Homeಮುಖಪುಟಜಾತಿ ನಿಂದನೆ ಆರೋಪ; ಬಾಂಬೆ ಐಐಟಿಯಲ್ಲಿ ದಲಿತ ವಿದ್ಯಾರ್ಥಿ ಆ*ಹತ್ಯೆ

ಜಾತಿ ನಿಂದನೆ ಆರೋಪ; ಬಾಂಬೆ ಐಐಟಿಯಲ್ಲಿ ದಲಿತ ವಿದ್ಯಾರ್ಥಿ ಆ*ಹತ್ಯೆ

ಇದೊಂದು ಸಾಂಸ್ಥಿಕ ಕೊಲೆ ಎಂದು ಐಐಟಿ ಬಾಂಬೆಯ ‘ಅಂಬೇಡ್ಕರ್‌ ಪೆರಿಯಾರ್‌ ಫುಲೆ ಸ್ಟಡಿ ಸರ್ಕಲ್‌’ ಟ್ವೀಟ್ ಮಾಡಿದೆ

- Advertisement -
- Advertisement -

ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬ ಭಾನುವಾರ ಮಧ್ಯಾಹ್ನ ಹಾಸ್ಟೆಲ್‌ನ ಎಂಟನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿದ್ದಾನೆ.

“ಈ ವಿದ್ಯಾರ್ಥಿಯು ದಲಿತ ಸಮುದಾಯದವನಾಗಿದ್ದು, ಜಾತಿ ಕಿರುಕುಳವನ್ನು ಎದುರಿಸಿದ್ದಾನೆ” ಎಂದು ‘ಐಐಟಿ ಬಾಂಬೆಯ ಅಂಬೇಡ್ಕರ್‌ ಪೆರಿಯಾರ್‌ ಫುಲೆ ಸ್ಟಡಿ ಸರ್ಕಲ್‌’ ಟ್ವಿಟರ್‌ ಖಾತೆಯಲ್ಲಿ ಆರೋಪಿಸಲಾಗಿದೆ.

ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊವಾಯಿ ಪೊಲೀಸರು ತಿಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿ, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ.

ಅಹಮದಾಬಾದ್ ಮೂಲದ ದರ್ಶನ್ ಸೋಲಂಕಿ (18) ಎಂಬ ವಿದ್ಯಾರ್ಥಿ ಮೂರೂವರೆ ತಿಂಗಳ ಹಿಂದೆ ಐಐಟಿ ಬಾಂಬೆ ಸೇರಿದ್ದು, ಬಿಟೆಕ್ ವಿದ್ಯಾರ್ಥಿಯಾಗಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಹಾಸ್ಟೆಲ್ ಕಟ್ಟಡದ ಮೇಲಿಂದ ಸೋಲಂಕಿಯವರು ಜಿಗಿದಿರುವುದನ್ನು ನೋಡಿದ ಪ್ರತ್ಯಕ್ಷದರ್ಶಿಗಳಿದ್ದಾರೆ. ನಾವು ಅವರ ರೂಮ್‌ಮೇಟ್‌ಗಳ ಹೇಳಿಕೆಗಳನ್ನು ದಾಖಲಿಸುತ್ತಿದ್ದೇವೆ. ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ” ಎಂದು ಅಧಿಕಾರಿ ತಿಳಿಸಿದ್ದಾರೆ.

ಇದು ದುರದೃಷ್ಟಕರ ಘಟನೆ ಎಂದು ಹೇಳಿರುವ ಐಐಟಿಯ ಅಧಿಕಾರಿಯೊಬ್ಬರು, “ಸಂಸ್ಥೆಯು ಪೊಲೀಸ್ ತನಿಖೆಗೆ ಸಹಕರಿಸುತ್ತಿದೆ” ಎಂದಿದ್ದಾರೆ.

