ಅಮೆರಿಕದ ದ್ವಂದ್ವ ನೀತಿ: ಡೆಮಾಕ್ರಸಿಗಾಗಿ ರೈತರಿಗೆ ಬೆಂಬಲ, ಬಂಡವಾಳಶಾಹಿಗಳಿಗಾಗಿ ಕೃಷಿ ಕಾಯ್ದೆಗಳ ಸ್ತುತಿ!

ಬಿಡಿ ಬಿಡಿಯಾಗಿ ಅಮೆರಿಕದ ಜನಪ್ರತಿನಿಧಿಗಳು ರೈತ ಪ್ರತಿಭಟನೆಯ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಟೀಕಿಸಿದ್ದಾರೆ. ಅಮೆರಿಕ ಆಡಳಿತ ಕೂಡ ಶಾಂತಿಯುತ ಪ್ರತಿಭಟನೆ ಬೆಂಬಲಿಸಿದೆ, ಅದರೆ ಅದು ’ಮಾರುಕಟ್ಟೆ’ ದೃಷ್ಟಿಯಿಂದ ಕೃಷಿ ಕಾನೂನುಗಳ ಪರವಿದೆ!

ಸರ್ವಾಧಿಕಾರಿಯ ಪಡಿಯಚ್ಚಿನಂತಿದ್ದ ಡೊನಾಲ್ಡ್ ಟ್ರಂಪ್ ಮನೆಗೆ ಹೋಗಿದ್ದಾರೆ. ಉದಾರವಾದಿ ನಿಲುವಿನ, ಸಾಪೇಕ್ಷವಾಗಿ ಹೆಚ್ಚು ಪ್ರಜಾಪ್ರಭುತ್ವವಾದಿಯಾಗಿರುವ ಡೆಮಾಕ್ರಟ್ಸ್ ಅಧಿಕಾರಕ್ಕೆ ಬಂದಿದ್ದಾರೆ. ಇಷ್ಟಾದರೆ ಒಟ್ಟೂ ಅಮೆರಿಕ ಆಡಳಿತದ ನಿಲುವಿನಲ್ಲಿ ಏನಾದರೂ ಬದಲಾವಣೆ ಆಗಬಹುದೇ ಎಂಬ ನಿರೀಕ್ಷೆಗಳಿರುವುದು ಸಹಜ. ಆದರೆ ಅದನ್ನು ಈಗಲೇ ನಿರ್ಧರಿಸಲಾಗದು.

ಭಾರತದ ರೈತ ಹೋರಾಟ ಕುರಿತಂತೆ ಅಲ್ಲಿನ ಅನೇಕ ಚುನಾಯಿತ ಜನಪ್ರತಿನಿಧಿಗಳು ಬೆಂಬಲ ಸೂಚಿಸಿದ್ದಾರೆ. ಆದರೆ ಅಮೆರಿಕ ಆಡಳಿತದ ನಿಲುವುಗಳಲ್ಲಿ ದ್ವಂದ್ವ ಇದೆ ಎಂಬುದಕ್ಕೆ ಮತ್ತು ಅದು ಉದ್ದೇಶಿತ ದ್ವಂದ್ವ ಎಂಬುದಕ್ಕೆ ಸ್ಟೇಟ್ ಡಿಪಾರ್ಟಮೆಂಟ್ ವಕ್ತಾರರ ಅಭಿಪ್ರಾಯಗಳೇ ಸಾಕು.

ಇದನ್ನೂ ಓದಿ: ’ಮೋದಿ-ಶಾ ನೇರ ಮಾತುಕತೆಗೆ ಬರಲಿ’- ಜಿಂದ್ ಮಹಾಪಂಚಾಯತ್‌ನ ಮಹಾ ನಿರ್ಣಯ

ಶಾಂತಿಯುತ ಪ್ರತಿಭಟನೆಗಳು, ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಪ್ರಭುತ್ವದ ಲಕ್ಷಣವಾಗಿದೆ ಎಂದು ಗುರುತಿಸಿದ ಅಮೆರಿಕ, ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ಸ್ವಾಗತಿಸುವುದಾಗಿ ಬುಧವಾರ ಹೇಳಿದೆ.

ಅಂದರೆ, ಅವರ ಬಂಡವಾಳಶಾಹಿಗಳಿಗೆ ಇಲ್ಲಿನ ಮಾರುಕಟ್ಟೆ ಒದಗಿಸುವ ತುಡಿತವೂ ಇದೆ, ಶಂತಿಯುತ ಪ್ರತಿಬಟನೆಗಳು ಡೆಮಾಕ್ರಸಿಯ ಲಕ್ಷಣ ಎಂಬ ಭಾವವೂ ಇದೆ.

