ವಿರೋಧ ಪಕ್ಷಗಳು ಸಹ ಬೆಂಬಲ ಸೂಚಿಸಿದ್ದವು.

ಪಂಜಾಬ್‌ನಲ್ಲಿ ರೈಲ್ ರೋಕೊ: ಸ್ತಬ್ಧಗೊಂಡ ರೈಲು ಸಂಚಾರ

ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ರೈಲು ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈಲು ಹಳಿಗಳ ಮೇಲೆ ಕುಳಿತು ನಡೆಸಿದ ರೈಲ್ ರೋಕೊ ಪ್ರತಿಭಟನೆ ಎರಡು ತಿಂಗಳ ಕಾಲ ನಿರಂತರವಾಗಿ ನಡೆಯಿತು. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಮಂಡಿಸಿದ ಪಂಜಾಬ್ ಕಾಂಗ್ರೆಸ್ ನೇತೃತ್ವದ ಸರ್ಕಾರ ಮೂರು ಪ್ರತ್ಯೇಕ ರೈತಪರ ಕಾನೂನುಗಳನ್ನು ಅಂಗೀಕರಿಸಿತು.

PC: ANI

ದೆಹಲಿ ಚಲೋಗೆ ಕರೆ

2017ರಲ್ಲಿ ದೇಶಾದ್ಯಂತ ಸುಮಾರು ನೂರು ರೈತರ ಸಂಘಟನೆಗಳನ್ನು ಸೇರಿಸಿ ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋಆರ್ಡಿನೇಷನ್ ಕಮಿಟಿ ಸ್ಥಾಪಿಸಲಾಗಿತ್ತು. ಆಗಲೇ ದೆಹಲಿಯಲ್ಲಿ ರೈತರ ಬೃಹತ್ ಹೋರಾಟ ನಡೆಸಲಾಗಿತ್ತು. ಯೋಗೇಂದ್ರ ಯಾದವ್ ಅದರ ಸಮನ್ವಯ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಒಟ್ಟಾಗಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಈ ಎಐಕೆಎಸ್‌ಸಿಸಿ ಒಕ್ಕೂಟವು 2020ರ ನವೆಂಬರ್ 26-27ರಂದು ದೆಹಲಿ ಚಲೋ ಹೋರಾಟಕ್ಕೆ ಕರೆ ನೀಡಿತ್ತು. ತದನಂತರ ಈ ಹೋರಾಟವನ್ನು ಪಂಜಾಬ್ ರೈತರ ಒಕ್ಕೂಟ ಬೆಂಬಲಿಸಿತು. ಹಾಗಾಗಿ ಸಂಯುಕ್ತ ಕಿಸಾನ್ ಮೋರ್ಚಾ ಎಂಬ ದೊಡ್ಡ ಒಕ್ಕೂಟ ನಿರ್ಮಾಣವಾಯಿತು.

2020 ನವೆಂಬರ್ 13: ರೈತರು-ಕೇಂದ್ರ ಸರ್ಕಾರದ ಮೊದಲ ಮಾತುಕತೆ

ರೈತರು ಪ್ರತಿಭಟನೆ ತೀವ್ರಗೊಳಿಸಿ ದೆಹಲಿ ಚಲೋಗೆ ಕರೆ ನೀಡುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಪಂಜಾಬ್ ರೈತರನ್ನು ಮಾತುಕತೆಗೆ ಆಹ್ವಾನಿಸಿತು. ನವೆಂಬರ್ 13ರಂದು ಮೊದಲ ಸಭೆ ನಡೆಯಿತು. ಸರ್ಕಾರದೊಂದಿಗೆ ಪಂಜಾಬ್‌ನ ರೈತ ಮುಖಂಡರ ಸತತ ಏಳು ಗಂಟೆಗಳ ಸಭೆ ನಡೆಸಿದರು. ರೈತ ಮುಖಂಡರು ತಮ್ಮ ಬೇಡಿಕೆಗಳನ್ನು ಸ್ಪಷ್ಟವಾಗಿ ಮಂಡಿಸಿದರೂ ಸಹ ಸರ್ಕಾರದಿಂದ ರೈತರಿಗೆ ಯಾವುದೇ ಖಚಿತ ಭರವಸೆ ದೊರೆತಿರಲಿಲ್ಲ. ಸಭೆ ವಿಫಲವಾಯಿತು ಮತ್ತು ರೈತರು ದೆಹಲಿ ಚಲೋ ನಡೆಸಿಯೇ ತೀರುವುದಾಗಿ ಘೋಷಿಸಿದರು.