ಘಟನೆ ಬೆಳಕಿಗೆ ಬಂದ ಕೂಡಲೇ ಸಂಸ್ಥೆಯ ನಿರ್ದೇಶಕ ಸುಭಾಸಿಸ್ ಚೌಧರಿ ಎಲ್ಲಾ ವಿದ್ಯಾರ್ಥಿಗಳಿಗೆ ಸಂದೇಶ ಕಳುಹಿಸಿದ್ದಾರೆ. “ಇಂದು ಮಧ್ಯಾಹ್ನ ನಡೆದ ದುರಂತ ಘಟನೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನ ಸಾವಿನ ಕುರಿತು ತಿಳಿಸಲು ನಾವು ವಿಷಾದಿಸುತ್ತೇವೆ. ಪೊವಾಯಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಬರುತ್ತಿದ್ದಾರೆ. ವಿದ್ಯಾರ್ಥಿನಿಯ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ ಮತ್ತು ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

ಸೋಲಂಕಿ ಅವರು ಕೆಮಿಕಲ್ ಇಂಜಿನಿಯರಿಂಗ್‌ನ ಮೊದಲ ವರ್ಷದ ಬಿಟೆಕ್ ವಿದ್ಯಾರ್ಥಿಯಾಗಿದ್ದರು. ಅಹಮದಾಬಾದ್‌ ಮೂಲದವರಾದ ಸೋಲಂಕಿ ಹಾಸ್ಟೆಲ್ 16ರಲ್ಲಿ ವಾಸವಿದ್ದರು.

ಪ್ರಥಮ ವರ್ಷದ ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್ ಪರೀಕ್ಷೆಗಳು ಶನಿವಾರ ಮುಕ್ತಾಯಗೊಂಡವು. ಶೈಕ್ಷಣಿಕ ಒತ್ತಡವಿತ್ತು. ಆದಾಗ್ಯೂ, ಹೆಚ್ಚಿನ ವಿವರಗಳು ಹೊರಬೀಳುವ ಮೊದಲು ಊಹಾಪೋಹ ಮಾಡುವುದು ಸೂಕ್ತವಲ್ಲ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಹೆಸರು ಹೇಳಲಿಚ್ಛಿಸದ ಕ್ಯಾಂಪಸ್‌ ವಿದ್ಯಾರ್ಥಿಯೊಬ್ಬರು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ಪ್ರತಿಕ್ರಿಯಿಸಿದ್ದು, “ಯಾವುದೇ ಡೆತ್‌ನೋಟ್ ಇಲ್ಲದ ಕಾರಣ, ಆತನ ಸಾವಿನ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಸೆಮಿಸ್ಟರ್ ಪರೀಕ್ಷೆಗಳು ಈಗಷ್ಟೇ ಮುಗಿದಿವೆ, ಅದೊಂದೇ ಕಾರಣ ಎಂದು ಹೇಳುವುದು ಸರಿಯಲ್ಲ. ಇನ್‌ಸ್ಟಿಟ್ಯೂಟ್‌ನಿಂದ ಹೆಚ್ಚಿನದನ್ನು ತಿಳಿಯಲು ನಾವು ಕಾಯುತ್ತಿದ್ದೇವೆ” ಎಂದಿದ್ದಾರೆ.

ಕ್ಯಾಂಪಸ್‌ನ ಕೆಲವು ವಿದ್ಯಾರ್ಥಿಗಳು ಭಾನುವಾರ ತಡರಾತ್ರಿ ಕ್ಯಾಂಡಲ್‌ಲೈಟ್ ಮಾರ್ಚ್‌ನಲ್ಲಿ ಭಾಗವಹಿಸಿದರು. ಅಗಲಿದ ಸೋಲಂಕಿಗೆ ಸಂತಾಪ ಸೂಚಿಸಿದರು.

ಘಟನೆಯ ಕುರಿತು ‘ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ ಐಐಟಿ ಬಾಂಬೆ’ (APPSC IIT Bombay) ಟ್ವಿಟರ್‌ ಖಾತೆಯಿಂದ ಮಾಡಿರುವ ಟ್ವೀಟ್‌ಗಳು ಘಟನೆಗೆ ಮತ್ತೊಂದು ಆಯಾಮವಿರುವುದನ್ನು ಹೇಳುತ್ತಿವೆ.