“ಸಾಮಾನ್ಯವಾಗಿ, ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ಅಮೆರಿಕ ಸ್ವಾಗತಿಸುತ್ತದೆ” ಎಂದು ವಕ್ತಾರ ಸ್ಟೀವನ್ಸ್ ಹೇಳಿದ್ದಾರೆ. ಹೊಸ ಕಾಯ್ದೆಗಳು ಖಾಸಗಿ ಹೂಡಿಕೆಯನ್ನು ಆಕರ್ಷಿಸುತ್ತವೆ ಮತ್ತು ರೈತರಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಒದಗಿಸುತ್ತವೆ ಎಂದು ಭಾರತ ಸರ್ಕಾರ ’ಬಿಂಬಿಸುತ್ತಿರುವ’ ವಿದ್ಯಮಾನವನ್ನು ಅಮೆರಿಕ ವಾಸ್ತವ ಎಂದು ಒಪ್ಪಿಕೊಂಡಿದೆ. ಇದು ಏನನ್ನು ಸೂಚಿಸುತ್ತದೆ? ಹೊಸ ಬಿಡೆನ್ ಆಡಳಿತವು ಕೃಷಿ ವಲಯವನ್ನು ಸುಧಾರಿಸುವ ಭಾರತ ಸರ್ಕಾರದ ಕ್ರಮವನ್ನು ಬೆಂಬಲಿಸುತ್ತದೆ ಎಂಬುದನ್ನೇ ಅಲ್ಲವೇ?

ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ಟೇಟ್ಸ್ ಡಿಪಾರ್ಟ್‌ಮೆಂಟ್ ವಕ್ತಾರ, ಪಕ್ಷಗಳ (ಸರ್ಕಾರ ಮತ್ತು ರೈತ ಸಂಘಟನೆಗಳು) ನಡುವಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಸಂವಾದದ ಮೂಲಕ ಪರಿಹರಿಸಬೇಕೆಂದು ಅಮೆರಿಕ ಪ್ರೋತ್ಸಾಹಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಳಿಯಾಳ: ಕಬ್ಬು ಬೆಳೆಗಾರರನ್ನು ಜಲ್ಲೆ ಮಾಡುತ್ತಿರುವ ’ಪ್ಯಾರಿ ಸಕ್ಕರೆ’ ದೊರೆಗಳು!

ಈಗ ಪ್ರತಿಭಟನೆಯ ಸುತ್ತ ಭದ್ರಕೋಟೆ ಕಟ್ಟಿ, ನೀರು-ವಿದ್ಯುತ್-ಇಂಟರ್‌ನೆಟ್ ಸ್ತಗಿತಗೊಳಿಸಿದ ಮೇಲೂ ಭಾರತ ಸರ್ಕಾರ ’ಮಾತುಕತೆ’ ಬಗ್ಗೆ ಮಾತಾಡುತ್ತಲೇ ಇದೆಯಲ್ಲವೆ?

“ಶಾಂತಿಯುತ ಪ್ರತಿಭಟನೆಗಳು ಯಾವುದೇ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವೆಂದು ನಾವು ಗುರುತಿಸುತ್ತೇವೆ ಮತ್ತು ಭಾರತೀಯ ಸುಪ್ರೀಂ ಕೋರ್ಟ್ ಇದನ್ನೇ ಹೇಳಿದೆ ಎಂದು ಗಮನಿಸಿ” ಎಂದು ವಕ್ತಾರರು ಹೇಳಿದ್ದಾರೆ.

ಏತನ್ಮಧ್ಯೆ, ಹಲವಾರು ಅಮೆರಿಕದ ಶಾಸಕರು (ಅಲ್ಲಿನ ಚುನಾಯಿತ ಜನಪ್ರತಿನಿಧಿಗಳು), ಭಾರತದಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ. “ಭಾರತದಲ್ಲಿ ಹೊಸ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸುತ್ತಿರುವ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ವರದಿಯಾದ ಕ್ರಮಗಳಿಂದ ನಾನು ಕಳವಳಗೊಂಡಿದ್ದೇನೆ” ಎಂದು ಕಾಂಗ್ರೆಸ್- ವುಮನ್ ಹ್ಯಾಲೆ ಸ್ಟೀವನ್ಸ್ ಹೇಳಿದ್ದಾರೆ.

ಇದನ್ನೂ ಓದಿ: ಬಾಬ್ರಿ ಮಸೀದಿ ನಿರ್ಮಾಣಕ್ಕೆ ನೀಡಿರುವ ಭೂಮಿಯೂ ವಿವಾದದ ಸುಳಿಯಲ್ಲಿ: ಕಾರಣ ಏನು?

ಅವರು ಹೇಳಿಕೆಯಲ್ಲಿ, ನರೇಂದ್ರ ಮೋದಿ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ಪ್ರತಿನಿಧಿಗಳು ಫಲಪ್ರದ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಪೇಕ್ಷಿಸಿದ್ದಾರೆ.