2020 ನವೆಂಬರ್ 26-27: ದೆಹಲಿಯೆಡೆಗೆ ರೈತರ ಪ್ರವಾಹ

ರೈತರ ವಿರೋಧದ ನಡುವೆಯೂ ಕೃಷಿ ಕಾಯ್ದೆಗಳನ್ನು ಪಾಸು ಮಾಡಿದ ಮೋದಿ ಸರ್ಕಾರದ ಮೇಲೆ ರೈತರ ಸಿಟ್ಟಿನ ಕಟ್ಟೆಯೊಡೆಯಿತು. ನವೆಂಬರ್ 26ರಂದು ರೈತರ ದಂಡೇ ದೆಹಲಿ ಕಡೆಗೆ ಹೊರಟಿತು. ಅದರಲ್ಲಿ ಹೆಚ್ಚಿನ ಸಂಖ್ಯೆ ಪಂಜಾಬ್-ಹರಿಯಾಣದ ರೈತರಾಗಿದ್ದರು. ಅವರನ್ನು ತಡೆಯಲು ಹರಿಯಾಣ
ಪೊಲೀಸರು ಲಾಠಿ ಬೀಸಿದರು, ಜಲಫಿರಂಗಿ ಸಿಡಿಸಿದರು, ದೊಡ್ಡ ದೊಡ್ಡ ಕಂಟೇನರ್‌ಗಳನ್ನು ಅಡ್ಡ ನಿಲ್ಲಿಸಿದರು. ಕಂದಕಗಳನ್ನು ನಿರ್ಮಿಸಿದರು. ರೈತರ ಒಗ್ಗಟ್ಟು, ಶಾಂತಿ ಮತ್ತು ತಾಳ್ಮೆಯಿಂದ ಅವೆಲ್ಲವನ್ನು ದಾಟಿ ಬಂದರು.

ರೈತರ ಬೃಹತ್ ಶಕ್ತಿ ಮತ್ತು ಒಗ್ಗಟ್ಟಿನ ಎದುರು ಸರ್ಕಾರ ತಲೆಬಾಗಿತು. ಬುರಾರಿ ಮೈದಾನದಲ್ಲಿ ಪ್ರತಿಭಟಿಸಲು ಅನುಮತಿ ನೀಡಿತು. ಆದರೆ ರೈತರು ಅದಕ್ಕೆ ಒಪ್ಪಲಿಲ್ಲ, ಬದಲಿಗೆ ದೆಹಲಿಯ ಗಡಿಗಳಲ್ಲಿ ನೆಲೆಯೂರಿದರು. ಪಂಜಾಬ್ ಕಡೆಯಿಂದ ಬಂದವರು ಸಿಂಘು ಗಡಿಯಲ್ಲಿಯೂ, ಹರಿಯಾಣದ ಕಡೆಯಿಂದ ಬಂದವರು ಟಿಕ್ರಿ ಗಡಿಯಲ್ಲಿಯೂ, ರಾಜಸ್ಥಾನದ ಕಡೆಯಿಂದ ಬಂದ ರೈತರು ಶಹಜಹಾನ್ ಗಡಿಯಲ್ಲಿಯೂ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ಕಡೆಯಿಂದ ಬಂದ ರೈತರು ಗಾಜಿಪುರ್ ಗಡಿಯಲ್ಲಿಯೂ ಬೀಡುಬಿಟ್ಟರು. ರೈತರೊಂದಿಗೆ ಡಿಸೆಂಬರ್ 3ರಂದು ಎರಡನೇ ಸುತ್ತಿನ ಸಭೆ ನಡೆಸುವುದಾಗಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಘೋಷಿಸಿದರು.

ವಿಫಲವಾದ 11 ಸುತ್ತಿನ ಮಾತುಕತೆಗಳು

ರೈತರು ಹೋರಾಟ ಕೈಬಿಡುವಂತೆ ಮನವೊಲಿಸಲು ಕೇಂದ್ರ ಸರ್ಕಾರದ 32 ಪ್ರತಿನಿಧಿಗಳ ನಿಯೋಗದೊಂದಿಗೆ ಒಟ್ಟು 11 ಸುತ್ತಿನ ಮಾತುಕತೆಗಳ ನಡೆಯಿತು. ನವೆಂಬರ್ 13ರಿಂದ ಜನವರಿ 24ರವರೆಗೆ ನಡೆದ ಈ ಎಲ್ಲಾ ಸಭೆಗಳಲ್ಲಿ ಹಲವು ಸುತ್ತಿನ ಚರ್ಚೆಗಳಾದರೂ ಸರ್ಕಾರ ಕಾಯ್ದೆ ವಾಪಸ್ ಪಡೆಯಲು ಮತ್ತು ಎಂಎಸ್‌ಪಿ ಜಾರಿಗೊಳಿಸಲು ನಿರಾಕರಿಸಿತು. ರೈತರು ತಮ್ಮ ಪಟ್ಟು ಬಿಡಲಿಲ್ಲ. ಕೃಷಿ ಕಾಯ್ದೆಗಳ ಅನುಷ್ಠಾನವನ್ನು ಒಂದೂವರೆ ವರ್ಷ ತಡೆಹಿಡಿಯಲಾಗುವುದು ಎಂದು ಕೇಂದ್ರ ಸರ್ಕಾರ ಜನವರಿ 20ರಂದು ನಡೆದ 10ನೇ ಸುತ್ತಿನ ಮಾತುಕತೆಯಲ್ಲಿ ಹೇಳಿತು. ಆದರೆ ರೈತರು ಒಪ್ಪಲಿಲ್ಲ. ಹಾಗಾಗಿ ಎಲ್ಲಾ ಮಾತುಕತೆಗಳು ವಿಫಲವಾದವು. ಈ ಮಾತುಕತೆಗಳ ಸಂದರ್ಭದಲ್ಲಿ ರೈತರು ತಮ್ಮ ಆಹಾರ ತಾವೇ ತಂದು ಊಟ ಮಾಡುವ ಮೂಲಕ ಸ್ವಾಭಿಮಾನ ಮೆರೆದರು.

ಸುಪ್ರೀಂ ಮಧ್ಯಪ್ರವೇಶ: ಸಮಿತಿ ರಚನೆ

ಕೃಷಿ ಕಾಯ್ದೆಗಳ ರದ್ದತಿಗಾಗಿ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದ ಹಲವು ಅರ್ಜಿಗಳನ್ನು ಒಟ್ಟುಗೂಡಿಸಿ ಸುಪ್ರೀಂ ಒಮ್ಮೆಗೆ ವಿಚಾರಣೆ ಕೈಗೆತ್ತಿಕೊಂಡಿತ್ತು. ಅದು ಕೃಷಿ ಕಾಯ್ದೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿ ಒಂದನ್ನು ರಚಿಸಿತ್ತು. ಸಮಿತಿಯಲ್ಲಿ ಭೂಪಿಂದರ್ ಸಿಂಗ್ ಮಾನ್, ಡಾ. ಪ್ರಮೋದ್ ಕುಮಾರ್ ಜೋಷಿ, ಅಶೋಕ್ ಗುಲಾಟಿ ಮತ್ತು ಅನಿಲ್ ಘನ್ವತ್ ಇದ್ದರು. ಇವರೆಲ್ಲರೂ ಈಗಾಗಲೇ ಒಂದಲ್ಲ ಒಂದು ರೀತಿಯಲ್ಲಿ ಕಾಯ್ದೆಯ ಪರವಾಗಿರುವವರು ಎಂದು ಆರೋಪಿಸಿ ಸಮಿತಿ ಮುಂದೆ ಹೋಗದಿರಲು ಸಂಯುಕ್ತಾ ಕಿಸಾನ್ ಮೋರ್ಚಾ ನಿರ್ಣಯಿಸಿತ್ತು.

