Homeಮುಖಪುಟಲೋಕಸಭೆ ಚುನಾವಣೆ: ಪಂಜಾಬ್‌ನ ಎಲ್ಲಾ ಹಳ್ಳಿಗಳಲ್ಲಿ ಬಿಜೆಪಿ ವಿರುದ್ಧ ಅಭಿಯಾನ

ಲೋಕಸಭೆ ಚುನಾವಣೆ: ಪಂಜಾಬ್‌ನ ಎಲ್ಲಾ ಹಳ್ಳಿಗಳಲ್ಲಿ ಬಿಜೆಪಿ ವಿರುದ್ಧ ಅಭಿಯಾನ

- Advertisement -
- Advertisement -

ಪಂಜಾಬ್‌ನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲಿ, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ (ಕೆಎಂಎಸ್‌ಸಿ) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಪಂಜಾಬ್‌ನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಅಭಿಯಾನವನ್ನು ಆರಂಭಿಸಿದೆ.

ಪಂಜಾಬ್‌ನ 13,000 ಹಳ್ಳಿಗಳ ನಿವಾಸಿಗಳಿಗೆ ಬಿಜೆಪಿ ಅಭ್ಯರ್ಥಿಗಳು ಪ್ರಚಾರಕ್ಕೆ ಬಂದರೆ ಅವರನ್ನು ಘೇರಾವ್ ಮಾಡಿ ಪ್ರಶ್ನಿಸುವಂತೆ ಮನವಿ ಮಾಡಿದ್ದೇವೆ. ನಮ್ಮ ಮಿತ್ರ ಪಕ್ಷಗಳು ದೇಶಾದ್ಯಂತ ಬಿಜೆಪಿ ವಿರುದ್ಧ ಪ್ರಚಾರ ನಡೆಸಲಿವೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.

ಹಲವಾರು ರೈತ ಸಂಘಗಳ ಸದಸ್ಯರು ಅಮೃತಸರದ ಚಬ್ಬಾ ಗ್ರಾಮದಿಂದ ಬಿಜೆಪಿ ವಿರೋಧಿ ಪ್ರಚಾರವನ್ನು ಪ್ರಾರಂಭಿಸಿದರು. ಇದಕ್ಕೂ ಮುನ್ನ ಸಂಗ್ರೂರ್ ಮತ್ತು ಬಟಿಂಡಾ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ರೈತರು ಬಿಜೆಪಿ ನಾಯಕರಿಗೆ ಪ್ರವೇಶಕ್ಕೆ ಅನುಮತಿಯಿಲ್ಲ ಎಂದು ಪೋಸ್ಟರ್‌ಗಳನ್ನು ಅಳವಡಿಸಿದ್ದರು. ಬಿಜೆಪಿಯನ್ನು ಬಯಲಿಗೆಳೆಯಿರಿ, ಬಿಜೆಪಿಯನ್ನು ವಿರೋಧಿಸಿ ಹಾಗೂ ಬಿಜೆಪಿಯನ್ನು ಶಿಕ್ಷಿಸಿ ಎಂದು ಪೋಸ್ಟರ್ ಹಾಗೂ ಭಿತ್ತಿ ಪತ್ರಗಳನ್ನು ಕೂಡ ಹಲವು ಹಳ್ಳಿಗಳಲ್ಲಿ ಅಂಟಿಸಲಾಗಿದೆ.

ಕೆಎಂಎಸ್‌ಸಿಯ ಸರ್ವಾನ್ ಸಿಂಗ್ ಪಂಧೇರ್, ಗುರ್ಬಚನ್ ಸಿಂಗ್ ಚಬ್ಬಾ ಮತ್ತು ಗುರ್ಲಾಲ್ ಸಿಂಗ್ ಮಾನ್ ಅವರು ಈ ಅಭಿಯಾನ ಪಂಜಾಬ್‌ನಲ್ಲಿ ಮಾತ್ರವಲ್ಲ, ಬಿಜೆಪಿ ಅಭ್ಯರ್ಥಿಗಳನ್ನು ದೇಶಾದ್ಯಂತ ಹಳ್ಳಿಗಳಿಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಖಾನೌರಿ ಗಡಿಯಲ್ಲಿ ಹರ್ಯಾಣ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡ ಶುಭಕರನ್ ಸಿಂಗ್ ಅವರ ಫೋಟೋಗಳನ್ನು ಹೊಂದಿರುವ ಬ್ಯಾನರ್‌ಗಳನ್ನು ಮುದ್ರಿಸಲಾಗಿದೆ. ರೈತರನ್ನು ಒಗ್ಗೂಡಿಸಲು ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸಲಾಗುವುದು. ಬಿಜೆಪಿ ಅಭ್ಯರ್ಥಿಗಳಿಗೆ ಕೇಳಲು ಪ್ರಶ್ನಾವಳಿಗಳನ್ನು ಸಿದ್ಧಪಡಿಸಲಾಗುವುದು ಮತ್ತು ಕರ ಪತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಮುದ್ರಿಸಲಾಗುವುದು ಎಂದು ತಿಳಿಸಿದ್ದಾರೆ.

ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಮೋದಿ ಸರಕಾರದ ಅಸಲಿಯತ್ತನ್ನು ಬಯಲಿಗೆಳೆಯಲು ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಗಡಿ ಸಂಘರ್ಷ ಸಮಿತಿ ಮತ್ತು ಜಮ್ಹೂರಿ ಕಿಸಾನ್ ಸಭಾದ ರೈತ ಮುಖಂಡರಾದ ರತ್ತನ್ ಸಿಂಗ್ ರಾಂಧವಾ ಮತ್ತು ಡಾ.ಸತ್ನಾಮ್ ಸಿಂಗ್ ಅಜ್ನಾಲಾ ಮಾತನಾಡಿ, ಗಡಿ ಭಾಗದ ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೇಂದ್ರವು ಪರಿಹರಿಸಲಿಲ್ಲ. ಎಲ್ಲಾ ರೈತ ಸಂಘಗಳು ಬಿಜೆಪಿ ನಾಯಕರನ್ನು ವಿರೋಧಿಸಲು ಮತ್ತು ಹಳ್ಳಿಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಕರೆ ನೀಡಿವೆ. ಇಡೀ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸಲು ಬಿಜೆಪಿ ಮುಂದಾಗಿದೆ. ಪ್ರತಿಭಟನಾ ನಿರತ ರೈತರ ಮೇಲೆ ಹಲ್ಲೆ ನಡೆಸಿ ಕಂಬಿಗಳ ಹಿಂದೆ ತಳ್ಳಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹೇಳಿದ್ದಾರೆ.

ಇದನ್ನು ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ: ಕೆ. ಕವಿತಾ ಅವರ ಸಿಬಿಐ ವಿಚಾರಣೆಗೆ ಕೋರ್ಟ್ ಅನುಮತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...