ನಾನು ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ಮುಂದುವರಿಸುತ್ತೇನೆ. ಈ ವಿಷಯದ ಬಗ್ಗೆ ಜಿಲ್ಲೆಯಾದ್ಯಂತ ಭಾಗಿದಾರರೊಂದಿಗೆ ತೊಡಗಿಸಿಕೊಳ್ಳುವುದು ವಿಶೇಷವಾಗಿ ಮೌಲ್ಯಯುತವಾಗಿದೆ. ಇಂತಹ ಕ್ರಮಗಳಿಗೆ ನನ್ನ ಮೆಚ್ಚುಗೆಯಿದೆ ಎಂದು ಸ್ಟೀವನ್ಸ್ ಹೇಳಿದ್ದಾರೆ.

ಇನ್ನೊಬ್ಬ ಕಾಂಗ್ರೆಸ್-ವುಮನ್ ಇಲ್ಹಾನ್ ಒಮರ್ ಅವರು, ಭಾರತದಾದ್ಯಂತ ತಮ್ಮ ಜೀವನೋಪಾಯಕ್ಕಾಗಿ ಪ್ರತಿಭಟಿಸುತ್ತಿರುವ ಎಲ್ಲ ರೈತರ ಪರ ಐಕ್ಯಮತವನ್ನು ವ್ಯಕ್ತಪಡಿಸಿದ್ದಾರೆ. “ಭಾರತವು ತನ್ನ ಮೂಲಭೂತ ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸಬೇಕು, ಮಾಹಿತಿಯ ಮುಕ್ತ ಹರಿವನ್ನು ಅನುಮತಿಸಬೇಕು. ಇಂಟರ್ನೆಟ್ ಸೌಲಭ್ಯವನ್ನು ಪುನಃ ಸ್ಥಾಪಿಸಬೇಕು ಮತ್ತು ಪ್ರತಿಭಟನೆಗಳನ್ನು ವರದಿ ಮಾಡಿ ಬಂಧನಕ್ಕೊಳಗಾದ ಎಲ್ಲ ಪತ್ರಕರ್ತರನ್ನು ಬಿಡುಗಡೆ ಮಾಡಬೇಕು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಹೋರಾಟ ನಿರತ ರೈತರನ್ನು ಭೇಟಿಯಾಗಲು ಗಾಜಿಪುರ್‌ ತಲುಪಿದ ವಿರೋಧ ಪಕ್ಷ ನಾಯಕರು

ಯು.ಎಸ್. ಕಾಂಗ್ರೆಸ್‌ಮನ್, ವಿದೇಶಾಂಗ ವ್ಯವಹಾರ ಸಮಿತಿ ಸದಸ್ಯ, ಡೆಮಾಕ್ರಟ್ ಜಿಮ್ ಕೋಸ್ಟಾ, ರಿಹಾನ್ನಾ ಪೋಸ್ಟ್ ಮಾಡಿದ್ದ ಹ್ಯಾಶ್‌ಟ್ಯಾಗ್ #FarmersProtest ಅನ್ನು ಬಳಸಿದ್ದಾರೆ. “ಭಾರತದಲ್ಲಿ ನಡೆಯುತ್ತಿರುವ ಘಟನೆಗಳು ಕಿರಿಕಿರಿ ಉಂಟು ಮಾಡುತ್ತಿವೆ. ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯನಾಗಿ ನಾನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಯಾವಾಗಲೂ ಗೌರವಿಸಬೇಕು” ಎಂದು ಟ್ವೀಟ್ ಮಾಡಿದ್ದರು.

ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಂಬಂಧಿ, ವಕೀಲೆ ಮೀನಾ ಹ್ಯಾರಿಸ್, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಆಕ್ರಮಣದಲ್ಲಿದೆ ಎಂದು ಆರೋಪಿಸಿದ್ದಾರೆ.

ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವದ ಮೇಲೆ ಒಂದು ತಿಂಗಳ ಹಿಂದಿನಿಂದಲೇ ದಾಳಿ ನಡೆದಿರುವುದು ಕಾಕತಾಳೀಯವಲ್ಲ. ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವವು ಆಕ್ರಮಣಕ್ಕೊಳಗಾಗಿದೆ. ಭಾರತದ ಅಂತರ್ಜಾಲ ಸ್ಥಗಿತಗೊಳಿಸುವಿಕೆ ಮತ್ತು ರೈತ ಪ್ರತಿಭಟನಾಕಾರರ ವಿರುದ್ಧ ಅರೆಸೈನಿಕ ಹಿಂಸಾಚಾರದಿಂದ ನಾವು ಎಲ್ಲರೂ ಆಕ್ರೋಶಗೊಳ್ಳಬೇಕು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: ಸಿನಿಮಾ ನಟ-ನಟಿಯರು ಬೀದಿಗಿಳಿದು ರೈತರನ್ನು ಬೆಂಬಲಿಸಬೇಕು – ಸಿದ್ದರಾಮಯ್ಯ ಆಗ್ರಹ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮಲ್ಲನಗೌಡರ್‌ ಪಿ.ಕೆ
+ posts

LEAVE A REPLY

Please enter your comment!
Please enter your name here