ಜನವರಿ 26-2021: ಗಣರಾಜ್ಯೋತ್ಸವ ಟ್ರ್ಯಾಕ್ಟರ್ ರ್‍ಯಾಲಿ

ರೈತರು ತಮ್ಮ ಹೋರಾಟ ತೀವ್ರಗೊಳಿಸಲು 2021 ಜನವರಿ 26ರ ಗಣರಾಜ್ಯೋತ್ಸವದಂದು ಒಂದು ಲಕ್ಷದಷ್ಟು ಟ್ಯ್ರಾಕ್ಟರ್‌ಗಳಲ್ಲಿ ದೆಹಲಿಗೆ ಮುತ್ತಿಗೆ ಹಾಕಿದರು. ಶೇ.90ರಷ್ಟು ಹೋರಾಟ ಶಿಸ್ತುಬದ್ಧವಾಗಿ, ಗಮನ ಸೆಳೆಯುವಂತೆ ನಡೆಯಿತು. ಆದರೆ ದೀಪ್ ಸಿಧು ಎಂಬ ಚಿತ್ರನಟನ ನೇತೃತ್ವದಲ್ಲಿ ರೈತರ ಒಂದು ಗುಂಪು ಕೆಂಪುಕೋಟೆಗೆ ನುಗ್ಗಿತು. ಅಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಿತು. ಪೊಲೀಸ್ ದೌರ್ಜನ್ಯದಿಂದ ಟ್ಯ್ರಾಕ್ಟರ್ ಮಗುಚಿ ಒಬ್ಬ ರೈತ ಅಸುನೀಗಬೇಕಾಯಿತು.

ಈ ಗದ್ದಲವನ್ನೇ ನೆಪವಾಗಿಟ್ಟುಕೊಂಡು ಮೋದಿ ಸರ್ಕಾರ ಮತ್ತು ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ರೈತರನ್ನು ಗಡಿಗಳಿಂದ ಎತ್ತಂಗಡಿ ಮಾಡಲು ಮುಂದಾದರು. ಪೊಲೀಸ್ ಬಲ ಬಳಸಿ ದೌರ್ಜನ್ಯವೆಸಗಿದರು. ಆದರೆ ರೈತರು ದಿಟ್ಟ ಪ್ರತಿರೋಧ ತೋರಿದರು. ಇನ್ನೂ ಸಾವಿರಾರು ಜನ ಗಡಿಗಳಿಗೆ ಬಂದು ಸೇರಿದರು. ಬಿಕೆಯು ರೈತ ಮುಖಂಡ ರಾಕೇಶ್ ಟಿಕಾಯತ್ ಕಣ್ಣೀರು ಹಾಕಿ ರೈತರು ಗಡಿಗಳಿಗೆ ಬರುವಂತೆ ಮನವಿ ಮಾಡಿದರು. ಅಲ್ಲಿಂದ ರೈತ ಹೋರಾಟ ಮತ್ತೊಂದು ಹಂತಕ್ಕೆ ಜಿಗಿಯಿತು.