“3 ತಿಂಗಳ ಹಿಂದಷ್ಟೇ ಬಿಟೆಕ್‌ಗಾಗಿ ಸೋಲಂಕಿ ಇಲ್ಲಿಗೆ ಅಧ್ಯಯನಕ್ಕೆ ಬಂದಿದ್ದರು. ಇದು ವೈಯಕ್ತಿಕ ಸಮಸ್ಯೆಯಿಂದಾದ ಸಾವಲ್ಲ. ಇದೊಂದು ಸಾಂಸ್ಥಿಕ ಕೊಲೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ದೂರುಗಳ ಹೊರತಾಗಿಯೂ ಸಂಸ್ಥೆ ಯಾವುದೇ ಕ್ರಮ ವಹಿಸಲಿಲ್ಲ” ಎಂದು ಸ್ಟಡಿ ಸರ್ಕಲ್ ಆರೋಪಿಸಿದೆ.

“ಮೊದಲ ವರ್ಷದ ವಿದ್ಯಾರ್ಥಿಗಳು ಮೀಸಲಾತಿ ವಿರೋಧಿ ನಿಂದನೆಗಳನ್ನು ಎದುರಿಸಬೇಕಾಗುತ್ತಿದೆ. ಅರ್ಹತೆ ಉಳ್ಳವರು, ಅರ್ಹತೆ ಇಲ್ಲದವರು ಎಂದು ಹೀಯಾಳಿಸಲಾಗುತ್ತದೆ. ಇಲ್ಲಿ ತಳಸಮುದಾಯದ ಅಧ್ಯಾಪಕರು ಮತ್ತು ಸಲಹೆಗಾರರ ಪ್ರಾತಿನಿಧ್ಯದ ಕೊರತೆ ಇದೆ” ಎಂದು ದೂರಿದೆ.

“ಜಾತಿ ಸಂಬಂಧಿತ ಪ್ರಶ್ನೆಗಳನ್ನು ಪರಿಹರಿಸಲು ಕೌನ್ಸಿಲಿಂಗ್ ಇಲ್ಲದಿರುವುದನ್ನು ಪ್ರಶ್ನಿಸುತ್ತಲೇ ಇದ್ದೇವೆ. ಐಐಟಿಗೆ ಬರುವ ವಿದ್ಯಾರ್ಥಿಗಳನ್ನು ಮೆರಿಟ್ ಎಂಬ ಅಸ್ತ್ರ ಮೂಲಕ ಶೋಷಿಸಲಾಗುತ್ತಿದೆ” ಎಂದು ವಿಷಾದಿಸಿದೆ.

“ಇನ್ನು ಎಷ್ಟು ಮಂದಿ ದರ್ಶನ್ ಮತ್ತು ಅನಿಕೇತ್‌ ಅಂಥವರು ಸಾಯಬೇಕು? ದರ್ಶನ್ ಸೋಲಂಕಿ ಅವರ ಸಾಂಸ್ಥಿಕ ಹತ್ಯೆಯ ಕುರಿತು ನಮ್ಮ ಹೇಳಿಕೆ ಇದಾಗಿದೆ.  ಇವರ ಕುಟುಂಬದ ಬಗ್ಗೆ ನಾವು ಸಾಮೂಹಿಕ ಜವಾಬ್ದಾರಿಯನ್ನು ಹೊಂದಿದ್ದೇವೆ. ಒಂದು ಸಮಾಜವಾಗಿ, ಒಂದು ಸಂಸ್ಥೆಯಾಗಿ ನಾವು ಯಾವುದನ್ನು ಆಚರಿಸುತ್ತಿದ್ದೇವೆ ಮತ್ತು ಯಾವುದನ್ನು ಕಡೆಗಣಿಸುತ್ತಿದ್ದೇವೆ” ಎಂದು ಪ್ರಶ್ನಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...