ಟೂಲ್ ಕಿಟ್ ಆರೋಪ: ಸರ್ಕಾರ – ಸೆಲೆಬ್ರಿಟಿಗಳಿಗೆ ಮುಖಭಂಗ

ರೈತ ಹೋರಾಟಕ್ಕೆ ಪಂಜಾಬ್ ಗಾಯಕ ದಿಲ್ಜಿತ್ ದೋಸಾಂಜ್, ಸ್ವರಭಾಸ್ಕರ್, ತಾಪ್ಸಿ ಪನ್ನು ಸೇರಿದಂತೆ ಬಹುತೇಕರು ಬೆಂಬಲ ನೀಡಿದ್ದರು. ಅಂತಾರಾಷ್ಟ್ರೀಯ ಪಾಪ್ ತಾರೆ ರಿಯಾನ್ನಾ, ಪರಿಸರ ಕಾರ್ಯಕರ್ತೆ ಗ್ರೇಟಾ ಸೇರಿ ಹಲವರು ಬೆಂಬಲಿಸಿದರು. ಮೋದಿ ಸರ್ಕಾರ ಇದರಿಂದ ಜಾಗತಿಕ ಮಟ್ಟದಲ್ಲಿ ಮುಜುಗರ ಅನುಭವಿಸಿತು. ಹಾಗಾಗಿ ಗಣರಾಜ್ಯೋತ್ಸವದಂದು ನಡೆದ ಗಲಭೆ ಯೋಜಿತವಾದುದು, ಅದಕ್ಕಾಗಿ ಟೂಲ್ ಕಿಟ್ ರಚಿಸಿದ್ದರು ಎಂಬ ಕಪೋಲಕಲ್ಪಿತ ವಾದವನ್ನು ಹರಿಯಿಬಿಡಲಾಯಿತು. ಒಂದೇ ತೆರನಾಗಿ ಹತ್ತಾರು ಕ್ರಿಕೆಟಿಗರು ಮತ್ತು ಸಿನಿತಾರೆಯರು ಟ್ವೀಟ್ ಮಾಡಿ ಸರ್ಕಾರವನ್ನು ಬೆಂಬಲಿಸಿ ರೈತ ಹೋರಾಟವನ್ನು ಹೀಯಾಳಿಸಿದರು. ಟೂಲ್ ಕಿಟ್ ಪ್ರಕರಣದಲ್ಲಿ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿಯವರನ್ನು ದೆಹಲಿ ಪೊಲೀಸರು ಬಂಧಿಸಿದರು. ಆದರೆ ದೆಹಲಿ ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿತು. ಟೂಲ್ ಕಿಟ್ ಪ್ರಕರಣ ಟುಸ್ ಆಯಿತು. ರೈತ ಹೋರಾಟಕ್ಕೆ ಬೆಂಬಲ ಹೆಚ್ಚಾಯಿತು.

2021: ರೈತ ಮಹಾಪಂಚಾಯತ್‌ಗಳ ಅಬ್ಬರ

ರೈತರ ಮೇಲೆ ಸರ್ಕಾರದ ದಮನ ಹೆಚ್ಚಿದಂತೆಲ್ಲ ಪ್ರತಿರೋಧ ಇಮ್ಮಡಿಯಾಯಿತು. ಕುರುಕ್ಷೇತ್ರ, ಜಿಂದ್, ಮಥುರಾ, ಬಾಗ್‌ಪತ್ ಸೇರಿದಂತೆ ಹಲವೆಡೆ ಲಕ್ಷಾಂತರ ಜನರು ಸೇರಿ ಕಿಸಾನ್ ಮಹಾಪಂಚಾಯತ್ ನಡೆಸಿದರು. ರೈತರ ಮೇಲೆ ದೌರ್ಜನ್ಯವೆಸಗಿದ ಬಿಜೆಪಿಯನ್ನು ಸೋಲಿಸಲು ಕರೆ ನೀಡಿದರು. ರೈತ ಹೋರಾಟ ಗಟ್ಟಿಗೊಳಿಸಲು ನಿರ್ಧರಿಸಲಾಯಿತು.

ರಾಜಸ್ತಾನದಲ್ಲಿ ಭಾರಿ ಬೆಂಬಲ ಪಡೆಯುತ್ತಿರುವ ಮಹಾಪಂಚಾಯತ್‌ಗಳು: ಟಿಕಾಯತ್ ಹಿಂದೆ ಬೃಹತ್ ಜನಸ್ತೋಮ

ಪ್ರಾಣತ್ಯಾಗ ಮಾಡಿ ಹುತಾತ್ಮರಾದ ರೈತರು

ಒಂದು ಕಡೆ ರೈತ ಹೋರಾಟ ದಿನದಿಂದ ದಿನಕ್ಕೆ ಬಿರುಸು ಪಡೆದುಕೊಳ್ಳುತ್ತಿದ್ದರೆ ಇನ್ನೊಂದೆಡೆ ರೈತರು ಗಡಿಗಳಲ್ಲಿ ಚಳಿ ಮಳೆಗೆ, ಪೊಲೀಸ್ ದೌರ್ಜನ್ಯಕ್ಕೆ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರು. ಕೆಲವರು ಸರ್ಕಾರದ ಗಮನ ಸೆಳೆಯಲು ಆತ್ಮಹತ್ಯೆ ಮಾಡಿಕೊಂಡರೆ ಇನ್ನು ಕೆಲವರು ಚಳಿಗೆ ಪ್ರಾಣಬಿಟ್ಟರು. ಆದರೆ ಸರ್ಕಾರದ ದಪ್ಪ ಚರ್ಮಕ್ಕೆ ಇದು ತಟ್ಟಲೇ ಇಲ್ಲ.

ರೈತ ಚಳವಳಿಗೆ ಹೊಸ ಭರವಸೆ ನೀಡಿದ ಕರ್ನಾಟಕದ ರೈತ ಮಹಾಪಂಚಾಯತ್‌ಗಳು

2021 ಮಾರ್ಚ್ 20,21,22ರಂದು ಶಿವಮೊಗ್ಗ, ಹಾವೇರಿ ಮತ್ತು ಬೆಳಗಾವಿಯಲ್ಲಿ ನಡೆದ ಕರ್ನಾಟಕದ ಮೊದಲ ಮಹಾಪಂಚಾಯತ್‌ಗಳು, ಬೆಂಗಳೂರಿನಲ್ಲಿ ನಡೆದ ವಿಧಾನಸೌಧ ಚಲೋ ಹೋರಾಟ ರಾಜ್ಯದಲ್ಲಿ ಚಳವಳಿಗೆ ಬಲ ನೀಡಿತು.

ಬಾಯ್ಕಾಟ್ ಅಂಬಾನಿ, ಅದಾನಿ, ಜಿಯೊ

ರೈತರು ಹೋರಾಟವನ್ನು ತೀವ್ರಗೊಳಿಸುತ್ತಿದ್ದಂತೆಯೇ ಈ ಕಾಯ್ದೆಗಳನ್ನು ಯಾರ ಪರವಾಗಿ ಜಾರಿಗೆ ತರಲಾಗುತ್ತಿದೆಯೋ ಅವರ ವಿರುದ್ಧ ರೈತರು ಕಿಡಿಕಾರಿದ್ದರು. ಅಂಬಾನಿ ಅದಾನಿ ಕಂಪನಿಗಳನ್ನು ಬಾಯ್ಕಾಟ್ ಮಾಡುವಂತೆ ರೈತರು ಕರೆ ನೀಡಿದ್ದರು. ದೊಡ್ಡ ಮಟ್ಟದಲ್ಲಿ ಜಿಯೋ ಸಿಮ್ ತಿರಸ್ಕರಿಸಿ ಗಮನ ಸೆಳೆದಿದ್ದರು. ಈಗಲೂ ಪಂಜಾಬ್‌ನಲ್ಲಿ ರಿಲಾಯನ್ಸ್ ಪೆಟ್ರೋಲ್ ಪಂಪ್‌ಗಳು, ಮಾಲ್‌ಗಳು, ಅದಾನಿ ಗೋಡೌನ್‌ಗಳನ್ನು ರೈತರು ಮುತ್ತಿಗೆ ಹಾಕಿ ಮುಚ್ಚಿಸಿದ್ದಾರೆ.

ಕೊರೊನಾ ಎರಡನೇ ಅಲೆ: ನಿಲ್ಲದ ರೈತ ಹೋರಾಟ

ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಕೊರೊನಾ ಎರಡನೇ ಅಲೆ ಉತ್ತುಂಗಕ್ಕೇರಿತ್ತು. ದೇಶಾದ್ಯಂತ ಅಪಾರ ಸಾವುನೋವುಗಳು ಸಂಭವಿಸಿದ್ದವು. ಆದರೆ ರೈತರು ಮಾತ್ರ ಎದೆಗುಂದಲಿಲ್ಲ. ನಾವು ಸಾಯುತ್ತೇವೆ, ಆದರೆ ಸೋಲುವುದಿಲ್ಲ ಎಂದು ಘೋಷಿಸಿದರು. ದೈಹಿಕ ಅಂತರ ಕಾಪಾಡಿಕೊಂಡು ಹೋರಾಟ ಮುಂದುವರೆಸಿದರು.

ಬಿಜೆಪಿ ಸೋಲಿಸಲು ಕರೆ

ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದಿಚೇರಿ ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ನಡೆಯಿತು. ಬಿಜೆಪಿ ಸೋಲಿಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಮಾಡಲಾಯ್ತು. ಅದು ಫಲ ಸಹ ಕೊಟ್ಟಿತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭಾರೀ ಅಂತರದಲ್ಲಿ ಸೋಲುಂಡಿತು. ಅಸ್ಸಾಂ ಮತ್ತು ಪುದುಚರಿಗಳಲ್ಲಿ ಹೊರತುಪಡಿಸಿ, ಉಳಿದೆಲ್ಲಾ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ದಯನೀಯ ಸೋಲು ಅನುಭವಿಸಿತು.

ಜುಲೈ 2021: ಕಿಸಾನ್ ಸಂಸತ್

ಜುಲೈ 22ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾದೊಡನೆ ರೈತರು ಕಿಸಾನ್ ಸಂಸತ್ ನಡೆಸಿದರು. ಆಗಸ್ಟ್ 9 ರವರೆಗೆ ಜಂತರ್‌ಮಂತರ್‌ನಲ್ಲಿ ಶಿಸ್ತುಬದ್ಧವಾಗಿ ಚರ್ಚೆಗಳು ನಡೆದವು. ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಸಹ ಭಾಗವಹಿಸಿದ್ದು ವಿಶೇಷ.

ಕಿಸಾನ್ ಸ್ವಾತಂತ್ರ್ಯೋತ್ಸವ

ಆಗಸ್ಟ್ 15ರಂದು ದೆಹಲಿಯ ಹೋರಾಟದ ಗಡಿಗಳಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಕಿಸಾನ್ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಹರಿಯಾಣ-ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಮುಖಂಡರಿಗೆ ಘೇರಾವ್ – ಲಖಿಂಪುರ್ ಖೇರಿ ದುರಂತ

ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಸರ್ಕಾರವಿದ್ದು ಪ್ರತಿನಿತ್ಯ ರೈತ ಪ್ರತಿಭಟನೆಗಳನ್ನು ಎದುರಿಸುತ್ತಿದೆ. ಹರಿಯಾಣದ ಸಿಎಂ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರೈತರು ಬಿಡುತ್ತಿಲ್ಲ. ಹೆಲಿಪ್ಯಾಡ್‌ಗಳಿಗೆ ಮುತ್ತಿಗೆ ಹಾಕುತ್ತಿದ್ದಾರೆ. ಎಲ್ಲಾ ಬಿಜೆಪಿ ಮುಖಂಡರಿಗೆ ಕಪ್ಪು ಬಾವುಟ ತೋರಿಸಿ ಘೇರಾವ್ ಹಾಕಲಾಗುತ್ತದೆ.

ಉತ್ತರ ಪ್ರದೇಶದಲ್ಲಿಯೂ ಸಹ ಅದೇ ನಡೆಯಿತು. ಅದಕ್ಕಾಗಿ ನಾಲ್ವರು ರೈತರು ಸೇರಿ 8 ಜನರು ಸಾವಿಗೆ ಬಿಜೆಪಿ ಸಚಿವನ ಮಗ ಕಾರಣ ಎಂಬ ಆರೋಪದ ಮೇಲೆ ರೈತರ ಆಕ್ರೋಶ ಭುಗಿಲೆದ್ದಿತು. ಈಗ ತನಿಖೆ ಜಾರಿಯಲ್ಲಿದೆ. ಲಖಿಂಪುರ್ ಖೇರಿ ಹತ್ಯಾಕಾಂಡ ನಡೆದಿದ್ದು ರೈತರ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿತು. ದೇಶಾದ್ಯಂತ ಮತ್ತೆ ರೈತ ಹೋರಾಟ ಮತ್ತೆ ಜೋರಾಯಿತು.

ನವೆಂಬರ್ 19, 2021

ಕೃಷಿ ಕಾಯ್ದೆ ಹಿಂತೆಗೆದುಕೊಳ್ಳುವುದಾಗಿ ಟಿವಿ ಪ್ರಸಾರದಲ್ಲಿ ಘೋಷಿಸಿದ ಪ್ರಧಾನಿ ಮೋದಿ. ಚಾರಿತ್ರಿಕ ರೈತ ಹೋರಾಟಕ್ಕೆ ಜಯ ಎಂದೇ ಈ ನಡೆಯನ್ನು ಬಣ್ಣಿಸಲಾಯಿತು. ಆದರೆ ಸರ್ಕಾರದ ಮುಂದಿನ ಹೆಜ್ಜೆಗಳನ್ನು ಗಮನಿಸಿ ತನ್ನ ನಿರ್ಣಯ ಘೋಷಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿತು.

2021 ನವೆಂಬರ್ 29 ಲೋಕಸಭೆಯಲ್ಲಿ ಚರ್ಚೆಯಿಲ್ಲದೆ ಕೃಷಿ ಕಾಯ್ದೆಗಳ ರದ್ದತಿ ಮಸೂದೆ ಅಂಗೀಕಾರ

ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡನೆ ಮಾಡಿದ ಸರ್ಕಾರ ಯಾವುದೇ ಚರ್ಚೆ ನಡೆಸದೆ ಅಂಗೀಕಾರ ಮಾಡಿದೆ. ವಿರೋಧ ಪಕ್ಷಗಳು ಕೃಷಿ ಕಾಯ್ದೆಗಳ ಅಪಾಯಗಳು ಬಗ್ಗೆ ಚರ್ಚೆ ಮಾಡಲು ಬಯಸಿದ್ದರು. ಅದಕ್ಕಾಗಿ ಪ್ರತಿಭಟನೆ ನಡೆಸಿದರು. ಅದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಅಧಿವೇಶನವನ್ನು ಮುಂದೂಡಲಾಗಿತ್ತು. ಮಸೂದೆ ಕುರಿತು ಅವಕಾಶ ನೀಡದ ಸ್ಪೀಕರ್ ಓಂ ಬಿರ್ಲಾರವರು ಲೋಕಸಭೆಯಲ್ಲಿ ಅಂಗೀಕರಿಸಿದ್ದಾರೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ರವರು ಕೃಷಿ ಕಾಯ್ದೆಗಳನ್ನು ಅಂಗೀಕರಿಸುವ ಮಸೂದೆಯನ್ನು ಮಂಡಿಸಿದ್ದಾರೆ. ಕೇವಲ ನಾಲ್ಕು ನಿಮಿಷಗಳಲ್ಲಿ ಅದನ್ನು ಅಂಗೀಕರಿಸಲಾಯಿತು.

ರೈತರ ವಿಜಯೋತ್ಸವ

ರೈತರು ದೆಹಲಿ ಗಡಿಗಳಲ್ಲಿ ವಿಜಯೋತ್ಸವ ಆಚರಿಸಿ ತಮ್ಮ ಸ್ವಗ್ರಾಮಗಳಿಗೆ ಮೆರವಣಿಗೆಯಲ್ಲಿ ತೆರಳಿದರು.

ರೈತರ ಹೆಗಲಿಗೆ ಹೆಗಲು ಕೊಡುತ್ತೇವೆ..

ಇದನ್ನೂ ಓದಿ; ಕೃಷಿ ಕಾಯಿದೆಗಳ ವಾಪಸಾತಿ; ದಣಿವರಿಯದ ಹೋರಾಟ ಕಲಿಸಿದ ಪಾಠಗಳೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣ: ಅಕ್ಬರುದ್ದೀನ್ ಓವೈಸಿ ಹಂಗಾಮಿ ಸ್ಪೀಕರ್; ಪ್ರಮಾಣ ವಚನ ಬಹಿಷ್ಕರಿಸಿದ ಬಿಜೆಪಿ ಶಾಸಕರು

0
ಎಐಎಂಐಎಂ ಪಕ್ಷದ ಶಾಸಕ ಅಕ್ಬರುದ್ದೀನ್ ಓವೈಸಿ ಅವರನ್ನು ರಾಜ್ಯ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದನ್ನು ವಿರೋಧಿಸಿ ತೆಲಂಗಾಣ ಬಿಜೆಪಿಯ ನೂತನ ಶಾಸಕರು ಪ್ರಮಾಣ ವಚನ ಕಾರ್ಯಕ್ರಮ ಬಹಿಷ್ಕರಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ...